ರಮಾನಾಥ ರೈ ಕಾರಿಗೆ ಬಸ್‌ ಡಿಕ್ಕಿ; ಗಾಯಗೊಂಡ ಮಾಜಿ ಸಚಿವ
x

ರಮಾನಾಥ ರೈ ಕಾರಿಗೆ ಬಸ್‌ ಡಿಕ್ಕಿ; ಗಾಯಗೊಂಡ ಮಾಜಿ ಸಚಿವ

ಅಪಘಾತದ ತೀವ್ರತೆಗೆ ಕಾರಿನ ಒಳಗೆ ಸಿಲುಕಿದ್ದ ಮಾಜಿ ಸಚಿವ ರಮಾನಾಥ ರೈ ಅವರನ್ನು ಸಾರ್ವಜನಿಕರು ತಕ್ಷಣವೇ ಕಾರಿನಿಂದ ಹೊರತೆಗೆದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು.


ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಕಾರ್ಕಳ-ಮೂಡುಬಿದ್ರೆ ಹೆದ್ದಾರಿಯ ಸಾಣೂರು ಜಂಕ್ಷನ್ ಬಳಿ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಮಾಜಿ ಸಚಿವರು ಹಾಗೂ ಕಾರು ಚಾಲಕ ಗಾಯಗೊಂಡಿದ್ದಾರೆ.

ರಮಾನಾಥ ರೈ ಅವರು ಕಾರಿನಲ್ಲಿ ಕಾರ್ಕಳದಿಂದ ಮೂಡುಬಿದ್ರೆ ಮಾರ್ಗವಾಗಿ ತೆರಳುತ್ತಿದ್ದರು. ಈ ವೇಳೆ ಸಾಣೂರು ಬಳಿ ಕಾರ್ಕಳದಿಂದ ಮೂಡುಬಿದ್ರೆಯತ್ತ ಹೊರಟಿದ್ದ ಖಾಸಗಿ ಬಸ್ ಕಾರಿಗೆ ಎದುರಿನಿಂದ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದವರ ರಕ್ಷಣೆಗಾಗಿ ಸ್ಥಳೀಯರು ಹರಸಾಹಸಪಡಬೇಕಾಯಿತು.

ಅಪಘಾತದ ತೀವ್ರತೆಗೆ ಕಾರಿನ ಒಳಗೆ ಸಿಲುಕಿದ್ದ ಮಾಜಿ ಸಚಿವ ರಮಾನಾಥ ರೈ ಅವರನ್ನು ಸಾರ್ವಜನಿಕರು ತಕ್ಷಣವೇ ಕಾರಿನಿಂದ ಹೊರತೆಗೆದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಪಘಾತದ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಬಸ್ ಮತ್ತು ಕಾರಿನ ನಡುವಿನ ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Read More
Next Story