ಗ್ಯಾರಂಟಿ ಯೋಜನೆಗಳೇ ಬಡವರ ಪಾಲಿನ ಸಂಜೀವಿನಿ: ಸಚಿವ ಈಶ್ವರ ಖಂಡ್ರೆ ಪ್ರತಿಪಾದನೆ
x

ಗ್ಯಾರಂಟಿ ಯೋಜನೆಗಳೇ ಬಡವರ ಪಾಲಿನ ಸಂಜೀವಿನಿ: ಸಚಿವ ಈಶ್ವರ ಖಂಡ್ರೆ ಪ್ರತಿಪಾದನೆ

ಗ್ಯಾರಂಟಿಗಳನ್ನು ಜಾರಿಗೆ ತಂದರೆ ರಾಜ್ಯ ದಿವಾಳಿಯಾಗುತ್ತದೆ ಎಂಬುದಾಗಿ ಪ್ರತಿಪಕ್ಷ ನಾಯಕರು ಆರೋಪಿಸಿದ್ದರು. ಆದರೆ, ಅವೆಲ್ಲ ಸುಳ್ಳಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.


Click the Play button to hear this message in audio format

ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಸೇರಿದಂತೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಯನ್ನು ಗಗನಕ್ಕೇರಿಸಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ. ಇಂತಹ ಸಂಕಷ್ಟದ ಸಮಯದಲ್ಲಿ, ರಾಜ್ಯ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳು ಬಡವರು ಮತ್ತು ಮಧ್ಯಮ ವರ್ಗದ ಜನರ ಪಾಲಿಗೆ ಸಂಜೀವಿನಿಯಂತೆ ಕೆಲಸ ಮಾಡುತ್ತಿವೆ. ಗ್ಯಾರಂಟಿಗಳ ಮೂಲಕ ನೀಡುತ್ತಿರುವ ಆರ್ಥಿಕ ನೆರವು, ಬೆಲೆ ಏರಿಕೆಯ ಹೊರೆಯಿಂದ ಜನರನ್ನು ರಕ್ಷಿಸುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ಭಾಲ್ಕಿ ತಾಲೂಕಿನ ಮೆಹಕರ್ ಗ್ರಾಮದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ 'ಪ್ರಜಾಸೇವೆ ಆಂದೋಲನ'ಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ರಾಜ್ಯದ ಅಭಿವೃದ್ಧಿ ಮತ್ತು ಜನಪರ ಯೋಜನೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ, ಗ್ಯಾರಂಟಿಗಳನ್ನು ಜಾರಿಗೆ ತಂದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ವಿರೋಧ ಪಕ್ಷದ ನಾಯಕರು ಭವಿಷ್ಯ ನುಡಿದಿದ್ದರು. ಆದರೆ, ಅವೆಲ್ಲವನ್ನೂ ಸುಳ್ಳು ಮಾಡಿ, ಇಂದು ಸರ್ಕಾರ ಅತ್ಯಂತ ಯಶಸ್ವಿಯಾಗಿ ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಅಷ್ಟೇ ಅಲ್ಲದೆ, ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಗೂ ಆದ್ಯತೆ ನೀಡಲಾಗುತ್ತಿದೆ ಎಂಬುದಕ್ಕೆ ಮೆಹಕರ್‌ನಲ್ಲಿ 4.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸರ್ಕಾರಿ ಪ್ರಾಥಮಿಕ ಶಾಲೆಯ ನೂತನ ಕಟ್ಟಡವೇ ಸಾಕ್ಷಿ ಎಂದು ಹೇಳಿದರು. "ನಮ್ಮ ಗ್ಯಾರಂಟಿಗಳ ಜನಪ್ರಿಯತೆಯಿಂದ ಕಂಗೆಟ್ಟಿರುವ ಪ್ರತಿಪಕ್ಷಗಳಿಗೆ ಈಗ ಏನು ಮಾತನಾಡುವುದು ಎಂದು ತಿಳಿಯುತ್ತಿಲ್ಲ" ಎಂದು ಲೇವಡಿ ಮಾಡಿದರು.

