ಫಿಬಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್: ಏಷ್ಯಾದ 6 ಚಾಂಪಿಯನ್ ಕ್ಲಬ್‌ಗಳ ಸಮರ
x

'ಫಿಬಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್': ಏಷ್ಯಾದ 6 ಚಾಂಪಿಯನ್ ಕ್ಲಬ್‌ಗಳ ಸಮರ

ಕ್ರೀಡಾ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವ ಬೆಂಗಳೂರು ನಗರದಲ್ಲಿ ಅ.20 ರಿಂದ 25 ರವರೆಗೆ ಪ್ರತಿಷ್ಠಿತ 'ಫಿಬಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಏಷ್ಯಾ-2026' ಟೂರ್ನಿಯು ವೈಭವಯುತವಾಗಿ ನಡೆಯಲಿದೆ.


Click the Play button to hear this message in audio format

ಸಿಲಿಕಾನ್ ಸಿಟಿ ಬೆಂಗಳೂರು, ಇದೀಗ ಮತ್ತೊಮ್ಮೆ ಕ್ರೀಡಾ ಜಗತ್ತಿನ ಕಣ್ಣು ತನ್ನತ್ತ ತಿರುಗುವಂತೆ ಮಾಡಲು ಸಜ್ಜಾಗಿದೆ. ಕ್ರೀಡಾ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವ ಬೆಂಗಳೂರು ನಗರದಲ್ಲಿ ಅ.20 ರಿಂದ 25 ರವರೆಗೆ ಪ್ರತಿಷ್ಠಿತ 'ಫಿಬಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಏಷ್ಯಾ-2026' ಟೂರ್ನಿಯು ವೈಭವಯುತವಾಗಿ ನಡೆಯಲಿದೆ. ಈ ಕುರಿತು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಈ ಕುರಿತು ವಿವರಗಳನ್ನುಹಂಚಿಕೊಂಡಿದ್ದು, ರಾಜ್ಯ ಸರ್ಕಾರ, ಭಾರತೀಯ ಬಾಸ್ಕೆಟ್‌ಬಾಲ್ ಫೆಡರೇಷನ್ ಮತ್ತು ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಈ ಟೂರ್ನಿಯನ್ನು ಆಯೋಜಿಸಲಾಗಿದೆ. ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್ ಫೆಡರೇಷನ್ ಹಾಗೂ ಫಿಬಾ ಏಷ್ಯಾದ ನೇತೃತ್ವದಲ್ಲಿ ನಡೆಯಲಿರುವ ಈ ಟೂರ್ನಿಯು ಏಷ್ಯಾದ ಅತ್ಯುತ್ತಮ ಮಹಿಳಾ ಬಾಸ್ಕೆಟ್‌ಬಾಲ್ ಪ್ರತಿಭೆಗಳನ್ನು ಒಂದೇ ವೇದಿಕೆಗೆ ತರಲಿದೆ. ನಗರದ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣವು ಈ ರೋಮಾಂಚನಕಾರಿ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.

