ರಾಜ್ಯದ 6,342 ಗ್ರಾಮ ಗ್ರಂಥಾಲಯಗಳಿಗೆ ಸಚಿವ ಈಶ್ವರ ಬಿ. ಖಂಡ್ರೆ ವಿಧ್ಯುಕ್ತ ಚಾಲನೆ
x

ರಾಜ್ಯದ 6,342 ಗ್ರಾಮ ಗ್ರಂಥಾಲಯಗಳಿಗೆ ಸಚಿವ ಈಶ್ವರ ಬಿ. ಖಂಡ್ರೆ ವಿಧ್ಯುಕ್ತ ಚಾಲನೆ

ಗ್ರಾ. ಪಂ. ಕೇಂದ್ರ ಸ್ಥಾನದಲ್ಲಿ ಮಾತ್ರ ಅರಿವು ಕೇಂದ್ರ ಇರುತ್ತದೆ, ಆದರೆ ಉಳಿದ ಗ್ರಾಮಗಳಲ್ಲಿ ಗ್ರಂಥಾಲಯಗಳಿರುವುದಿಲ್ಲ. ಈ ಕೊರತೆಯನ್ನು ನೀಗಿಸಲು ಗ್ರಾಮ ಗ್ರಂಥಾಲಯಗಳನ್ನು ಆರಂಭಿಸಲಾಗುತ್ತಿದೆ


Click the Play button to hear this message in audio format

ರಾಜ್ಯದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮತ್ತು ಯುವಜನತೆಯಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸುವ ಮಹತ್ವದ ಹೆಜ್ಜೆಯಾಗಿ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 5,888 ಅರಿವು ಕೇಂದ್ರಗಳ ಜೊತೆಗೆ ಹೆಚ್ಚುವರಿಯಾಗಿ 6,342 ಗ್ರಾಮ ಗ್ರಂಥಾಲಯಗಳ ಕಾರ್ಯಾರಂಭಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಅವರು ವಿಧ್ಯುಕ್ತ ಚಾಲನೆ ನೀಡಿದರು. ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಗ್ರಾಮ ಗ್ರಂಥಾಲಯವನ್ನು ಉದ್ಘಾಟಿಸಿದ ಸಚಿವರು, ರಾಜ್ಯದ ಎಲ್ಲಾ 6,342 ಗ್ರಾಮ ಗ್ರಂಥಾಲಯಗಳು ವಿಧ್ಯುಕ್ತವಾಗಿ ಉದ್ಘಾಟನೆಯಾಗಿವೆ ಎಂದು ಅಧಿಕೃತವಾಗಿ ಘೋಷಿಸಿದರು. ಗ್ರಾಮ ಪಂಚಾಯತಿ ಕೇಂದ್ರ ಸ್ಥಾನದಿಂದ ಹೊರಗಿರುವ ಹಳ್ಳಿಗಳಿಗೂ ಜ್ಞಾನದ ಬೆಳಕನ್ನು ತಲುಪಿಸುವ ದೃಷ್ಟಿಯಿಂದ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.

