x

SIR ಗೆ ಸೆಡ್ಡು: ನಿಮ್ಮ ಮನೆ ಬಾಗಿಲಿಗೆ PRC, ಬರ ಎದುರಿಸಲು VB-GRAM G ಆಸರೆ!, ರಂಗನಾಥಸ್ವಾಮಿ ಸಾನ್ನಿಧ್ಯದಲ್ಲಿ ಚಿರನಿದ್ರೆ

ಪ್ರಮಾಣ ಪತ್ರಕ್ಕಾಗಿ ಕಚೇರಿಗೆ ಅಲೆಯುವ ಸಂಕಷ್ಟಕ್ಕೆ ಇತಿಶ್ರೀ, ವಿಬಿ ಜಿ ರಾಮ್ಜಿ ಅಡಿ ಬರ ನಿರ್ವಹಣೆಗೆ ಕ್ರಮ, ಸಕಲ ಸರ್ಕಾರಿ ಗೌರವಗಳೊಂದಿಗೆ ಚೆನ್ನಮ್ಮ ಅಂತ್ಯಕ್ರಿಯೆ


Click the Play button to hear this message in audio format

ಆಡಳಿತ ವ್ಯವಸ್ಥೆ ಮತ್ತು ನಾಗರಿಕರ ನಡುವಿನ ಅಂತರವನ್ನು ಅಳಿಸಿಹಾಕುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಬಿಜೆಪಿಯ ತೀವ್ರ ವಿರೋಧದ ನಡುವೆಯೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನೆ ಮನೆಗೆ ಉಚಿತ ಜಾತಿ ಮತ್ತು ಶಾಶ್ವತ ನಿವಾಸ ಪ್ರಮಾಣ ಪತ್ರ ವಿತರಣೆ ಅಭಿಯಾನಕ್ಕೆ ಚಾಲನೆ ನೀಡಿದರು.

"ನಿಮ್ಮ ಮತ ನಿಮ್ಮ ಹಕ್ಕು, ನಿಮ್ಮ ಮತ - ನಿಮ್ಮ ಬದುಕು" ಎಂಬ ಘೋಷವಾಕ್ಯದೊಂದಿಗೆ ಪ್ರಾರಂಭವಾಗಿರುವ ಈ ಅಭಿಯಾನವು ಪ್ರಜಾಪ್ರಭುತ್ವದ ಅಡಿಪಾಯವನ್ನು ಬಲಪಡಿಸುವ ಗುರಿ ಹೊಂದಿದೆ. ಒಬ್ಬ ವ್ಯಕ್ತಿಯ ಗುರುತು ಅವನ ಬದುಕಿನ ನಿರ್ಧಾರಕ ಶಕ್ತಿಯಾಗಿದೆ. ಗುರುತಿನ ದಾಖಲೆಗಳಿಲ್ಲದೆ ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯುವುದು ಅಸಾಧ್ಯ. ಈ ಸತ್ಯವನ್ನು ಅರಿತ ಸರ್ಕಾರ, ಜನರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ ಜಾರಿಗೆ ಬಂದಿದ್ದ 'ಮನೆ ಬಾಗಿಲಿಗೆ ಪಹಣಿ' ಯೋಜನೆಯ ಮುಂದುವರಿದ ಭಾಗವಾಗಿ, ಇದೀಗ ಶಾಶ್ವತ ನಿವಾಸ ಪ್ರಮಾಣ ಪತ್ರವನ್ನು ಮನೆಗೆ ತಲುಪಿಸಲಾಗುತ್ತಿದೆ.

