ಬೆಂಗಳೂರಿನ ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಅಶುಚಿತ್ವ: ಅವಧಿ ಮೀರಿದ ವಸ್ತುಗಳ ಬಳಕೆ..!
x

ಬೆಂಗಳೂರಿನ ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಅಶುಚಿತ್ವ: ಅವಧಿ ಮೀರಿದ ವಸ್ತುಗಳ ಬಳಕೆ..!

ಪ್ರತಿಷ್ಠಿತ ಕ್ಲಬ್‌ಗಳು, ಆನ್‌ಲೈನ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಆಹಾರ ಘಟಕಗಳ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಸುರಕ್ಷತೆಯ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಅಂಶ ಬೆಳಕಿಗೆ ಬಂದಿದೆ.


Click the Play button to hear this message in audio format

ಆಹಾರದಲ್ಲಿ ಸುರಕ್ಷತೆ ಕಾಪಾಡದ ಹಿನ್ನೆಲೆಯಲ್ಲಿ ಹೊಟೇಲ್‌, ಪಂಚಾತಾರ ಹೊಟೇಲ್‌, ರೆಸ್ಟೋರೆಂಟ್‌ ಸೇರಿದಂತೆ ಇತರೆಡೆಗಳಲ್ಲಿ ಆಹಾರ ಸುರಕ್ಷತೆ ಇಲಾಖೆ ನಡೆಸುತ್ತಿರುವ ಕಾರ್ಯಾಚರಣೆಯು ಮುಂದುವರಿದಿದ್ದು, ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಕ್ಲಬ್‌ಗಳು ಮತ್ತು ಆನ್‌ಲೈನ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಆಹಾರ ಘಟಕಗಳ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ನಡೆಸಿದ ತಪಾಸಣೆಯಲ್ಲಿ ಸುರಕ್ಷತೆಯ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಜನಸಾಮಾನ್ಯರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಹಲವು ಗಂಭೀರ ಲೋಪಗಳು ಬೆಳಕಿಗೆ ಬಂದಿವೆ.

ಅಮೆಜಾನ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮತ್ತು ಬಿಗ್ ಬಾಸ್ಕೆಟ್‌ನಂತಹ ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ವಿಷಕಾರಿ ಗುಣವುಳ್ಳ ಧತ್ತೂರ ಹಣ್ಣು ಮತ್ತು ಬೀಜಗಳನ್ನು ಆಹಾರ ಪದಾರ್ಥಗಳೆಂದು ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಧತ್ತೂರವು ಅತ್ಯಂತ ವಿಷಕಾರಿ ಸಸ್ಯವಾಗಿದ್ದು, ಇದನ್ನು ಸೇವಿಸುವುದು ಮನುಷ್ಯನ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿಯಾಗಿದೆ. ಇಲಾಖೆಯು ಇವುಗಳ ಮಾರಾಟವನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ನೋಟಿಸ್ ಜಾರಿ ಮಾಡಿದೆ. ಬಿಗ್ ಬಾಸ್ಕೆಟ್ ಸಂಸ್ಥೆಯು ತಪ್ಪುಗಳನ್ನು ಸರಿಪಡಿಸಿ ಮಾನವ ಸೇವನೆಗೆ ಯೋಗ್ಯವಲ್ಲ ಎಂದು ಮುದ್ರಿಸುವುದಾಗಿ ತಿಳಿಸಿದರೆ, ಇತರ ಕಂಪನಿಗಳು ಯಾವುದೇ ಸಮರ್ಪಕ ಉತ್ತರ ನೀಡದೆ ಕಾನೂನು ಕ್ರಮಕ್ಕೆ ಗುರಿಯಾಗಿವೆ. ಅಷ್ಟೇ ಅಲ್ಲದೆ, ಬೆಂಗಳೂರಿನ ಎಸ್‌ವಿಆರ್‌ ಗ್ರೂಪ್ಸ್, ಟೆನೊರು, ಬೆಡಿಗನಹಳ್ಳಿ ಶಾಖೆಯ ಪರವಾನಗಿಯನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ.

