22,400 ಕೋಟಿ ರೂ. ಪರಿಷ್ಕೃತ ಬರ ಪರಿಹಾರಕ್ಕೆ ಆಗ್ರಹಿಸಿ ಕೇಂದ್ರಕ್ಕೆ ಪತ್ರ
x

22,400 ಕೋಟಿ ರೂ. ಪರಿಷ್ಕೃತ ಬರ ಪರಿಹಾರಕ್ಕೆ ಆಗ್ರಹಿಸಿ ಕೇಂದ್ರಕ್ಕೆ ಪತ್ರ

ಬೆಳೆ ಹಾನಿ ಪರಿಹಾರ ಮೊತ್ತವು 6,128 ಕೋಟಿ ರೂ.ನಿಂದ 7,943 ಕೋಟಿ ರೂ.ಗೆ ಏರಿಕೆಯಾಗಿದೆ. ಹೀಗಾಗಿ 20,585.73 ಕೋಟಿ ರೂ.ನಿಂದ 22,400.58 ಕೋಟಿ ರೂ.ಗೆ ಪರಿಷ್ಕರಿಸಿ ಕೇಂದ್ರದ ಮುಂದಿಟ್ಟಿದೆ.


Click the Play button to hear this message in audio format

ರಾಜ್ಯದಲ್ಲಿ ತಲೆದೋರಿರುವ ಭೀಕರ ಬರ ಪರಿಸ್ಥಿತಿಯನ್ನು ನಿಭಾಯಿಸಲು ಹಾಗೂ ಸಂಕಷ್ಟದಲ್ಲಿರುವ ಅನ್ನದಾತರ ನೆರವಿಗೆ ಧಾವಿಸಲು ಕೇಂದ್ರ ಸರ್ಕಾರವು ತುರ್ತಾಗಿ 22,400.58 ಕೋಟಿ ರೂ. ಆರ್ಥಿಕ ನೆರವನ್ನು ಬಿಡುಗಡೆ ಮಾಡಬೇಕೆಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಆಗ್ರಹಿಸಿದ್ದಾರೆ. ಈ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪ್ರತ್ಯೇಕ ಪತ್ರಗಳನ್ನು ಬರೆದಿರುವ ಅವರು, ರಾಜ್ಯದ ಗಂಭೀರ ಪರಿಸ್ಥಿತಿಯನ್ನು ಖುದ್ದಾಗಿ ವಿವರಿಸಲು ತಕ್ಷಣವೇ ಭೇಟಿಗೆ ಅವಕಾಶ ನೀಡುವಂತೆ ಕೋರಿದ್ದಾರೆ.

ರಾಜ್ಯದ 226 ತಾಲ್ಲೂಕುಗಳು ಬರಪೀಡಿತವಾಗಿದ್ದು, ಒಟ್ಟಾರೆ 57.93 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶದಲ್ಲಿ ಬೆಳೆಗಳು ಸಂಪೂರ್ಣ ನಾಶವಾಗಿವೆ. ಇದರಿಂದಾಗಿ ರಾಜ್ಯದ ಕೃಷಿ ವಲಯಕ್ಕೆ ಅಂದಾಜು 62,481.88 ಕೋಟಿ ರೂ. ಭಾರಿ ಆರ್ಥಿಕ ನಷ್ಟ ಸಂಭವಿಸಿದೆ. ಈ ಸಂಕಷ್ಟದಿಂದಾಗಿ ಲಕ್ಷಾಂತರ ಸಣ್ಣ ಮತ್ತು ಅತಿಸಣ್ಣ ರೈತ ಕುಟುಂಬಗಳು ಜೀವನೋಪಾಯ ಕಳೆದುಕೊಂಡು ಕಂಗಾಲಾಗಿದ್ದು, ಕೇಂದ್ರ ಸರ್ಕಾರದ ತುರ್ತು ಮಧ್ಯಪ್ರವೇಶ ಅನಿವಾರ್ಯವಾಗಿದೆ ಎಂದು ಪತ್ರದಲ್ಲಿ ಅಂಕಿ-ಅಂಶಗಳ ಸಮೇತ ವಿವರಿಸಲಾಗಿದೆ.

