
ಕೂಲಿ ಪಾವತಿಯಲ್ಲಿ ವಿಳಂಬ, ಪಿಡಿಓಗಳೇ ನೇರ ಹೊಣೆ - ಸಚಿವ ಈಶ್ವರ ಖಂಡ್ರೆ
ಖಾಸಗಿ ಕೆಲಸ ಮಾಡುವ ಕೂಲಿಯಾಳುಗಳಿಗೆ ವಾರಕ್ಕೊಮ್ಮೆ ವೇತನ ಸಿಗುತ್ತದೆ. ಸರ್ಕಾರಿ ಯೋಜನೆಯಡಿ ದುಡಿದ ಕಾರ್ಮಿಕರಿಗೆ 15-20 ದಿನಗಳಾದರೂ ಕೂಲಿ ಹಣ ಪಾವತಿಯಾಗದಿರುವುದು ಖಂಡನೀಯ ಎಂದು ಸಚಿವ ಈಶ್ವರ್ ಖಂಡ್ರೆ ಕಿಡಿಕಾರಿದ್ದಾರೆ.
ಗ್ರಾಮೀಣ ಭಾಗದ ಆರ್ಥಿಕತೆಯ ಬೆನ್ನೆಲುಬಾಗಿರುವ ವಿಬಿಜಿ ರಾಮ್‌ಜಿ, ಬಡವರಿಗೆ ಉದ್ಯೋಗ ಮತ್ತು ಆರ್ಥಿಕ ಭದ್ರತೆಯನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೂಲಿ ಹಣ ಪಾವತಿಯಲ್ಲಿ ಆಗುತ್ತಿರುವ ವಿಳಂಬ ಮತ್ತು ಕೆಲವು ಕಡೆ ನಡೆಯುತ್ತಿರುವ ಅಕ್ರಮಗಳು ಸರ್ಕಾರದ ಆಡಳಿತಕ್ಕೆ ಸವಾಲಾಗಿ ಪರಿಣಮಿಸಿವೆ. ಈ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಅವರು ಅಧಿಕಾರಿಗಳಿಗೆ ಕಠಿಣ ಎಚ್ಚರಿಕೆ ನೀಡುವ ಮೂಲಕ ಆಡಳಿತ ಯಂತ್ರವನ್ನು ಚುರುಕುಗೊಳಿಸಲು ಮುಂದಾಗಿದ್ದಾರೆ.
ವಿಕಾಸಸೌಧದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಸಚಿವ ಈಶ್ವರ ಬಿ. ಖಂಡ್ರೆ, ಕೂಲಿ ಕಾರ್ಮಿಕರ ಸಂಕಷ್ಟವನ್ನು ಬಲವಾಗಿ ಪ್ರಸ್ತಾಪಿಸಿದರು. "ಖಾಸಗಿ ಕೆಲಸ ಮಾಡುವ ಕೂಲಿಯಾಳುಗಳಿಗೆ ದೈನಂದಿನ ಅಥವಾ ವಾರಕ್ಕೊಮ್ಮೆ ವೇತನ ಸಿಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸರ್ಕಾರಿ ಯೋಜನೆಯಡಿ ದುಡಿದ ಕಾರ್ಮಿಕರಿಗೆ 15-20 ದಿನಗಳಾದರೂ ಕೂಲಿ ಹಣ ಪಾವತಿಯಾಗದಿರುವುದು ಖಂಡನೀಯ ಎಂದು ಕಿಡಿಕಾರಿದರು. ಸರ್ಕಾರಿ ಕಾಮಗಾರಿಗಳಲ್ಲಿ ದುಡಿದ ಬಡವರಿಗೆ ಸಕಾಲದಲ್ಲಿ ಹಣ ನೀಡದಿರುವುದು ಅವರ ಜೀವನೋಪಾಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದನ್ನು ಅಪರಾಧ ಎಂದು ಕರೆದ ಸಚಿವರು, ಕನಿಷ್ಠ 7 ದಿನ ಮತ್ತು ಗರಿಷ್ಠ 10 ದಿನಗಳ ಒಳಗೆ ಕೂಲಿ ಹಣ ನೇರವಾಗಿ ಕಾರ್ಮಿಕರ ಖಾತೆಗೆ ಜಮೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ. ಪಾವತಿಯಲ್ಲಿ ವಿಳಂಬವಾದರೆ ಅದಕ್ಕೆ ಆಯಾ ಗ್ರಾಪಂನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಚಾಮರಾಜನಗರದಲ್ಲಿ ನಡೆದ ಅಕ್ರಮಗಳು
