SIR | Election Commissions SIR process unscientific; Strong opposition from many dignitaries
x

 ನಟ ಪ್ರಕಾಶ್ ರಾಜ್

SIR | ಚುನಾವಣಾ ಆಯೋಗದ ಎಸ್‌ಐಆರ್‌ ಪ್ರಕ್ರಿಯೆ ಅವೈಜ್ಞಾನಿಕ; ಗಣ್ಯರಿಂದ ತೀವ್ರ ವಿರೋಧ

ಭಾರತದ ಚುನಾವಣಾ ಆಯೋಗವು 2025ರ ಜೂನ್‌ನಿಂದ ಎಸ್‌ಐಆರ್‌ ಪರಿಚಯಿಸಿ ಅದನ್ನು ಅನುಷ್ಠಾನಗೊಳಿಸಿದ ರೀತಿಯಿಂದಾಗಿ ಅದು ತನ್ನ ಎಲ್ಲ ವಿಶ್ವಾಸಾರ್ಹತೆ ಕಳೆದುಕೊಂಡಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.


Click the Play button to hear this message in audio format

ಭಾರತದ ಚುನಾವಣಾ ಆಯೋಗ ಕೈಗೆತ್ತಿಕೊಂಡಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿರುವ ಸಾಹಿತಿಗಳು, ಹೋರಾಟಗಾರರು ಮತ್ತು ನಿವೃತ್ತ ನ್ಯಾಯಮೂರ್ತಿಗಳು ಕೂಡಲೇ ಈ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಜಂಟಿ ಹೇಳಿಕೆಯ ಮೂಲಕ ಒತ್ತಾಯಿಸಿದ್ದಾರೆ.

ಸುಪ್ರೀಂಕೋರ್ಟ್‌ ವಿಶ್ರಾಂತ ನ್ಯಾಯಮೂರ್ತಿ ಬಿ. ಸುದರ್ಶನ ರೆಡ್ಡಿ, ರಾಜಕೀಯ ವಿಶ್ಲೇಷಕ ಪರಕಾಲ ಪ್ರಭಾಕರ್, ನಟ ಪ್ರಕಾಶ್ ರಾಜ್, ಯೋಗೇಂದ್ರ ಯಾದವ್, ಹಿರಿಯ ಗಾಂಧಿವಾದಿ ತುಷಾರ್ ಗಾಂಧಿ, ನಟ ಬಿ. ಸುರೇಶ್, ಪ್ರೊ. ಪುರುಷೋತ್ತಮ ಬಿಳಿಮಲೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಎಲ್.ಎನ್.ಮುಕುಂದರಾಜ್ ಸೇರಿದಂತೆ ಅನೇಕ ಗಣ್ಯರು ಜಂಟಿ ಪತ್ರಿಕಾ ಹೇಳಿಕೆಗೆ ಸಹಿ ಹಾಕಿದ್ದು, ಎಸ್‌ಐಆರ್ ಪ್ರಕ್ರಿಯೆಯಿಂದಾಗಿ ಚುನಾವಣಾ ಆಯೋಗವು ತನ್ನ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಇದು ಮತದಾರರನ್ನು ಪಟ್ಟಿಯಿಂದ ಹೊರದಬ್ಬುವ ಸಂಚಾಗಿದೆ ಎಂದು ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೋರ್ಟ್‌ ಮೇಲೂ ನಿರಾಸೆ

