
ಜಾಗತಿಕ ಮಟ್ಟದ ಉತ್ಪಾದನಾ ಕೇಂದ್ರವಾಗಲಿದೆ ರಾಜ್ಯ - ಸಚಿವ ಎಂ.ಬಿ. ಪಾಟೀಲ
ರಾಜ್ಯ ಸರ್ಕಾರವು, ಕೇವಲ ಸಾಫ್ಟ್‌ವೇರ್ ಮೇಲೆ ಅವಲಂಬಿತವಾಗದೆ, ಹಾರ್ಡ್‌ವೇರ್ ಉತ್ಪಾದನೆಯಲ್ಲೂ ಸ್ವಾವಲಂಬನೆ ಸಾಧಿಸಲು ಕಾರ್ಯತಂತ್ರಗಳನ್ನು ರೂಪಿಸುತ್ತಿದೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.
ಕರ್ನಾಟಕವನ್ನು ಕೇವಲ ಸಾಫ್ಟ್‌ವೇರ್ ತಾಣವನ್ನಾಗಿ ಮಾತ್ರವಲ್ಲದೆ, ಜಾಗತಿಕ ಮಟ್ಟದ ಎಲೆಕ್ಟ್ರಾನಿಕ್ಸ್ ವಿನ್ಯಾಸ ಮತ್ತು ಉತ್ಪಾದನಾ ಕೇಂದ್ರವನ್ನಾಗಿ ರೂಪಿಸುವುದೇ ನಮ್ಮ ಗುರಿ. ಇದಕ್ಕಾಗಿ ಅಗತ್ಯವಿರುವ ಎಲ್ಲಾ ಮೂಲಸೌಕರ್ಯ ಮತ್ತು ಸರ್ಕಾರಿ ಬೆಂಬಲವನ್ನು ನೀಡಲು ನಾವು ಬದ್ಧರಿದ್ದೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಘೋಷಿಸಿದ್ದಾರೆ.
ತುಮಕೂರು ರಸ್ತೆಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ವಿದ್ಯುನ್ಮಾನ ನಾಯಕತ್ವ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇಂದಿನ ಆಧುನಿಕ ಬದುಕಿನಲ್ಲಿ ಎಲೆಕ್ಟ್ರಾನಿಕ್ಸ್ ಕ್ಷೇತ್ರವು ಪ್ರತಿಯೊಂದು ಹಂತದಲ್ಲೂ ಹಾಸುಹೊಕ್ಕಾಗಿದೆ. ಈ ವಾಸ್ತವವನ್ನು ಮನಗಂಡಿರುವ ರಾಜ್ಯ ಸರ್ಕಾರವು, ಕೇವಲ ಸಾಫ್ಟ್‌ವೇರ್ ಮೇಲೆ ಅವಲಂಬಿತವಾಗದೆ, ಹಾರ್ಡ್‌ವೇರ್ ಉತ್ಪಾದನೆಯಲ್ಲೂ ಸ್ವಾವಲಂಬನೆ ಸಾಧಿಸಲು ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ರಾಜ್ಯದಲ್ಲಿ ಈಗಾಗಲೇ 20 ಸಾವಿರಕ್ಕೂ ಹೆಚ್ಚು ಚಿಪ್ ವಿನ್ಯಾಸಕಾರರು ಮತ್ತು 10 ಸಾವಿರಕ್ಕೂ ಹೆಚ್ಚು ಅನಲಾಗ್ ಎಂಜಿನಿಯರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮಾನವ ಸಂಪನ್ಮೂಲವೇ ಕರ್ನಾಟಕದ ಅತಿದೊಡ್ಡ ಬಲವಾಗಿದೆ ಎಂದು ಹೇಳಿದರು.