ಕೇಂದ್ರ ಗೃಹ ಸಚಿವಾಲಯವು ಅಕ್ಟೋಬರ್ 26ರಂದು ಹೊರಡಿಸಿದ ಅಧಿಸೂಚನೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ಅಡಿಯಲ್ಲಿನ ಪರಿಹಾರ ಮಾನದಂಡಗಳನ್ನು ಪರಿಷ್ಕರಿಸಿದೆ. ಈ ಹೊಸ ಮಾನದಂಡಗಳ ಅನ್ವಯ ರಾಜ್ಯಕ್ಕೆ ಅಗತ್ಯವಿರುವ ಇನ್‌ಪುಟ್ ಸಬ್ಸಿಡಿ (ಬೆಳೆ ಹಾನಿ ಪರಿಹಾರ) ಮೊತ್ತವು ಈ ಹಿಂದಿನ 6,128.70 ಕೋಟಿ ರೂ.ನಿಂದ 7,943.55 ಕೋಟಿ ರೂ.ಗೆ ಏರಿಕೆಯಾಗಿದೆ. ಅಂದರೆ, ಹೆಚ್ಚುವರಿಯಾಗಿ 1,814.85 ಕೋಟಿ ರೂ. ನೆರವು ಅಗತ್ಯವಾಗಿದೆ. ಇದರ ಪರಿಣಾಮವಾಗಿ, ರಾಜ್ಯ ಸರ್ಕಾರವು ಈ ಹಿಂದೆ ಸಲ್ಲಿಸಿದ್ದ ಒಟ್ಟು ಬರ ಪರಿಹಾರದ ಬೇಡಿಕೆಯನ್ನು 20,585.73 ಕೋಟಿ ರೂ.ನಿಂದ 22,400.58 ಕೋಟಿ ರೂ.ಗೆ ಪರಿಷ್ಕರಿಸಿ ಕೇಂದ್ರದ ಮುಂದಿಟ್ಟಿದೆ. ಉಳಿದ ಪರಿಹಾರದ ಬೇಡಿಕೆಗಳು ಈ ಹಿಂದಿನ ಮನವಿ ಪತ್ರದಂತೆಯೇ ಮುಂದುವರಿಯಲಿವೆ ಎಂದು ಡಾ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಕೇಂದ್ರದ ಪರಿಷ್ಕೃತ ಪರಿಹಾರ ಮಾನದಂಡ ಅಸಮರ್ಪಕ

ಕೇಂದ್ರ ಸರ್ಕಾರವು ಎಸ್‌ಡಿಆರ್‌ಎಫ್/ಎನ್‌ಡಿಆರ್‌ಎಫ್ ಮಾನದಂಡಗಳನ್ನು ಹೆಚ್ಚಿಸಿರುವುದನ್ನು ಸ್ವಾಗತಿಸಿರುವ ಉಪಮುಖ್ಯಮಂತ್ರಿಗಳು, ಆದರೆ ಈ ಏರಿಕೆ ಪ್ರಸ್ತುತ ಮಾರುಕಟ್ಟೆ ವೆಚ್ಚಕ್ಕೆ ಹೋಲಿಸಿದರೆ ತೀರಾ ನಗಣ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಳೆಯಾಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ 11 ಸಾವಿರ ರೂ., ನೀರಾವರಿ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ 22 ಸಾವಿರ ರೂ., ತೋಟಗಾರಿಕೆ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ 30 ಸಾವಿರ ರೂ. ನಿಗದಿಪಡಿಸಲಾಗಿದೆ. ಆದರೆ ವಾಸ್ತವದಲ್ಲಿ ಬೀಜ, ರಾಸಾಯನಿಕ ಗೊಬ್ಬರ, ಕೀಟನಾಶಕ, ಕೃಷಿ ಕೂಲಿ ಕಾರ್ಮಿಕರ ವೆಚ್ಚ, ಟ್ರ್ಯಾಕ್ಟರ್ ಬಾಡಿಗೆ ಮತ್ತು ವಿದ್ಯುತ್-ನೀರಾವರಿ ವೆಚ್ಚಗಳು ಗಗನಕ್ಕೇರಿವೆ. ರೈತರು ಪ್ರತಿ ಹೆಕ್ಟೇರ್‌ಗೆ ಮಾಡುವ ನೈಜ ಹೂಡಿಕೆಯಲ್ಲಿ ಕೇಂದ್ರ ನೀಡುವ ಈ ಪರಿಹಾರವು ಕನಿಷ್ಠ ಭಾಗವನ್ನೂ ಭರಿಸಲು ಸಾಧ್ಯವಿಲ್ಲ. "ಪರಿಹಾರವು ಕೇವಲ ಸಾಂಕೇತಿಕವಾಗಿರದೆ, ರೈತರು ಸಾಲದ ಸುಳಿಗೆ ಸಿಲುಕದೆ ಮತ್ತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಆತ್ಮವಿಶ್ವಾಸ ತುಂಬುವಂತಿರಬೇಕು. ಇಂದಿನ ಕೃಷಿ ವೆಚ್ಚ ಹಾಗೂ ಹಣದುಬ್ಬರಕ್ಕೆ ಅನುಗುಣವಾಗಿ ಪರಿಹಾರ ದರಗಳನ್ನು ವೈಜ್ಞಾನಿಕವಾಗಿ ನಿಗದಿಪಡಿಸಬೇಕು" ಎಂದು ಆಗ್ರಹಿಸಿದ್ದಾರೆ.

