
ತಮಿಳುನಾಡಿನಲ್ಲಿ ಸುನಾಮಿ ಎಬ್ಬಿಸಿದ ತೆರೆಮರೆಯ ತಂತ್ರಗಾರ ಜಾನ್ ಆರೋಗ್ಯಸ್ವಾಮಿ
ವಿಜಯ್ ಗೆಲುವಿಗೆ ಕಾರಣನಾದ ಜಾನ್ ಆರೋಗ್ಯಸ್ವಾಮಿ ನಂಟು ಕರ್ನಾಟಕಕ್ಕೂ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿ, ಚಾಮುಂಡೇಶ್ವರಿ ಎರಡೂ ಕ್ಷೇತ್ರದಲ್ಲಿಯೂ ಸ್ಪರ್ಧಿಸುವಂತೆ ಸಲಹೆ ನೀಡಿದ್ದರು.
ಚುನಾವಣಾ ರಾಜಕಾರಣದಲ್ಲಿ ನಾಯಕರ ಗೆಲುವಿಗಿಂತ ಹೆಚ್ಚಾಗಿ ಅವರ ಹಿಂದೆ ತಂತ್ರಗಾರಿಕೆ ರೂಪಿಸುವ ಚಾಣಾಕ್ಷರು ಸುದ್ದಿಯಾಗುತ್ತಿದ್ದಾರೆ. ದೇಶದ ಹಲವೆಡೆ ಘಟಾನುಘಟಿ ನಾಯಕರ ಗೆಲುವಿಗೆ ನೆರವಾಗಿದ್ದ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಈಗ ತಮ್ಮದೇ ಪ್ರತ್ಯೇಕ ರಾಜಕೀಯ ಪಕ್ಷ ಕಟ್ಟಿ ರಾಜಕೀಯಕ್ಕೆ ಧುಮುಕಿದ್ದಾರೆ. ಈಗ ಅವರಂತೆಯೇ ದೇಶದ ಗಮನ ಸೆಳೆಯುತ್ತಿರುವ ಮತ್ತೊಂದು ಹೆಸರು ಜಾನ್ ಆರೋಗ್ಯಸ್ವಾಮಿ.
ದ್ರಾವಿಡ ನೆಲದಲ್ಲಿ ರಾಜಕೀಯ ಸುನಾಮಿ ಎಬ್ಬಿಸಿದ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅನಿರೀಕ್ಷಿತ ಜಯಭೇರಿಯ ಹಿಂದೆ ಜಾನ್ ಆರೋಗ್ಯಸ್ವಾಮಿ ತಂತ್ರಗಾರಿಕೆ ಅಡಗಿದೆ ಎಂಬ ಚರ್ಚೆ ದಟ್ಟವಾಗಿದೆ. ಜಾನ್ ಆರೋಗ್ಯಸ್ವಾಮಿಯ ನಂಟು ಈ ಹಿಂದೆ ಕರ್ನಾಟಕದ ರಾಜಕಾರಣಕ್ಕೂ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾದಾಮಿ ಹಾಗೂ ಚಾಮುಂಡೇಶ್ವರಿ ಎರಡೂ ಕ್ಷೇತ್ರದಲ್ಲಿಯೂ ಸ್ಪರ್ಧಿಸುವಂತೆ ಸಲಹೆ ನೀಡಿದ್ದರು.
