
ಕಾಡಾನೆ ದಾಳಿಗೆ ಮಹಿಳೆ ಬಲಿ
ಕೊಡಗು: ಕಾಡಾನೆ ದಾಳಿಗೆ ನಿವೃತ್ತ ಐಪಿಎಸ್ ಅಧಿಕಾರಿ ಪತ್ನಿ ಬಲಿ
ಕೊಡಗಿನ ಗೋಣಿಕೊಪ್ಪಲು ಬಳಿ ಕಾಫಿ ಎಸ್ಟೇಟ್‌ಗೆ ತೆರಳಿದ್ದ ನಿವೃತ್ತ ಹಿರಿಯ ಐಪಿಎಸ್ ಅಧಿಕಾರಿ ಸುನಿಲ್ ಅಚಾಯ ಅವರ ಪತ್ನಿ ಸಂಧ್ಯಾ ಅಚ್ಚಯ್ಯ ಅವರು ಕಾಡಾನೆ ದಾಳಿಗೆ ಸಿಲುಕಿ ಚಿಕಿತ್ಸೆ ಫಲಿಸದೆ ದುರ್ಮರಣ ಹೊಂದಿದ್ದಾರೆ.
ಇತ್ತೀಚೆಗೆ ಕೊಡಗಿನ ದುಬಾರೆಯಲ್ಲಿ ಆನೆ ದಾಳಿಗೆ ಮಹಿಳೆಯೊಬ್ಬರು ಬಲಿಯಾದ ದುರಂತದ ನೆನಪು ಮಾಸುವ ಮುನ್ನವೇ ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ನಿವೃತ್ತ ಹಿರಿಯ ಐಪಿಎಸ್ ಅಧಿಕಾರಿಯ ಪತ್ನಿ ಬಲಿಯಾಗಿದ್ದಾರೆ. ಕಾಡಾನೆ ದಾಳಿಗೆ ಸಿಲುಕಿ ನಿವೃತ್ತ ಹಿರಿಯ ಐಪಿಎಸ್ ಅಧಿಕಾರಿ ಸುನಿಲ್ ಅಚ್ಚಯ್ಯ ಅವರ ಪತ್ನಿ ಸಂಧ್ಯಾ ಅಚ್ಚಯ್ಯ ಅವರು ತೀವ್ರವಾಗಿ ಗಾಯಗೊಂಡು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ದಕ್ಷಿಣ ಕೊಡಗಿನ ಗೋಣಿಕೊಪ್ಪಲು ಸಮೀಪದ ಕೋನನಕಟ್ಟೆಯಲ್ಲಿ ಈ ಘಟನೆ ನಡೆದಿದೆ. ಮೃತ ಸಂಧ್ಯಾ ಅವರು ಬೆಳಿಗ್ಗೆ ಸುಮಾರು 9 ಗಂಟೆಯ ವೇಳೆಗೆ ತಮ್ಮ ತೋಟದ ಮೇಲ್ವಿಚಾರಕ ಹಾಗೂ ಚಾಲಕನೊಂದಿಗೆ ಎಸ್ಟೇಟ್‌ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಕಾಫಿ ತೋಟದ ಮಧ್ಯದಿಂದ ಏಕಾಏಕಿ ಬಂದ ಕಾಡಾನೆಯೊಂದು ಇವರ ಮೇಲೆರಗಿದೆ. ಆನೆ ದಾಳಿ ಮಾಡುತ್ತಿದ್ದಂತೆ ಎಸ್ಟೇಟ್ ಮ್ಯಾನೇಜರ್ ಮತ್ತು ಚಾಲಕ ಅಲ್ಲಿಂದ ಓಡಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ದುರದೃಷ್ಟವಶಾತ್ ಸಂಧ್ಯಾ ಅವರಿಗೆ ಅಲ್ಲಿಂದ ಓಡಲು ಸಾಧ್ಯವಾಗಿಲ್ಲ.
ಮೃತರ ಮೇಲೆ ದಾಳಿ ನಡೆಸಿದ ಕಾಡಾನೆ ಅವರನ್ನು ತೀವ್ರವಾಗಿ ತುಳಿದು ಜಜ್ಜಿತ್ತು. ಆನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲೇ ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಘಟನೆ ಕುರಿತು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದು ಮಣಿ ಅವರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಕೊಡಗಿನ ಪ್ರಸಿದ್ಧ ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಗಳ ಕಾದಾಟದ ಮಧ್ಯೆ ಸಿಲುಕಿ ತಮಿಳುನಾಡು ಮೂಲದ 33 ವರ್ಷದ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ದುಬಾರೆ ಹಾಗೂ ಸಕ್ರೆಬೈಲ್ ಆನೆ ಶಿಬಿರಗಳಲ್ಲಿ ಪ್ರವಾಸಿಗರು ಆನೆಗಳ ಹತ್ತಿರ ಹೋಗುವುದು, ಸ್ನಾನ ಮಾಡಿಸುವುದು, ಆಹಾರ ನೀಡುವುದು ಹಾಗೂ ಸೆಲ್ಫಿ ಫೋಟೋಗಳನ್ನು ತೆಗೆದುಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದರು.
ಅಲ್ಲದೆ ಶಿಬಿರಗಳಲ್ಲಿ ಕಡ್ಡಾಯವಾಗಿ ಆನೆಗಳಿಂದ ಕನಿಷ್ಠ 100 ಅಡಿ ದೂರ ಕಾಯ್ದುಕೊಳ್ಳಬೇಕು ಎಂದು ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಜಾರಿಗೆ ತರಲಾಗಿತ್ತು. ಹೀಗೆ ಅರಣ್ಯ ಇಲಾಖೆ ಆನೆ ಶಿಬಿರಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ಬೆನ್ನಲ್ಲೇ, ಇತ್ತ ತೋಟಗಳಲ್ಲಿ ಕಾಡಾನೆಗಳ ದಾಳಿಗೆ ಸಾರ್ವಜನಿಕರು ಬಲಿಯಾಗುತ್ತಿರುವುದು ಕೊಡಗಿನ ಜನರಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