ಪ್ರಶಸ್ತಿಗಾಗಿ ಕಾದಾಟ ನಡೆಸಲಿರುವ ತಂಡಗಳು

ಈ ಟೂರ್ನಿಯಲ್ಲಿ ಏಷ್ಯಾದ ವಿವಿಧ ರಾಷ್ಟ್ರಗಳ 6 ಉನ್ನತ ಶ್ರೇಣಿಯ ವೃತ್ತಿಪರ ಮಹಿಳಾ ಬಾಸ್ಕೆಟ್‌ಬಾಲ್ ಕ್ಲಬ್ ತಂಡಗಳು ಭಾಗವಹಿಸುತ್ತಿವೆ. ಅವುಗಳೆಂದರೆ, ಚೀನಾದಿಂದ ಸಿಚುವಾನ್ ಯುಯಾಂದ ಮೀಲೆ ತಂಡ, ಜಪಾನ್‌ನಿಂದ ಡೆನ್ಸೆ ಐರಿಸ್ ತಂಡ, ದಕ್ಷಿಣ ಕೊರಿಯಾದಿಂದ ಕೆ.ಬಿ. ಸ್ಟಾರ್ಸ್ ತಂಡ, ಚೈನೀಸ್ ತೈಪೆಯಿಂದ ಕ್ಯಾಥೆ ಲೈಫ್ ಟೈಗರ್ಸ್ ತಂಡ (ಸತತ ಮೂರನೇ ಆವೃತ್ತಿಯ ಆಟಗಾರರು), ಫಿಲಿಪ್ಪೀನ್ಸ್‌ನಿಂದ ಅಕಾರಿ ಸ್ಪಾರ್ಕ್ಸ್ ತಂಡ, ಭಾರತದಿಂದ ಭಾರತೀಯ ರೈಲ್ವೇಸ್ ತಂಡ ಭಾಗವಹಿಸಲಿವೆ. ಈ ಆರು ತಂಡಗಳು ತಮ್ಮ ಕೌಶಲ್ಯ ಮತ್ತು ವೇಗದ ಆಟದ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲು ತೀವ್ರ ಪೈಪೋಟಿ ನೀಡಲಿವೆ. ಟೂರ್ನಿಯು ಒಟ್ಟು ಆರು ದಿನಗಳ ಕಾಲ ನಡೆಯಲಿದ್ದು, ಪ್ರತಿದಿನ ಎರಡು ಪಂದ್ಯಗಳನ್ನು ಆಯೋಜಿಸಲಾಗಿದೆ. ಮೊದಲ ಪಂದ್ಯವು ಸಂಜೆ 4 ಗಂಟೆಗೆ ಪ್ರಾರಂಭವಾದರೆ, ಎರಡನೇ ಪಂದ್ಯವು ರಾತ್ರಿ 7 ಗಂಟೆಗೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಬೆಂಗಳೂರಿನ ಕ್ರೀಡಾಪ್ರೇಮಿಗಳಿಗೆ ಇದು ಸಂಜೆಯ ಮನರಂಜನೆಯ ರಸದೌತಣ ನೀಡಲಿದೆ ಎಂದು ತಿಳಿಸಿದ್ದಾರೆ.

