
"ಸಂಬಳ ಪಡೆಯುವುದಷ್ಟೇ ಗುರಿಯಾಗಬೇಡಿ, ಸಮಾಜವನ್ನೂ ಬದಲಿಸಿ" - ಡಾ.ಜಿ.ಪರಮೇಶ್ವರ್
ಸರ್ಕಾರವು ಖಾಲಿ ಇರುವ 72 ಸಾವಿರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆಸಿದೆ. ವಿಶೇಷವಾಗಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ವಿಷಯದಲ್ಲಿ ಗಂಭೀರ ಚರ್ಚೆ ನಡೆದಿದೆ.
ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 72 ಸಾವಿರ ಸರ್ಕಾರಿ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ನೌಕರರ ಸಮನ್ವಯ ಸಮಿತಿಯು ಆಯೋಜಿಸಿದ್ದ 6ನೇ ರಾಜ್ಯಮಟ್ಟದ ಐಕ್ಯತಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರವು ಖಾಲಿ ಇರುವ 72 ಸಾವಿರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆಸಿದೆ. ವಿಶೇಷವಾಗಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ವಿಷಯದಲ್ಲಿ ಸರ್ಕಾರದ ಮಟ್ಟದಲ್ಲಿ ಗಂಭೀರ ಚರ್ಚೆ ನಡೆದಿದೆ. ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ ಯಾವ ರೀತಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲಾಗಿತ್ತೋ, ಅದೇ ಮಾದರಿಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ, ನೌಕರರ ಸಮನ್ವಯ ಸಮಿತಿಗೆ ಕಚೇರಿ ನಿರ್ಮಾಣಕ್ಕಾಗಿ ಜಾಗವನ್ನು ಮಂಜೂರು ಮಾಡಿಕೊಡಲು ತಾವು ಮತ್ತು ಸಚಿವ ಕೆ.ಎಚ್. ಮುನಿಯಪ್ಪ ಸಿದ್ಧವಿರುವುದಾಗಿ ತಿಳಿಸಿದರು.
ಒಪಿಎಸ್ ಜಾರಿಗೆ ತಾತ್ವಿಕ ಸಮ್ಮತಿ
ಹಳೆಯ ಪಿಂಚಣಿ ಯೋಜನೆ ಕುರಿತು ಪ್ರತಿಕ್ರಿಯಿಸಿದ ಅವರು, ಸಿಎಂ ಡಿ.ಕೆ. ಶಿವಕುಮಾರ್ ಅವರು ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ತಾತ್ವಿಕವಾಗಿ ಒಪ್ಪಿಗೆ ನೀಡಿದ್ದಾರೆ. ಈ ಸಂಬಂಧ ಮುಂದಿನ ದಿನಗಳಲ್ಲಿ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ನೌಕರರಿಗೆ ಸಿಹಿ ಸುದ್ದಿ ನೀಡಿದರು. ಸಮಾವೇಶದಲ್ಲಿ ಪಾಲ್ಗೊಂಡಿದ್ದ ನೌಕರರ ಸಂಖ್ಯೆ ಮತ್ತು ಸಮಾವೇಶದ ಸ್ವರೂಪದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಡಾ. ಪರಮೇಶ್ವರ್, ರಾಜ್ಯದಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯದ ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರಿದ್ದಾರೆ. ಆದರೆ, ನಿಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ಸರಿಯಾಗಿ ತಲುಪಿಸುವಲ್ಲಿ ಸಂಘಟನೆ ವಿಫಲವಾಗಿದೆ. ಬರೀ ಸಮಾವೇಶ ಮಾಡಿದರೆ ಸಾಲದು, ನಿಮ್ಮ ಶಕ್ತಿಯ ಪ್ರದರ್ಶನವಾಗಬೇಕು. ಸರ್ಕಾರದ ತೀರ್ಮಾನ ತೆಗೆದುಕೊಳ್ಳುವವರ ಮೇಲೆ ಒತ್ತಡ ಹೇರುವಷ್ಟು ಬಲವಾದ ಸಂಘಟನೆಯನ್ನು ನೀವು ನಿರ್ಮಿಸಬೇಕಿದೆ ಎಂದು ಸಲಹೆ ನೀಡಿದ್ದಾರೆ.
