
ಮಂಗಳೂರಿನಲ್ಲಿ ಮಂಡ್ ಸೊಭಾಣ್ ಸಂಸ್ಥೆಯ 40ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಕೂಟದಲ್ಲಿ ಸುಮಾರು 700 ಗಾಯಕರು ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಮಂಗಳೂರಿನಲ್ಲಿ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಕೂಟ: ಗಿನ್ನೆಸ್ ದಾಖಲೆ
ಮಂಗಳೂರಿನಲ್ಲಿ ಮಾಂಡ್ ಸೊಭಾಣ್ ಸಂಸ್ಥೆಯ 40ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಕೂಟದಲ್ಲಿ ಸುಮಾರು 700 ಗಾಯಕರು ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ವಿಶ್ವ ದಾಖಲೆಯ ಗುರಿಯೊಂದಿಗೆ 'ಮಾಂಡ್ ಸೊಭಾಣ್' ವತಿಯಿಂದ ಆಯೋಜಿಸಲಾಗಿದ್ದ 12 ದಿನಗಳ ‘ವಿಶ್ವ ಕೊಂಕಣಿ ಸಂಗೀತ ಮಹಾಮೇಳ’ವು ಅತ್ಯಂತ ಸಂಭ್ರಮ ಹಾಗೂ ಸಡಗರದೊಂದಿಗೆ ತೆರೆಕಂಡಿತು. ನಿರಂತರ ಗಾಯನದ ಮೂಲಕ ಹೊಸ ದಾಖಲೆ ಬರೆದ ಈ ಐತಿಹಾಸಿಕ ಕ್ಷಣಕ್ಕೆ ಮಂಗಳೂರಿನ ಪುರಭವನ ಸಾಕ್ಷಿಯಾಯಿತು.
ಮಹಾಮೇಳದ ಅಂತಿಮ ಗೀತೆಯಾಗಿ ‘ಮಾಂಡ್ ಸೊಭಾಣ್ ಮ್ಹಳ್ಯಾರ್ ಕಿತೆಂ..’ ಹಾಡು ಮೊಳಗುತ್ತಿದ್ದಂತೆಯೇ ಪುರಭವನದ ಒಳಗೆ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರು ಹಾಗೂ ಹೊರಗೆ ಎರಡು ಬದಿಗಳಲ್ಲಿ ಅಳವಡಿಸಲಾಗಿದ್ದ ಬೃಹತ್ ಪರದೆಗಳ ಮೂಲಕ ಕಾರ್ಯಕ್ರಮ ವೀಕ್ಷಿಸುತ್ತಿದ್ದವರ ಸಂಭ್ರಮ ಮುಗಿಲುಮುಟ್ಟಿತು. ಹಾಡಿನ ಕೊನೆಯಲ್ಲಿ ಸಣ್ಣ ಆಲಾಪದ ಬಳಿಕ ಗಾಯಕರು ಮತ್ತೆ ಪಲ್ಲವಿಗೆ ವೇಗ ತುಂಬುತ್ತಿದ್ದಂತೆ, ನೆರೆದಿದ್ದ ಜನರೂ ದ್ರುತಗತಿಯಲ್ಲಿ ನೃತ್ಯದ ಹೆಜ್ಜೆ ಹಾಕಿದರು. ಮತ್ತೊಂದು ಆಲಾಪದೊಂದಿಗೆ ಮಹಾಮೇಳಕ್ಕೆ ಅಧಿಕೃತ ತೆರೆ ಬೀಳುತ್ತಿದ್ದಂತೆಯೇ, ಹೊರಗೆ ಬ್ಯಾಂಡ್-ವಾದ್ಯಗಳ ನಿನಾದ ಮೊಳಗಿತು. ಜನರು ನೃತ್ಯವಾಡುತ್ತಲೇ ಪರಸ್ಪರ ಅಪ್ಪಿಕೊಂಡು ಐತಿಹಾಸಿಕ ಸಾಧನೆಗೆ ಅಭಿನಂದನೆ ವಿನಿಮಯ ಮಾಡಿಕೊಂಡರು.
