ನಕಲಿ ಬಿಲ್‌ಗಳಿಗೆ ಕಡಿವಾಣ ಹಾಕಲು ಜಿಯೋ ಟ್ಯಾಗಿಂಗ್ ಕಡ್ಡಾಯ: ಈಶ್ವರ್‌ ಖಂಡ್ರೆ
x

ನಕಲಿ ಬಿಲ್‌ಗಳಿಗೆ ಕಡಿವಾಣ ಹಾಕಲು ಜಿಯೋ ಟ್ಯಾಗಿಂಗ್ ಕಡ್ಡಾಯ: ಈಶ್ವರ್‌ ಖಂಡ್ರೆ

ಅಭಿವೃದ್ಧಿಪಡಿಸಲಾದ ಆಪ್, ರಾಜ್ಯದ ಸುಮಾರು 3 ಲಕ್ಷಕ್ಕೂ ಅಧಿಕ ಜಲ ಆಸ್ತಿಗಳನ್ನು ಡಿಜಿಟಲೀಕರಣಗೊಳಿಸಲಿದೆ. ಈ ವ್ಯವಸ್ಥೆಯು 5 ಮೀಟರ್ ನಿಖರತೆಯೊಂದಿಗೆ ಜಲ ಆಸ್ತಿಗಳನ್ನು ಜಿಯೋ ಟ್ಯಾಗ್ ಮಾಡಲಿದೆ.


Click the Play button to hear this message in audio format

ಗ್ರಾಮೀಣ ಪ್ರದೇಶದಲ್ಲಿನ ಕುಡಿಯುವ ನೀರಿನ ಯೋಜನೆಗಳು ಮತ್ತು ಜಲ ಮೂಲಗಳ ನಿರ್ವಹಣೆಯಲ್ಲಿ ನಡೆಯುವ ಅವ್ಯವಹಾರಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಹತ್ವದ ತಂತ್ರಜ್ಞಾನವೊಂದನ್ನು ಜಾರಿಗೆ ತಂದಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಅವರು ಭೌಗೋಳಿಕ ಮಾಹಿತಿ ವ್ಯವಸ್ಥೆ ಆಧಾರಿತ ಮೊಬೈಲ್ ಮತ್ತು ವೆಬ್ ಅಪ್ಲಿಕೇಶನ್ ಅನ್ನು ಲೋಕಾರ್ಪಣೆ ಮಾಡುವ ಮೂಲಕ ಗ್ರಾಮೀಣ ಆಡಳಿತದಲ್ಲಿ ಹೊಸ ಡಿಜಿಟಲ್ ಯುಗಕ್ಕೆ ನಾಂದಿ ಹಾಡಿದ್ದಾರೆ.

ಕರ್ನಾಟಕ ದೂರ ಸಂವೇದಿ ಆನ್ವಯಿಕ ಕೇಂದ್ರದ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಈ ಆಪ್, ರಾಜ್ಯದ ಸುಮಾರು 3 ಲಕ್ಷಕ್ಕೂ ಅಧಿಕ ಜಲ ಆಸ್ತಿಗಳನ್ನು ಡಿಜಿಟಲೀಕರಣಗೊಳಿಸಲಿದೆ. ಈ ವ್ಯವಸ್ಥೆಯು 5 ಮೀಟರ್ ನಿಖರತೆಯೊಂದಿಗೆ ಜಲ ಆಸ್ತಿಗಳನ್ನು 'ಜಿಯೋ ಟ್ಯಾಗ್' ಮಾಡಲಿದೆ. ಈ ಮೂಲಕ ಬೋರ್‌ವೆಲ್, ಓವರ್‌ಹೆಡ್ ಟ್ಯಾಂಕ್, ಪಂಪ್ ಹೌಸ್, ಜಲ ಶುದ್ಧೀಕರಣ ಘಟಕಗಳು ಸೇರಿದಂತೆ ಪ್ರತಿಯೊಂದು ಸೌಲಭ್ಯದ ವಾಸ್ತವಿಕ ಸ್ಥಿತಿಗತಿಯನ್ನು ಕೇಂದ್ರ ಕಚೇರಿಯಲ್ಲೇ ಕುಳಿತು ಪರಿಶೀಲಿಸಲು ಸಾಧ್ಯವಾಗುತ್ತದೆ. ಸೆಪ್ಟೆಂಬರ್ ಅಂತ್ಯದೊಳಗೆ ಎಲ್ಲಾ ಜಲ ಆಸ್ತಿಗಳ ಡಿಜಿಟಲೀಕರಣ ಪೂರ್ಣಗೊಳಿಸುವ ಗುರಿಯನ್ನು ಇಲಾಖೆ ಹೊಂದಿದೆ.