ಹಳೆಯ ಕೃಷಿ ಗಣತಿ ಕೈಬಿಡಿ

ಬರ ಪರಿಹಾರ ವಿತರಣೆಯಲ್ಲಿ ಕೇಂದ್ರ ಸರ್ಕಾರವು ಈಗಲೂ 2015-16ರ ಕೃಷಿ ಗಣತಿಯ ಹಳೆಯ ಅಂಕಿ-ಅಂಶಗಳನ್ನು ಮಾನದಂಡವಾಗಿ ಬಳಸುತ್ತಿರುವುದಕ್ಕೆ ಡಾ. ಜಿ. ಪರಮೇಶ್ವರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. "ಸುಮಾರು ಒಂದು ದಶಕದಷ್ಟು ಹಳೆಯದಾದ 2015-16ರ ದತ್ತಾಂಶವು ಪ್ರಸ್ತುತ ರೈತರ ನೈಜ ಭೂಹಿಡುವಳಿ ಸ್ಥಿತಿಯನ್ನು ಬಿಂಬಿಸುವುದಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಕುಟುಂಬಗಳ ವಿಭಜನೆಯಿಂದಾಗಿ ಜಮೀನುಗಳು ಹರಿದು ಹಂಚಿಹೋಗಿವೆ. ಇದರಿಂದಾಗಿ ಲಕ್ಷಾಂತರ ಅರ್ಹ ಸಣ್ಣ ಮತ್ತು ಅತಿಸಣ್ಣ ರೈತರು ಪರಿಹಾರದಿಂದ ವಂಚಿತರಾಗುವ ಅಪಾಯವಿದೆ. ಆದ್ದರಿಂದ, ಸರ್ಕಾರವು ಆಧುನಿಕವಾಗಿ ರೂಪಿಸಿರುವ, ಪ್ರತಿಯೊಬ್ಬ ರೈತನ ಭೂದಾಖಲೆ ಹಾಗೂ ಆಧಾರ್ ಜೋಡಣೆಯಾಗಿರುವ ಪರಿಶೀಲಿತ 'ಫ್ರೂಟ್ಸ್' ಸಾಫ್ಟ್‌ವೇರ್ ದತ್ತಾಂಶವನ್ನು ಕೇಂದ್ರವು ಪರಿಗಣಿಸಬೇಕು. ಇದರಿಂದ ನೇರವಾಗಿ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಪಾರದರ್ಶಕವಾಗಿ ಪರಿಹಾರ ತಲುಪಿಸಲು ಸಾಧ್ಯವಾಗುತ್ತದೆ ಎಂದು ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.