ಜಾನ್ ಆರೋಗ್ಯಸ್ವಾಮಿ ಅವರ ಹೆಸರನ್ನು ಕರ್ನಾಟಕದ ರಾಜಕೀಯ ವಲಯದಲ್ಲಿ ಮೊದಲ ಬಾರಿಗೆ ಕೇಳಿದ್ದು 2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ. ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿನ ಭೀತಿ ಎದುರಾದಾಗ ಸುರಕ್ಷಿತ ತಾಣವಾಗಿ ಬಾದಾಮಿಯನ್ನು ಆಯ್ಕೆ ಮಾಡಿಕೊಟ್ಟಿದ್ದು ಇದೇ ಜಾನ್ ತಂಡ ಎನ್ನಲಾಗುತ್ತಿದೆ. ಬಾದಾಮಿಯ ಭೌಗೋಳಿಕ ಮತ್ತು ಜಾತಿ ಸಮೀಕರಣದ ದತ್ತಾಂಶಗಳನ್ನು ವಿಶ್ಲೇಷಿಸಿದ ಜಾನ್ ನೇತೃತ್ವದ ತಂಡವು, ಸಿದ್ದರಾಮಯ್ಯನವರಿಗೆ ಅಲ್ಲಿ ಸ್ಪರ್ಧಿಸಲು ಸಲಹೆ ನೀಡಿತ್ತು. ನಂತರ 2023ರ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ವರುಣಾ ಮತ್ತು ಬಾದಾಮಿ ಎರಡರ ಬಗ್ಗೆಯೂ ಗೊಂದಲದಲ್ಲಿದ್ದಾಗ ಕ್ಷೇತ್ರವಾರು ಅಲೆ ಮತ್ತು ಜನರ ನಾಡಿಮಿಡಿತ ಅಳೆದು ತೂಗಿ ಹೈಕಮಾಂಡ್‌ಗೆ ವರದಿ ನೀಡುವಲ್ಲಿ ಜಾನ್ ಮಹತ್ವದ ಪಾತ್ರ ವಹಿಸಿದ್ದರು. ಕರ್ನಾಟಕದ ಅಹಿಂದ ವರ್ಗದ ಮತದಾರರನ್ನು ಡಿಜಿಟಲ್ ವೇದಿಕೆಯ ಮೂಲಕ ತಲುಪುವಲ್ಲಿ ಜಾನ್ ರೂಪಿಸಿದ ತಂತ್ರಗಳು ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದವು.
ವಿಜಯ್ ಎಂಬ ಸೂಪರ್ ಸ್ಟಾರ್ ರಾಜಕೀಯಕ್ಕೆ ನಾಯಕ
ತಮಿಳುನಾಡು ರಾಜಕೀಯವು ಐತಿಹಾಸಿಕವಾಗಿ ವ್ಯಕ್ತಿ ಆರಾಧನೆಯ ಮೇಲೆ ನಿಂತಿದೆ. ಎಂಜಿಆರ್, ಕರುಣಾನಿಧಿ ಮತ್ತು ಜಯಲಲಿತಾ ಅವರ ನಂತರ ಅಲ್ಲಿನ ರಾಜಕೀಯದಲ್ಲಿ ಒಂದು ದೊಡ್ಡ ಶೂನ್ಯ ಸೃಷ್ಟಿಯಾಗಿತ್ತು. ರಜನಿಕಾಂತ್ ರಾಜಕೀಯಕ್ಕೆ ಬಂದು ಹಿಂದೆ ಸರಿದಾಗ, ಕಮಲ್ ಹಾಸನ್ ಅಷ್ಟಾಗಿ ಪ್ರಭಾವ ಬೀರದಿದ್ದಾಗ, ದಳಪತಿ ವಿಜಯ್ ಎಂಬ ಸಿನಿಮಾ ತಾರೆಯನ್ನು ರಾಜಕೀಯ ನಾಯಕನನ್ನಾಗಿ ರೂಪಿಸುವ ಜವಾಬ್ದಾರಿಯನ್ನು ಜಾನ್ ಆರೋಗ್ಯಸ್ವಾಮಿ ಹೊತ್ತುಕೊಂಡರು. ಜಾನ್ ಅವರ ತಂತ್ರಗಾರಿಕೆಯು ವಿಜಯ್ ಅವರ ಫ್ಯಾನ್ ಬೇಸ್ ಅನ್ನು ಕೇವಲ ಸಿನಿಮಾ ಪ್ರೇಕ್ಷಕರನ್ನಾಗಿ ನೋಡದೆ, ಅವರನ್ನು ಬೂತ್ ಮಟ್ಟದ ಕಾರ್ಯಕರ್ತರು ಆಗಿ ಪರಿವರ್ತಿಸಿತು. ವಿಜಯ್ ಅವರ ಟಿವಿಕೆ ಪಕ್ಷವು 2026ರ ಚುನಾವಣೆಯಲ್ಲಿ 234 ಕ್ಷೇತ್ರಗಳಲ್ಲೂ ಸ್ಪರ್ಧಿಸಿ, ದಶಕಗಳ ಕಾಲ ಆಳಿದ ಡಿಎಂಕೆ ಮತ್ತು ಎಐಎಡಿಎಂಕೆ ಕೋಟೆಗಳನ್ನು ಪುಡಿಗಟ್ಟಿದೆ ಎಂದರೆ ಅದಕ್ಕೆ ಜಾನ್ ಅವರ ತಂತ್ರಗಾರಿಕೆ ಕಾರಣ ಎನ್ನಲಾಗಿದೆ.
