x

ಬೆಂಗಳೂರು ಪ್ರತಿಷ್ಠಿತ ಹೋಟೆಲ್‌ಗಳ ಮೇಲೆ ರೇಡ್‌: ಸರ್ಕಾರದಿಂದ ಗೈಡ್‌ಲೈನ್ಸ್‌ ಬಿಡುಗಡೆ

ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ರಾಜ್ಯಾದ್ಯಂತ ಹೋಟೆಲ್, ಧಾಬಾ ಮತ್ತು ರೆಸ್ಟೋರೆಂಟ್‌ಗಳು ಪಾಲಿಸಲೇಬೇಕಾದ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ.


ಬೆಂಗಳೂರಿನಲ್ಲಿ ಇತ್ತೀಚೆಗೆ ಆಹಾರ ಸುರಕ್ಷತಾ ಇಲಾಖೆ ನಡೆಸಿದ ದಿಢೀರ್ ದಾಳಿಗಳು ಇಡೀ ರಾಜ್ಯದಲ್ಲೇ ದೊಡ್ಡ ಸಂಚಲನ ಮೂಡಿಸಿವೆ. ಶ್ರೀಮಂತರ ಪಂಚತಾರಾ ಹೋಟೆಲ್‌ಗಳಿಂದ ಹಿಡಿದು, ಸಾಮಾನ್ಯ ಜನರು ಮತ್ತು ಕಾರ್ಮಿಕರು ಅವಲಂಬಿಸಿರುವ ಇಂದಿರಾ ಕ್ಯಾಂಟೀನ್‌ಗಳವರೆಗೆ ಎಲ್ಲೆಡೆ ಆಹಾರದ ಗುಣಮಟ್ಟ ಮತ್ತು ಅಡುಗೆಮನೆಯ ಶುಚಿತ್ವ ಪ್ರಶ್ನೆಗೊಳಗಾಗಿದೆ. ಈ ಹಿನ್ನೆಲೆಯಲ್ಲಿ, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ರಾಜ್ಯಾದ್ಯಂತ ಹೋಟೆಲ್, ಧಾಬಾ ಮತ್ತು ರೆಸ್ಟೋರೆಂಟ್‌ಗಳು ಪಾಲಿಸಲೇಬೇಕಾದ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿ ಜಾರಿಗೆ ತಂದಿದೆ.

ಆಹಾರ ವ್ಯವಹಾರ ನಿರ್ವಾಹಕರು (FBOs) ಪಾಲಿಸಬೇಕಾದ ನಿಯಮಗಳು

ಹೊಟೇಲ್‌ ಬ್ಯುಸಿನೆಸ್‌ ಮಾಡುವವರು ಪರವಾನಗಿಯನ್ನು ಸಂಸ್ಥೆಯ ಆವರಣದಲ್ಲಿ ಎಲ್ಲರಿಗೂ ಗೋಚರಿಸುವ ಪ್ರಮುಖ ಸ್ಥಳದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಅಡುಗೆ ಪ್ರದೇಶವನ್ನು ಸದಾ ಸ್ವಚ್ಛವಾಗಿ, ವ್ಯವಸ್ಥಿತವಾಗಿ ಹಾಗೂ ಸಮರ್ಪಕ ಗಾಳಿಯಾಡುವಂತೆ ನಿರ್ವಹಿಸಬೇಕು.

ಪ್ರತ್ಯೇಕ ಸಿಂಕ್‌ಗಳು: ಅಡುಗೆಮನೆಯಲ್ಲಿ ಪಾತ್ರೆ ತೊಳೆಯಲು, ಕೈ ತೊಳೆಯಲು ಮತ್ತು ಕಚ್ಚಾ ಆಹಾರ ಪದಾರ್ಥಗಳನ್ನು ತೊಳೆಯಲು ಪ್ರತ್ಯೇಕ ಸಿಂಕ್‌ಗಳನ್ನು ವ್ಯವಸ್ಥೆ ಮಾಡುವುದು ಕಡ್ಡಾಯ.

ವೆಜ್ - ನಾನ್ ವೆಜ್ ಪ್ರತ್ಯೇಕತೆ: ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರ ತಯಾರಿಕೆಗೆ ಪ್ರತ್ಯೇಕ ಚಾಕು, ಕಟಿಂಗ್ ಬೋರ್ಡ್ ಹಾಗೂ ಪಾತ್ರೆಗಳನ್ನೇ ಬಳಸಬೇಕು.

ಕಚ್ಚಾ ಆಹಾರ ಪದಾರ್ಥಗಳು

ಕಚ್ಚಾ ಪದಾರ್ಥಗಳನ್ನು ಸ್ವಚ್ಛ ಮತ್ತು ನೈರ್ಮಲ್ಯಯುತ ಪರಿಸ್ಥಿತಿಯಲ್ಲಿ, ಸೂಕ್ತ ತಾಪಮಾನದಲ್ಲಿ ಸಂಗ್ರಹಿಸಬೇಕು.