ಭಾರತದ ಚುನಾವಣಾ ಆಯೋಗವು 2025ರ ಜೂನ್‌ನಿಂದ ಎಸ್‌ಐಆರ್‌ ಪರಿಚಯಿಸಿ ಅದನ್ನು ಅನುಷ್ಠಾನಗೊಳಿಸಿದ ರೀತಿಯಿಂದಾಗಿ ಅದು ತನ್ನ ಎಲ್ಲ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಸಂವಿಧಾನದ ವಿಧಿ 324ರ ಪ್ರಕಾರ ತನ್ನ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಅದು ಸಂಪೂರ್ಣವಾಗಿ ವಿಫಲಗೊಂಡಿದೆ. ಅದೊಂದು ರಾಜಕೀಯವಾಗಿ ಪಕ್ಷಪಾತಿ ಸಂಸ್ಥೆ ಎಂಬುದು ಬಟಾಬಯಲಾಗಿದೆ. ಬಹುತೇಕ ಜನರು ಸುಪ್ರೀಂಕೋರ್ಟ್ ಮೇಲೂ ತೀವ್ರ ನಿರಾಸೆ ಹೊಂದಿದ್ದಾರೆ. ನಮ್ಮ ದೇಶದ ಮತದಾರರ ಮತ್ತು ನಾಗರಿಕರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದಿದ್ದಾರೆ.

ಚುನಾವಣಾ ಆಯೋಗದ ಮರು ಸ್ಥಾಪನೆಗೆ ಒತ್ತಾಯ

ಚುನಾವಣಾ ಆಯೋಗದ ವರ್ತನೆಯು ನಿಷ್ಪಕ್ಷಪಾತಿ ಸಂಸ್ಥೆಯಲ್ಲ, ಬದಲಾಗಿ ಆಡಳಿತದಲ್ಲಿರುವ ಸರ್ಕಾರದೊಂದಿಗೆ ರಾಜಕೀಯ ಹೊಂದಾಣಿಕೆ ಮಾಡಿಕೊಂಡಿರುವ ಸಂಸ್ಥೆ ಎಂಬುದು ಋಜುವಾತಾಗಿದೆ. ಆದುದರಿಂದ, ಈ ಆಯೋಗವನ್ನು ರದ್ದುಗೊಳಿಸಬೇಕು. ಸಮರ್ಪಕ ಪಾರದರ್ಶಕ ಹಾಗೂ ಪಕ್ಷಪಾತರಹಿತವಾಗಿ ಸಂಸತ್ತಿನ ಮೇಲ್ವಿಚಾರಣೆಯಲ್ಲಿ ದೇಶದ ಜನತೆಗೆ ಉತ್ತರದಾಯಿಯಾಗಿರುವ ಚುನಾವಣಾ ಆಯೋಗವನ್ನು ಪುನರ್‌ ಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಎಸ್‌ಐಆರ್‌ ಪಾರದರ್ಶಕವಾಗಿರಲಿ

ಎಸ್‌ಐಆರ್ ಪ್ರಕ್ರಿಯೆಯನ್ನು ಇದೇ ಸ್ವರೂಪದಲ್ಲಿ ಮುಂದುವರಿಸಲು ಸಾಧ್ಯವಿಲ್ಲ. ಅದನ್ನು ಕೂಡಲೇ ನಿಲ್ಲಿಸಬೇಕು. ಇದುವರೆಗೆ ಕೈಗೊಳ್ಳಲಾದ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪರಾಮರ್ಶಿಸಬೇಕು. ಎಸ್‌ಐಆರ್‌ ಸಂವಿಧಾನಿಕ ಮಾನ್ಯತೆ ಕುರಿತು ಸುಪ್ರೀಂಕೊರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆ ಮೊದಲು ಪೂರ್ಣಗೊಳ್ಳಬೇಕು. ನಂತರ, ಚುನಾವಣಾ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿದ್ದು, ಸಂವಿಧಾನದ ಪ್ರಜಾಪ್ರಭುತ್ವದ ತತ್ವಗಳಿಗೆ ಕಟ್ಟುನಿಟ್ಟಾಗಿ ಅನುಗುಣವಾಗಿರುವಂತೆ ಖಚಿತಪಡಿಸಬೇಕು ಎಂದು ಹೋರಾಟಗಾರರು ಹೇಳಿದ್ದಾರೆ.