ಜಾನ್ ಆರೋಗ್ಯಸ್ವಾಮಿ ಕಾರ್ಯವೈಖರಿ
ಜಾನ್ ಅವರು ಕೇವಲ ಘೋಷಣೆಗಳನ್ನು ಕೂಗುವ ತಂತ್ರಜ್ಞರಲ್ಲ. ಅವರ ಕಾರ್ಯವೈಖರಿ ಮೂರು ಪ್ರಮುಖ ಸ್ತರಗಳಲ್ಲಿರುತ್ತದೆ. ಮೊದಲನೆಯದು ದತ್ತಾಂಶ ವಿಶ್ಲೇಷಣೆಯಾಗಿದೆ. ಪ್ರತಿಯೊಂದು ಕ್ಷೇತ್ರದ ಮತದಾರರ ವಯಸ್ಸು, ಜಾತಿ, ವೃತ್ತಿ ಮತ್ತು ಅವರ ಪ್ರಮುಖ ಸಮಸ್ಯೆಗಳ ಬಗ್ಗೆ ಆಳವಾದ ಅಧ್ಯಯನ ನಡೆಸುವುದಾಗಿತ್ತು. ಎರಡನೇಯದಾಗಿ ವ್ಯಕ್ತಿತ್ವ ನಿರ್ಮಾಣವಾಗಿದೆ. ನಾಯಕನೊಬ್ಬನ ಭಾಷಣದ ಶೈಲಿ, ಅವರು ತೊಡುವ ಉಡುಪು, ಸಾರ್ವಜನಿಕವಾಗಿ ಅವರು ನೀಡುವ ಪ್ರತಿಕ್ರಿಯೆಗಳು ಎಲ್ಲವನ್ನೂ ಮತದಾರರ ಮನೋವಿಜ್ಞಾನಕ್ಕೆ ತಕ್ಕಂತೆ ರೂಪಿಸುವುದು. ವಿಜಯ್ ಅವರ ವೇದಿಕೆ ಕಾರ್ಯಕ್ರಮಗಳಲ್ಲಿನ ಸೌಮ್ಯತೆ ಮತ್ತು ದೃಢತೆಯನ್ನು ಜಾನ್ ಅವರೇ ವಿನ್ಯಾಸಗೊಳಿಸಿದ್ದರು. ಇನ್ನು ಮೂರನೇಯದಾಗಿ ಸಾಮಾಜಿಕ ಮಾಧ್ಯಮ ಮತ್ತು ವಾರ್ ರೂಮ್ ಆಗಿದೆ. ತಮಿಳುನಾಡಿನ ಯುವಕರನ್ನು ತಲುಪಲು ವಾಟ್ಸಾಪ್, ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ ಸಾಮಾಜಿಕ ಜಾಲತಾಣಗಳನ್ನು ಅಸ್ತ್ರವಾಗಿ ಬಳಸಿ, ವಿರೋಧಿಗಳ ಆರೋಪಗಳಿಗೆ ಕ್ಷಣಾರ್ಧದಲ್ಲಿ ಪ್ರತ್ಯುತ್ತರ ನೀಡುವ 'ವಾರ್ ರೂಮ್'ಗಳನ್ನು ನಿರ್ವಹಿಸಿದ್ದರು ಎನ್ನಲಾಗಿದೆ.
