ಕೆರೆ ಒತ್ತುವರಿ ತೆರವಿಗೆ ಗಡುವು: 10 ದಿನದಲ್ಲಿ ವರದಿ ಸಲ್ಲಿಕೆಗೆ ಈಶ್ವರ್‌ ಖಂಡ್ರೆ ಸೂಚನೆ
x

ಕೆರೆ ಒತ್ತುವರಿ ತೆರವಿಗೆ ಗಡುವು: 10 ದಿನದಲ್ಲಿ ವರದಿ ಸಲ್ಲಿಕೆಗೆ ಈಶ್ವರ್‌ ಖಂಡ್ರೆ ಸೂಚನೆ

ಮುಂದಿನ 30 ವರ್ಷದಲ್ಲಿ ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗುವ ಜನಸಂಖ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಶುದ್ಧ ಕುಡಿಯುವ ನೀರನ್ನು ಪೂರೈಕೆ ನಿಟ್ಟಿನಲ್ಲಿ ಸರ್ಕಾರ ಯೋಜನೆಗಳನ್ನು ರೂಪಿಸುತ್ತಿದೆ.


Click the Play button to hear this message in audio format

ರಾಜ್ಯದ ಗ್ರಾಮೀಣ ಪ್ರದೇಶದ ಜನರ ಜೀವನಾಡಿಯಾಗಿರುವ ಕೆರೆಗಳ ಉಳಿವಿಗೆ ಮತ್ತು ಅವುಗಳ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲು ಕಠಿಣ ಕ್ರಮ ಕೈಗೊಳ್ಳುವಂತೆ ಸಚಿವ ಈಶ್ವರ ಬಿ. ಖಂಡ್ರೆ ಅವರು ಇಲಾಖೆಯ ಉನ್ನತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ನಾಗರಿಕತೆಯ ಉಗಮ ಮತ್ತು ವಿಕಾಸದಲ್ಲಿ ಕೆರೆಗಳು ವಹಿಸಿರುವ ಪಾತ್ರ ಅನನ್ಯ. ಭೂಮಿಯ ಮೇಲಿರುವ ಸಿಹಿ ನೀರಿನ ಮೂಲಗಳಾದ ಕೆರೆ ಮತ್ತು ಸರೋವರಗಳನ್ನು ರಕ್ಷಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಪರಿಸರ ಸಮತೋಲನದಲ್ಲಿ ಇವುಗಳ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವುದು ಮಾತ್ರವಲ್ಲದೆ, ವಾಸ್ತವಿಕವಾಗಿ ಒತ್ತುವರಿ ತೆರವುಗೊಳಿಸುವ ಮೂಲಕ ಜಲಮೂಲಗಳಿಗೆ ಮರುಜೀವ ನೀಡುವ ಸಂಕಲ್ಪವನ್ನು ಸರ್ಕಾರ ತೊಟ್ಟಿದೆ. ಸಚಿವರು ಈ ಸಂಬಂಧ ಇಲಾಖೆಯ ಕಾರ್ಯದರ್ಶಿಯವರಿಗೆ ಲಿಖಿತ ಸೂಚನೆ ನೀಡಿದ್ದು, ರಾಜ್ಯಾದ್ಯಂತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸುಪರ್ದಿಯಲ್ಲಿರುವ ಕೆರೆಗಳ ನಿಖರ ಮಾಹಿತಿ ಸಂಗ್ರಹಿಸಲು ಆದೇಶಿಸಿದ್ದಾರೆ. ಪತ್ರದಲ್ಲಿ ಅವರು ಪ್ರಮುಖವಾಗಿ ನಾಲ್ಕು ಅಂಶಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಇಲಾಖೆಯ ನಿರ್ವಹಣೆಯಲ್ಲಿರುವ ಒಟ್ಟು ಕೆರೆಗಳ ಸಂಖ್ಯೆ ಎಷ್ಟು? ಯಾವ್ಯಾವ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕೆರೆಗಳಿವೆ? ಒಟ್ಟಾರೆ ಎಷ್ಟು ಎಕರೆ ಪ್ರದೇಶ ಒತ್ತುವರಿಯಾಗಿದೆ? ಈ ಒತ್ತುವರಿ ತೆರವಿಗೆ ಇಲ್ಲಿಯವರೆಗೆ ಇಲಾಖೆಯಿಂದ ಕೈಗೊಂಡಿರುವ ಕ್ರಮಗಳೇನು? ಎಂಬುದರ ಕುರಿತು ಪ್ರಶ್ನಿಸಿದ್ದಾರೆ. ಈ ಎಲ್ಲಾ ಮಾಹಿತಿಯನ್ನು ಮುಂದಿನ 10 ದಿನಗಳ ಒಳಗಾಗಿ ಕಚೇರಿಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ದೀರ್ಘಾವಧಿಯ ದೂರದೃಷ್ಟಿ: ಮುಂದಿನ 30 ವರ್ಷಗಳ ಯೋಜನೆ