ಹೊಸದಾಗಿ ಆರಂಭಿಸಲಾದ ಗ್ರಾಮ ಗ್ರಂಥಾಲಯಗಳ ಕಾರ್ಯನಿರ್ವಹಣೆ ಮತ್ತು ಅವುಗಳ ಅಗತ್ಯತೆಯ ಕುರಿತು ವಿವರಿಸಿದ ಸಚಿವ ಈಶ್ವರ ಬಿ. ಖಂಡ್ರೆ ಅವರು, ಪ್ರಸ್ತುತ ಇರುವ 5,888 ಅರಿವು ಕೇಂದ್ರಗಳು ಸಮುದಾಯ ಗ್ರಂಥಾಲಯ ಮತ್ತು ಡಿಜಿಟಲ್ ಕಲಿಕಾ ಕೇಂದ್ರಗಳಾಗಿ ವಾರದ ಆರು ದಿನಗಳ ಕಾಲ ಕನಿಷ್ಠ ಎಂಟು ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು. ಆದರೆ, ಈಗ ಹೊಸದಾಗಿ ಪ್ರಾರಂಭವಾಗಿರುವ ಈ 6,342 ಶಾಖಾ ಗ್ರಂಥಾಲಯಗಳು ವಾರಾಂತ್ಯದಲ್ಲಿ ಎರಡು ದಿನಗಳ ಕಾಲ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕಾರ್ಯನಿರ್ವಹಿಸಲಿವೆ ಎಂದು ಮಾಹಿತಿ ನೀಡಿದರು. ಜನಸಂಖ್ಯೆಯ ಆಧಾರದಲ್ಲಿ ಒಂದು ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ನಾಲ್ಕೈದು ಗ್ರಾಮಗಳು ಬರುತ್ತವೆ. ಸಾಮಾನ್ಯವಾಗಿ ಗ್ರಾಮ ಪಂಚಾಯತಿ ಕೇಂದ್ರ ಸ್ಥಾನದಲ್ಲಿ ಮಾತ್ರ ಅರಿವು ಕೇಂದ್ರ ಇರುತ್ತದೆ, ಆದರೆ ಉಳಿದ ಗ್ರಾಮಗಳಲ್ಲಿ ಗ್ರಂಥಾಲಯಗಳಿರುವುದಿಲ್ಲ. ಈ ಕೊರತೆಯನ್ನು ನೀಗಿಸುವ ಸಲುವಾಗಿ 4 ಲಕ್ಷ ರೂ. ವೆಚ್ಚದಲ್ಲಿ ಗ್ರಾಮ ಗ್ರಂಥಾಲಯಗಳನ್ನು ಆರಂಭಿಸಲಾಗುತ್ತಿದೆ ಎಂದು ವಿವರಿಸಿದರು.

ಮೊಬೈಲ್ ವ್ಯಸನದಿಂದ ದೂರವಿರಿಸಿ ಓದಿಗೆ ಪ್ರೋತ್ಸಾಹ

ಗ್ರಾಮೀಣ ಮಕ್ಕಳ ಕಲಿಕೆಗೆ ಈ ಗ್ರಂಥಾಲಯಗಳು ಹೊಸ ಆಯಾಮ ನೀಡಲಿವೆ ಎಂದು ಪ್ರತಿಪಾದಿಸಿದ ಸಚಿವ ಖಂಡ್ರೆ ಅವರು, ಸಂವಿಧಾನಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಾತುಗಳನ್ನು ಸ್ಮರಿಸಿದರು. ಯಾವ ದೇಶದಲ್ಲಿ ಹೆಚ್ಚಿನ ಗ್ರಂಥಾಲಯಗಳಿರುತ್ತವೋ ಅಲ್ಲಿ ಜ್ಞಾನದ ಹೊಳೆ ಹರಿಯುತ್ತಿರುತ್ತದೆ ಎಂದು ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದಾರೆ. ಹೀಗಾಗಿ ಗ್ರಾಮೀಣ ವಿದ್ಯಾರ್ಥಿಗಳ ಜ್ಞಾನಾರ್ಜನೆ ವಿಸ್ತರಣೆಗೆ ಈ ಗ್ರಾಮ ಗ್ರಂಥಾಲಯಗಳು ಅತ್ಯಂತ ಸಹಕಾರಿಯಾಗಲಿವೆ ಎಂದರು. "ಪುಸ್ತಕವನ್ನು ತಲೆ ತಗ್ಗಿಸಿ ಓದಿದರೆ, ಪುಸ್ತಕ ನಮ್ಮನ್ನು ತಲೆ ಎತ್ತಿ ಬದುಕುವಂತೆ ಮಾಡುತ್ತದೆ" ಎಂದು ಮಾರ್ಮಿಕವಾಗಿ ನುಡಿದ ಸಚಿವರು, ಇಂದಿನ ದಿನಗಳಲ್ಲಿ ಮಕ್ಕಳು ಹಾಗೂ ಯುವಜನರು ಮೊಬೈಲ್ ರೀಲ್ಸ್ ಮತ್ತು ವಿಡಿಯೋ ಗೇಮ್ಸ್‌ಗಳಲ್ಲಿ ಕಳೆದು ಹೋಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಇಂತಹ ಸಂದರ್ಭದಲ್ಲಿ ಓದಿನ ಆಸಕ್ತಿ ಬೆಳೆಸಲು ಗ್ರಾಮ ಗ್ರಂಥಾಲಯಗಳು ಉತ್ತೇಜನ ನೀಡುತ್ತವೆ. ಅಲ್ಲದೆ, ಹಲವು ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಮತ್ತು ಯುವಜನರಲ್ಲಿ ಓದುವ ಆಸಕ್ತಿ ಇದ್ದರೂ ಪುಸ್ತಕ ಖರೀದಿಸುವ ಆರ್ಥಿಕ ಶಕ್ತಿ ಇರುವುದಿಲ್ಲ. ಈ ಕೊರತೆಯನ್ನು ಗ್ರಂಥಾಲಯಗಳು ನೀಗಿಸುತ್ತವೆ ಹಾಗೂ ಪುಸ್ತಕ ಓದು ಮಕ್ಕಳಲ್ಲಿ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಅರಿವು ಕೇಂದ್ರಗಳಲ್ಲಿ ಡಿಜಿಟಲ್ ಕಲಿಕೆ ಹಾಗೂ 899 ಬೀಕನ್ ಲೈಬ್ರರಿಗಳು

