Kerala Local Body Polls Election Commission Extends Voters’ List Revision Deadline by One Week
x

ಭಾರತ ಚುನಾವಣಾ ಆಯೋಗ

ವೋಟರ್‌ ಲಿಸ್ಟ್‌ನಿಂದ ಹೆಸರು ಡಿಲೀಟ್: ಮರು ನೋಂದಣಿಗೆ ವಿಶೇಷ ಅಭಿಯಾನ

“ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟು ಹೋಗಿದ್ದರೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ನಿರಂತರ ನವೀಕರಣ ಪ್ರಕ್ರಿಯೆಯಡಿಯಲ್ಲಿ ಅರ್ಹ ಪ್ರತಿಯೊಬ್ಬ ನಾಗರಿಕರಿಗೂ ಸಾಧಾರಣ ಫಾರಂ 6 ಮೂಲಕ ಮತದಾರರ ಪಟ್ಟಿಗೆ ಮರುಸೇರ್ಪಡೆಯಾಗಲು ಪೂರ್ಣ ಅವಕಾಶವಿದೆ.” ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.


ವಿವಿಧ ಕಾರಣಗಳಿಂದ ಮತದಾರರ ಪಟ್ಟಿಯಿಂದ ಕೈಬಿಡಲಾದ ಅರ್ಹ ಮತದಾರರು ಹಾಗೂ ಯುವ ಮತದಾರರನ್ನು ಮತ್ತೆ ಪಟ್ಟಿಗೆ ಸೇರಿಸಲು ಕೇಂದ್ರ ಚುನಾವಣಾ ಆಯೋಗ ವಿಶೇಷ ಅಭಿಯಾನ ಆರಂಭಿಸಲಿದೆ. ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಂಡಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಶೇಷ ನೋಂದಣಿ ಅಭಿಯಾನ ಕೈಗೊಳ್ಳುವಂತೆ ಆಯೋಗವು ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಸೆ.29 ರಂದು ಎಲ್ಲಾ ರಾಜ್ಯಗಳ ಸಿಇಒಗಳಿಗೆ ಲಿಖಿತ ಸೂಚನೆ ರವಾನಿಸಿರುವ ಆಯೋಗವು, ಗುರುವಾರ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಯುದ್ಧೋಪಾದಿಯಲ್ಲಿ ಮರು ನೋಂದಣಿ ಕಾರ್ಯ ನಡೆಸುವಂತೆ ಸೂಚನೆ ನೀಡಿದೆ.

ಸ್ವಯಂ ಘೋಷಣೆ ರದ್ದು

ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಂಡಿರುವ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕಳೆದುಕೊಂಡವರು ಅಥವಾ ಹೊಸದಾಗಿ ಹೆಸರು ಸೇರಿಸಲು ಇಚ್ಛಿಸುವವರು ಯಾವುದೇ ಹೆಚ್ಚುವರಿ ಷರತ್ತುಗಳಿಲ್ಲದೆ ‘ಫಾರಂ 6’ ಬಳಸಿಯೇ ಅರ್ಜಿ ಸಲ್ಲಿಸಬಹುದಾಗಿದೆ.

ಎಸ್ಐಆರ್ ಎನ್ಯುಮರೇಷನ್ ಫಾರಂನಲ್ಲಿ ನಿಮ್ಮ ಅಥವಾ ನಿಮ್ಮ ಪೋಷಕರ ಹೆಸರು ಪಟ್ಟಿಯಲ್ಲಿತ್ತೇ?” ಎಂಬ ಹೆಚ್ಚುವರಿ ಸ್ವಯಂ ಘೋಷಣಾಪತ್ರದ ಅಗತ್ಯವನ್ನು ಆಯೋಗವು ತೆರವುಗೊಳಿಸಿದೆ. ಈ ನಿಯಮಕ್ಕೆ ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ 1960 ರ ಮತದಾರರ ನೋಂದಣಿ ಕಾಯ್ದೆ ಅನ್ವಯ ಸಾಮಾನ್ಯ ಫಾರಂ 6 ರಂತೆ ನಿರಂತರ ನವೀಕರಣ ಪ್ರಕ್ರಿಯೆಯಡಿ ಬಳಸಲು ಸ್ಪಷ್ಟನೆ ನೀಡಲಾಗಿದೆ.

ಯಾವುದೇ ಬಲವಾದ ಅಥವಾ ಸೂಕ್ತ ಕಾರಣವಿಲ್ಲದೆ ಮತದಾರರ ಪಟ್ಟಿಯಿಂದ ಹೊರಗುಳಿದವರನ್ನು ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಸ್ಐಆರ್ ಪ್ರಕ್ರಿಯೆಯ ಮುಂಚಿನ ಮತ್ತು ನಂತರದ ಮತದಾರರ ಪಟ್ಟಿಗಳನ್ನು ಹೋಲಿಕೆ ಮಾಡಿ, ನಕಲಿ ಅಥವಾ ಮೃತಪಟ್ಟವರಲ್ಲದಿದ್ದರೂ ಹೆಸರು ಡಿಲೀಟ್ ಆಗಿರುವ ಅರ್ಹರ ಮನೆಗಳಿಗೆ ಬೂತ್ ಮಟ್ಟದ ಅಧಿಕಾರಿಗಳು ಭೇಟಿ ನೀಡಲಿದ್ದಾರೆ. ಅಧಿಕಾರಿಗಳೇ ಸ್ವತಃ ಫಾರಂ 6 ಭರ್ತಿ ಮಾಡಿಸಿಕೊಂಡು ದಾಖಲೆಗಳನ್ನು ಇಸಿಐನೆಟ್ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಲಿದ್ದಾರೆ.

“ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟು ಹೋಗಿದ್ದರೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ನಿರಂತರ ನವೀಕರಣ ಪ್ರಕ್ರಿಯೆಯಡಿಯಲ್ಲಿ ಅರ್ಹ ಪ್ರತಿಯೊಬ್ಬ ನಾಗರಿಕರಿಗೂ ಸಾಧಾರಣ ಫಾರಂ 6 ಮೂಲಕ ಮತದಾರರ ಪಟ್ಟಿಗೆ ಮರುಸೇರ್ಪಡೆಯಾಗಲು ಪೂರ್ಣ ಅವಕಾಶವಿದೆ.” ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.

ಚುನಾವಣೆ ನಡೆದು ಮುಗಿದಿರುವ ರಾಜ್ಯಗಳಲ್ಲೂ ಎಸ್ಐಆರ್ ಪ್ರಕ್ರಿಯೆಯ ನಂತರ ಡಿಲೀಟ್ ಆದ ಅರ್ಹ ಮತದಾರರಿಗೆ ಮರು-ನೋಂದಣಿಗೆ ಅವಕಾಶ ನೀಡಿರುವ ಕ್ರಮವು ರಾಜಕೀಯ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ಚುನಾವಣೆ ಮುಗಿದ ಮೇಲೆ ಒಬ್ಬ ವ್ಯಕ್ತಿಯ ಹೆಸರನ್ನು ಮತದಾರರ ಪಟ್ಟಿಗೆ ಮರು ಸೇರ್ಪಡೆಗೊಳಿಸಿದರೆ, ಅವರು ಆ ನಿರ್ದಿಷ್ಟ ಚುನಾವಣೆಯಲ್ಲಿ ಚಲಾಯಿಸಬೇಕಿದ್ದ ಹಕ್ಕನ್ನು ಈಗಾಗಲೇ ಕಳೆದುಕೊಂಡಿರುತ್ತಾರೆ. ಪ್ರಜಾಪ್ರಭುತ್ವದಲ್ಲಿ ಒಂದು ಮತವೂ ಮುಖ್ಯವಾಗಿರುವಾಗ ಗೆಲುವು-ಸೋಲು ನಿರ್ಧಾರವಾದ ಮೇಲೆ ಹೆಸರನ್ನು ಸೇರಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಎದುರಾಗಿದೆ.

ಕರಡು ಪಟ್ಟಿಯಿಂದ ಲಕ್ಷಾಂತರ ಅರ್ಹ ಮತದಾರರ ಹೆಸರುಗಳು ಅನಗತ್ಯವಾಗಿ ಡಿಲೀಟ್ ಆಗಿದ್ದರಿಂದ, ಹಲವು ಕ್ಷೇತ್ರಗಳಲ್ಲಿ ಫಲಿತಾಂಶಗಳ ಮೇಲೆ ಪರಿಣಾಮ ಬೀರಿದೆ ಎಂಬ ಆಕ್ಷೇಪಣೆಗಳು ಕೇಳಿಬರುತ್ತಿವೆ. ಚುನಾವಣೆ ಮುಗಿದ ಮೇಲೆ ಸರಿಪಡಿಸುವುದು ಎಂದರೆ ಹಾನಿಯಾದ ನಂತರ ನೀಡುವ ಪರಿಹಾರದಂತಾಗುತ್ತದೆ. ಈಗ ವಿಶೇಷ ನೋಂದಣಿ ಅಭಿಯಾನ ಆರಂಭಿಸಿ ಮನೆ ಬಾಗಿಲಿಗೆ ಬಿಎಲ್ಒಗಳನ್ನು ಕಳುಹಿಸುತ್ತಿರುವುದು ಎಸ್ಐಆರ್ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಲೋಪದೋಷ ನಡೆದಿರುವುದಕ್ಕೆ ಆಯೋಗವೇ ಸಾಕ್ಷ್ಯ ಕೊಟ್ಟಂತಾಗಿದೆ.

ನಿಯಮಬಾಹಿರವಾಗಿ ಹೆಸರುಗಳನ್ನು ಕೈಬಿಡುವ ಮುನ್ನ ಅನುಸರಿಸಬೇಕಿದ್ದ ಜಾಗರೂಕತೆಯನ್ನು ಚುನಾವಣೆಗಿಂತ ಮುಂಚೆಯೇ ಏಕೆ ವಹಿಸಲಿಲ್ಲ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

Read More
Next Story