ದಿಗ್ಗಜ ಕಂಪನಿಗಳ ತವರು ಮನೆ ಕರ್ನಾಟಕ
ರಾಜ್ಯದಲ್ಲಿನ ಕೈಗಾರಿಕಾ ಸ್ನೇಹಿ ವಾತಾವರಣದಿಂದಾಗಿ ಜಾಗತಿಕ ಮಟ್ಟದ ದೈತ್ಯ ಕಂಪನಿಗಳು ಇಲ್ಲಿ ನೆಲೆಯೂರಿವೆ. ಫಾಕ್ಸ್ ಕಾನ್, ವಿಸ್ಟ್ರಾನ್, ಎಟಿ & ಎಸ್, ಅಪ್ಲೈಡ್ ಮೆಟೀರಿಯಲ್ಸ್, ಸೆಂಟಂ, ಕೇನ್ಸ್, ಟಾಟಾ ಎಲೆಕ್ಟ್ರಾನಿಕ್ಸ್, ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್‌ನಂತಹ ದಿಗ್ಗಜ ಕಂಪನಿಗಳು ಕರ್ನಾಟಕವನ್ನು ತಮ್ಮ ಕಾರ್ಯಚಟುವಟಿಕೆಗಳ ಕೇಂದ್ರವನ್ನಾಗಿಸಿಕೊಂಡಿವೆ. ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ, ರಾಜ್ಯದ ಆರ್ಥಿಕತೆಯನ್ನು ವಿಕೇಂದ್ರೀಕರಣಗೊಳಿಸುವ ನಿಟ್ಟಿನಲ್ಲಿ ಮೈಸೂರು ಮತ್ತು ಹುಬ್ಬಳ್ಳಿ-ಧಾರವಾಡವನ್ನೂ ಎಲೆಕ್ಟ್ರಾನಿಕ್ಸ್ ಕ್ಲಸ್ಟರ್‌ಗಳಾಗಿ ಬೆಳೆಸಲಾಗುತ್ತಿದೆ. ದೇಶದಲ್ಲಿ ನಡೆಯುತ್ತಿರುವ ಒಟ್ಟಾರೆ ವಿದ್ಯುನ್ಮಾನ ವಿನ್ಯಾಸದಲ್ಲಿ ಕರ್ನಾಟಕದ ಪಾಲು ಶೇಕಡಾ 40ರಷ್ಟು ಇದೆ. ರಾಜ್ಯವು ರಾಷ್ಟ್ರೀಯ ಮಟ್ಟದ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಶೇಕಡಾ 10ರಷ್ಟು ಕೊಡುಗೆ ನೀಡುತ್ತಿದೆ. ದೇಶದ ಒಟ್ಟು ಐಒಟಿ ನವೋದ್ಯಮಗಳಲ್ಲಿ ಶೇಕಡಾ 55ರಷ್ಟು ಕರ್ನಾಟಕದಲ್ಲೇ ಇವೆ. ರಾಜ್ಯದಲ್ಲಿ 100ಕ್ಕೂ ಹೆಚ್ಚು ಕಂಪನಿಗಳು ಅತ್ಯಾಧುನಿಕ ಚಿಪ್ ವಿನ್ಯಾಸದಲ್ಲಿ ತೊಡಗಿಸಿಕೊಂಡಿವೆ ಎಂದು ವಿವರಿಸಿದರು.
ಏಕೀಕೃತ ಕೈಗಾರಿಕಾ ಪರಿವ್ಯವಸ್ಥೆ
ಕರ್ನಾಟಕದ ಯಶಸ್ಸಿನ ಹಿಂದಿನ ಗುಟ್ಟು ಇಲ್ಲಿನ 'ಪರಿವ್ಯವಸ್ಥೆ'ಯಾಗಿದೆ. ಸಾಫ್ಟ್-ವೇರ್ ಮತ್ತು ಹಾರ್ಡ್-ವೇರ್ ಎಂಜಿನಿಯರಿಂಗ್, ಪರೀಕ್ಷಾ ವ್ಯವಸ್ಥೆ, ಉತ್ಪಾದನೆ ಮತ್ತು ನಾವೀನ್ಯತೆ ಒಂದೇ ಸೂರಿನಡಿ ಲಭ್ಯವಿರುವುದು ಹೂಡಿಕೆದಾರರಿಗೆ ವರದಾನವಾಗಿದೆ. ಸಣ್ಣ, ಮಧ್ಯಮ ಮತ್ತು ಸೂಕ್ಷ್ಮ ಕೈಗಾರಿಕೆಗಳು ಎಲೆಕ್ಟ್ರಾನಿಕ್ಸ್ ಪೂರೈಕೆ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಇಂತಹ ಉದ್ಯಮಗಳಿಗೆ, ನವೋದ್ಯಮಿಗಳಿಗೆ ಮತ್ತು ಹೂಡಿಕೆದಾರರಿಗೆ ಸರ್ಕಾರವು ಎಲ್ಲಾ ರೀತಿಯ ನೆರವು ನೀಡಲಿದೆ. ಹೂಡಿಕೆದಾರರು ಬರುವಾಗ ಬರೀ ಕೈಯೊಂದಿಗೆ ಬರದೇ, ಸುಸ್ಥಿರವಾದ ಆರ್ಥಿಕ ಬದಲಾವಣೆ ತರುವ ಕನಸಿನೊಂದಿಗೆ ಬಂದರೆ ಸರ್ಕಾರ ಅವರಿಗೆ ಕೆಂಪು ಹಾಸಿನ ಸ್ವಾಗತ ನೀಡಲಿದೆ ಎಂದು ಭರವಸೆ ನೀಡಿದರು.
ಸಮಾವೇಶದ ನಂತರ ಸಚಿವರು ವಸ್ತು ಪ್ರದರ್ಶನವನ್ನು ವೀಕ್ಷಿಸಿದರು. ವಿವಿಧ ಸಂಸ್ಥೆಗಳು ಪ್ರದರ್ಶಿಸಿದ ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆದ ಅವರು, ಕಂಪನಿಗಳ ಪ್ರತಿನಿಧಿಗಳ ಜೊತೆ ಮುಕ್ತವಾಗಿ ಚರ್ಚಿಸಿದರು. ಉದ್ಯಮಗಳ ಬೆಳವಣಿಗೆಗೆ ಎದುರಾಗುತ್ತಿರುವ ಸವಾಲುಗಳು ಮತ್ತು ಸರ್ಕಾರದಿಂದ ನಿರೀಕ್ಷಿಸುವ ಬದಲಾವಣೆಗಳ ಬಗ್ಗೆ ಅವರು ಅಭಿಪ್ರಾಯ ಸಂಗ್ರಹಿಸಿದರು.