ನಕಲಿ ಬಿಲ್‌ಗಳಿಗೆ ತಡೆ

ಈ ಕುರಿತು ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್‌ ಖಂಡ್ರೆ, ಅವ್ಯವಹಾರಗಳಿಗೆ ಕಡಿವಾಣ ಹಾಕಲು ಸರ್ಕಾರವು ಅತ್ಯಂತ ಕಟ್ಟುನಿಟ್ಟಾದ ತ್ರಿಸ್ತರ ಪರಿಶೀಲನಾ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಮೊದಲನೇ ಹಂತದಲ್ಲಿ ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್ ಮತ್ತು ಸಪೋರ್ಟ್ ಎಂಜಿನಿಯರ್‌ಗಳು ಆಸ್ತಿಯನ್ನು ನೂರಕ್ಕೆ ನೂರು ಪ್ರತಿಶತ ಖುದ್ದು ಪರಿಶೀಲನೆ ಮಾಡಲಿದ್ದಾರೆ. ದ್ವಿತೀಯ ಹಂತದಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು ಶೇ. 5ರಷ್ಟು ಆಸ್ತಿಯನ್ನು ಪರಿಶೀಲಿಸಲಿದ್ದಾರೆ. ಇಲ್ಲಿ ಲೋಪ ಕಂಡುಬಂದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರೇ ನೇರ ಹೊಣೆಗಾರರಾಗುತ್ತಾರೆ. ತೃತೀಯ ಹಂತದಲ್ಲಿ ಕಾರ್ಯಪಾಲಕ ಎಂಜಿನಿಯರ್‌ಗಳು ಶೇ. 2ರಷ್ಟು ಆಸ್ತಿಯನ್ನು ಪರಿಶೀಲನೆ ನಡೆಸಲಿದ್ದಾರೆ. ಈ ವ್ಯವಸ್ಥೆಯಿಂದ ಕಾಮಗಾರಿಯನ್ನೇ ಮಾಡದೆ ನಕಲಿ ಬಿಲ್ ಸೃಷ್ಟಿಸುವ ಅಕ್ರಮಗಳಿಗೆ ಸಂಪೂರ್ಣ ತೆರೆ ಬೀಳಲಿದೆ ಎಂದು ಹೇಳಿದರು.

