
ಫಾರಂ-7 ವಿವಾದ: ಪ್ರಕರಣ ಹಿಂಪಡೆಯದಿದ್ದರೆ ಮುತ್ತಿಗೆ ಎಚ್ಚರಿಕೆ ನೀಡಿದ ಬಿಜೆಪಿ
ಫಾರಂ-7 ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಎಫ್ಐಆರ್ ದಾಖಲಿಸಿರುವ ಕ್ರಮವು ರಾಜಕೀಯ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ. ಡಿಜಿಪಿ ಎಂ.ಎ.ಸಲೀಂ ಅವರನ್ನು ಬಿಜೆಪಿ ಭೇಟಿಯಾಗಿ ದೂರ ಸಲ್ಲಿಸಿದೆ.
ಫಾರಂ-7 ಸಲ್ಲಿಕೆ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಎಫ್ಐಆರ್ ದಾಖಲಿಸಿರುವ ರಾಜ್ಯ ಸರ್ಕಾರದ ಕ್ರಮವು ತೀವ್ರ ರಾಜಕೀಯ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ. ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಎಂ.ಎ.ಸಲೀಂ ಅವರನ್ನು ಬಿಜೆಪಿ ನಿಯೋಗವು ಭೇಟಿಯಾಗಿ ದೂರ ಸಲ್ಲಿಕೆ ಮಾಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ ನಿಯೋಗದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ಜಿಲ್ಲಾಧ್ಯಕ್ಷರು ಪಾಲ್ಗೊಂಡಿದ್ದರು.
ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬಿ.ವೈ.ವಿಜಯೇಂದ್ರ, "ಸರ್ಕಾರದ ದಬ್ಬಾಳಿಕೆಗೆ ನಾವು ಹೆದರುವುದಿಲ್ಲ, ನಮ್ಮ ಕಾರ್ಯಕರ್ತರ ರಕ್ಷಣೆಗೆ ಯಾವುದೇ ಹಂತಕ್ಕೂ ಹೋಗುತ್ತೇವೆ" ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಆಯೋಗದ ನಿಯಮಾನುಸಾರ ಫಾರ್ಮ್-7 ಸಲ್ಲಿಸಿದ ಬಿಜೆಪಿ ಕಾರ್ಯಕರ್ತರ ಮೇಲೆ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯ ಮೂಲಕ ಎಫ್ಐಆರ್ ದಾಖಲಿಸಿರುವುದು ಖಂಡನೀಯ. ಈ ಪ್ರಕರಣಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಫಾರಂ-7 ಅನ್ನು ಸಲ್ಲಿಸುವುದು ಚುನಾವಣಾ ಆಯೋಗವು ಪ್ರತಿಯೊಬ್ಬ ನಾಗರಿಕನಿಗೂ ನೀಡಿರುವ ಸಾಂವಿಧಾನಿಕ ಹಕ್ಕು. ಮತದಾರರ ಪಟ್ಟಿಯಲ್ಲಿರುವ ಅನರ್ಹರು ಅಥವಾ ನಿಯಮಬಾಹಿರ ಹೆಸರುಗಳನ್ನು ತೆಗೆದುಹಾಕಲು ಆಕ್ಷೇಪಣೆ ಸಲ್ಲಿಸುವುದು ಚುನಾವಣಾ ಪ್ರಕ್ರಿಯೆಯ ಒಂದು ಸಹಜ ಭಾಗವಾಗಿದೆ. "ಅರ್ಜಿ ಸರಿಯಾಗಿದ್ದರೆ ಆಯೋಗ ಕ್ರಮ ಕೈಗೊಳ್ಳುತ್ತದೆ, ತಪ್ಪಾಗಿದ್ದರೆ ತಿರಸ್ಕರಿಸುತ್ತದೆ. ಇದರಲ್ಲಿ ಎಫ್ಐಆರ್ ದಾಖಲಿಸುವಂತಹ ಅಪರಾಧವೇನಿದೆ? ಎಂದು ಅವರು ಪ್ರಶ್ನಿಸಿದ್ದಾರೆ.