ಬೆಂಗಳೂರಿನ ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಅವ್ಯವಸ್ಥೆಯ ಆಗರ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಉ.ಟಿ. ಖಾದರ್ ಅವರ ಮಾರ್ಗದರ್ಶನದಲ್ಲಿ, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಬೆಂಗಳೂರಿನ ವಿವಿಧ ಕ್ಲಬ್‌ಗಳ ಮೇಲೂ ದಾಲಿ ನಡೆಸಿ ತಪಾಸಣೆ ನಡೆಸಿತು. ಈ ತಪಾಸಣೆಯಲ್ಲಿ ಕಂಡುಬಂದ ಲೋಪಗಳು ಅಚ್ಚರಿ ಮೂಡಿಸುವಂತಿವೆ. ಸೆಂಚುರಿ ಕ್ಲಬ್, ಕೆಎಸ್‌ಸಿಎ ಕ್ಲಬ್, ಬೌರಿಂಗ್ ಕ್ಲಬ್, ಕ್ಯಾಥೊಲಿಕ್ ಕ್ಲಬ್, ಟೆನ್ನಿಸ್ ಕ್ಲಬ್, ವಿಜಯನಗರ ಕ್ಲಬ್, ಮಹಾಲಕ್ಷ್ಮಿ ಲೇಔಟ್ ಕ್ಲಬ್ ಮತ್ತು ಮಲ್ಲೇಶ್ವರಂ ಕ್ಲಬ್‌ಗಳ ಮೇಲೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಬೌರಿಂಗ್ ಮತ್ತು ಸೆಂಚುರಿ ಕ್ಲಬ್‌ನಲ್ಲಿನ ಅಡುಗೆಮನೆ ಮತ್ತು ಆಹಾರ ಸಂಗ್ರಹಣಾ ಸ್ಥಳಗಳಲ್ಲಿ ಅಸಹ್ಯಕರ ಸ್ಥಿತಿ ಕಂಡುಬಂದಿದೆ. ವಿಶೇಷವಾಗಿ ಜಿರಳೆಗಳ ಕಾಟ ಹೆಚ್ಚಾಗಿದ್ದು, ಇದು ಗ್ರಾಹಕರ ಆರೋಗ್ಯಕ್ಕೆ ನೇರ ಅಪಾಯವಾಗಿದೆ. ಕೆಎಸ್‌ಸಿಎ ಕ್ಲಬ್‌ನಲ್ಲಿನ ಅಡುಗೆಮನೆಯಲ್ಲಿ ವೈಯಕ್ತಿಕ ನೈರ್ಮಲ್ಯದ ಕೊರತೆ ಎದ್ದು ಕಾಣುತ್ತಿತ್ತು. ಪ್ಲಾಸ್ಟಿಕ್ ಕಟ್ಟಿಂಗ್ ಬೋರ್ಡ್‌ಗಳ ಬಳಕೆ, ಡ್ರೈನೇಜ್ ವ್ಯವಸ್ಥೆ ಬ್ಲಾಕ್ ಆಗಿರುವುದು, ತರಕಾರಿ ಮತ್ತು ಮಾಂಸವನ್ನು ಪ್ರತ್ಯೇಕವಾಗಿ ಸಂಗ್ರಹಿಸದಿರುವುದು, ಶಕ್ತಿ ತೂರ್ ದಾಲ್‌ನಲ್ಲಿ ಪ್ಯಾಕಿಂಗ್ ದಿನಾಂಕ ಅಥವಾ ಎಂಆರ್‌ಪಿ ಇಲ್ಲದಿರುವುದು ಹಾಗೂ ಪಾತ್ರೆ ತೊಳೆಯುವ ಸ್ಥಳದಲ್ಲಿ ಬಿಸಿನೀರಿನ ವ್ಯವಸ್ಥೆ ಇಲ್ಲದಿರುವುದು ಕಂಡುಬಂದಿದೆ. ಕ್ಯಾಥೊಲಿಕ್ ಕ್ಲಬ್‌ನಲ್ಲಿ 10 ಪ್ಯಾಕೆಟ್ ಅವಧಿ ಮೀರಿದ ಅಣಬೆ ಉತ್ಪನ್ನಗಳು ಪತ್ತೆಯಾಗಿವೆ. ಲೇಬಲ್ ಉಲ್ಲಂಘನೆ ಮತ್ತು ನೈರ್ಮಲ್ಯದ ಕೊರತೆಗಾಗಿ ನೋಟಿಸ್ ಜಾರಿ ಮಾಡಲಾಗಿದೆ. ಟೆನ್ನಿಸ್, ವಿಜಯನಗರ, ಮಹಾಲಕ್ಷ್ಮಿ ಲೇಔಟ್ ಮತ್ತು ಮಲ್ಲೇಶ್ವರಂ ಕ್ಲಬ್‌ಗಳಲ್ಲಿ ಲೇಬಲ್ ನಿಯಮಗಳ ಉಲ್ಲಂಘನೆ, ನೈರ್ಮಲ್ಯದ ಕೊರತೆ ಮತ್ತು ಆಹಾರ ನಿರ್ವಹಣೆಯಲ್ಲಿ ಬೇಜವಾಬ್ದಾರಿ ಎದ್ದು ಕಾಣುತ್ತಿತ್ತು. ಟೆನ್ನಿಸ್ ಕ್ಲಬ್‌ನಲ್ಲಿ ಅಡುಗೆ ಸಿಬ್ಬಂದಿಯ ವೈದ್ಯಕೀಯ ಪ್ರಮಾಣಪತ್ರಗಳೇ ಇರಲಿಲ್ಲ ಎಂಬುದು ಗೊತ್ತಾಗಿದೆ.

