ಪಹಲ್ಗಾಮ್ ಕರಾಳ ದಾಳಿಗೆ 1 ವರ್ಷ: ನೋವಿನ ಸುಳಿಯಲ್ಲೂ ಭರವಸೆಯ ಬೆಳಕಿನೆಡೆಗೆ ಮಂಜುನಾಥ್ ರಾವ್ ಕುಟುಂಬ
x

ಪ್ರಕೃತಿಯ ಮಡಿಲಲ್ಲಿ ಸಂತಸದಿಂದಿದ್ದ ಆ ಮುಗ್ಧ ಕುಟುಂಬದ ಮೇಲೆ ಏಕಾಏಕಿ ಎರಗಿದ ಉಗ್ರರು, ಜಾತಿ-ಧರ್ಮ ಕೇಳಿ ಅಮಾನುಷವಾಗಿ ಗುಂಡಿನ ಮಳೆಗರೆದಿದ್ದರು. 

ಪಹಲ್ಗಾಮ್ ಕರಾಳ ದಾಳಿಗೆ 1 ವರ್ಷ: ನೋವಿನ ಸುಳಿಯಲ್ಲೂ ಭರವಸೆಯ ಬೆಳಕಿನೆಡೆಗೆ ಮಂಜುನಾಥ್ ರಾವ್ ಕುಟುಂಬ

ಗುಂಡಿನ ದಾಳಿಯ ನಂತರ ಸುಮಾರು ಒಂದೂವರೆ ಗಂಟೆಗಳ ಕಾಲ ಆ ಕುಟುಂಬಕ್ಕೆ ಯಾವುದೇ ನೆರವು ಸಿಗಲಿಲ್ಲ. ಜಮ್ಮು-ಕಾಶ್ಮೀರದ ಆ ದುರ್ಗಮ ಪ್ರದೇಶದಲ್ಲಿ ಕನಿಷ್ಠ ಮೊಬೈಲ್ ನೆಟ್‌ವರ್ಕ್ ಕೂಡ ಇರಲಿಲ್ಲ.


Click the Play button to hear this message in audio format

ಜಮ್ಮು-ಕಾಶ್ಮೀರದ ಪಹಲ್ಗಾಮ್ ಬಳಿಯ ಬೈಸರನ್ ಕಣಿವೆಯಲ್ಲಿ ನಡೆದು, ಇಡೀ ಮನುಕುಲವನ್ನೇ ಬೆಚ್ಚಿಬೀಳಿಸಿದ ಭೀಕರ ಉಗ್ರರ ದಾಳಿಗೆ (ಏಪ್ರಿಲ್ 22, 2025) ಇಂದಿಗೆ ಸರಿಯಾಗಿ ಒಂದು ವರ್ಷ. ಈ ಕರಾಳ ಘಟನೆಯಲ್ಲಿ ಪ್ರಾಣ ಕಳೆದುಕೊಂಡ 26 ಮುಗ್ಧ ಪ್ರವಾಸಿಗರಲ್ಲಿ ಶಿವಮೊಗ್ಗದ ಹೆಸರಾಂತ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ ಕೂಡ ಒಬ್ಬರು. ದಾಳಿಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ, ಕುಟುಂಬದ ಆತಂಕ, ಕಾಡುತ್ತಿರುವ ದುಃಖ ಹಾಗೂ ಮುಂದಿನ ನಿರೀಕ್ಷೆಗಳ ಕುರಿತು ಮಂಜುನಾಥ್ ಅವರ ಸಂಬಂಧಿ ಡಾ. ರವಿಕಿರಣ್ 'ದ ಫೆಡರಲ್ ಕರ್ನಾಟಕ'ದ ವಿಶೇಷ ಸಂದರ್ಶನದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಸಂಭ್ರಮದ ಪ್ರವಾಸ ಕ್ಷಣಾರ್ಧದಲ್ಲೇ ದುರಂತವಾಯ್ತು!