ಪೊಲೀಸ್ ಇಲಾಖೆಯ ದುರ್ಬಳಕೆ: ವಿಜಯೇಂದ್ರ ಆರೋಪ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಇತರ ಸಚಿವರು ಚುನಾವಣಾ ಆಯೋಗದ ಕಚೇರಿಯಲ್ಲಿ ನಡೆಸಿದ ಧರಣಿಯ ನಂತರವೇ, ಪೊಲೀಸರ ಮೇಲೆ ಒತ್ತಡ ಹೇರಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಬಿಎನ್ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. "ರಾಜ್ಯ ಸರ್ಕಾರವು ತನ್ನ ರಾಜಕೀಯ ಲಾಭಕ್ಕಾಗಿ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಆಡಳಿತ ಪಕ್ಷದ ಒತ್ತಡಕ್ಕೆ ಮಣಿದು ಪೊಲೀಸರು ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ" ಎಂದು ದೂರಿದ್ದಾರೆ. ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ ಬಿ.ವೈ. ವಿಜಯೇಂದ್ರ, "ಮುಖ್ಯಮಂತ್ರಿಗಳು ಗೂಂಡಾಗಿರಿ ಮತ್ತು ದಾದಾಗಿರಿ ಮಾಡಲು ಹೊರಟಿದ್ದಾರೆ. ಅವರು ತಾವು 'ಕೋತ್ವಾಲ್ ರಾಮಚಂದ್ರನ ಶಿಷ್ಯ' ಎಂಬುದನ್ನು ಮರೆತಂತಿದೆ, ಆದರೆ ಅಧಿಕಾರ ಯಾರಪ್ಪನ ಮನೆಯ ಆಸ್ತಿಯೂ ಅಲ್ಲ," ಎಂದು ಕಟುವಾಗಿ ಟೀಕಿಸಿದರು. ವಿಶೇಷ ತನಿಖಾ ದಳ (ಎಸ್ಐಟಿ) ರಚನೆ ಮತ್ತು ಪೊಲೀಸ್ ವ್ಯವಸ್ಥೆಯನ್ನು ಹೆದರಿಸುವ ಸಾಧನವಾಗಿ ಬಳಸುವುದನ್ನು ನಿಲ್ಲಿಸದಿದ್ದರೆ, ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಹೋರಾಟದ ಹಾದಿ: ಠಾಣೆಗಳ ಮುತ್ತಿಗೆ ಎಚ್ಚರಿಕೆ
ಅನ್ಯಾಯವಾಗಿ ದಾಖಲಿಸಿರುವ ಎಲ್ಲ ಎಫ್ಐಆರ್ಗಳ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸಲಾಗುವುದು. ರಾಜ್ಯಾದ್ಯಂತ ಬೀದಿಗಿಳಿದು ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುವುದು. ಪಕ್ಷದ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸುವುದನ್ನು ಮುಂದುವರಿಸಿದರೆ, ರಾಜ್ಯಾದ್ಯಂತ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ಫಾರಂ-7 ರದ್ದುಪಡಿಸುವುದು ಅಥವಾ ಎಫ್ಐಆರ್ ಹಾಕುವುದು ಆಯೋಗದ ಕೆಲಸವೇ ಹೊರತು ಸರ್ಕಾರದ ಕೆಲಸವಲ್ಲ. ಸರ್ಕಾರ ಕೇವಲ ತನಿಖೆ ನಡೆಸಲಿ, ಆದರೆ ಏಕಪಕ್ಷೀಯವಾಗಿ ಬಿಜೆಪಿ ಕಾರ್ಯಕರ್ತರನ್ನೇ ಗುರಿಯಾಗಿಸಿ ಕೇಸು ದಾಖಲಿಸುತ್ತಿರುವುದು ಅನ್ಯಾಯ. ತನಿಖೆ ನಡೆಸುವುದಕ್ಕೆ ಬಿಜೆಪಿಯ ತಕರಾರಿಲ್ಲ, ಆದರೆ ರಾಜಕೀಯ ಪ್ರೇರಿತ ತನಿಖೆಯನ್ನು ಸಹಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.

