
ಎಲ್ ಆಂಡ್ ಟಿ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಲು ಸಚಿವ ಈಶ್ವರ ಖಂಡ್ರೆ ಆದೇಶ
ಸಾರ್ವಜನಿಕರ ಮೂಲಭೂತ ಹಕ್ಕಾದ ಕುಡಿಯುವ ನೀರಿನ ವಿಚಾರದಲ್ಲಿ ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಬೇಜವಾಬ್ದಾರಿಯನ್ನು ಸರ್ಕಾರ ಸಹಿಸುವುದಿಲ್ಲ ಎಂದು ಸಚಿವ ಈಶ್ವರ ಖಂಡ್ರೆ ಕಿಡಿಕಾರಿದ್ದಾರೆ.
ಉತ್ತರ ಕರ್ನಾಟಕದ ಗ್ರಾಮೀಣ ಭಾಗದ ಜನರಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷೆಯ ‘ಬಹುಗ್ರಾಮ ಕುಡಿಯುವ ನೀರು ಪೂರೈಕೆ’ ಯೋಜನೆಯ ಕಾಮಗಾರಿಗಳಲ್ಲಿ ತೀವ್ರ ನಿರ್ಲಕ್ಷ್ಯ ಹಾಗೂ ವಿಳಂಬ ಧೋರಣೆ ಅನುಸರಿಸಿದ ಹಿನ್ನೆಲೆಯಲ್ಲಿ, ದೇಶದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಲಾರ್ಸನ್ & ಟೂಬ್ರೊ ) ಕಂಪನಿಯನ್ನು ತಕ್ಷಣದಿಂದಲೇ ಕಪ್ಪುಪಟ್ಟಿಗೆ ಸೇರಿಸುವಂತೆ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನ ವಿಕಾಸಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಜಲ ಜೀವನ ಮಿಷನ್ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾರ್ವಜನಿಕರ ಮೂಲಭೂತ ಹಕ್ಕಾದ ಕುಡಿಯುವ ನೀರಿನ ವಿಚಾರದಲ್ಲಿ ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಬೇಜವಾಬ್ದಾರಿಯನ್ನು ಸರ್ಕಾರ ಸಹಿಸುವುದಿಲ್ಲ ಎಂದು ಗುಡುಗಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಲಪ್ರಭಾ ನದಿಯ ರೇಣುಕಾಸಾಗರ (ನವಿಲುತೀರ್ಥ) ಜಲಾಶಯದಿಂದ ನೀರನ್ನು ಶುದ್ಧೀಕರಿಸಿ, ಧಾರವಾಡ ಜಿಲ್ಲೆಯ 388 ಗ್ರಾಮೀಣ ಜನವಸತಿ ಪ್ರದೇಶಗಳಿಗೆ ಹಾಗೂ ಕಲಘಟಗಿ ಪಟ್ಟಣ ಮತ್ತು ಬೆಳಗಾವಿಯ ಸವದತ್ತಿ ಭಾಗದ ಹಳ್ಳಿಗಳಿಗೆ ಸಮರ್ಪಕವಾಗಿ ಪೈಪ್ಲೈನ್ ಮೂಲಕ ನೀರು ಪೂರೈಸುವ ಬೃಹತ್ ಬಹುಗ್ರಾಮ ಯೋಜನೆಯ ಗುತ್ತಿಗೆಯನ್ನು ಎಲ್ ಆಂಡ್ ಟಿ ಸಂಸ್ಥೆಗೆ ವಹಿಸಲಾಗಿತ್ತು. ಆದರೆ, ಕಾಮಗಾರಿ ಆರಂಭವಾಗಿ ದೀರ್ಘ ಸಮಯ ಕಳೆದರೂ ನಿಗದಿತ ಗುರಿ ತಲುಪುವಲ್ಲಿ ಸಂಸ್ಥೆ ಸಂಪೂರ್ಣ ವಿಫಲವಾಗಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಈ ಕುರಿತು ಸಚಿವರಿಗೆ ವಿಸ್ತೃತ ಮಾಹಿತಿ ನೀಡಿದ ಇಲಾಖಾ ಎಂಜಿನಿಯರ್ಗಳು, "ಸಂಸ್ಥೆಗೆ ಈಗಾಗಲೇ ಹಲವು ಬಾರಿ ಎಚ್ಚರಿಕೆ ಹಾಗೂ ಅಂತಿಮ ನೋಟಿಸ್ ಜಾರಿ ಮಾಡಲಾಗಿದೆ. ಆದರೂ ಸಂಸ್ಥೆಯು ಮುಖ್ಯ ಪೈಪ್ಲೈನ್ಗೆ ಅಗತ್ಯವಿರುವ ನೀರಿನ ಕೊಳವೆಗಳ ಖರೀದಿಗೆ ಇನ್ನೂ ಮುಂಗಡ ಬೇಡಿಕೆ ಸಲ್ಲಿಸಿಲ್ಲ. ಸ್ಥಳದಲ್ಲಿ ಅಗತ್ಯವಿರುವಷ್ಟು ಕಾರ್ಮಿಕರು ಹಾಗೂ ಯಂತ್ರೋಪಕರಣಗಳನ್ನು ನಿಯೋಜಿಸಿಲ್ಲ. ಕಾಮಗಾರಿ ಅತ್ಯಂತ ಆಮೆಗತಿಯಲ್ಲಿ ಸಾಗುತ್ತಿದ್ದು, ಸರ್ಕಾರದ ನಿರ್ದೇಶನದಂತೆ ಕನಿಷ್ಠ ಸಾಪ್ತಾಹಿಕ ಪ್ರಗತಿ ವರದಿಯನ್ನೂ ಸಲ್ಲಿಸುತ್ತಿಲ್ಲ" ಎಂದು ದೂರಿದರು.