ದಾಖಲೆಯ ಅಂಕಿ-ಅಂಶಗಳು
12 ದಿನಗಳ ಕಾಲ ನಡೆದ ಈ ನಿರಂತರ ಸಂಗೀತ ಯಜ್ಞದಲ್ಲಿ ಒಟ್ಟು 300 ತಂಡಗಳು ಪಾಲ್ಗೊಂಡು ಗಾಯನಕ್ಕೆ ಸಾಥ್ ನೀಡಿದವು. ಇದರಲ್ಲಿ ದಕ್ಷಿಣ ಕನ್ನಡದ 155, ಗೋವಾದ 53, ಉಡುಪಿಯ 38, ಉತ್ತರ ಕನ್ನಡದ 20, ಮಲೆನಾಡಿನ 13, ಮಹಾರಾಷ್ಟ್ರದ 13, ಕೇರಳದ 3 ಹಾಗೂ ವಿದೇಶದ 5 ತಂಡಗಳು ಸೇರಿದ್ದವು. ಒಟ್ಟು 7,235 ಗಾಯಕರು 4,596 ಹಾಡುಗಳನ್ನು ಪ್ರಸ್ತುತಪಡಿಸುವ ಮೂಲಕ ಈ ಮಹಾಮೇಳವನ್ನು ಯಶಸ್ವಿಗೊಳಿಸಿದರು.
Please to be part of First World Konkani Music Mega Convention at Mangalore on the occasion of 40th anniversary of the #Mandd #Sobhann . Witnessed the #Guinness World Record for the longest singing marathon by nearly 700 singers flew form different parts of the world. https://t.co/F5KoQ99u8e
— Dr Arathi Krishna (@DrArathiKrishna) November 15, 2026
ವಿಶ್ವಮಟ್ಟದ ಪ್ರದರ್ಶನ
ಕಾರ್ಯಕ್ರಮದ ದಾಖಲೆಯನ್ನು ಅಧಿಕೃತವಾಗಿ ಘೋಷಿಸಿ ಮಾತನಾಡಿದ ಸ್ವಪ್ನಿಲ್ ಅವರು, "ಇದು ಪ್ರಸಿದ್ಧ ದಾಖಲೆಗಳ ಸಾಲಿಗೆ ಸೇರುವ ಮಹತ್ವದ ಕಾರ್ಯಕ್ರಮವಾಗಿದ್ದು, ಇಲ್ಲಿ ಹಾಡಿದ ಪ್ರತಿಯೊಂದು ಗೀತೆಯೂ ಮೋಹಕವಾಗಿತ್ತು. ಕೊಂಕಣಿಗರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಸಂಭ್ರಮಿಸಿದ ಪರಿ ಕಂಡು ರೋಮಾಂಚನವಾಗಿದೆ. ಇಲ್ಲಿ ಮೂಡಿಬಂದ ಪ್ರದರ್ಶನ ವಿಶ್ವಮಟ್ಟದ್ದಾಗಿತ್ತು. ದಾಖಲೆಗಳು ಕೇವಲ ಹೆಸರು ತಂದುಕೊಡುವುದು ಮಾತ್ರವಲ್ಲ, ಅವು ಜನರನ್ನು ಒಗ್ಗೂಡಿಸುವ ಸಾಧನವೂ ಆಗುತ್ತವೆ; ಅಂತಹ ಒಗ್ಗೂಡಿಸುವಿಕೆಯಲ್ಲಿ ಸಂಗೀತಕ್ಕೆ ಅಪಾರ ಸಾಮರ್ಥ್ಯವಿದೆ" ಎಂದು ಶ್ಲಾಘಿಸಿದರು.
ಈ ಐತಿಹಾಸಿಕ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಶಾಸಕರಾದ ಐವನ್ ಡಿಸೋಜ, ಆರತಿ ಕೃಷ್ಣ, ಕರ್ನಾಟಕ ಕೊಂಕಣಿ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್, ಸಂಗೀತ ನಿರ್ದೇಶಕ ಜಾಯಲ್ ಪಿರೇರ, ಮಾಂಡ್ ಸೊಭಾಣ್ ಅಧ್ಯಕ್ಷ ಲುವಿಸ್ ಜೆ. ಪಿಂಟೊ, ಕಲಾಂಗಣ್ ಅಧ್ಯಕ್ಷ ರೊನಾಲ್ಡ್ ಮೆಂಡೋನ್ಸ, ಗೋವಾ ಪ್ರತಿನಿಧಿ ಮೈಕೆಲ್ ಗ್ರೇಸಿಯಸ್ ಹಾಗೂ ಪ್ರಮುಖರಾದ ಜಾಯ್ಸ್, ರೊನಾಲ್ಡ್ ಕೊಲಾಸೊ, ಮೈಕೆಲ್ ಡಿಸೋಜ, ರಾಯ್ ಕ್ಯಾಸ್ಟಲಿನೊ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

