
ಅಸ್ಸಾಂ, ಗುಜರಾತ್, ಬಿಹಾರಕ್ಕಿಲ್ಲದ ನಿಯಮ ಕರ್ನಾಟಕಕ್ಕೆ ಯಾಕೆ?: ಈಶ್ವರ ಖಂಡ್ರೆ ಕಿಡಿ
15ನೇ ಹಣಕಾಸು ಆಯೋಗದ ಶಿಫಾರಸಿನ ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರವು ಕರ್ನಾಟಕದ ವಿಷಯದಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಸಚಿವ ಈಶ್ವರ ಬಿ. ಖಂಡ್ರೆ ಗಂಭೀರ ಆರೋಪ ಮಾಡಿದ್ದಾರೆ.
ಹದಿನೈದನೇ ಹಣಕಾಸು ಆಯೋಗದ ಶಿಫಾರಸಿನ ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರವು ಕರ್ನಾಟಕದ ವಿಷಯದಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಅವರು, ಇತರ ರಾಜ್ಯಗಳಿಗೆ ಒಂದೊಂದು ನಿಯಮ, ಕರ್ನಾಟಕಕ್ಕೆ ಮಾತ್ರ ಮತ್ತೊಂದು ಕಠಿಣ ನಿಯಮವನ್ನು ಅನ್ವಯಿಸುವ ಮೂಲಕ ಕೇಂದ್ರ ಸರ್ಕಾರವು ರಾಜ್ಯದ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಗ್ರಾಮ ಪಂಚಾಯತಿಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಹಣಕಾಸು ಆಯೋಗದ ಶಿಫಾರಸಿನಂತೆ ಅನುದಾನ ಬಿಡುಗಡೆ ಮಾಡುತ್ತದೆ. ಈ ಹಣವನ್ನು ರಾಜ್ಯ ಸರ್ಕಾರವು ಪಡೆದ 10 ದಿನದೊಳಗಾಗಿ ಗ್ರಾಮೀಣಾಭಿವೃದ್ಧಿ ಸಂಸ್ಥೆಗಳಿಗೆ ತಲುಪಿಸಬೇಕೆಂಬ ನಿಯಮವಿದೆ. ಒಂದು ವೇಳೆ ವಿಳಂಬವಾದರೆ ಬಡ್ಡಿ ಸಮೇತ ಹಣ ಪಾವತಿಸಬೇಕಾಗುತ್ತದೆ. ಈ ಪಾವತಿಯ ವಿವರಗಳನ್ನು ಕೇಂದ್ರ ಸರ್ಕಾರದ ‘ಇ-ಗ್ರಾಮ ಸ್ವರಾಜ್’ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡುವುದು ಕಡ್ಡಾಯವಾಗಿದೆ. ಈ ಪ್ರಕ್ರಿಯೆಯಲ್ಲಿ ಕರ್ನಾಟಕದಲ್ಲಿ ಸಣ್ಣ ಮಟ್ಟದ ತಾಂತ್ರಿಕ ವ್ಯತ್ಯಾಸವಾಗಿದೆ. 2024-25ನೇ ಸಾಲಿನಲ್ಲಿ ಬಿಡುಗಡೆಯಾಗಿದ್ದ 2,133.25 ಕೋಟಿ ರೂ.ಗಳಲ್ಲಿ, 1,907 ಕೋಟಿ ರೂ.ಗಳ ಸ್ವೀಕೃತಿ ಮಾತ್ರ ಪೋರ್ಟಲ್ನಲ್ಲಿ ದಾಖಲಾಗಿದೆ. ಉಳಿದ 225 ಕೋಟಿ ರೂ.ಗಳು ಭೌತಿಕವಾಗಿ ಗ್ರಾಮ ಪಂಚಾಯತಿಗಳಿಗೆ ತಲುಪಿ, ಕಾಮಗಾರಿಗಳೂ ಮುಕ್ತಾಯವಾಗಿವೆ. ಕೇವಲ ತಾಂತ್ರಿಕ ಅಪ್ಡೇಟ್ ಸಮಸ್ಯೆಯಿಂದಾಗಿ ಪೋರ್ಟಲ್ನಲ್ಲಿ ಈ ಹಣ ಪ್ರತಿಬಿಂಬಿತವಾಗಿಲ್ಲ. ಇದೇ ಸಣ್ಣ ಕಾರಣವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವು 2025-26ನೇ ಸಾಲಿನ ಬರೋಬ್ಬರಿ 2,186.20 ಕೋಟಿ ರೂ. ಅನುದಾನವನ್ನು ತಡೆಹಿಡಿದಿದೆ ಎಂದು ಆರೋಪಿಸಿದ್ದಾರೆ.