ಬೀದರ್ ಜಿಲ್ಲೆಗೆ ಗ್ಯಾರಂಟಿಗಳ ಭರ್ಜರಿ ಕೊಡುಗೆ

ಬೀದರ್ ಜಿಲ್ಲೆಯ ಫಲಾನುಭವಿಗಳಿಗೆ ತಲುಪುತ್ತಿರುವ ಅನುದಾನದ ಕುರಿತು ಅಂಕಿ-ಅಂಶಗಳನ್ನು ನೀಡಿದ ಸಚಿವರು, ಗೃಹಲಕ್ಷ್ಮೀ ಯೋಜನೆ ಆಗಸ್ಟ್ 2023ರಿಂದ ಜೂನ್ 2026ರವರೆಗೆ ಜಿಲ್ಲೆಯ 3,64,287 ಫಲಾನುಭವಿಗಳಿಗೆ 2,092.92 ಕೋಟಿ ರೂ. ನೇರವಾಗಿ ಜಮೆಯಾಗಿದೆ. ಅನ್ನಭಾಗ್ಯ ಯೋಜನೆ 13,13,205 ಫಲಾನುಭವಿಗಳಿಗೆ ಹೆಚ್ಚುವರಿ ಅಕ್ಕಿಯ ಬದಲಾಗಿ ನಗದು ರೂಪದಲ್ಲಿ 333.28 ಕೋಟಿ ರೂ.ಗಳನ್ನು ಪಾವತಿಸಲಾಗಿದೆ. ಗೃಹಜ್ಯೋತಿ ಯೋಜನೆ 3,59,120 ಫಲಾನುಭವಿಗಳಿಗೆ 589.23 ಕೋಟಿ ರೂ. ಮೌಲ್ಯದ ಉಚಿತ ವಿದ್ಯುತ್ ಸೌಲಭ್ಯ ನೀಡಲಾಗಿದೆ. ಶಕ್ತಿ ಯೋಜನೆ ಜಿಲ್ಲೆಯ 13.89 ಕೋಟಿಗೂ ಹೆಚ್ಚು ಮಹಿಳೆಯರು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿ ಸಂಚಾರಿ ಸ್ವಾತಂತ್ರ್ಯವನ್ನು ಅನುಭವಿಸಿದ್ದಾರೆ. ಯುವನಿಧಿ ನಿರುದ್ಯೋಗಿ ಯುವಜನರಿಗೆ ಜಿಲ್ಲೆಯಲ್ಲಿ 57.12 ಕೋಟಿ ರೂ.ಗಳ ಆರ್ಥಿಕ ನೆರವು ನೀಡಲಾಗಿದೆ ಎಂದು ವಿವರಿಸಿದರು.

"ಕರ್ನಾಟಕದಲ್ಲಿ ಇರುವುದೇ ಹೆಮ್ಮೆ"

ಈ ಭಾಗದ ಜನರು ಇಂದು ತಮ್ಮ ಊರಿನ ಅಭಿವೃದ್ಧಿಯನ್ನು ಕಂಡು, ಮಹಾರಾಷ್ಟ್ರಕ್ಕೆ ಸೇರದೆ ಕರ್ನಾಟಕದಲ್ಲೇ ಉಳಿದಿದ್ದು ಒಳ್ಳೆಯದಾಯಿತು, ಇಲ್ಲಿ ಅಭಿವೃದ್ಧಿ ಕಾಣುತ್ತಿದೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ. ಗಡಿನಾಡಿನ ಜನರ ವಿಶ್ವಾಸವನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು. ಸಯಗಾವ್ ಮಾರ್ಗವಾಗಿ ಭಾಲ್ಕಿ-ಮೆಹಕರ್ ರಸ್ತೆಯ ಅಭಿವೃದ್ಧಿಗಾಗಿ 5 ಕೋಟಿ ರೂ. ಮಂಜೂರು ಮಾಡಲಾಗಿದ್ದು, ಈ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕನಸಿನ ಕೂಸಾದ ಪ್ರಜಾಸೇವೆ ಆಂದೋಲನದ ಮಹತ್ವವನ್ನು ವಿವರಿಸಿದ ಈಶ್ವರ ಖಂಡ್ರೆ, "ಈ ಹಿಂದೆ ಸಿದ್ದರಾಮಯ್ಯನವರ ಕಾಲದಲ್ಲಿ ಜನಸ್ಪಂದನ ಕಾರ್ಯಕ್ರಮ ಯಶಸ್ವಿಯಾಗಿತ್ತು. ಈಗ ಪ್ರಜಾಸೇವೆ ಮೂಲಕ ಸರ್ಕಾರದ ಎಲ್ಲಾ ಇಲಾಖೆಗಳ ಅಧಿಕಾರಿಗಳು ನೇರವಾಗಿ ಹಳ್ಳಿಗೆ ಬರುತ್ತಿದ್ದಾರೆ. ಪಿಂಚಣಿ, ವಿಧವ ವೇತನ, ಪೋಡಿ, 11ಇ ಸ್ಕೆಚ್, ವಸತಿ ಹಂಚಿಕೆ ಸೇರಿದಂತೆ ಎಲ್ಲಾ ಸೇವೆಗಳು ಮಧ್ಯವರ್ತಿಗಳಿಲ್ಲದೆ, ಭ್ರಷ್ಟಾಚಾರ ಮುಕ್ತವಾಗಿ ಜನರಿಗೆ ಲಭ್ಯವಾಗಬೇಕು ಎನ್ನುವುದು ನಮ್ಮ ಗುರಿ ಎಂದು ಸ್ಪಷ್ಟಪಡಿಸಿದರು. ತಾವು ಪ್ರತಿತಿಂಗಳೂ ಎರಡು ಶನಿವಾರ ಬೀದರ್ ಜಿಲ್ಲೆಯಲ್ಲಿ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಜನರ ದೂರುಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಬರ ಪರಿಸ್ಥಿತಿ, ರೈತರ ಸಂಕಷ್ಟ

ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ಎಲ್-ನಿನೋ ಪ್ರಭಾವ ಉಂಟಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಈಗಾಗಲೇ 101 ಜಿಲ್ಲೆಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಶೀಘ್ರವೇ ಭಾಲ್ಕಿ ತಾಲೂಕನ್ನು ಸಹ ಬರಪೀಡಿತ ಪ್ರದೇಶ ಎಂದು ಘೋಷಿಸಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದರು. ರೈತರಿಗೆ ಅಗತ್ಯವಿರುವ ಪರಿಹಾರ ಮತ್ತು ನೆರವು ನೀಡಲು ಸರ್ಕಾರ ಬದ್ಧವಾಗಿದೆ ಎಂದರು.

Read More
Next Story