ಮುಂದಿನ ಕಾನೂನು ಕ್ರಮ ಏನು?

ತಪಾಸಣೆಯ ವೇಳೆ ಸಂಗ್ರಹಿಸಲಾದ ಕುಡಿಯುವ ನೀರು ಮತ್ತು ಬಳಸಿದ ಅಡುಗೆ ಎಣ್ಣೆಯ ಮಾದರಿಗಳನ್ನು ಸರ್ಕಾರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರಯೋಗಾಲಯದ ವರದಿಯಲ್ಲಿ ಕಲ್ಬೆರಕೆ ಅಥವಾ ವಿಷಕಾರಿ ಅಂಶಗಳು ದೃಢಪಟ್ಟರೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.

ಆನ್‌ಲೈನ್ ಮೂಲಕ ಆಹಾರ ಪದಾರ್ಥಗಳನ್ನು ಖರೀದಿಸುವಾಗ ಗ್ರಾಹಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಯಾವುದೇ ವಸ್ತುವನ್ನು ಖರೀದಿಸುವ ಮುನ್ನ ಅದರ ಲೇಬಲ್ ಪರಿಶೀಲಿಸುವುದು, ಪ್ಯಾಕಿಂಗ್ ದಿನಾಂಕ ಮತ್ತು ಎಕ್ಸ್‌ಪೈರಿ ಡೇಟ್ ನೋಡುವುದು ಅತ್ಯಗತ್ಯ. ಕ್ಲಬ್‌ಗಳಂತಹ ಪ್ರತಿಷ್ಠಿತ ಸ್ಥಳಗಳಲ್ಲಿ ಆಹಾರ ಸೇವಿಸುವಾಗಲೂ ನೈರ್ಮಲ್ಯದ ಕಡೆಗೆ ಗಮನಹರಿಸುವುದು ಗ್ರಾಹಕರ ಹಕ್ಕು ಆಗಿದೆ. ಈ ವಿಶೇಷ ಕಾರ್ಯಾಚರಣೆಯು ಬೆಂಗಳೂರಿನಲ್ಲಿ ಆಹಾರ ಗುಣಮಟ್ಟವನ್ನು ಸುಧಾರಿಸಲು ಒಂದು ದೊಡ್ಡ ಹೆಜ್ಜೆಯಾಗಿದೆ. ಸರ್ಕಾರವು ಕೇವಲ ದಾಳಿ ನಡೆಸುವುದಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಇಂತಹ ತಪಾಸಣೆಯನ್ನು ನಿರಂತರವಾಗಿ ಮುಂದುವರಿಸುವುದಾಗಿ ಭರವಸೆ ನೀಡಿದೆ. ಆಹಾರದ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಯಾವುದೇ ಸಂಸ್ಥೆಯಾಗಲಿ, ಅದು ಎಷ್ಟೇ ದೊಡ್ಡದಿದ್ದರೂ ಕಾನೂನಿನ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂಬ ಸಂದೇಶವನ್ನು ಈ ಪ್ರಕರಣ ರವಾನಿಸಿದೆ.

Read More
Next Story