ರಾಜ್ಯಗಳ ನಡುವೆ ಕೇಂದ್ರದ ಮಲತಾಯಿ ಧೋರಣೆ
ಕೇಂದ್ರದ ತಾರತಮ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಸಚಿವ ಈಶ್ವರ ಖಂಡ್ರೆ, ಇತರ ರಾಜ್ಯಗಳಿಗೆ ನೀಡಲಾಗಿರುವ ವಿನಾಯಿತಿ ಮತ್ತು ಕರ್ನಾಟಕಕ್ಕೆ ಅನ್ವಯಿಸಿರುವ ನಿಯಮಗಳ ನಡುವಿನ ವ್ಯತ್ಯಾಸವನ್ನು ಅಂಕಿಅಂಶಗಳ ಸಮೇತ ವಿವರಿಸಿದರು. ಉತ್ತರಖಂಡ ರಾಜ್ಯಕ್ಕೆ 470 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅಚ್ಚರಿಯೆಂದರೆ, ಅಲ್ಲಿ ಪೋರ್ಟಲ್ನಲ್ಲಿ ಸ್ವೀಕೃತಿ ಶೂನ್ಯವಾಗಿದೆ. ಆದರೂ, ಯಾವುದೇ ಅಡೆತಡೆಯಿಲ್ಲದೆ 2025-26ನೇ ಸಾಲಿನ ಪೂರ್ತಿ ಅನುದಾನವನ್ನು ಕೇಂದ್ರವು ಬಿಡುಗಡೆ ಮಾಡಿದೆ. ಗುಜರಾತ್ಗೆ 2,619 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಪೋರ್ಟಲ್ ದಾಖಲಾತಿ ಮತ್ತು ಬಿಡುಗಡೆಯಾದ ಹಣದ ನಡುವೆ 515 ಕೋಟಿ ರೂ. ವ್ಯತ್ಯಾಸವಿದೆ. ಆದರೂ ಕೇಂದ್ರ ಸರ್ಕಾರ ಗುಜರಾತ್ಗೆ ಪೂರ್ತಿ ಹಣ ನೀಡಿದೆ. 1,315 ಕೋಟಿ ರೂ. ಅನುದಾನ ಪಡೆದ ಅಸ್ಸಾಂನಲ್ಲಿ 867 ಕೋಟಿ ರೂ. ವ್ಯತ್ಯಾಸವಿದ್ದರೂ, ಕೇಂದ್ರ ಸರ್ಕಾರ ಅನುದಾನ ಕಡಿತಗೊಳಿಸಿಲ್ಲ. 4,109 ಕೋಟಿ ರೂ. ಅನುದಾನ ಪಡೆದ ಬಿಹಾರದಲ್ಲಿ ಪೋರ್ಟಲ್ ಸ್ವೀಕೃತಿ ಮತ್ತು ಹಣದ ನಡುವೆ ಬರೋಬ್ಬರಿ 2,334 ಕೋಟಿ ರೂ.ಗಳ ಅಂತರವಿದೆ. ಅಷ್ಟೊಂದು ವ್ಯತ್ಯಾಸವಿದ್ದರೂ ಬಿಹಾರಕ್ಕೆ ಪೂರ್ತಿ ಅನುದಾನ ಲಭ್ಯವಾಗಿದೆ ಎಂದು ಹೇಳಿದ್ದಾರೆ.