ಚಾಮರಾಜನಗರ ಜಿಲ್ಲೆಯ ವಿಷಯವನ್ನು ಪ್ರಸ್ತಾಪಿಸಿದ ಸಚಿವರು, ಅಲ್ಲಿನ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಚಾಮರಾಜನಗರ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಪಿಡಿಓಗಳ ಲಾಗಿನ್‌ನಲ್ಲಿಯೇ ಸುಮಾರು 57 ಲಕ್ಷ ರೂಪಾಯಿಗಳ ಕಾಮಗಾರಿಯ ಕೂಲಿ ಹಣ ಬಾಕಿ ಉಳಿದಿರುವುದು ಸಭೆಯ ಗಮನಕ್ಕೆ ಬಂದಿದೆ. ಕೂಡಲೇ ಈ ಬಾಕಿ ಹಣವನ್ನು ಬಿಡುಗಡೆ ಮಾಡಲು ಸಿಇಓಗೆ ಸಚಿವರು ತಾಕೀತು ಮಾಡಿದರು. ಅಲ್ಲದೆ, ಚಾಮರಾಜನಗರ ತಾಲೂಕಿನ ಮಾದಾಪುರ ಗ್ರಾಮ ಪಂಚಾಯತಿಯಲ್ಲಿ ನಡೆದ ಭ್ರಷ್ಟಾಚಾರದ ಪ್ರಕರಣವನ್ನು ಸಚಿವರು ಗಂಭೀರವಾಗಿ ಪರಿಗಣಿಸಿದ್ದಾರೆ. ಟ್ರ್ಯಾಕ್ಟರ್ ಬಳಸಿ ಉಳಿಮೆ ಮಾಡಿದ್ದ ಭೂಮಿಯಲ್ಲಿ ಕೂಲಿಕಾರರನ್ನು ಕೂರಿಸಿ ನಕಲಿ ಫೋಟೋ ತೆಗೆದು, ಬೋಗಸ್ ಮಾನವ ದಿನಗಳನ್ನು ಸೃಜಿಸಿ ಹಣ ಲಪಟಾಯಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದು ಸರ್ಕಾರದ ಬೊಕ್ಕಸಕ್ಕೆ ಮಾತ್ರವಲ್ಲದೆ, ಬಡವರ ಹಕ್ಕಿನ ದೋಚುವಿಕೆಯಾಗಿದೆ. ಇಂತಹ ನಕಲಿ ಬಿಲ್ ಸೃಷ್ಟಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಮತ್ತು ಅಮಾನತುಗೊಳಿಸಲು ಆದೇಶಿಸಿದ್ದಾರೆ.
ಗುಳೆ ಹೋಗದಂತೆ ತಡೆಯಲು ಕ್ರಮ
ಗಡಿ ಜಿಲ್ಲೆಯಾದ ಚಾಮರಾಜನಗರದಿಂದ ಜನರು ಕೆಲಸ ಅರಸಿ ಹೊರರಾಜ್ಯಗಳಿಗೆ ಗುಳೆ ಹೋಗುವ ಪರಿಸ್ಥಿತಿ ಮರುಕಳಿಸಬಾರದು ಎಂಬುದು ಸಚಿವರ ಆಶಯ. "ಗ್ರಾಮೀಣ ಜನರಿಗೆ ಅವರ ಗ್ರಾಮಗಳಲ್ಲಿಯೇ ಉದ್ಯೋಗ ಸಿಗಬೇಕು. ಕೇವಲ ಗುಂಡಿ ತೋಡುವ ಕೆಲಸ ಮಾಡದೆ, ಶಾಶ್ವತ ಆಸ್ತಿಗಳನ್ನು ನಿರ್ಮಾಣ ಮಾಡುವ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳಿ" ಎಂದು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು. ನಕಲಿ ಕಾಮಗಾರಿ ಮತ್ತು ಕಳಪೆ ಕಾಮಗಾರಿಗೆ ಈ ಯೋಜನೆಯಲ್ಲಿ ಕಿಂಚಿತ್ತೂ ಅವಕಾಶವಿಲ್ಲ. ಒಂದು ವೇಳೆ ಇಂತಹ ದೂರುಗಳು ಬಂದರೆ, ಕೇವಲ ಸಂಬಂಧಪಟ್ಟ ಸಿಬ್ಬಂದಿ ಅಷ್ಟೇ ಅಲ್ಲ, ಮೇಲ್ವಿಚಾರಣೆ ನಡೆಸುವ ಮೇಲಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕರ ಜವಾಬ್ದಾರಿ - ಸಚಿವರ ಮನವಿ
ಯೋಜನೆ ಯಶಸ್ವಿಯಾಗಬೇಕೆಂದರೆ ಕೇವಲ ಅಧಿಕಾರಿಗಳು ಮಾತ್ರವಲ್ಲ, ಸಾರ್ವಜನಿಕರ ಸಹಕಾರವೂ ಅತ್ಯಗತ್ಯ. ಮನ್ರೇಗಾ ಯೋಜನೆಯ ಹೊಸ ಹೆಸರು ವಿಬಿಜಿ ರಾಮ್‌ಜಿ ಆಗಿದ್ದು, ಇದರಡಿ ಗ್ರಾಮದ ಅಭಿವೃದ್ಧಿಗೆ ಅಪಾರ ಅವಕಾಶಗಳಿವೆ. ಸಾರ್ವಜನಿಕರು ತಮ್ಮ ಗ್ರಾಮದ ಅಭಿವೃದ್ಧಿ ಕೆಲಸಗಳ ಬಗ್ಗೆ ಪ್ರಶ್ನಿಸಬೇಕು ಮತ್ತು ಒತ್ತಾಯಿಸಬೇಕು. ನಕಲಿ ಬಿಲ್ ಸೃಷ್ಟಿಸುವ ಅಧಿಕಾರಿಗಳಿಗೆ ಬೆಂಬಲ ನೀಡದಂತೆ ಸಾರ್ವಜನಿಕರಲ್ಲಿ ಸಚಿವರು ಮನವಿ ಮಾಡಿದ್ದಾರೆ.