ಪ್ರತಿಯೊಂದು ರಾಜ್ಯದ ಚುನಾವಣೆಗಳು ಪ್ರತಿಯೊಬ್ಬ ಮತದಾರರನ್ನೂ ಒಳಗೊಂಡಿರುವ ಮತದಾರ ಪಟ್ಟಿಯನ್ನು ಆಧರಿಸಿದ ಮುಕ್ತ, ಪಾರದರ್ಶಕ ಹಾಗೂ ನ್ಯಾಯ ಸಮ್ಮತ ರೀತಿಯಲ್ಲಿ ನಡೆಯಬೇಕೆಂದು ದೇಶದ ಮತದಾರ ಸಮೂಹ ಬಯಸುತ್ತದೆ. ಒಂದು ವೇಳೆ ಎಸ್‌ಐಆರ್ ಮುಂದುವರಿಯಬೇಕು ಎಂದಾದರೂ ಸ್ಪಷ್ಟ ನಿಯಮಗಳನ್ನು ರೂಪಿಸಿದ ನಂತರವೇ ಮುಂದುವರೆಸಬೇಕು ಎಂದು ಆಗ್ರಹಿಸಿದ್ದಾರೆ.

ಮತದಾನದ ಹಕ್ಕನ್ನು ಮರು ಸ್ಥಾಪಿಸಲಿ

ಸಿಎಜಿ ನಿಗದಿಪಡಿಸಿದ ಮಾನದಂಡಗಳ ಪ್ರಕಾರ, ಪ್ರತಿ ಗ್ರಾಮ ಸಭೆ ಹಾಗೂ ವಾರ್ಡ್ ಸಭೆಗಳಲ್ಲಿ ಕಟ್ಟುನಿಟ್ಟಿನ ಪರಿಶೀಲನೆ ಮತ್ತು ದೃಢೀಕರಣದ ವಿಧಾನಗಳನ್ನು ಅಳವಡಿಸಿಯೇ ಪಟ್ಟಿಯನ್ನು ಅಂತಿಮಗೊಳಿಸಬೇಕು. ಇದನ್ನು ಎಸ್‌ಐಆರ್ ಪೂರ್ಣಗೊಂಡಿದೆ ಎಂದು ಹೇಳಲಾಗಿರುವ ರಾಜ್ಯಗಳಲ್ಲೂ ಅನುಸಿರಸಬೇಕು. ಈ ಮೂಲಕ ಪ್ರತಿಯೊಬ್ಬ ಅರ್ಹ ಮತದಾರರನ್ನು ಮತದಾನದ ಹಕ್ಕನ್ನು ಪೂರ್ಣ ರೀತಿಯಲ್ಲಿ ಮರುಸ್ಥಾಪಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.

ಹೋರಾಟದ ಎಚ್ಚರಿಕೆ

2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮತ್ತು ನಂತರದ ಚುನಾವಣೆಗಳಲ್ಲಿ ಮಾಡಿದಂತೆ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿಯ ಚುನಾವಣಾ ಫಲಿತಾಂಶಗಳನ್ನು ತಿರುಚುವ ಪ್ರಯತ್ನ ಮಾಡಿದ್ದಲ್ಲಿ ಪರಿಣಾಮ ಗಂಭೀರವಾಗಿರಲಿದೆ. ಭಾರತದ ಪ್ರಜೆಗಳಾದ ನಾವು ಚುನಾವಣಾ ಆಯೋಗದ ಅಕ್ರಮಗಳನ್ನು ತೀವ್ರವಾಗಿ ಖಂಡಿಸುತ್ತೇವೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಇಸಿಐ ಇದೇ ರೀತಿಯ ಅಗೌರವ ತೋರುವುದನ್ನು ಮುಂದುವರೆಸಿದಲ್ಲಿ, ಅದರ ನಡತೆಯು ದೇಶವ್ಯಾಪಿ ಹೋರಾಟಕ್ಕೆ ದಾರಿ ಮಾಡಿಕೊಡಲಿದೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.

Read More
Next Story