ಆಹಾರ ಪದಾರ್ಥಗಳ ಗುಣಮಟ್ಟವನ್ನು ನಿಯಮಿತವಾಗಿ ಪರಿಶೀಲಿಸಿ ಅವು ಹಾಳಾಗದಂತೆ ಕ್ರಮ ಕೈಗೊಳ್ಳಬೇಕು.

ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಮತ್ತೆ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದನ್ನು ಅಧಿಕೃತ ಏಜೆನ್ಸಿಗಳ ಮೂಲಕವೇ ವಿಲೇವಾರಿ ಮಾಡಬೇಕು.

ಅವಧಿ ಮೀರಿದ ಪದಾರ್ಥಗಳು

ಅವಧಿ ಮೀರಿದ ಆಹಾರ, ಹಾಳಾದ ತರಕಾರಿ-ಹಣ್ಣುಗಳು ಅಥವಾ ಶಿಲೀಂಧ್ರ ಹಿಡಿದ ಆಹಾರವನ್ನು ತಕ್ಷಣವೇ ವಿಲೇವಾರಿ ಮಾಡಬೇಕು. ಅನುಮತಿಯಿಲ್ಲದ ಕೃತಕ ಬಣ್ಣಗಳ ಬಳಕೆಯನ್ನು ಸಂಪೂರ್ಣವಾಗಿ ತಡೆಯಬೇಕು.

ಸಿಬ್ಬಂದಿಯ ವೈಯಕ್ತಿಕ ನೈರ್ಮಲ್ಯ

FSSAI ನಿಯಮಗಳನ್ವಯ ಆಹಾರ ನಿರ್ವಹಿಸುವ ಸಿಬ್ಬಂದಿಯ ಉನ್ನತ ಮಟ್ಟದ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಬೇಕು.

ಸಿಬ್ಬಂದಿಯು ಸ್ವಚ್ಛ ಸಮವಸ್ತ್ರ, ಹೇರ್‌ನೆಟ್ ಹಾಗೂ ಅಗತ್ಯವಿರುವಲ್ಲಿ ಮಾಸ್ಕ್ ಮತ್ತು ಏಪನ್ ಧರಿಸಬೇಕು.

ಅಡುಗೆಮನೆ ಮತ್ತು ಆಹಾರ ಸೇವಾ ಸಿಬ್ಬಂದಿಯ ಹೆಲ್ತ್‌ ಟೆಸ್ಟ್‌ ರಿಪೋರ್ಟ್‌ ಇರಬೇಕು.

ಶುದ್ಧ ಕುಡಿಯುವ ನೀರು

• ಅಡುಗೆ ಮತ್ತು ನೈರ್ಮಲ್ಯಕ್ಕೆ ಕುಡಿಯಲು ಯೋಗ್ಯವಾದ ನೀರನ್ನು ಮಾತ್ರ ಬಳಸಬೇಕು ಹಾಗೂ ನೀರಿನ ಗುಣಮಟ್ಟದ ತಪಾಸಣಾ ವರದಿಯನ್ನು ಇಟ್ಟುಕೊಂಡಿರಬೇಕು.

• ಉಚಿತ ಸೌಲಭ್ಯಗಳು: ಹೋಟೆಲ್‌ಗೆ ಭೇಟಿ ನೀಡುವ ಸಾರ್ವಜನಿಕರಿಗೆ ಉಚಿತ ಕುಡಿಯುವ ನೀರು, ಬಿಸಿ ನೀರಿನ ವ್ಯವಸ್ಥೆ ಮತ್ತು ಶುಚಿಯಾದ ಶೌಚಾಲಯದ ಉಚಿತ ಬಳಕೆಗೆ ಅವಕಾಶ ಕಲ್ಪಿಸಬೇಕು.

ಆಹಾರ ಸುರಕ್ಷತಾ ಇಲಾಖೆಯ ತಪಾಸಣೆಗಳು ಇನ್ನು ಮುಂದೆಯೂ ತೀವ್ರವಾಗಿ ಮುಂದುವರಿಯಲಿವೆ. ಕಳಪೆ ನೈರ್ಮಲ್ಯ, ಅಸುರಕ್ಷಿತ ನೀರು ಅಥವಾ ಅವಧಿ ಮೀರಿದ ಪದಾರ್ಥಗಳು ಕಂಡುಬಂದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಹೋಟೆಲ್ ಸೀಲ್ ಮಾಡುವುದು ಸೇರಿದಂತೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

Read More
Next Story