2047ರ ವೇಳೆಗೆ ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ವಿಕಸಿತ ಭಾರತದ ಸಂಕಲ್ಪವನ್ನು ಉಲ್ಲೇಖಿಸಿರುವ ಡಾ. ಪರಮೇಶ್ವರ್, ಕೇಂದ್ರದ ನೀತಿ ನಿರೂಪಕರಿಗೆ ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. "ಒಂದು ಮುಂಗಾರು ಮಳೆ ಕೈಕೊಟ್ಟ ತಕ್ಷಣವೇ ರೈತನ ಹಲವು ವರ್ಷಗಳ ಕಠಿಣ ಪರಿಶ್ರಮ ಮಣ್ಣುಪಾಲಾಗಿ, ಆತನ ಕುಟುಂಬದ ಜೀವಮಾನದ ಉಳಿತಾಯವೆಲ್ಲ ಖಾಲಿಯಾಗಿ, ಮುಂದಿನ ಪೀಳಿಗೆಯ ಭವಿಷ್ಯವೇ ಕತ್ತಲಿಗೆ ಸರಿಯುವಂತಹ ದುಸ್ಥಿತಿ ದೇಶದಲ್ಲಿದ್ದರೆ ವಿಕಸಿತ ಭಾರತ ನಿರ್ಮಾಣ ಮಾಡಲು ಹೇಗೆ ಸಾಧ್ಯ? ರೈತರನ್ನು ಕೇವಲ ಉತ್ಪಾದಕರನ್ನಾಗಿ ನೋಡದೆ, ಅವರ ಜೀವನ ಭದ್ರತೆಯನ್ನು ಕಾಪಾಡುವುದು ಒಕ್ಕೂಟ ಸರ್ಕಾರದ ಪರಮ ಕರ್ತವ್ಯವಾಗಿದೆ" ಎಂದು ಅವರು ಎಚ್ಚರಿಸಿದ್ದಾರೆ. ಅಲ್ಲದೆ, "ಉತ್ತಮ ಮಳೆಯಾದಾಗ ರೈತ ಎಷ್ಟು ಬೆಳೆ ಬೆಳೆಯುತ್ತಾನೆ ಎನ್ನುವುದಕ್ಕಿಂತ, ಸಂಕಷ್ಟದ ಕಾಲದಲ್ಲಿ ಆಡಳಿತ ವ್ಯವಸ್ಥೆ ರೈತನ ಬೆನ್ನಿಗೆ ಎಷ್ಟು ಗಟ್ಟಿಯಾಗಿ ನಿಲ್ಲುತ್ತದೆ ಎನ್ನುವುದೇ ದೇಶದ ನಿಜವಾದ ಪ್ರಗತಿಯ ಅಳತೆಗೋಲು" ಎಂದು ಅವರು ಹೇಳಿದ್ದಾರೆ.

ರಾಜಕೀಯ ಮರೆತು ಒಕ್ಕೂಟ ಧರ್ಮ ಪಾಲಿಸಿ

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ ರಾಜಕೀಯ ಅಥವಾ ಆಡಳಿತಾತ್ಮಕ ಭಿನ್ನಾಭಿಪ್ರಾಯಗಳು ರೈತರ ಹೊಟ್ಟೆಯ ಮೇಲೆ ಹೊಡೆಯಬಾರದು. ಭಾರತದ ಒಕ್ಕೂಟ ವ್ಯವಸ್ಥೆಯ ತತ್ವಗಳ ಪ್ರಕಾರ, ಇಂತಹ ರಾಷ್ಟ್ರೀಯ ವಿಪತ್ತಿನ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯಗಳು ಪರಸ್ಪರ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಬೇಕು. "ಕರ್ನಾಟಕ ಎದುರಿಸುತ್ತಿರುವ ಭೀಕರ ಬರ ಪರಿಸ್ಥಿತಿಯು ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಇದು ನಾಡಿನ ಕೋಟ್ಯಂತರ ಅನ್ನದಾತರ ಬದುಕಿನ ಪ್ರಶ್ನೆ. ಆದ್ದರಿಂದ ಕೇಂದ್ರ ಸರ್ಕಾರವು ಯಾವುದೇ ವಿಳಂಬವಿಲ್ಲದೆ, ರಾಜ್ಯ ಸರ್ಕಾರ ಸಲ್ಲಿಸಿರುವ ೨೨,೪೦೦.೫೮ ಕೋಟಿ ರೂ.ಗಳ ಪರಿಷ್ಕೃತ ಮನವಿಯನ್ನು ಅನುಮೋದಿಸಿ, ತಕ್ಷಣವೇ ಎನ್‌ಡಿಆರ್‌ಎಫ್ ನಿಧಿಯನ್ನು ಬಿಡುಗಡೆ ಮಾಡಬೇಕು. ಕೇವಲ ಬಾಯಿಮಾತಿನ ಸಹಾನುಭೂತಿಯಿಂದ ರೈತರ ಸಂಕಷ್ಟ ತೀರದು, ತುರ್ತು ಹಣಕಾಸಿನ ನೆರವೇ ಇಂದಿನ ಅಗತ್ಯ" ಎಂದು ಒತ್ತಾಯಿಸಿದ್ದಾರೆ.

Read More
Next Story