ಬೋರ್‌ವೆಲ್ ಅಕ್ರಮಕ್ಕೆ ಬ್ರೇಕ್

ಈ ಆಪ್ ಮೂಲಕ ಕೊಳವೆ ಬಾವಿ ಕೊರೆಯುವ ಕಾರ್ಯವನ್ನು ಜಿಯೋ ಟ್ಯಾಗ್ ಮಾಡುವ ಕಾರಣ, ಬೋರ್‌ವೆಲ್‌ನ ಆಳ, ಅಳವಡಿಸಿದ ಪೈಪ್‌ಗಳ ಉದ್ದ ಮತ್ತು ಅಳವಡಿಸಿದ ಮೋಟರ್‌ನ ಸಾಮರ್ಥ್ಯದ ಬಗ್ಗೆ ಸುಳ್ಳು ಮಾಹಿತಿ ನೀಡಲು ಸಾಧ್ಯವಿಲ್ಲ. ತೃತೀಯ ವ್ಯಕ್ತಿಯ ತಪಾಸಣೆಗೂ ಇದು ಸಹಕಾರಿಯಾಗುವುದರಿಂದ ಭ್ರಷ್ಟಾಚಾರಕ್ಕೆ ಪೂರ್ಣ ಕಡಿವಾಣ ಬೀಳಲಿದೆ. ನಿಷ್ಕ್ರಿಯವಾಗಿರುವ ಕೊಳವೆ ಬಾವಿಗಳಿಗೆ ಅಳವಡಿಸಲಾದ ಪಂಪ್‌ಸೆಟ್‌ಗಳನ್ನು ತೆಗೆದು ಹಾಕಿ ಅನಗತ್ಯ ವಿದ್ಯುತ್ ಬಿಲ್ ಹೊರೆ ಕಡಿಮೆ ಮಾಡಲಾಗುವುದು. ಬತ್ತಿ ಹೋಗಿರುವ 7,700 ಕೊಳವೆ ಬಾವಿಗಳನ್ನು ಈಗಾಗಲೇ ರೀ-ಚಾರ್ಜ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಯಸಾಧ್ಯವಿರುವ ಎಲ್ಲಾ ಬತ್ತಿದ ಬೋರ್‌ವೆಲ್‌ಗಳನ್ನು ಮರುಪೂರಣ ಮಾಡುವ ಕಾರ್ಯಕ್ರಮವನ್ನು ಚುರುಕುಗೊಳಿಸಲಾಗಿದೆ ಎಂದು ತಿಳಿಸಿದರು.

ಕುಡಿಯುವ ನೀರಿನ ಸರಬರಾಜು

ವಿಬಿ ಜಿ ರಾಮ್‌ ಜಿ ಯೋಜನೆಯಡಿ ರಾಜ್ಯವು ನಿತ್ಯ 3 ಲಕ್ಷಕ್ಕೂ ಅಧಿಕ ಮಾನವ ದಿನಗಳನ್ನು ಸೃಜಿಸುತ್ತಿದೆ. ಗುಳೆ ಹೋಗುವುದನ್ನು ತಡೆಯಲು ಕೇಂದ್ರದ 5,709 ಕೋಟಿ ರೂ. ಅನುದಾನದ ನಿರೀಕ್ಷೆಯಲ್ಲಿದ್ದರೂ, ರಾಜ್ಯ ಸರ್ಕಾರವು ತನ್ನ ಪಾಲಿನ ಶೇ. 40ರಷ್ಟು ಹಣವನ್ನು ಭರಿಸುತ್ತಿದ್ದು, ಗ್ರಾಮೀಣ ಭಾಗದಲ್ಲಿ ಕೆಲಸದ ಕೊರತೆಯಾಗದಂತೆ ಕ್ರಮ ಕೈಗೊಂಡಿದೆ. ಕುಡಿಯುವ ನೀರಿಗೆ ಹಣಕಾಸಿನ ಕೊರತೆ ಇಲ್ಲ. ಜಿಲ್ಲಾಧಿಕಾರಿಗಳ ಮೂಲಕ ಈಗಾಗಲೇ 117 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕುಡಿಯುವ ನೀರಿನ ಅಭಾವವಿರುವ ಪ್ರದೇಶಗಳಲ್ಲಿ ಖಾಸಗಿ ಬೋರ್‌ವೆಲ್ ಬಾಡಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ. ಎಲ್ಲಾ ಜಿಲ್ಲೆಗಳಲ್ಲಿ ಸಹಾಯವಾಣಿ ಕಾರ್ಯನಿರ್ವಹಿಸುತ್ತಿದ್ದು, ತಕ್ಷಣವೇ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದೆ ಎಂದು ಭರವಸೆ ನೀಡಿದರು.

Read More
Next Story