ಮಂಜುನಾಥ್ ರಾವ್ ಅವರು ಸದಾ ನಗುಮುಖದಿಂದ ಎಲ್ಲರೊಂದಿಗೂ ಬೆರೆಯುತ್ತಿದ್ದ ಸ್ನೇಹಜೀವಿ. ದ್ವಿತೀಯ ಪಿಯುಸಿಯಲ್ಲಿ ಶೇ. 97ರಷ್ಟು ಅತ್ಯುನ್ನತ ಅಂಕ ಪಡೆದ ಮಗನ ಸಾಧನೆಯನ್ನು ಸಂಭ್ರಮಿಸಲು ಅವರು ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪಹಲ್ಗಾಮ್‌ಗೆ ತೆರಳಿದ್ದರು ಎಂದು ಡಾ. ರವಿಕಿರಣ್ ನೆನಪಿನ ಬುತ್ತಿ ಬಿಚ್ಚಿಟ್ಟರು.

ಪ್ರಕೃತಿಯ ಮಡಿಲಲ್ಲಿ ಸಂತಸದಿಂದಿದ್ದ ಆ ಮುಗ್ಧ ಕುಟುಂಬದ ಮೇಲೆ ಏಕಾಏಕಿ ಎರಗಿದ ಉಗ್ರರು, ಜಾತಿ-ಧರ್ಮ ಕೇಳಿ ಅಮಾನುಷವಾಗಿ ಗುಂಡಿನ ಮಳೆಗರೆದಿದ್ದರು. ಮಗನ ಕಣ್ಮುಂದೆಯೇ ತಂದೆ ರಕ್ತದ ಮಡುವಿನಲ್ಲಿ ಉಸಿರು ಚೆಲ್ಲಿದ ಆ ಭೀಕರ ದೃಶ್ಯ ಕುಟುಂಬದ ಪಾಲಿಗೆ ಎಂದಿಗೂ ಮಾಸದ ಗಾಯವಾಗಿದೆ ಎಂದು ಅವರು ಹೇಳಿದ್ದಾರೆ.

ಪತ್ನಿ ಪಲ್ಲವಿ ತೋರಿದ ಅಸಾಮಾನ್ಯ ಧೈರ್ಯ

ಗುಂಡಿನ ದಾಳಿಯ ನಂತರ ಸುಮಾರು ಒಂದೂವರೆ ಗಂಟೆಗಳ ಕಾಲ ಆ ಕುಟುಂಬಕ್ಕೆ ಯಾವುದೇ ನೆರವು ಸಿಗಲಿಲ್ಲ. ಜಮ್ಮು-ಕಾಶ್ಮೀರದ ಆ ದುರ್ಗಮ ಪ್ರದೇಶದಲ್ಲಿ ಕನಿಷ್ಠ ಮೊಬೈಲ್ ನೆಟ್‌ವರ್ಕ್ ಕೂಡ ಇರಲಿಲ್ಲ. ಇಂತಹ ದಿಗ್ಭ್ರಮೆಗೊಳಿಸುವ ಆತಂಕದ ನಡುವೆಯೂ ಮಂಜುನಾಥ್ ಅವರ ಪತ್ನಿ ಪಲ್ಲವಿ ತೋರಿದ ಎದೆಗಾರಿಕೆ ಅಸಾಮಾನ್ಯವಾದದ್ದು. ಏನು ಮಾಡಬೇಕೆಂದೇ ತೋಚದ ಆ ವಿಷಮ ಸ್ಥಿತಿಯಲ್ಲಿ ಪಲ್ಲವಿ ಒಂಟಿಯಾಗಿ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ನಿಜಕ್ಕೂ ಊಹಿಸಲಸಾಧ್ಯ,"ಎಂದು ಡಾ. ರವಿಕಿರಣ್ ಬೇಸರದಿಂದ ಹೇಳಿಕೊಂಡರು.

ಒಂದೆಡೆ 'ಮಂಜುನಾಥ್ ರಾವ್ ಗುಂಡೇಟಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ' ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿತ್ತು. ಆದರೆ, ಅವರು ಅಸುನೀಗಿರುವ ಕಠೋರ ಸತ್ಯವನ್ನು ಆಡಳಿತ ಮಂಡಳಿ ರಾತ್ರಿಯವರೆಗೂ ಗೌಪ್ಯವಾಗಿಟ್ಟಿತ್ತು. ಅಂತಿಮವಾಗಿ, ಸ್ನೇಹಿತರೊಬ್ಬರ ಮೊಬೈಲ್ ಮೂಲಕ ಪಲ್ಲವಿ ಅವರೇ ಕರೆ ಮಾಡಿ, ಪತಿಯ ಸಾವಿನ ಆಘಾತಕಾರಿ ಸುದ್ದಿಯನ್ನು ಕುಟುಂಬಕ್ಕೆ ಮುಟ್ಟಿಸಿದ್ದರು ಎಂದು ರವಿ ಕಿರಣ್ ಅವರು ಹೇಳಿದ್ದಾರೆ.