ಕೆರೆಗಳ ರಕ್ಷಣೆ ಕೇವಲ ಭೂಮಿಯ ಸಂರಕ್ಷಣೆಯಲ್ಲ, ಅದು ಮುಂದಿನ ಪೀಳಿಗೆಯ ಬದುಕಿನ ಭದ್ರತೆ. ಮುಂದಿನ 30 ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಲಿರುವ ಜನಸಂಖ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಶುದ್ಧ ಕುಡಿಯುವ ನೀರನ್ನು ಪೂರೈಸುವ ನಿಟ್ಟಿನಲ್ಲಿ ಸರ್ಕಾರ ದೂರಗಾಮಿ ಯೋಜನೆಗಳನ್ನು ರೂಪಿಸುತ್ತಿದೆ. ಮೇಲ್ಮೈ ನೀರೇ ಭವಿಷ್ಯದ ಅತಿ ದೊಡ್ಡ ಜಲಮೂಲವಾಗಲಿದ್ದು, ಕೆರೆಗಳು ಬತ್ತಿಹೋದರೆ ಅಥವಾ ಒತ್ತುವರಿಯಾದರೆ ಕುಡಿಯುವ ನೀರಿನ ಅಭಾವ ತೀವ್ರವಾಗಲಿದೆ. ಆದ್ದರಿಂದ, ಕೆರೆಗಳ ಸಂರಕ್ಷಣೆ ಅನಿವಾರ್ಯ ಮತ್ತು ಅತ್ಯಗತ್ಯ ಎಂದು ಹೇಳಿದ್ದಾರೆ.

ಪರಿಸರ ಹಾಗೂ ಜನಜೀವನದ ಮೇಲೆ ಪರಿಣಾಮ

ಹಳ್ಳಿಗಳಲ್ಲಿ ಕೆರೆಗಳು ಕೇವಲ ನೀರಿನ ಮೂಲಗಳಲ್ಲ, ಅವು ಜಾನುವಾರುಗಳ ದಾಹ ತೀರಿಸುವ ತಾಣ. ಅಂತರ್ಜಲ ಮರುಪೂರಣದ ಕೇಂದ್ರಗಳು ಮತ್ತು ಸ್ಥಳೀಯ ಮೀನುಗಾರಿಕೆ ಹಾಗೂ ಕೃಷಿ ಚಟುವಟಿಕೆಗಳ ಆಧಾರಸ್ತಂಭಗಳು. ಆದರೆ, ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಮತ್ತು ಪ್ರಭಾವಶಾಲಿಗಳ ಹಸ್ತಕ್ಷೇಪದಿಂದ ಕೆರೆಗಳು ಕಿರಿದಾಗುತ್ತಿವೆ. ಇದರಿಂದಾಗಿ ಮಳೆಗಾಲದಲ್ಲಿ ಪ್ರವಾಹದ ಭೀತಿ ಮತ್ತು ಬೇಸಿಗೆಯಲ್ಲಿ ಭೀಕರ ಬರಗಾಲ ಉಂಟಾಗುತ್ತಿದೆ. ಇಂತಹ ಅಸಮತೋಲನವನ್ನು ಸರಿಪಡಿಸಲು ಒತ್ತುವರಿ ತೆರವು ಅನಿವಾರ್ಯವಾಗಿದೆ. ಸರ್ಕಾರದ ಈ ಆದೇಶದಿಂದ ಒತ್ತುವರಿದಾರರಲ್ಲಿ ಆತಂಕ ಶುರುವಾಗಿದ್ದು, ಪರಿಸರ ಪ್ರೇಮಿಗಳು ಮತ್ತು ರೈತ ಸಂಘಟನೆಗಳು ಸಚಿವರ ನಿರ್ಧಾರವನ್ನು ಸ್ವಾಗತಿಸಿವೆ. ಆದರೆ, ಕೇವಲ ಕಾಗದದ ಮೇಲಿನ ಆದೇಶಗಳು ಸಾಲದು, ಕ್ಷೇತ್ರ ಮಟ್ಟದಲ್ಲಿ ಕಾರ್ಯಾಚರಣೆ ನಡೆಯಬೇಕು ಎಂಬುದು ಜನರ ಆಗ್ರಹವಾಗಿದೆ. ಸ್ಥಳೀಯ ಗ್ರಾಮ ಪಂಚಾಯಿತಿಗಳ ಸಹಕಾರದೊಂದಿಗೆ ಒತ್ತುವರಿಯನ್ನು ತೆರವುಗೊಳಿಸಿ, ಕೆರೆಗಳನ್ನು ಹೂಳೆತ್ತುವ ಮೂಲಕ ಅವುಗಳ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಕಠಿಣ ನಿರ್ಧಾರ ಕೈಗೊಳ್ಳಬೇಕಿದೆ.

10 ದಿನಗಳ ಗಡುವು ಮುಗಿದ ನಂತರ, ಒತ್ತುವರಿದಾರರ ಪಟ್ಟಿಯನ್ನು ಸಾರ್ವಜನಿಕಗೊಳಿಸುವುದು, ತೆರವು ಕಾರ್ಯಾಚರಣೆಗೆ ತಂಡಗಳನ್ನು ರಚಿಸುವುದು ಮತ್ತು ತೆರವುಗೊಳಿಸಿದ ಜಾಗದಲ್ಲಿ ಮರಗಳನ್ನು ನೆಟ್ಟು ಬೇಲಿ ನಿರ್ಮಿಸುವುದು ಸರ್ಕಾರದ ಮುಂದಿರುವ ಸವಾಲುಗಳು. ಈ ಪ್ರಕ್ರಿಯೆಯು ಪಾರದರ್ಶಕವಾಗಿರಬೇಕು ಮತ್ತು ಯಾವುದೇ ಒತ್ತಡಗಳಿಗೆ ಮಣಿಯದೆ ಸಚಿವರು ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

Read More
Next Story