FLY91 ವಿಮಾನದಲ್ಲಿ 4 ಗಂಟೆ ಸಾವು-ಬದುಕಿನ ಹೋರಾಟ: ಕೊನೆಯ ಸಂದೇಶ ಕಳುಹಿಸಲು ಸಿದ್ಧರಾಗಿದ್ದ ಪ್ರಯಾಣಿಕರು!
x
ಹುಬ್ಬಳ್ಳಿಯಲ್ಲಿ ವಿಮಾನ ಲ್ಯಾಂಡಿಂಗ್‌ ವೇಳೆ ಅವಘಡ

FLY91 ವಿಮಾನದಲ್ಲಿ 4 ಗಂಟೆ ಸಾವು-ಬದುಕಿನ ಹೋರಾಟ: 'ಕೊನೆಯ ಸಂದೇಶ' ಕಳುಹಿಸಲು ಸಿದ್ಧರಾಗಿದ್ದ ಪ್ರಯಾಣಿಕರು!

ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹೊರಟಿದ್ದ FLY91 ವಿಮಾನದಲ್ಲಿ ತೀವ್ರ ಅಲುಗಾಟ ಉಂಟಾಗಿ ಪ್ರಯಾಣಿಕರು ಪ್ರಾಣಭಯ ಅನುಭವಿಸಿದ್ದಾರೆ. 4 ಗಂಟೆಗಳ ಕಾಲ ಆಕಾಶದಲ್ಲೇ ಇದ್ದ ವಿಮಾನ ಬೆಂಗಳೂರಿನಲ್ಲಿ ಲ್ಯಾಂಡ್ ಆಗಿದೆ.


ಆಕಾಶ ಮಧ್ಯದಲ್ಲಿ ಸಾವು ಕಣ್ಣೆದುರೇ ಕಂಡಾಗ ಉಂಟಾಗುವ ಆ ನರಕಯಾತನೆ ಅಕ್ಷರಗಳಲ್ಲಿ ವರ್ಣಿಸಲು ಅಸಾಧ್ಯ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಆ ಒಂದು ವಿಡಿಯೋ ಫ್ಲೈ91 ವಿಮಾನದಲ್ಲಿದ್ದ ಪ್ರಯಾಣಿಕರ ಅಸಹಾಯಕತೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದೆ. ಮಹಿಳೆಯೊಬ್ಬರು ದೇವರಿಗೆ ಕೈಮುಗಿಯುತ್ತಾ ಬಿಕ್ಕಿ ಬಿಕ್ಕಿ ಅಳುತ್ತಿದ್ದರೆ, ವಿಮಾನದ ತುಂಬಾ "ಓ ಗಾಡ್‌" ಎಂಬ ಚೀರಾಟ ಕೇಳಿಬರುತ್ತಿತ್ತು.

ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹೊರಟಿದ್ದ FLY91 ವಿಮಾನವೊಂದು ಮಧ್ಯ ಆಕಾಶದಲ್ಲಿ ಭೀಕರ ಗಾಳಿಯ ಅಲೆಗಳಿಗೆ ಸಿಲುಕಿ, ಪ್ರಯಾಣಿಕರು ಅಕ್ಷರಶಃ ಸಾವಿನ ದರ್ಶನ ಮಾಡಿ ಬಂದಿದ್ದಾರೆ. ಸುಮಾರು 4 ಗಂಟೆಗಳ ಕಾಲ ಆಕಾಶದಲ್ಲೇ ಅತಂತ್ರರಾಗಿದ್ದ ವಿಮಾನವು ಅಂತಿಮವಾಗಿ ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಇಳಿದಿದೆ. ಆದರೆ, ವಿಮಾನ ನಿಲ್ದಾಣದ ಸಿಬ್ಬಂದಿಯ ಅಸಭ್ಯ ವರ್ತನೆ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮಧ್ಯಾಹ್ನ 3 ಗಂಟೆಗೆ ಹೈದರಾಬಾದ್‌ನಿಂದ ಹೊರಟಿದ್ದ ವಿಮಾನದಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಹುಬ್ಬಳ್ಳಿಯ ಸಮೀಪ ಬರುತ್ತಿದ್ದಂತೆ ಹವಾಮಾನ ವೈಪರೀತ್ಯದಿಂದಾಗಿ ವಿಮಾನವು ತೀವ್ರವಾಗಿ ಅಲುಗಾಡಲು ಆರಂಭಿಸಿತು. ಸುಮಾರು 15 ನಿಮಿಷಗಳ ಕಾಲ ವಿಮಾನವು ನಿಯಂತ್ರಣ ತಪ್ಪಿದಂತೆ ಕಂಡುಬಂದಾಗ, ಪ್ರಯಾಣಿಕರು ಭಯಭೀತರಾದರು.