ಕೇವಲ ಮುದ್ರಿತ ಪುಸ್ತಕಗಳಿಗೆ ಸೀಮಿತವಾಗದೆ, ಆಧುನಿಕ ತಂತ್ರಜ್ಞಾನವನ್ನು ಗ್ರಾಮೀಣ ಭಾಗದ ಗ್ರಂಥಾಲಯಗಳಿಗೆ ತಲುಪಿಸಲಾಗಿದೆ. ಗ್ರಾಮ ಪಂಚಾಯತಿ ಗ್ರಂಥಾಲಯಗಳನ್ನು 'ಅರಿವು ಕೇಂದ್ರ'ಗಳಾಗಿ ಮೇಲ್ದರ್ಜೆಗೇರಿಸುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಡಿಜಿಟಲ್ ಕಲಿಕಾ ಸಾಮಗ್ರಿಗಳನ್ನು ಒದಗಿಸಲಾಗಿದೆ. ಇದರಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳ ಕಲಿಕಾ ಅಂತರವನ್ನು ತಗ್ಗಿಸಲು ಸಾಧ್ಯವಾಗಿದೆ. ಇದರ ಜೊತೆಗೆ ಸಮಾಜದ ಎಲ್ಲಾ ಮಕ್ಕಳಿಗೂ ಸಮಾನ ಕಲಿಕಾ ವೇದಿಕೆ ಸಿಗಬೇಕು ಎಂಬ ಉದ್ದೇಶದಿಂದ ವಿಕಲಚೇತನಸ್ನೇಹಿ ಕಲಿಕಾ ಸಾಧನಗಳನ್ನೂ ನೀಡಲಾಗಿದೆ. ವಿಶೇಷವಾಗಿ ದೃಷ್ಟಿ ಮತ್ತು ಶ್ರವಣ ಚೇತನ ಮಕ್ಕಳ ಕಲಿಕೆಗೆ ನೆರವಾಗುವಂತೆ ರಾಜ್ಯಾದ್ಯಂತ 899 ಬೀಕನ್ ಲೈಬ್ರರಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