ಆಸರೆಯಾದ ಸಂಸದ ತೇಜಸ್ವಿ ಸೂರ್ಯ

ಸಾವಿನ ಸುದ್ದಿ ಕೇಳಿ ಬೆಚ್ಚಿಬಿದ್ದ ಕುಟುಂಬಸ್ಥರು ತಕ್ಷಣವೇ ಕಾಶ್ಮೀರದತ್ತ ಹೊರಡಲು ಸಿದ್ಧರಾದರು. ಆದರೆ ಪಲ್ಲವಿ ಅವರು, "ನೀವು ಬರುವುದು ಬೇಡ, ನಾವೇ ಮೃತದೇಹದೊಂದಿಗೆ ಹಿಂದಿರುಗುತ್ತೇವೆ" ಎಂದು ದಿಟ್ಟತನ ಮೆರೆದರು. ಆ ಸಂದರ್ಭದಲ್ಲಿ ಸಮೀಪದಲ್ಲೇ ಇದ್ದ ಸಂಸದ ತೇಜಸ್ವಿ ಸೂರ್ಯ ಅವರು ಅದೃಷ್ಟವಶಾತ್ ಸಂಪರ್ಕಕ್ಕೆ ಸಿಕ್ಕರು ಎಂದು ರವಿ ಕಿರಣ್​ ಸ್ಮರಿಸಿಕೊಂಡಿದ್ದಾರೆ.

ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅವರು, ಪಲ್ಲವಿ ಮತ್ತು ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಹಕಾರದಿಂದ, ಯಾವುದೇ ಅಡ್ಡಿ-ಆತಂಕಗಳಿಲ್ಲದೆ ಕೇವಲ ಒಂದೂವರೆ ದಿನದೊಳಗೆ ಪಾರ್ಥಿವ ಶರೀರವನ್ನು ಶಿವಮೊಗ್ಗಕ್ಕೆ ತರುವಲ್ಲಿ ಅವರು ಸಂಪೂರ್ಣ ನೆರವಾದರು ಎಂದು ಡಾ. ರವಿಕಿರಣ್ ಕೃತಜ್ಞತೆಯಿಂದ ಸ್ಮರಿಸಿದರು.

ಕಂಬನಿ ಮಿಡಿದ ಶಿವಮೊಗ್ಗ: ಬೆನ್ನಿಗೆ ನಿಂತ ಜಿಲ್ಲಾಡಳಿತ

ಮಂಜುನಾಥ್ ರಾವ್ ಕೇವಲ ತಮ್ಮ ಕುಟುಂಬಕ್ಕಷ್ಟೇ ಸೀಮಿತರಾಗಿರಲಿಲ್ಲ; ಇಡೀ ಶಿವಮೊಗ್ಗದ ಜನತೆಗೆ ಅತ್ಯಂತ ಆತ್ಮೀಯರಾಗಿದ್ದರು. ಈ ದುರಂತ ಸಂಭವಿಸಿದಾಗ ಶಿವಮೊಗ್ಗದ ಜನತೆ ತಮ್ಮದೇ ಮನೆಯಲ್ಲಿ ಸಾವು ಸಂಭವಿಸಿದಂತೆ ಮರುಗಿದರು. ಜಿಲ್ಲಾಡಳಿತ, ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಇಡೀ ಪೊಲೀಸ್ ವ್ಯವಸ್ಥೆ ತೋರಿದ ಮಾನವೀಯತೆ ಕುಟುಂಬಕ್ಕೆ ದೊಡ್ಡ ಆಸರೆಯಾಯಿತು. ಕಳೆದುಕೊಂಡವರ ದುಃಖವನ್ನು ಯಾರೂ ದೂರ ಮಾಡಲು ಸಾಧ್ಯವಿಲ್ಲ, ಆದರೆ 'ನಾವಿದ್ದೇವೆ' ಎಂದು ಇಡೀ ಸಮಾಜ ಬೆನ್ನಿಗೆ ನಿಂತಿದ್ದು ನಮಗೆ ಸ್ಥೈರ್ಯ ನೀಡಿತು," ಎನ್ನುತ್ತಾರೆ ಡಾ. ರವಿಕಿರಣ್.

