
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾಜಿ ದೇವದಾಸಿಯರ ಬೃಹತ್ ಪ್ರತಿಭಟನೆ
ಮಾಜಿ ದೇವದಾಸಿಯರ ಸಮೀಕ್ಷೆಯಲ್ಲಿ ಗುರುತಿಸಿದ ಎಲ್ಲಾ ವಿಮುಕ್ತ ದೇವದಾಸಿ ಮಹಿಳೆಯರಿಗೆ ತಕ್ಷಣ ಮನೆ ಮಂಜೂರು ಮಾಡಬೇಕು. ಹಾಗೆಯೇ, ಹಿಂದಿನ ಸರ್ವೆಯಲ್ಲಿ ಬಿಟ್ಟುಹೋದ ಅರ್ಹ ಮಹಿಳೆಯರನ್ನು ಗುರುತಿಸಲು ನಿರಂತರ ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಲಾಯಿತು.
ದಶಕಗಳಿಂದ ಸಾಮಾಜಿಕ ಅನ್ಯಾಯ, ತಾರತಮ್ಯ ಮತ್ತು ಆರ್ಥಿಕ ಸಂಕಷ್ಟದಿಂದ ಪರಿತಪಿಸುತ್ತಿರುವ ಮಾಜಿ ದೇವದಾಸಿ ಮಹಿಳೆಯರು ಗುರುವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ವಿಮುಕ್ತ ದೇವದಾಸಿ ಮಹಿಳೆಯರ ಮಹಾ ಒಕ್ಕೂಟದ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಮಾಜಿ ದೇವದಾಸಿಯರು ಆಗಮಿಸಿದ್ದರು. ಜೀವನ ನಿರ್ವಹಣೆ ಮಾಡುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಆದರೆ ಸರ್ಕಾರ ನಮಗೆ ನೀಡಬೇಕಾದ ಮೂಲಭೂತ ಹಕ್ಕುಗಳನ್ನು ನೀಡುತ್ತಿಲ್ಲ. ಸಾಮಾನ್ಯರಂತೆ ಉತ್ತಮ ಜೀವನ ರೂಪಿಸಿಕೊಳ್ಳಲು ಸರ್ಕಾರ ಮಾಜಿ ದೇವದಾಸಿಯರ ದಶಕಗಳ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಮಾಜಿ ದೇವದಾಸಿಯರ ಬೇಡಿಕೆಗಳೇನು?
ಮಾಜಿ ದೇವದಾಸಿಯರ ಸಮೀಕ್ಷೆಯಲ್ಲಿ ಗುರುತಿಸಿದ ಎಲ್ಲಾ ವಿಮುಕ್ತ ದೇವದಾಸಿ ಮಹಿಳೆಯರಿಗೆ ತಕ್ಷಣ ಮನೆ ಮಂಜೂರು ಮಾಡಬೇಕು. ಹಾಗೆಯೇ, ಹಿಂದಿನ ಸರ್ವೆಯಲ್ಲಿ ಬಿಟ್ಟುಹೋದ ಅರ್ಹ ಮಹಿಳೆಯರನ್ನು ಗುರುತಿಸಲು ನಿರಂತರ ಸಮೀಕ್ಷೆ ನಡೆಸಬೇಕು.
ಪ್ರಸ್ತುತ ನೀಡುತ್ತಿರುವ ಯೋಜನೆಯಡಿ ಮಾಸಿಕ ಪಿಂಚಣಿಯನ್ನು ಗೌರವಯುತ ಮೊತ್ತಕ್ಕೆ ಹೆಚ್ಚಿಸಬೇಕು. ಇದನ್ನು ಸರ್ಕಾರವು ದಯೆಯಾಗಿ ನೋಡದೆ, ಸಾಮಾಜಿಕ ಭದ್ರತೆಯಾಗಿ ನೀಡಬೇಕು. ಜೀವನೋಪಾಯಕ್ಕಾಗಿ ಕೃಷಿ ಭೂಮಿ, ಸ್ವಯಂ ಉದ್ಯೋಗಕ್ಕೆ ರಿಯಾಯಿತಿ ದರದ ಸಾಲ, ಮಹಿಳಾ ಸಂಘಗಳಿಗೆ ಆರ್ಥಿಕ ನೆರವು ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ನೀಡಬೇಕು ಎಂದು ಒತ್ತಾಯಿಸಲಾಯಿತು.
ವಿಮುಕ್ತ ದೇವದಾಸಿಯರ ಮಕ್ಕಳಿಗೆ ಅಗತ್ಯ ಪ್ರಮಾಣಪತ್ರಗಳನ್ನು ವಿತರಿಸಿ, ಉನ್ನತ ಶಿಕ್ಷಣ, ವಸತಿ ನಿಲಯ ಹಾಗೂ ಸರ್ಕಾರಿ ಕೆಲಸಗಳಲ್ಲಿ ಆದ್ಯತೆ ಕಲ್ಪಿಸಬೇಕು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರತಿ ತಿಂಗಳು ಪ್ರಗತಿ ಪರಿಶೀಲನಾ ಸಭೆ ನಡೆಸಬೇಕು. ಎಲ್ಲಾ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸಲು 'ಪ್ರತ್ಯೇಕ ದೇವದಾಸಿಯರ ಪುನರ್ವಸತಿ ನಿಗಮ' ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಇದು ಮುಂದಿನ ಪೀಳಿಗೆಯ ಗೌರವಯುತ ಬದುಕಿಗಾಗಿ ನಡೆಯುತ್ತಿರುವ ಸಾಮಾಜಿಕ ನ್ಯಾಯದ ಸಮರವಾಗಿದೆ. ರಾಜ್ಯ ಸರ್ಕಾರದಿಂದ ಸೂಕ್ತ ಭರವಸೆ ಸಿಗದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ವಿಮುಕ್ತ ದೇವದಾಸಿ ಮಹಿಳೆಯರ ಒಕ್ಕೂಟ ಎಚ್ಚರಿಸಿದೆ.

