
ಸಾಂದರ್ಭಿಕ ಚಿತ್ರ
ಹೊಸ ನರೇಗಾ ಕಾಯ್ದೆ ಜಾರಿ: ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ರಾಜ್ಯ ನಿರ್ಧಾರ!
ಹೊಸ ಕಾಯಿದೆಯಡಿ 60:40ರ ಅನುಪಾತದಂತೆ ಅನುದಾನ ನೀಡಲು ನಿಯಮ ಬದಲಾಯಿಸಲಾಗಿದ್ದು, ಇದು ರಾಜ್ಯಗಳ ಮೇಲೆ ಭಾರಿ ಆರ್ಥಿಕ ಹೊರೆಯನ್ನು ಹೊರಿಸಲಿದೆ ಎಂದು ಸಚಿವ ಈಶ್ವರ್ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದ ಕುಟುಂಬಗಳಿಗೆ ಉದ್ಯೋಗದ ಭರವಸೆ ನೀಡಿದ್ದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯ ಹೊಸ ಸ್ವರೂಪವಾದ 'ವಿಕ್ಷಿತ ಭಾರತ್ ಜಿ ರಾಮ್ ಜಿ' (VB-G RAM G) ಕಾಯಿದೆಯನ್ನು ಜು. 1ರಿಂದಲೇ ರಾಜ್ಯದಲ್ಲಿ ಜಾರಿಗೆ ತರಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.
ಹೊಸ ನಿಯಮಗಳಿಂದಾಗಿ ರಾಜ್ಯ ಸರ್ಕಾರದ ಮೇಲೆ ಆರ್ಥಿಕ ಹೊರೆ ಹೆಚ್ಚಾಗಲಿದ್ದರೂ, ಗ್ರಾಮೀಣ ಜನರ, ಮಹಿಳೆಯರ ಹಾಗೂ ದುರ್ಬಲ ವರ್ಗದವರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೇಂದ್ರದ ಹೊಸ ಆರ್ಥಿಕ ಸೂತ್ರಕ್ಕೆ ವಿರೋಧ
ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದಿದ್ದ ನರೇಗಾ ಯೋಜನೆಯಡಿ ಕೇಂದ್ರ ಮತ್ತು ರಾಜ್ಯಗಳ ನಡುವೆ 90:10ರ ಅನುಪಾತದಲ್ಲಿ ವೆಚ್ಚ ಹಂಚಿಕೆಯಾಗುತ್ತಿತ್ತು. ಅಂದರೆ ಶೇ. 90ರಷ್ಟು ವೇತನದ ಹಣವನ್ನು ಕೇಂದ್ರವೇ ಭರಿಸುತ್ತಿದ್ದರೆ, ರಾಜ್ಯಗಳು ಕೇವಲ ಶೇ. 10ರಷ್ಟು ಪಾಲು ನೀಡಬೇಕಿತ್ತು. ಆದರೆ ಹೊಸ ಕಾಯಿದೆಯಡಿ ಇದನ್ನು 60:40ರ ಅನುಪಾತಕ್ಕೆ ಬದಲಾಯಿಸಲಾಗಿದ್ದು, ಇದು ರಾಜ್ಯಗಳ ಮೇಲೆ ಭಾರಿ ಆರ್ಥಿಕ ಹೊರೆಯನ್ನು ಹೊರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
182 ಕೋಟಿ ಮಾನವ ದಿನಗಳು ಸೃಷ್ಟಿ
2006 ರಿಂದ 2026ರವರೆಗೆ ಕೇಂದ್ರ ಸರ್ಕಾರ 56,492 ಕೋಟಿ ರೂ. ರಾಜ್ಯ ಒಟ್ಟು ಭರಿಸಿದ ಮೊತ್ತ 4,821 ಕೋಟಿ ರೂ. ಸುಮಾರು 182 ಕೋಟಿ ಮಾನವ ದಿನಗಳು ಸೃಷ್ಟಿಯಾಗಿದ್ದವು. ಹೊಸ ನಿಯಮದಿಂದಾಗಿ ಈ ವರ್ಷ ರಾಜ್ಯ ಒಂದೇ ವರ್ಷಕ್ಕೆ 3,806 ಕೋಟಿ ರೂ. ಭರಿಸಬೇಕಾದ ಮೊತ್ತವಾಗಿದೆ. "ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಯಾವುದೇ ಸಲಹೆ ಪಡೆಯದೆ ಸಂಸತ್ತಿನಲ್ಲಿ ಈ ಕಾಯಿದೆ ತರಲಾಗಿದೆ. ಕೇಂದ್ರದ ಈ ಏಕಪಕ್ಷೀಯ ಧೋರಣೆಯನ್ನು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಿದೆ. ಕನಿಷ್ಠ 80:20ರ ಅನುಪಾತದಲ್ಲಾದರೂ ಕೇಂದ್ರ ನಮಗೆ ನೆರವು ನೀಡಬೇಕು." ಎಂದು ತಿಳಿಸಿದರು.