'ಆಪರೇಷನ್ ಸಿಂದೂರ್', ಕೊಂಚ ಸಮಾಧಾನ

ಈ ಪೈಶಾಚಿಕ ಘಟನೆಯ ಬಳಿಕ ಭಾರತ ಸರ್ಕಾರ ಕೈಗೊಂಡ 'ಆಪರೇಷನ್ ಸಿಂದೂರ್' ಕಾರ್ಯಾಚರಣೆಯ ಮೂಲಕ, ಪಾಕಿಸ್ತಾನ ಬೆಂಬಲಿತ ಉಗ್ರರ ಮೂಲವನ್ನು ಸದೆಬಡಿಯುವ ದಿಟ್ಟ ಹೆಜ್ಜೆ ಇಡಲಾಯಿತು. ಪಾಕಿಸ್ತಾನವನ್ನು ಜಾಗತಿಕ ಮಟ್ಟದಲ್ಲಿ ಏಕಾಂಗಿಯಾಗಿಸುವಲ್ಲಿ ಸರ್ಕಾರ ಯಶಸ್ವಿಯಾಯಿತು.

ತಮ್ಮ ತಂದೆಯ ಸಾವಿಗೆ ಕಾರಣರಾದ ಉಗ್ರರನ್ನು ಹೊಡೆದುರುಳಿಸಿದ ಸುದ್ದಿ, ತಂದೆಯನ್ನು ಕಳೆದುಕೊಂಡ ಮಗನಿಗೆ ಕೊಂಚ ಸಮಾಧಾನ ತಂದಿದ್ದರೂ, "ಕಳೆದುಕೊಂಡ ಜೀವ ಎಂದಿಗೂ ಮರಳಿ ಬರುವುದಿಲ್ಲವಲ್ಲ" ಎಂಬ ವಾಸ್ತವವನ್ನು ರವಿಕಿರಣ್ ಭಾವುಕರಾಗಿ ವ್ಯಕ್ತಪಡಿಸಿದರು.

ಉಗ್ರರ ಹೆಡೆಮುರಿ ಕಟ್ಟಲು ಬೇಕು ಕಟ್ಟುನಿಟ್ಟಿನ ಕ್ರಮ

ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಅಲ್ಲಿಗೆ ಪ್ರವಾಸಿಗರು ಭೇಟಿ ನೀಡಲೇಬೇಕು. ಆದರೆ, ಪಾಕಿಸ್ತಾನ-ಅಮೆರಿಕ ಸಂಬಂಧದಂತಹ ಇತ್ತೀಚಿನ ಜಾಗತಿಕ ರಾಜಕೀಯ ಬದಲಾವಣೆಗಳ ಹಿನ್ನೆಲೆಯಲ್ಲಿ ಪಾಕಿಸ್ತಾನದ ಉಗ್ರ ಸಂಘಟನೆಗಳು ಮತ್ತೆ ಬಲಗೊಳ್ಳುವ ಅಪಾಯವಿದೆ ಎಂದು ರವಿ ಕಿರಣ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಅಲ್ಲಿ ಕ್ಯೂಆರ್ ಕೋಡ್ (QR Code) ಮತ್ತು ಸ್ಥಳೀಯ ತಪಾಸಣೆಯಂತಹ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ ಅದು ಮಾತ್ರವೇ ಸಾಕಾಗುವುದಿಲ್ಲ. ಜಾಗತಿಕ ಮಟ್ಟದಲ್ಲಿ ಉಗ್ರರಿಗೆ ಸಿಗುವ ಆರ್ಥಿಕ ನೆರವು ಹಾಗೂ ಶಸ್ತ್ರಾಸ್ತ್ರ ಪೂರೈಕೆಯನ್ನು ಸಂಪೂರ್ಣವಾಗಿ ಕತ್ತರಿಸಬೇಕು ಎಂಬುದು ಡಾ. ರವಿಕಿರಣ್ ಅವರ ಬಲವಾದ ಆಗ್ರಹವಾಗಿದೆ.

Read More
Next Story