ಕುಟುಂಬಕ್ಕೆ ವಿಡಿಯೋ ಸಂದೇಶ

ನಾವು ಇನ್ನು ಬದುಕುಳಿಯುವುದಿಲ್ಲ ಎಂದು ಭಾವಿಸಿದ ಕೆಲವು ಪ್ರಯಾಣಿಕರು, ತಮ್ಮ ಕುಟುಂಬಸ್ಥರಿಗೆ 'ಕೊನೆಯ ಸಂದೇಶ' ಕಳುಹಿಸಲು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಲು ಆರಂಭಿಸಿದ್ದರು. ವಿಮಾನದ ಅಲುಗಾಟದ ತೀವ್ರತೆ ಎಷ್ಟಿತ್ತೆಂದರೆ, ಪೋಷಕರ ಕೈಯಲ್ಲಿದ್ದ ಮಗುವೊಂದು ಸೀಟಿನಿಂದ ಕೆಳಕ್ಕೆ ಬಿದ್ದ ಹೃದಯವಿದ್ರಾವಕ ಘಟನೆಯೂ ನಡೆದಿದೆ. ವಿಮಾನದಲ್ಲಿದ್ದ ಇಬ್ಬರು ಮಹಿಳಾ ಕ್ಯಾಬಿನ್ ಸಿಬ್ಬಂದಿ ಕೂಡ ಭಯದಿಂದ ಅಳುತ್ತಿದ್ದರು ಎಂದು ಪ್ರಯಾಣಿಕರು ವಿವರಿಸಿದ್ದಾರೆ.

ಬೆಂಗಳೂರಿನಲ್ಲಿ ಸೇಫ್ ಲ್ಯಾಂಡಿಂಗ್

ಹುಬ್ಬಳ್ಳಿಯಲ್ಲಿ ವಿಮಾನ ಇಳಿಸಲು ಸಾಧ್ಯವಾಗದ ಕಾರಣ, ಪೈಲಟ್ ಬಹಳ ಸಂಯಮದಿಂದ ವಿಮಾನವನ್ನು ನಿರ್ವಹಿಸಿ ಬೆಂಗಳೂರಿನತ್ತ ತಿರುಗಿಸಿದರು. ಸುಮಾರು ನಾಲ್ಕು ಗಂಟೆಗಳ ಕಾಲ ಆಕಾಶದಲ್ಲೇ ಸುತ್ತಾಡಿದ ವಿಮಾನವು ರಾತ್ರಿ 7 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ಜೀವ ಉಳಿಸಿದ ಪೈಲಟ್‌ಗೆ ಪ್ರಯಾಣಿಕರು ಚಪ್ಪಾಳೆ ತಟ್ಟಿ ಕೃತಜ್ಞತೆ ಸಲ್ಲಿಸಿದರು.

"ಜೀವ ಹೋದ್ರೂ ಪರವಾಗಿಲ್ಲ ಅನ್ನೋ ಅಹಂಕಾರ": ಸಿಬ್ಬಂದಿ ವಿರುದ್ಧ ಆಕ್ರೋಶ

ವಿಮಾನ ಸುರಕ್ಷಿತವಾಗಿ ಇಳಿದ ನಂತರ ಪ್ರಯಾಣಿಕರಿಗೆ ಸಮಾಧಾನ ಪಡಿಸಬೇಕಾದ FLY91 ಏರ್‌ಲೈನ್ಸ್‌ನ ನೆಲದ ಸಿಬ್ಬಂದಿ, ಅತ್ಯಂತ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಪ್ರಯಾಣಿಕರು ದೂರಿದ್ದಾರೆ. "ನೀವು ಇಲ್ಲೇ ಕುಳಿತಿರಿ, ಈ ವಿಮಾನ ಮತ್ತೆ ಹುಬ್ಬಳ್ಳಿಗೆ ಹೋಗುತ್ತದೆ. ಇಷ್ಟವಿದ್ದರೆ ಹತ್ತಿ ಇಲ್ಲದಿದ್ದರೆ ಇಳಿದು ಹೋಗಿ" ಎಂದು ವಾಕಿಟಾಕಿ ಹಿಡಿದುಕೊಂಡಿದ್ದ ಸಿಬ್ಬಂದಿ ಧಬಾಯಿಸಿದ್ದಾರೆ. "ಜೀವ ಉಳಿಸಿಕೊಂಡು ಬಂದ ನಮಗೆ ಕನಿಷ್ಠ ಮಾನವೀಯತೆ ತೋರದೆ ಅಹಂಕಾರದಿಂದ ವರ್ತಿಸಿದ್ದಾರೆ. ಇಷ್ಟೆಲ್ಲಾ ಭಯದ ನಂತರ ಮತ್ತೆ ಅದೇ ವಿಮಾನ ಹತ್ತಲು ಯಾವ ಧೈರ್ಯ ಬೇಕು?" ಎಂದು ಪ್ರಯಾಣಿಕರು ಪ್ರಶ್ನಿಸಿದ್ದಾರೆ.

Read More
Next Story