ಇನ್ನೂ15 ದಿನ ಬರ ಪರಿಶೀಲನೆ ಬಳಿಕ ಮತ್ತಷ್ಟ ಪ್ರದೇಶಗಳ ಸೇರ್ಪಡೆ ಸಾಧ್ಯತೆ : ಡಿಸಿಎಂ
x

ಇನ್ನೂ15 ದಿನ ಬರ ಪರಿಶೀಲನೆ ಬಳಿಕ ಮತ್ತಷ್ಟ ಪ್ರದೇಶಗಳ ಸೇರ್ಪಡೆ ಸಾಧ್ಯತೆ : ಡಿಸಿಎಂ

ತಿಂಗಳ ಕೊನೆಗೆ ಅಥವಾ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಕೇಂದ್ರಕ್ಕೆ ಬರ ವರದಿಯನ್ನು ಸಲ್ಲಿಕೆ ಮಾಡಲಿದ್ದು, ಬೆಳೆ ನಷ್ಟವನ್ನು ಅಂದಾಜು ಮಾಡಲಾಗುತ್ತಿದೆ ಎಂದು ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.


Click the Play button to hear this message in audio format

ರಾಜ್ಯದಲ್ಲಿ 101 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದೇವೆ. ಇನ್ನೂ 15 ದಿನಗಳಿಗೆ ಪರಿಶೀಲನೆ ಮಾಡುತ್ತೇವೆ. ಆ ಬಳಿಕ ಕೆಲವು ತಾಲೂಕುಗಳು ಬರಪೀಡಿತ ಪ್ರದೇಶದ ವರ್ಗಕ್ಕೆ ಬರುವ ಸಾಧ್ಯತೆ ಇರುತ್ತದೆ. ಅವುಗಳ ಆಧಾರದ ಮೇಲೆ ಮತ್ತೆ ಘೋಷಣೆ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಈ ತಿಂಗಳ ಕೊನೆಗೆ ಅಥವಾ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಕೇಂದ್ರಕ್ಕೆ ಬರ ವರದಿಯನ್ನು ಸಲ್ಲಿಸುತ್ತೇವೆ. ಬೆಳೆ ನಷ್ಟವನ್ನು ಅಂದಾಜು ಮಾಡಲಾಗುತ್ತಿದ್ದು, ಅದರ ಆಧಾರದ ಮೇಲೆ ಮನವಿ ಅನ್ನು ಸಿದ್ಧಪಡಿಸುತ್ತೇವೆ. ಆ ಬಳಿಕ ಕೇಂದ್ರದಿಂದ ತಂಡಗಳು ಬಂದು ರಾಜ್ಯದಲ್ಲಿ ಸಮೀಕ್ಷೆ ನಡೆಸುತ್ತಾರೆ. ನಂತರ ಬರ ಪರಿಹಾರ ಬಿಡುಗಡೆಯಾಗುತ್ತದೆ ಎಂದು ಮಾಹಿತಿ ನೀಡಿದರು.