6ರಿಂದ 18 ವರ್ಷದ ಮಕ್ಕಳಿಗೆ ಉಚಿತ ಸದಸ್ಯತ್ವ

ಗ್ರಾಮೀಣ ಭಾಗದ ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸವನ್ನು ನಿರಂತರವಾಗಿ ಪೋಷಿಸಲು ಸರ್ಕಾರ ಜಾರಿಗೆ ತಂದಿರುವ ಉಚಿತ ಸದಸ್ಯತ್ವ ಯೋಜನೆಗೆ ವ್ಯಾಪಕ ಸ್ಪಂದನೆ ದೊರೆತಿದೆ. ಅರಿವು ಕೇಂದ್ರಗಳಲ್ಲಿ 6ರಿಂದ 18 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಗ್ರಂಥಾಲಯ ಸದಸ್ಯತ್ವವನ್ನು ಒದಗಿಸಲಾಗಿದೆ. ಅಲ್ಲದೆ, ಮಕ್ಕಳು ಗ್ರಂಥಾಲಯದಲ್ಲೇ ಕುಳಿತು ಓದುವುದಷ್ಟೇ ಅಲ್ಲದೆ, ಗ್ರಂಥಾಲಯದಿಂದ ಪುಸ್ತಕಗಳನ್ನು ಮನೆಗೆ ತೆಗೆದುಕೊಂಡು ಹೋಗಿ ತಮ್ಮ ಅನುಕೂಲಕ್ಕೆ ತಕ್ಕಂತೆ ಓದುವ ಅವಕಾಶವನ್ನೂ ಕಲ್ಪಿಸಲಾಗಿದೆ. ಈ ಜನಪರ ಉಪಕ್ರಮದ ಪರಿಣಾಮವಾಗಿ ಇಂದು ರಾಜ್ಯದ ಗ್ರಾಮೀಣ ಗ್ರಂಥಾಲಯಗಳಲ್ಲಿ 51 ಲಕ್ಷಕ್ಕೂ ಹೆಚ್ಚು ಮಕ್ಕಳು ಸದಸ್ಯರಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಗ್ರಾಮೀಣ ಗ್ರಂಥಾಲಯ ವ್ಯವಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಗ್ರಂಥಪಾಲಕರ ಸೇವೆಯನ್ನು ಸ್ಮರಿಸಿದ ಸಚಿವರು, ಅರಿವು ಕೇಂದ್ರಗಳಲ್ಲಿ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸುವವರಿಗೆ 19,201 ರೂ. ಮಾಸಿಕ ಸಂಭಾವನೆಯನ್ನು ಖಾತ್ರಿಪಡಿಸಲಾಗಿದೆ ಎಂದು ತಿಳಿಸಿದರು. ಒಟ್ಟಾರೆಯಾಗಿ, 5,888 ಅರಿವು ಕೇಂದ್ರಗಳು, 899 ಬೀಕನ್ ಲೈಬ್ರರಿಗಳು ಹಾಗೂ 51 ಲಕ್ಷಕ್ಕೂ ಅಧಿಕ ಬಾಲ ಸದಸ್ಯರ ಬಲದೊಂದಿಗೆ, ಇದೀಗ ಹೊಸದಾಗಿ ಸೇರ್ಪಡೆಯಾಗಿರುವ 6,342 ಗ್ರಾಮ ಗ್ರಂಥಾಲಯಗಳು ರಾಜ್ಯದ ಗ್ರಾಮೀಣ ಶೈಕ್ಷಣಿಕ ವಲಯದಲ್ಲಿ ಮಹತ್ವದ ಬದಲಾವಣೆ ತರಲಿವೆ. ಗ್ರಾಮ ಪಂಚಾಯತಿ ಕೇಂದ್ರದ ಹೊರತಾಗಿ ಉಳಿದ ಗ್ರಾಮಗಳ ವಿದ್ಯಾರ್ಥಿಗಳಿಗೂ ವಾರಾಂತ್ಯದಲ್ಲಿ ಪುಸ್ತಕಗಳು ಸುಲಭವಾಗಿ ಲಭ್ಯವಾಗುವುದರಿಂದ ಗ್ರಾಮೀಣ ಕರ್ನಾಟಕದಲ್ಲಿ ಜ್ಞಾನಾರ್ಜನೆಯ ಹಾದಿ ಮತ್ತಷ್ಟು ಬಲಗೊಳ್ಳಲಿದೆ.

Read More
Next Story