ಇತರ ರಾಜ್ಯಗಳಿಗೆ ನಿಯಮದಿಂದ ವಿನಾಯಿತಿ ನೀಡುವ ಕೇಂದ್ರ ಸರ್ಕಾರ, ಕರ್ನಾಟಕದ ವಿಷಯದಲ್ಲಿ ಮಾತ್ರ ಏಕೆ ಇಷ್ಟು ಕಠಿಣವಾಗಿದೆ? ಇದು 'ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ' ಹಚ್ಚುವ ಕೆಲಸವಲ್ಲವೇ?" ಎಂದು ಪ್ರಶ್ನಿಸಿದ್ದಾರೆ.
ಸರ್ಕಾರದ ಪ್ರಯತ್ನಗಳು ಹಾಗೂ ಕೇಂದ್ರದ ನಿರ್ಲಕ್ಷ್ಯ
ರಾಜ್ಯಕ್ಕೆ ಬರಬೇಕಾದ ಹಕ್ಕಿನ ಹಣವನ್ನು ಪಡೆಯಲು ರಾಜ್ಯ ಸರ್ಕಾರವು ಕಳೆದ ಒಂದೂವರೆ ವರ್ಷದಿಂದ ನಿರಂತರ ಪ್ರಯತ್ನ ನಡೆಸುತ್ತಿದೆ. ಕಳೆದ ಡಿಸೆಂಬರ್ 2025 ರಿಂದ ಏಪ್ರಿಲ್ 2026ರವರೆಗೆ ಪದೇ ಪದೇ ಕೇಂದ್ರಕ್ಕೆ ಪತ್ರಗಳನ್ನು ಬರೆಯಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ವತಃ ಕೇಂದ್ರ ಹಣಕಾಸು ಸಚಿವರಿಗೆ ಫೆಬ್ರವರಿ, ಏಪ್ರಿಲ್ ಮತ್ತು ಜುಲೈ 2026ರಲ್ಲಿ ಪತ್ರ ಬರೆದು ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೆ, ರಾಜ್ಯದ ಸಂಸದರಿಗೂ ಮನವಿ ಪತ್ರ ನೀಡಿ, ಕೇಂದ್ರ ಸಚಿವರ ಮೇಲೆ ಒತ್ತಡ ಹೇರಲು ಸೂಚಿಸಲಾಗಿತ್ತು. ಆದರೂ ಕೇಂದ್ರದಿಂದ ಯಾವುದೇ ಧನಾತ್ಮಕ ಸ್ಪಂದನೆ ದೊರೆತಿಲ್ಲ.
ರಾಜ್ಯವು ತೀವ್ರ ಬರ ಪರಿಸ್ಥಿತಿಯಿಂದ ತತ್ತರಿಸುತ್ತಿರುವ ಸಂದರ್ಭದಲ್ಲಿ, ಗ್ರಾಮೀಣಾಭಿವೃದ್ಧಿಗೆ ಮೀಸಲಾದ ಅನುದಾನವನ್ನು ತಡೆಹಿಡಿಯುವುದು ಅಮಾನವೀಯ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು. "ನಾವು ಭಿಕ್ಷೆ ಬೇಡುತ್ತಿಲ್ಲ, ನಮ್ಮ ರಾಜ್ಯದ ಪಾಲಿನ ಹಣವನ್ನು ಕೇಳುತ್ತಿದ್ದೇವೆ. ರಾಜ್ಯದ ಅಭಿವೃದ್ಧಿಗೆ ಅಗತ್ಯವಿರುವ ಹಣವನ್ನು ರಾಜಕೀಯ ಕಾರಣಕ್ಕೆ ತಡೆಹಿಡಿಯುವುದು ಸಂವಿಧಾನಬಾಹಿರ" ಎಂದು ವಾಗ್ದಾಳಿ ನಡೆಸಿದರು. ಈ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಸಚಿವ ಈಶ್ವರ ಖಂಡ್ರೆ, ಕೇಂದ್ರದ ತಾರತಮ್ಯದ ವಿರುದ್ಧ ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