ರೈತರಿಗೆ ಎಕರೆಗೆ ಏನು ಪರಿಹಾರ ಕೊಡಬೇಕು ಎಂಬ ಬಗ್ಗೆ ನಿರ್ಧಾರ ಮಾಡುತ್ತೇವೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಗುಳೆ ತಪ್ಪಿಸಲು ಕಾಮಗಾರಿಗಳನ್ನು ಕೈಗೊಳ್ಳುವುದು ನಮ್ಮ ಮೊದಲ ಆದ್ಯತೆ. ಈ ವಿಚಾರವಾಗಿ ಈಗಾಗಲೇ ಕ್ರಮಕೈಗೊಳ್ಳುತ್ತಿದ್ದೇವೆ. ರಾಜ್ಯದಲ್ಲಿ 2023ರಲ್ಲಿ ಉಂಟಾದ ಬರಗಾಲದಿಂದ 39 ಸಾವಿರ ಕೋಟಿ ರೂ. ನಷ್ಟವಾಗಿತ್ತು. 18 ಸಾವಿರ ಕೋಟಿ ರೂ. ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ದೆಹಲಿಯಲ್ಲಿ ಹೋಗಿ ಪ್ರತಿಭಟನೆ ನಡೆಸಿ, ಸುಪ್ರೀಂ ಕೋರ್ಟ್ ನಿರ್ದೇಶನದ ಬಳಿಕ 3,500 ಕೋಟಿ ರೂ. ಬಿಡುಗಡೆ ಮಾಡಿದರು. ಈ ವರ್ಷ ಕೇಂದ್ರಕ್ಕೆ ಮನವಿಯನ್ನು ಮಾಡಿದ್ದು, ಕಳೆದ ಬಾರಿಯ ಘಟನೆಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ನಾವು ಮನವಿ ಏನು ಸಲ್ಲಿಸುತ್ತೇವೆಯೋ ಅದನ್ನು ಬರ ಘೋಷಣೆಗಿರುವ ಮಾನದಂಡಗಳಂತೆ ಮಾಡಿದ್ದೇವೆ. ಅದನ್ನು ಪರಿಶೀಲಿಸಿ, ನಮಗೆ ಪರಿಹಾರ ಹಣವನ್ನು ಕೊಡಲಿ. ಎಸ್‌ಡಿಆರ್‌ಎಫ್‌ನಲ್ಲಿ 1,200 ಕೋಟಿ ರೂ. ಹಣವನ್ನು ಕೊಡಲು ತೀರ್ಮಾನ ಮಾಡಿದ್ದಾರೆ. ಇನ್ನೂ ಅದನ್ನು ನಮಗೆ ಕೊಡಬೇಕು. ನಮ್ಮದು ಶೇ.25 ಹಾಗೂ ಕೇಂದ್ರದಿಂದ ಶೇ.75 ಇರುತ್ತೆ. 1,200 ಕೋಟಿ ರೂ. ಹಣವನ್ನು ತಕ್ಷಣ ಬಿಡುಗಡೆ ಮಾಡಿ ಎಂದು ಅವರಿಗೆ ಹೇಳಿದ್ದೇವೆ. ಅದು ಬಿಡುಗಡೆಯಾದರೆ ನಾವು ನಮ್ಮ ರೈತರಿಗೆ ಪರಿಹಾರ ಕೊಡಲು ಅನುಕೂಲವಾಗುತ್ತದೆ. ಒಂದು ವಾರ ಅಥವಾ 10 ದಿನಗೊಳಗಾಗಿ ಹಣವನ್ನು ರೈತರಿಗೆ ಕೊಟ್ಟುಬಿಡುತ್ತೇವೆ ಎಂದು ವಿವರಿಸಿದರು.

ನಾಗೇಂದ್ರ ಅವರು ರಾಜೀನಾಮೆ ನೀಡಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾಗೇಂದ್ರ ಅವರು ಯಾವುದೇ ಅಪರಾಧವನ್ನು ಮಾಡಿಲ್ಲ. ಆದರೂ, ಅವರನ್ನು ಬಿಜೆಪಿಯವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ರಾಜಕೀಯ ಮಾಡಿದ್ದಾರೆ. ನಾಗೇಂದ್ರ ಅವರು ಪಕ್ಷದಲ್ಲಿ ಶಿಸ್ತಿನ ಸಿಪಾಯಿಯಾಗಿ ಸರ್ಕಾರಕ್ಕೆ ಮುಜುಗರ ಆಗಬಾರದು ಎಂಬ ದೃಷ್ಟಿಯಿಂದ ರಾಜೀನಾಮೆ ನೀಡಿದ್ದಾರೆ. ಅವರು ರಾಜೀನಾಮೆ ನೀಡುವ ಅಗತ್ಯ ಇರಲಿಲ್ಲ. ಸಿಬಿಐ, ಇಡಿ ಚಾರ್ಜ್‌ಶೀಟ್‌ನಲ್ಲಿ ಅವರ ಹೆಸರು ಇರಲಿಲ್ಲ. ನಾನು ಗೃಹ ಸಚಿವನಾಗಿದ್ದ ಕಾರಣ ಆ ಬಗ್ಗೆ ನನಗೆ ಮಾಹಿತಿ ಇದೆ. ಸುಮ್ಮನೆ ಅನಾವಶ್ಯಕವಾಗಿ ರಾಜಕಾರಣ ಮಾಡಿ ಅವರನ್ನು ರಾಜೀನಾಮೆ ಕೊಡುವಂತೆ ಮಾಡಿದ್ದಾರೆ. ನಾವು ಮುಂದಿನ ದಿನಗಳಲ್ಲಿ ವಸ್ತುಸ್ಥಿತಿಯ ಬಗ್ಗೆ ಜನಸಮುದಾಯಕ್ಕೆ ತಿಳಿಸುತ್ತೇವೆ ಎಂದರು.

Read More
Next Story