ಹಾಸನ, ಕೊಡಗು, ಚಿಕ್ಕಮಗಳೂರು ಭಾಗದಲ್ಲಿ 2 ಸಾವಿರ ಹೆಕ್ಟೇರ್‌ನಲ್ಲಿ ಆನೆಧಾಮ ನಿರ್ಮಾಣ
x

ಹಾಸನ, ಕೊಡಗು, ಚಿಕ್ಕಮಗಳೂರು ಭಾಗದಲ್ಲಿ 2 ಸಾವಿರ ಹೆಕ್ಟೇರ್‌ನಲ್ಲಿ ಆನೆಧಾಮ ನಿರ್ಮಾಣ

ಕಾಫಿ ತೋಟಗಳು ಮತ್ತು ರೈತರ ಭತ್ತದ ಗದ್ದೆಗಳಿಗೆ ಅಪಾರ ಹಾನಿಯಾಗುತ್ತಿದೆ. ಈ ಆನೆಗಳಿಗೆ ಕಾಡಿನಲ್ಲೇ ನೆಲೆ ಕಲ್ಪಿಸುವ ಮತ್ತು ಅವುಗಳ ಚಲನವಲನವನ್ನು ನಿಯಂತ್ರಿಸುವ ಮೂಲಕ ಸಂಘರ್ಷ ತಗ್ಗಿಸಲು ಈ ಆನೆಧಾಮವನ್ನು ನಿರ್ಮಿಸಲಾಗುತ್ತಿದೆ.


Click the Play button to hear this message in audio format

ಮಲೆನಾಡು ಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ತೀವ್ರ ಸಮಸ್ಯೆಯಾಗಿ ಕಾಡುತ್ತಿರುವ ಮಾನವ-ಆನೆ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆನೆಗಳ ಹಾವಳಿಯನ್ನು ನಿಯಂತ್ರಿಸಲು ಬರೋಬ್ಬರಿ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸುಸಜ್ಜಿತ 'ಆನೆಧಾಮ' ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.

ಹಾಸನ ನಗರದ ಗೆಂಡೆಕಟ್ಟೆ ಅರಣ್ಯ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಆನೆಗಳ ಉಪಟಳದಿಂದ ರೈತರು ಅನುಭವಿಸುತ್ತಿರುವ ಸಾವು-ನೋವು ಮತ್ತು ಬೆಳೆ ಹಾನಿಯನ್ನು ತಡೆಯುವುದೇ ಈ ಯೋಜನೆಯ ಮುಖ್ಯ ಉದ್ದೇಶ ಎಂದರು.

ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಭಾಗದಲ್ಲಿ ನೂರಾರು ಆನೆಗಳು ಕಾಡಿನ ಗಡಿ ದಾಟಿ ನಾಡಿಗೆ ಬರುವುದು ನಿತ್ಯದ ಕಥೆಯಾಗಿದೆ. ಇದರಿಂದ ಕಾಫಿ ತೋಟಗಳು ಮತ್ತು ರೈತರ ಭತ್ತದ ಗದ್ದೆಗಳಿಗೆ ಅಪಾರ ಹಾನಿಯಾಗುತ್ತಿದೆ. ಈ ಆನೆಗಳಿಗೆ ಕಾಡಿನಲ್ಲೇ ನೆಲೆ ಕಲ್ಪಿಸುವ ಮತ್ತು ಅವುಗಳ ಚಲನವಲನವನ್ನು ನಿಯಂತ್ರಿಸುವ ಮೂಲಕ ಸಂಘರ್ಷ ತಗ್ಗಿಸಲು ಈ ಆನೆಧಾಮವನ್ನು ನಿರ್ಮಿಸಲಾಗುತ್ತಿದೆ. ಈ ಯೋಜನೆಗಾಗಿ ಈಗಾಗಲೇ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರು ಸರ್ಕಾರಕ್ಕೆ ವಿಸ್ತೃತ ವರದಿಯನ್ನು ಸಲ್ಲಿಸಿದ್ದಾರೆ. ತಾಂತ್ರಿಕ ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿದ್ದು, ಮುಂದಿನ 8 ರಿಂದ 10 ದಿನಗಳ ಒಳಗೆ ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಹಾಸನದಲ್ಲಿ ಹೊಸ ಮೃಗಾಲಯಕ್ಕೆ ಬ್ರೇಕ್