'60 ದಿನಗಳ ಉದ್ಯೋಗ ನಿಷೇಧ' ಅವೈಜ್ಞಾನಿಕ
ಹೊಸ ಯೋಜನೆಯಡಿ ಬೇಸಾಯದ ಸಮಯದಲ್ಲಿ 60 ದಿನಗಳ ಕಾಲ ಉದ್ಯೋಗ ನೀಡಬಾರದು ಎಂಬ ಕೇಂದ್ರದ ಸೂಚನೆಯನ್ನು ಖಂಡಿಸಿದ್ದು, "ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಆಧುನಿಕ ಯಂತ್ರೋಪಕರಣಗಳ ಬಳಕೆ ಹೆಚ್ಚಾಗಿರುವುದರಿಂದ, ಬೇಸಾಯದ ಅವಧಿಯಲ್ಲೂ ಗ್ರಾಮೀಣ ಜನರಿಗೆ ಕೆಲಸ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಉದ್ಯೋಗ ನಿಷೇಧಿಸುವುದು ಗ್ರಾಮೀಣ ಕುಟುಂಬಗಳ ಅನ್ನ ಕಸಿದುಕೊಂಡಂತೆ. ಉದ್ಯೋಗವನ್ನು ಯಾವಾಗಲೂ ಬೇಡಿಕೆಯ ಆಧಾರದ ಮೇಲೆಯೇ ನೀಡಬೇಕು" ಎಂದು ಆಗ್ರಹಿಸಿದರು.
ದೆಹಲಿ ಸಭೆಯಲ್ಲಿ ಪ್ರಸ್ತಾಪ
ಜೂ. 28ರಂದು ದೆಹಲಿಯಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರ ನೇತೃತ್ವದಲ್ಲಿ ಎಲ್ಲ ರಾಜ್ಯಗಳ ಸಚಿವರ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಹಣಕಾಸು ಅನುಪಾತದ ಬದಲಾವಣೆ, 60 ದಿನಗಳ ಉದ್ಯೋಗ ಕಡಿತ ಹಾಗೂ ಕನಿಷ್ಠ ಕೂಲಿ ಹೆಚ್ಚಳದ ಬಗ್ಗೆ ಕರ್ನಾಟಕದ ಪರವಾಗಿ ಬಲವಾದ ಒತ್ತಾಯ ಮಂಡಿಸಲಾಗುವುದು. ಸದ್ಯ ರಾಜ್ಯದಲ್ಲಿ 375 ರೂ. ಕನಿಷ್ಠ ಕೂಲಿ ಇದ್ದು, ಇದಕ್ಕೆ ಪೂರಕವಾಗಿ ಕೇಂದ್ರವೂ ತನ್ನ ಪಾಲನ್ನು ಹೆಚ್ಚಿಸಬೇಕಿದೆ ಎಂದರು.
ರಾಜ್ಯ ಸರ್ಕಾರದ ಸಿದ್ಧತೆಗಳು
ಹೊಸ ಯೋಜನೆಗೆ ರಾಜ್ಯದ ಪಾಲಾದ 3,806 ಕೋಟಿ ರೂ. ಭರಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಮನವಿ ಮಾಡಲಾಗಿದ್ದು, ಒಪ್ಪಿಗೆ ಸೂಚಿಸಿದ್ದಾರೆ. ಕಳೆದ 3 ತಿಂಗಳಲ್ಲಿ ರಾಜ್ಯದಲ್ಲಿ ಈಗಾಗಲೇ 1.40 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಲಾಗಿದೆ. ವಾರ್ಷಿಕವಾಗಿ 9 ಕೋಟಿ ಹಾಗೂ ಪ್ರತಿ ತಿಂಗಳು 80 ರಿಂದ 90 ಲಕ್ಷ ಮಾನವ ದಿನಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ.
ಸಿಬ್ಬಂದಿ ಹಿತರಕ್ಷಣೆ
ನರೇಗಾ ಅಡಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ 7,000ಕ್ಕೂ ಹೆಚ್ಚು ಸಿಬ್ಬಂದಿಗಳ ಜೀವನೋಪಾಯಕ್ಕೆ ಯಾವುದೇ ಧಕ್ಕೆ ಬಾರದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಜು. 1ರಿಂದ ಯಾರೇ ಕೆಲಸ ಕೇಳಿ ಬಂದರೂ ಅರ್ಹರಿಗೆ ಉದ್ಯೋಗ ನೀಡಲು ರಾಜ್ಯ ಸರ್ಕಾರ ಸಂಪೂರ್ಣ ಸನ್ನದ್ಧವಾಗಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.