ಭಾರತದಲ್ಲಿಯೇ ಸುಮಾರು 4.85 ಕೋಟಿ ಕುಟುಂಬಗಳಿಗೆ ಅವರ ದಾಖಲೆಗಳನ್ನು ನೇರವಾಗಿ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಿರುವ ಮೊದಲ ರಾಜ್ಯ ಕರ್ನಾಟಕ ಎಂಬುದು ಹೆಮ್ಮೆಯ ವಿಷಯ. ಇದು ಕೇವಲ ಒಂದು ರಾಜ್ಯದ ಸಾಧನೆಯಲ್ಲ, ಬದಲಾಗಿ ಡಿಜಿಟಲ್ ಇಂಡಿಯಾ ಪರಿಕಲ್ಪನೆಯನ್ನು ತಳಮಟ್ಟದ ಜನರಿಗೆ ತಲುಪಿಸುವ ಒಂದು ಬೃಹತ್ ಪ್ರಯತ್ನವಾಗಿದೆ. ಈ ಅಭಿಯಾನವು ಪಕ್ಷಾತೀತವಾಗಿ ನಡೆಯುತ್ತಿದ್ದು, ಆಡಳಿತದ ಸೌಲಭ್ಯಗಳು ಜನರಿಗೆ ಯಾವುದೇ ತಾರತಮ್ಯವಿಲ್ಲದೆ ಸಿಗಬೇಕು ಎಂಬ ಸಂವಿಧಾನಾತ್ಮಕ ಆಶಯವನ್ನು ಪ್ರತಿಬಿಂಬಿಸುತ್ತದೆ.

ವಿಬಿ ಜಿ ರಾಮ್‌ ಜಿ ಅಡಿ ಉದ್ಯೋಗ

ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಅಭಾವದಿಂದಾಗಿ ತೀವ್ರ ಬರಗಾಲದ ಭೀತಿ ಎದುರಾಗಿದೆ. ರಾಜ್ಯದ 178 ತಾಲೂಕುಗಳಲ್ಲಿ ಮಳೆಯ ಕೊರತೆಯಾಗಿದ್ದು, ಅದರಲ್ಲಿಯೂ 60 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಸಂಕಷ್ಟದ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ರಾಜ್ಯ ಸರ್ಕಾರ ಸಜ್ಜಾಗಿದ್ದು, ಕುಡಿಯುವ ನೀರು ಮತ್ತು ಗ್ರಾಮೀಣ ಉದ್ಯೋಗ ಸೃಷ್ಟಿಗೆ ಮೊದಲ ಆದ್ಯತೆ ನೀಡಿದೆ. ಯಾರೂ ಗುಳೆ ಹೋಗದಂತೆ ಗ್ರಾಮಗಳಲ್ಲೇ ಉದ್ಯೋಗ ನೀಡಲು ಸೂಚನೆ ನೀಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ, ವಿಬಿಜಿ ರಾಮ್ ಜಿ ಅಡಿ ಉದ್ಯೋಗ ನೀಡುವಂತೆ ತಿಳಿಸಿದ್ದಾರೆ.

ವಿಬಿ ಜಿ ರಾಮ್ಜಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ರಾಜ್ಯ ಸರ್ಕಾರ ಇದೀಗ ಅನಿವಾರ್ಯವಾಗಿ ಜಾರಿಗೊಳಿಸುತ್ತಿದೆ. ಜುಲೈ 1ರಿಂದ ಜಾರಿಗೊಳಿಸಲಾಗಿದೆ. ಇದರಡಿಯಲ್ಲಿಯೇ ಯೋಜನೆ ಜಾರಿ ಮಾಡಲಾಗುತ್ತಿದೆ. ಆದರೆ, ಗ್ರಾಮ ಪಂಚಾಯ್ತಿಗಳಿಗೆ ಮಹಾತ್ಮಗಾಂಧಿ ಹೆಸರು ಇಟ್ಟು ಯೋಜನೆ ಮುಂದುವರಿಸಲು ಸರ್ಕಾರ ತೀರ್ಮಾನಿಸಿದೆ.

ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿನ ಕೊರತೆ ಉಂಟಾಗಬಾರದು ಎಂಬ ದೃಷ್ಟಿಯಿಂದ ಸರ್ಕಾರವು ತುರ್ತಾಗಿ 117 ಕೋಟಿ ರೂಪಾಯಿಗಳನ್ನು ಮುಂಗಡವಾಗಿ ಬಿಡುಗಡೆ ಮಾಡಿದೆ. ಅಲ್ಲದೆ, ಕುಡಿಯುವ ನೀರಿನ ಕಾಮಗಾರಿಗಳಿಗಾಗಿ 95 ಕೋಟಿ ರೂಪಾಯಿಗಳ ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದೆ. ಇನ್ನು 25 ಕೋಟಿ ರೂ.ಗಳ ಅನುದಾನ ವಿವಿಧ ಜಿಲ್ಲೆಗಳಲ್ಲಿ ಲಭ್ಯವಿದ್ದು, ತುರ್ತು ಅಗತ್ಯಗಳಿಗಾಗಿ ಬಳಸಿಕೊಳ್ಳಲು ಸೂಚಿಸಲಾಗಿದೆ.

ರಂಗನಾಥಸ್ವಾಮಿ ಸಾನಿಧ್ಯದಲ್ಲಿ ಅಂತ್ಯಕ್ರಿಯೆ

ರಾಜಕೀಯದ ಭೀಷ್ಮ ಎಂದೇ ಕರೆಯಲ್ಪಡುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಧರ್ಮಪತ್ನಿ, ಚೆನ್ನಮ್ಮ ದೇವೇಗೌಡ ಅವರ ಅಗಲಿಕೆಯು ತುಂಬಲಾರದ ನಷ್ಟವನ್ನುಂಟುಮಾಡಿದೆ. ಅವರ ಇಚ್ಛೆಯಂತೆ ಹರದನಹಳ್ಳಿಯ ಕ್ಯಾತನಹಳ್ಳಿ ಗ್ರಾಮದ ಬೆಟ್ಟದ ರಂಗನಾಥಸ್ವಾಮಿ ದೇವಾಲಯದ ತಪ್ಪಲಿನಲ್ಲಿ ನಡೆಸಲಾಯಿತು. ಅಂತಿಮ ವಿಧಿವಿಧಾನಗಳು, ಸಾರ್ವಜನಿಕರ ದರ್ಶನ ಮತ್ತು ಅಂತಿಮ ಸಂಸ್ಕಾರದ ಪ್ರಕ್ರಿಯೆಗಳು ಅತ್ಯಂತ ಗೌರವಯುತವಾಗಿ ಮತ್ತು ಸಂಪ್ರದಾಯಬದ್ಧವಾಗಿ ನೆರವೇರಿದವು.

ರಂಗನಾಥಸ್ವಾಮಿ ದೇವಾಲಯದ ತಪ್ಪಲಿನ ಭೂಮಿಯು ದೇವೇಗೌಡರ ಕುಟುಂಬದ ಬೇರುಗಳಿರುವ ಜಾಗವಾಗಿದ್ದು, ಚೆನ್ನಮ್ಮನವರಿಗೆ ಇಲ್ಲಿನ ಪ್ರಕೃತಿಯೊಂದಿಗೆ ಮತ್ತು ರಂಗನಾಥಸ್ವಾಮಿಯೊಂದಿಗೆ ವಿಶೇಷ ನಂಟಿದೆ. ಇಡೀ ಕುಟುಂಬವು ಚನ್ನಮ್ಮನವರ ಸ್ಮರಣಾರ್ಥ ಇಲ್ಲಿ ಒಂದು ಸ್ಮಾರಕ ನಿರ್ಮಿಸಲು ಚಿಂತಿಸಿದೆ. ರೈತರ ಏಳಿಗೆಯನ್ನು ಬಯಸುತ್ತಿದ್ದ ಅವರು, ಇಂತಹ ಪವಿತ್ರ ನೈಸರ್ಗಿಕ ತಾಣದಲ್ಲಿ ವಿಶ್ರಮಿಸಬೇಕೆಂಬುದು ಕುಟುಂಬದ ಆಶಯವಾಗಿತ್ತು. ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

Read More
Next Story