ಹಾಸನದಲ್ಲಿ ಹೊಸದಾಗಿ ಮೃಗಾಲಯವೊಂದನ್ನು ಸ್ಥಾಪಿಸುವ ಕುರಿತು ಸಾರ್ವಜನಿಕರು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಬೇಡಿಕೆಯಿದ್ದರೂ, ಸಚಿವರು ಇದಕ್ಕೆ ಸದ್ಯಕ್ಕೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಮೃಗಾಲಯ ಸ್ಥಾಪಿಸಲು ಕೇಂದ್ರ ಮೃಗಾಲಯ ಪ್ರಾಧಿಕಾರದ ಪೂರ್ವಾನುಮತಿ ಕಡ್ಡಾಯ. ಮೃಗಾಲಯ ಸ್ಥಾಪನೆಗಿಂತಲೂ ಅದರ ನಿರ್ವಹಣೆ ಅತ್ಯಂತ ದುಬಾರಿ. ರಾಜ್ಯದಲ್ಲಿ ಈಗಾಗಲೇ ಮೈಸೂರು ಮತ್ತು ಬನ್ನೇರುಘಟ್ಟದಂತಹ ಪ್ರಮುಖ ಮೃಗಾಲಯಗಳಿದ್ದು, ಇವುಗಳ ಆದಾಯದಿಂದಲೇ ರಾಜ್ಯದ ಇತರೆ ಸಣ್ಣ ಮೃಗಾಲಯಗಳನ್ನು ನಿರ್ವಹಿಸಲಾಗುತ್ತಿದೆ. ಹೊಸ ಮೃಗಾಲಯದಿಂದ ಸರ್ಕಾರಕ್ಕೆ ಹೆಚ್ಚುವರಿ ಆರ್ಥಿಕ ಹೊರೆಯಾಗಲಿದೆ. ಹೀಗಾಗಿ, ಹೊಸ ಮೃಗಾಲಯ ಸ್ಥಾಪಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದರು

ಅರಣ್ಯ ಭೂಮಿ ಮರು ವಶ

ರಾಜ್ಯದಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಸರ್ಕಾರ ಸಮರ ಸಾರಿದೆ. ಇದರ ಭಾಗವಾಗಿ ಹಾಸನ ನಗರದ ಸಮೀಪವಿರುವ ಮಡೇನೂರಿನಲ್ಲಿ ಅತಿಕ್ರಮಣವಾಗಿದ್ದ 100 ಎಕರೆ ಅರಣ್ಯ ಭೂಮಿಯನ್ನು ಮರು ವಶಪಡಿಸಿಕೊಳ್ಳಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಬೆಲೆಬಾಳುವ ಅರಣ್ಯ ಭೂಮಿಯನ್ನು ಅತಿಕ್ರಮಣದಾರರಿಂದ ಮುಕ್ತಗೊಳಿಸುವುದು ಸರ್ಕಾರದ ಆದ್ಯತೆ. ಈ ನಿಟ್ಟಿನಲ್ಲಿ ರಾಜ್ಯದಾದ್ಯಂತ ಸರ್ವೆ ಕಾರ್ಯ ನಡೆಸಿ, ಅರಣ್ಯ ಭೂಮಿಯನ್ನು ರಕ್ಷಿಸಲಾಗುವುದು ಎಂದು ಸಚಿವರು ಎಚ್ಚರಿಸಿದರು. ಅರಣ್ಯ ಪ್ರದೇಶಗಳ ಘೋಷಣೆಯು ಕಾಗದದ ಮೇಲೆ ಮಾತ್ರ ಉಳಿಯದಂತೆ ನೋಡಿಕೊಳ್ಳಲು ಸರ್ಕಾರ ಮುಂದಾಗಿದೆ. ಅರಣ್ಯ ಕಾಯ್ದೆಯಡಿ ಸೆಕ್ಷನ್ 4 ಅಧಿಸೂಚನೆ ಹೊರಬಿದ್ದ ನಂತರ, ಅದನ್ನು ಅಂತಿಮವಾಗಿ ಅರಣ್ಯ ಎಂದು ಘೋಷಿಸುವ (ಸೆಕ್ಷನ್ 17) ಪ್ರಕ್ರಿಯೆ ಬಹಳ ಮಂದಗತಿಯಲ್ಲಿದೆ. ಇದಕ್ಕೆ ಮುಖ್ಯ ಕಾರಣ ವ್ಯವಸ್ಥಾಪನಾಧಿಕಾರಿಗಳ ಕೊರತೆ. ಇದನ್ನು ಸರಿಪಡಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಗತ್ಯವಿರುವ ಕಡೆ ಫಾರೆಸ್ಟ್ ಸೆಟ್ಲ್ ಮೆಂಟ್ ಅಧಿಕಾರಿಗಳನ್ನು ನೇಮಕ ಮಾಡುವ ಪ್ರಕ್ರಿಯೆ ಚುರುಕುಗೊಳಿಸಲಾಗುವುದು ಎಂದು ತಿಳಿಸಿದರು.

Read More
Next Story