ಎಚ್ಚರಿಕೆಯನ್ನೂ ಗಾಳಿಗೆ ತೂರಿದ ಗುತ್ತಿಗೆದಾರರು
ಅಧಿಕಾರಿಗಳ ವರದಿ ಆಲಿಸಿದ ಸಚಿವ ಈಶ್ವರ ಖಂಡ್ರೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. "ಸೆಪ್ಟೆಂಬರ್ 11ರಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಆಯುಕ್ತಾಲಯದಲ್ಲಿ ನಾನೇ ಸ್ವತಃ ಗುತ್ತಿಗೆದಾರರು ಮತ್ತು ಉನ್ನತ ಅಧಿಕಾರಿಗಳ ಜಂಟಿ ಸಭೆ ನಡೆಸಿದ್ದೆ. ಆ ಸಭೆಯಲ್ಲಿ ಎಲ್ ಆಂಡ್ ಟಿ ಸೇರಿದಂತೆ ಎಲ್ಲಾ ಸಂಸ್ಥೆಗಳಿಗೂ ಗಡುವು ವಿಧಿಸಿ, ಬಾಕಿ ಕಾಮಗಾರಿಗಳನ್ನು ಯುದ್ಧೋಪಾದಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದ್ದೆ. ವಾರಕ್ಕೊಮ್ಮೆ ಕಾಮಗಾರಿಯ ಪ್ರಗತಿಯನ್ನು ಕಡ್ಡಾಯವಾಗಿ ಪರಿಶೀಲಿಸಲು ಆದೇಶಿಸಲಾಗಿತ್ತು. ಇಷ್ಟೆಲ್ಲಾ ಸ್ಪಷ್ಟ ಸೂಚನೆ ಮತ್ತು ಕಾಲಾವಕಾಶ ನೀಡಿದ ಹೊರತಾಗಿಯೂ ಸಂಸ್ಥೆಯು ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ಕ್ಷಮಾರ್ಹವಲ್ಲ" ಎಂದರು.
ಜನರ ತೆರಿಗೆ ಹಣದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಜಾರಿಗೊಳಿಸುತ್ತಿರುವ ಕುಡಿಯುವ ನೀರಿನ ಯೋಜನೆಯನ್ನು ಲಘುವಾಗಿ ಪರಿಗಣಿಸುವ ಯಾವುದೇ ಕಂಪನಿಯನ್ನು ಸರ್ಕಾರ ರಕ್ಷಿಸುವುದಿಲ್ಲ. ಹೀಗಾಗಿ, ನಿಯಮಾನುಸಾರ ಎಲ್ ಆಂಡ್ ಟಿ ಸಂಸ್ಥೆಯನ್ನು ತಕ್ಷಣವೇ ಕಪ್ಪುಪಟ್ಟಿಗೆ ಸೇರಿಸಿ, ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಸಚಿವರು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಆದೇಶಿಸಿದರು.
ವಿಳಂಬ ಮಾಡುವ ಇತರೆ ಸಂಸ್ಥೆಗಳಿಗೂ ಅಂತಿಮ ನೋಟಿಸ್
ಕೇವಲ ಧಾರವಾಡ ಮಾತ್ರವಲ್ಲದೆ, ರಾಜ್ಯದ ವಿವಿಧ ಭಾಗಗಳಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಗುತ್ತಿಗೆ ಪಡೆದು ನಿಗದಿತ ಅವಧಿಯಲ್ಲಿ ಕೆಲಸ ಮುಗಿಸದ ಇತರ ಸಂಸ್ಥೆಗಳ ಕಾರ್ಯವೈಖರಿಯ ಬಗ್ಗೆಯೂ ಸಚಿವರು ಕೆಂಡಾಮಂಡಲವಾದರು. ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ಅಂತರ್ಜಲ ಮಟ್ಟ ಕುಸಿದಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದೆ. ಇಂತಹ ಸಂಕಷ್ಟದ ಸಮಯದಲ್ಲಿ ನದಿ ಮತ್ತು ಜಲಾಶಯ ಆಧಾರಿತ ಬಹುಗ್ರಾಮ ಯೋಜನೆಗಳು ಬೇಗ ಮುಗಿದರೆ ಮಾತ್ರ ಹಳ್ಳಿಗಳ ದಾಹ ನೀಗಿಸಲು ಸಾಧ್ಯ. ಕಾನೂನುಬದ್ಧ ಅರಣ್ಯ ತೀರುವಳಿ ಪ್ರಕ್ರಿಯೆ ಹೊರತುಪಡಿಸಿ, ಬೇರೆ ಯಾವುದೇ ಆಡಳಿತಾತ್ಮಕ ಅಥವಾ ಆಂತರಿಕ ಕಾರಣಗಳನ್ನು ಮುಂದಿಟ್ಟು ಕಾಮಗಾರಿ ವಿಳಂಬ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ. ಅಗತ್ಯ ಮಾನವ ಸಂಪನ್ಮೂಲ ನಿಯೋಜಿಸದ, ಸಾಮಗ್ರಿ ಖರೀದಿಸದ ಗುತ್ತಿಗೆ ಸಂಸ್ಥೆಗಳಿಗೆ ಕೂಡಲೇ ಅಂತಿಮ ನೋಟಿಸ್ ಜಾರಿ ಮಾಡಬೇಕು. ನೋಟಿಸ್ ನೀಡಿದ ಬಳಿಕವೂ ಸುಧಾರಣೆ ಕಾಣದಿದ್ದರೆ ಅಂತಹ ಎಲ್ಲಾ ಕಂಪನಿಗಳ ವಿರುದ್ಧವೂ ನಿರ್ದಾಕ್ಷಿಣ್ಯವಾಗಿ ಒಪ್ಪಂದ ರದ್ದು ಹಾಗೂ ಬ್ಲ್ಯಾಕ್ಲಿಸ್ಟ್ ಕ್ರಮ ಕೈಗೊಳ್ಳಿ ಎಂದು ಸಚಿವರು ತಾಕೀತು ಮಾಡಿದರು.
ವಿದ್ಯುತ್ ವ್ಯತ್ಯಯಕ್ಕೆ ಬ್ರೇಕ್: ಎಸ್ಕಾಂಗಳೊಂದಿಗೆ ಸಮನ್ವಯಕ್ಕೆ ಸೂಚನೆ
ಕಾಮಗಾರಿ ಪೂರ್ಣಗೊಂಡಿರುವ ಕೆಲವೆಡೆ ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕವಾಗಿ ತ್ರೀ-ಫೇಸ್ ವಿದ್ಯುತ್ ಪೂರೈಕೆಯಾಗದ ಪರಿಣಾಮ, ಶುದ್ಧೀಕರಿಸಿದ ನೀರನ್ನು ಓವರ್ ಹೆಡ್ ಟ್ಯಾಂಕ್ಗಳಿಗೆ ಪಂಪ್ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ಸಭೆಯಲ್ಲಿ ಕೇಳಿಬಂದವು. ಇದಕ್ಕೆ ಸ್ಪಂದಿಸಿದ ಈಶ್ವರ ಖಂಡ್ರೆ ಅವರು, "ಲಕ್ಷಾಂತರ ರೂಪಾಯಿ ವೆಚ್ಚದ ಯೋಜನೆಗಳು ವಿದ್ಯುತ್ ಕೊರತೆಯಿಂದಾಗಿ ನಿರುಪಯುಕ್ತವಾಗಬಾರದು. ನೀರು ಸರಬರಾಜು ಮಾಡುವ ಪಂಪಿಂಗ್ ಸ್ಟೇಷನ್ಗಳಿಗೆ ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಒದಗಿಸುವುದು ಇಂಧನ ಇಲಾಖೆಯ ಜವಾಬ್ದಾರಿಯಾಗಿದೆ. ಈ ಕುರಿತು ಆಯಾ ವ್ಯಾಪ್ತಿಯ ವಿದ್ಯುತ್ ಸರಬರಾಜು ಕಂಪನಿಗಳ (ಹೆಸ್ಕಾಂ, ಬೆಸ್ಕಾಂ, ಜೆಸ್ಕಾಂ ಇತ್ಯಾದಿ) ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆಯಬೇಕು. ಜಲ ಜೀವನ್ ಮಿಷನ್ ಅಧಿಕಾರಿಗಳು ಮತ್ತು ಎಸ್ಕಾಂ ಅಧಿಕಾರಿಗಳು ಜಂಟಿ ಸಭೆ ನಡೆಸಿ, ಕುಡಿಯುವ ನೀರಿನ ಪಂಪ್ಸೆಟ್ಗಳಿಗೆ ಪ್ರತ್ಯೇಕ ಫೀಡರ್ ಅಥವಾ ಸಮರ್ಪಕ ವಿದ್ಯುತ್ ಲಭ್ಯವಾಗುವಂತೆ ತುರ್ತು ಕ್ರಮ ಕೈಗೊಳ್ಳಬೇಕು" ಎಂದು ನಿರ್ದೇಶನ ನೀಡಿದರು.