ಜಾತಿ ವ್ಯವಸ್ಥೆ, ಶೋಷಣೆಯ ಕುರಿತು ಮಾರ್ಮಿಕ ಮಾತು
ಮೀಸಲಾತಿಯಿಂದ ನೌಕರಿ ಪಡೆದು, ಸಂಬಳ ಬಂದು ನೆಮ್ಮದಿಯಾಗಿ ಜೀವನ ಸಾಗಿಸಿದರೆ ಮಾತ್ರ ಸಾಲದು. ಇಂದಿಗೂ ಜಾತಿ ವ್ಯವಸ್ಥೆ ಸಮಾಜದಲ್ಲಿ ಬೇರೂರಿದೆ. ಸ್ವಾತಂತ್ರ್ಯ ಸಿಕ್ಕಿ ದಶಕಗಳೇ ಕಳೆದರೂ ದಲಿತ ಸಮುದಾಯದ ಕೂಲಿಕಾರರು ಇಂದಿಗೂ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಈ ವ್ಯವಸ್ಥೆಯನ್ನು ಬದಲಾಯಿಸುವ ಹೊಣೆ ನಿಮ್ಮ ಮೇಲಿದೆ. ಕಾಂಗ್ರೆಸ್ ಪಕ್ಷವೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು, ಇಂತಹ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರು ಭಾಗವಹಿಸಿದ ವೇದಿಕೆಯನ್ನೇ ಕೆಲವರು ಶುದ್ಧೀಕರಣ ಮಾಡುತ್ತಾರೆ ಎಂದರೆ ಜಾತಿ ವ್ಯವಸ್ಥೆ ಯಾವ ಮಟ್ಟದಲ್ಲಿದೆ ಎಂದು ಯೋಚಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾಜಕ್ಕೆ ನೌಕರರು ಮರಳಿ ಏನನ್ನಾದರೂ ನೀಡಬೇಕು ಎಂದು ಕರೆ ನೀಡಿದ ಸಚಿವರು, ನೀವು ನಿಮ್ಮ ಮಕ್ಕಳನ್ನು ಇಂಜಿನಿಯರ್, ವೈದ್ಯರನ್ನಾಗಿ ಮಾಡುವಂತೆಯೇ, ನಿಮ್ಮ ಆರ್ಥಿಕ ಶಕ್ತಿಯನ್ನು ಬಳಸಿ ಸಮುದಾಯದ ಬಡ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಅವರ ಶಿಕ್ಷಣಕ್ಕೆ ನೆರವಾಗಬೇಕು. ನಮ್ಮ ಸಮುದಾಯದ ಮಕ್ಕಳು ಇಂದು ಶೇ. 90ಕ್ಕೂ ಹೆಚ್ಚು ಅಂಕಗಳನ್ನು ಪಡೆಯುತ್ತಿದ್ದಾರೆ. ಅವರಿಗೆ ಸರಿಯಾದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿದರೆ ಸಾಮಾನ್ಯ ವರ್ಗದ ಸ್ಪರ್ಧೆಯಲ್ಲೂ ಅವರು ಉತ್ತಮ ಸಾಧನೆ ಮಾಡಬಲ್ಲರು. ಇದನ್ನು ಮಾಡುವುದೇ ಅಂಬೇಡ್ಕರ್ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಕರೆ ನೀಡಿದರು.
ಸರ್ಕಾರಿ ಎಸ್‌ಸಿ/ಎಸ್‌ಟಿ ನೌಕರರ ಸಮಿತಿಗೆ ಸರ್ಕಾರದಿಂದ ಅಧಿಕೃತ ಮಾನ್ಯತೆ ಸಿಗುವಂತೆ ನೋಡಿಕೊಳ್ಳುವುದಾಗಿ ಅಶ್ವಾಸನೆ ನೀಡಿದ ಡಾ. ಪರಮೇಶ್ವರ್, ಸಮಾವೇಶಕ್ಕೆ ಸಮುದಾಯದ ಎಲ್ಲ ಸಚಿವರು ಮತ್ತು ಶಾಸಕರು ಹಾಜರಾಗಬೇಕಿತ್ತು ಎಂದು ವಿಷಾದಿಸಿದರು. ಸಮುದಾಯದ ನೌಕರರು ಒಗ್ಗಟ್ಟಾಗದೆ ಹೋದರೆ ಹಕ್ಕುಗಳನ್ನು ಪಡೆಯುವುದು ಕಷ್ಟ ಎಂದು ಎಚ್ಚರಿಸಿದರು. ಈ ಸಮಾವೇಶವು ಎಸ್‌ಸಿ/ಎಸ್‌ಟಿ ನೌಕರರಿಗೆ ಕೇವಲ ವೃತ್ತಿಪರ ಬೇಡಿಕೆಗಳನ್ನು ಈಡೇರಿಸುವ ವೇದಿಕೆಯಾಗಿ ಮಾತ್ರವಲ್ಲದೆ, ಸಮುದಾಯದ ಜವಾಬ್ದಾರಿ ಮತ್ತು ಸಾಮಾಜಿಕ ಪರಿವರ್ತನೆಯ ಸಂಕಲ್ಪ ಮಾಡುವ ವೇದಿಕೆಯಾಗಬೇಕೆಂಬುದು ಸಚಿವರ ಆಶಯವಾಗಿತ್ತು.

