
ಲಿಂಗಸುಗೂರಿನ ರೇಷ್ಮೆ ಇಲಾಖೆ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ಲಿಂಗಸುಗೂರು ರೇಷ್ಮೆ ಇಲಾಖೆ ಕಚೇರಿಗೆ ಬೆಂಕಿ; ದಾಖಲೆಗಳು ಭಸ್ಮ
ಬೆಂಕಿಯ ತೀವ್ರತೆಗೆ ಕಚೇರಿಯಲ್ಲಿದ್ದ ಪೀಠೋಪಕರಣಗಳು, ಕಂಪ್ಯೂಟರ್‌ಗಳು ಹಾಗೂ ಹಲವು ದಾಖಲೆಗಳು ಹಾನಿಗೊಳಗಾಗಿವೆ. ಬೆಂಕಿ ಅವಘಡದಿಂದ ಎಷ್ಟು ಹಾನಿಯಾಗಿದೆ ಎಂಬುದು ಅಧಿಕಾರಿಗಳ ಪರಿಶೀಲನೆ ಬಳಿಕ ತಿಳಿದುಬರಬೇಕಿದೆ.
ಲಿಂಗಸುಗೂರು ಪಟ್ಟಣದ ರೇಷ್ಮೆ ಇಲಾಖೆ ಕಚೇರಿಯಲ್ಲಿ ಶನಿವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದೆ. ಕಟ್ಟಡದ ಬಹುಭಾಗ ಹೊತ್ತಿ ಉರಿದಿದೆ. ಇಂದು(ಆಗಸ್ಟ್ 22) ನಾಲ್ಕನೇ ಶನಿವಾರವಾದ ಹಿನ್ನೆಲೆಯಲ್ಲಿ ಸರ್ಕಾರಿಗೆ ರಜೆ ಇತ್ತು. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಆದರೆ, ಅವಘಡಕ್ಕೆ ನಿಖರ ಕಾರಣ ಖಚಿತವಾಗಿಲ್ಲ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕಾರಣ ಪತ್ತೆಹಚ್ಚುವ ಕಾರ್ಯ ಕೈಗೊಂಡಿದ್ದಾರೆ.
ಕಂಪ್ಯೂಟರ್, ಪೀಠೋಪಕರಣ, ದಾಖಲೆಗಳಿಗೆ ಹಾನಿ
ಕಚೇರಿಯಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಹಲವು ವಸ್ತುಗಳು ಸುಟ್ಟು ಹಾನಿಗೊಳಗಾಗಿವೆ. ಕಚೇರಿಯ ಪೀಠೋಪಕರಣಗಳು, ಕಂಪ್ಯೂಟರ್‌ಗಳು ಸೇರಿ ಹಲವು ಪ್ರಮುಖ ದಾಖಲೆಗಳು ಬೆಂಕಿಗೆ ಆಹುತಿಯಾಗಿವೆ. ಅಗ್ನಿಯ ತೀವ್ರತೆಯಿಂದ ಕಚೇರಿ ಕಟ್ಟಡಕ್ಕೂ ಹಾನಿಯಾಗಿದೆ.
ಬೆಂಕಿ ನಂದಿಸಿದ ಅಗ್ನಿ ಶಾಮಕ ಸಿಬ್ಬಂದಿ
ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಗ್ನಿ ಅವಘಡದ ಹಿಂದಿನ ನಿಖರ ಕಾರಣ ಹಾಗೂ ಸಂಭವಿಸಿರುವ ಆಸ್ತಿ ನಷ್ಟದ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