ಕರ್ನಾಟಕದ ದೃಷ್ಟಿಕೋನದಿಂದಲೂ ಮಹತ್ವ
ಜಾನ್ ಆರೋಗ್ಯಸ್ವಾಮಿ ಅವರ ಈ ಯಶಸ್ಸು ಕರ್ನಾಟಕದ ರಾಜಕೀಯ ಪಕ್ಷಗಳಿಗೆ ಒಂದು ಎಚ್ಚರಿಕೆಯ ಗಂಟೆಯೂ ಹೌದು ಮತ್ತು ಪಾಠವೂ ಹೌದು ಎಂದು ಹೇಳಲಾಗಿದೆ. ಸಾಂಪ್ರದಾಯಿಕ ರಾಜಕೀಯಕ್ಕೆ ಮಣೆ ಹಾಕುವುದು ಕಷ್ಟಕರ. ಕರ್ನಾಟಕದಲ್ಲಿ ಇದುವರೆಗೆ ಜಾತಿ ಮತ್ತು ಕುಟುಂಬ ರಾಜಕಾರಣವೇ ಪ್ರಮುಖವಾಗಿತ್ತು. ಆದರೆ ಜಾನ್ ಅವರ ತಂತ್ರಗಳು ಸಾಬೀತುಪಡಿಸಿರುವುದೆನೆಂದರೆ, ಸರಿಯಾದ ಸಂವಹನ ಹಾಗೂ ಯುವಜನರ ಆಶೋತ್ತರಗಳಿಗೆ ಸ್ಪಂದಿಸಿದರೆ ಎಂತಹ ದೊಡ್ಡ ಕೋಟೆಯನ್ನೂ ಭೇದಿಸಬಹುದು ಎನ್ನಲಾಗಿದೆ. ಕರ್ನಾಟಕದಲ್ಲಿಯೂ ಸದ್ಯ ಅನೇಕ ನಟರು ಅಥವಾ ಉದ್ಯಮಿಗಳು ರಾಜಕೀಯಕ್ಕೆ ಬರಲು ಹವಣಿಸುತ್ತಿದ್ದಾರೆ. ಅವರಿಗೆ ಜಾನ್ ಅಂತಹ ತಂತ್ರಜ್ಞರು ಮಾರ್ಗದರ್ಶಿಗಳಾಗಬಲ್ಲರು. ರಾಜ್ಯದಲ್ಲಿ ಕೆಲವು ನಟರಿಗೆ ದೊಡ್ಡ ಅಭಿಮಾನಿ ಬಳಗವಿದೆ. ವಿಜಯ್ ಅವರ ಅಭಿಮಾನಿ ಸಂಘಗಳನ್ನು ರಾಜಕೀಯ ಪಕ್ಷವಾಗಿ ಪರಿವರ್ತಿಸಿದ ಜಾನ್ ಮಾದರಿಯು ಕರ್ನಾಟಕದ ಮುಂದಿನ ಚುನಾವಣೆಗಳಲ್ಲಿ ದೊಡ್ಡ ಪ್ರಭಾವ ಬೀರಬಹುದು ಎಂದು ಹೇಳಲಾಗಿದೆ.
ಜಾನ್ ಆರೋಗ್ಯಸ್ವಾಮಿ ಹಿನ್ನೆಲೆ
ಮೂಲತಃ ಆಂಧ್ರದವರಾದ ಜಾನ್ ಆರೋಗ್ಯಸ್ವಾಮಿ, ತಮಿಳುನಾಡಿನಲ್ಲಿ ಶಿಕ್ಷಣ ಪಡೆದವರು. ಎಂಬಿಎ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದ ಇವರು ಆರಂಭದಲ್ಲಿ ಪಿಆರ್ ಸಂಸ್ಥೆಗಳಲ್ಲಿ ಕೆಲಸ ಮಾಡಿದರು. ಪರ್ಸೊನಾ ಲೀಡರ್‌ಶಿಪ್ ಅಡ್ಡೆಸರಿ ಎಂಬ ಸಂಸ್ಥೆಯ ಮೂಲಕ ರಾಜಕೀಯ ನಾಯಕರಿಗೆ ಆಪ್ತ ಸಲಹೆಗಾರರಾದರು. ಪಿಎಂಕೆ ಪಕ್ಷದ ಅನ್ಬುಮಣಿ ರಾಮದಾಸ್ ಅವರಿಗೆ ಅಭಿವೃದ್ಧಿ ರಾಜಕಾರಣದ ಮುಖವಾಡ ತೊಡಿಸಿದವರೂ ಇವರೇ ಆಗಿದ್ದಾರೆ.
ಜಾನ್ ಆರೋಗ್ಯಸ್ವಾಮಿ ಕೇವಲ ಒಬ್ಬ ಚುನಾವಣಾ ತಂತ್ರಜ್ಞರಲ್ಲ, ಅವರು ಆಧುನಿಕ ರಾಜಕೀಯದ ಕಿಂಗ್ ಮೇಕರ್ ಎಂಬ ಹೆಸರು ಗಳಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಇಂದಿನ ಡಿಜಿಟಲ್ ಯುಗದಲ್ಲಿ ಮತದಾರನ ಮನಸ್ಸನ್ನು ಓದುವುದು ಹೇಗೆ ಎಂಬುದನ್ನು ಜಾನ್ ಕರಗತ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕರ್ನಾಟಕದ ರಾಜಕೀಯದಲ್ಲೂ ಇಂತಹ ತಂತ್ರಜ್ಞರ ಪಾತ್ರ ಮತ್ತಷ್ಟು ಹೆಚ್ಚಾಗಲಿದೆ ಎಂಬ ಮಾತುಗಳು ಕೇಳಿಬಂದಿವೆ.