ಬಾಸ್ಕೆಟ್‌ಬಾಲ್ 'ಹಬ್' ಆಗಿ ಬೆಂಗಳೂರು

ಬೆಂಗಳೂರು ಕೇವಲ ಸಾಫ್ಟ್‌ವೇರ್ ತಂತ್ರಜ್ಞಾನಕ್ಕೆ ಮಾತ್ರವಲ್ಲ, ಕ್ರೀಡೆಯಲ್ಲೂ ಜಾಗತಿಕವಾಗಿ ಗುರುತಿಸಿಕೊಳ್ಳುತ್ತಿದೆ. 2004 ರಿಂದಲೂ ಕರ್ನಾಟಕವು ಅನೇಕ ಅಂತಾರಾಷ್ಟ್ರೀಯ ಫಿಬಾ ಟೂರ್ನಿಗಳನ್ನು ಯಶಸ್ವಿಯಾಗಿ ಸಂಘಟಿಸುತ್ತಾ ಬಂದಿದೆ. ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ ಒಂದೇ ತಾಣದಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್ ಪಂದ್ಯಗಳನ್ನು ಆಯೋಜಿಸಿದ ಹೆಗ್ಗಳಿಕೆ ಕರ್ನಾಟಕಕ್ಕಿದೆ. ಇದು ರಾಜ್ಯದ ಕ್ರೀಡಾ ಮೂಲಸೌಕರ್ಯದ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಇತ್ತೀಚಿನ ಏಷ್ಯನ್ ಗೇಮ್ಸ್‌ನಲ್ಲಿ 85 ಭಾರತೀಯ ಕ್ರೀಡಾಪಟುಗಳು ಪದಕ ಗೆದ್ದು ರಾಷ್ಟ್ರಕ್ಕೆ ಕೀರ್ತಿ ತಂದಿರುವುದು ಹೆಮ್ಮೆಯ ವಿಷಯ. ಇದರಲ್ಲಿ ಕರ್ನಾಟಕದ 8 ಜನ ಕ್ರೀಡಾಪಟುಗಳ ಸಾಧನೆಯು ಅಪಾರವಾದದ್ದು. ಸರ್ಕಾರವು ಕ್ರೀಡೆಯನ್ನು ಉತ್ತೇಜಿಸಲು ದೃಢ ನಿರ್ಧಾರ ಕೈಗೊಂಡಿದೆ. ಉತ್ತಮ ದರ್ಜೆಯ ಕ್ರೀಡಾಂಗಣಗಳ ನಿರ್ಮಾಣ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಲಕರಣೆಗಳನ್ನು ಒದಗಿಸುವುದು ಮತ್ತು ಕ್ರೀಡಾಪಟುಗಳಿಗೆ ಆರ್ಥಿಕ ಹಾಗೂ ತಾಂತ್ರಿಕ ಬೆಂಬಲ ನೀಡುವುದನ್ನು ಸರ್ಕಾರ ತನ್ನ ಜವಾಬ್ದಾರಿಯನ್ನಾಗಿ ಪರಿಗಣಿಸಿದೆ.

ಬೆಂಗಳೂರಿಗೆ ಮತ್ತೊಂದು ಫಿಬಾ ಟೂರ್ನಿ ಆಯೋಜಿಸುವ ಅವಕಾಶ ಲಭಿಸಿರುವುದು ಕರ್ನಾಟಕದ ಪಾಲಿಗೆ ಹೆಮ್ಮೆಯ ವಿಷಯ. ಇದು ಕ್ರೀಡೆಗೆ ನಾವು ನೀಡುತ್ತಿರುವ ಉತ್ತೇಜನ ಹಾಗೂ ಜಾಗತಿಕ ಕ್ರೀಡಾ ಭೂಪಟದಲ್ಲಿ ಬೆಂಗಳೂರಿನ ಸ್ಥಾನವನ್ನು ಇನ್ನಷ್ಟು ಬಲಪಡಿಸಲಿದೆ. ಯುವ ಕ್ರೀಡಾಪಟುಗಳು ವಿಶ್ವದರ್ಜೆಯ ಆಟಗಾರರಿಂದ ಸ್ಫೂರ್ತಿ ಪಡೆಯಲು ಇದೊಂದು ಉತ್ತಮ ವೇದಿಕೆ ಎಂದು ಡಾ. ಜಿ. ಪರಮೇಶ್ವರ ಆಶಯ ವ್ಯಕ್ತಪಡಿಸಿದ್ದಾರೆ. ಫಿಬಾ ಏಷ್ಯಾ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಕೆ. ಗೋವಿಂದರಾಜ್ ಮಾತನಾಡಿ, "ಏಷ್ಯಾದ ಅತ್ಯುತ್ತಮ ಮಹಿಳಾ ಕ್ಲಬ್ ತಂಡಗಳನ್ನು ಒಂದೇ ವೇದಿಕೆಗೆ ತರಲು 'ಫಿಬಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಏಷ್ಯಾ' ಪ್ರಮುಖ ವೇದಿಕೆಯಾಗಿದೆ. ಕರ್ನಾಟಕ ಸರ್ಕಾರದ ಸಹಕಾರದೊಂದಿಗೆ ನಡೆಯುತ್ತಿರುವ ಈ ಟೂರ್ನಿಯು ಏಷ್ಯನ್ ಬಾಸ್ಕೆಟ್‌ಬಾಲ್ ಕ್ಯಾಲೆಂಡರ್‌ನಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

Read More
Next Story