
ಮಕ್ಕಳಿಂದ ಡಬಲ್ ಮೀನಿಂಗ್ ಹಾಡುಗಳಿಗೆ ನೃತ್ಯ ಮಾಡಿಸಿದರೆ ಮುಖ್ಯ ಶಿಕ್ಷಕರೇ ಜವಾಬ್ದಾರಿ: ಇಲಾಖೆಯ ಎಚ್ಚರಿಕೆ
ಶಾಲೆಯು ಮಗುವಿನ ಭವಿಷ್ಯಕ್ಕೆ ಅಡಿಪಾಯ ಹಾಕುವ ಕೇಂದ್ರವಾಗಿರುವುದರಿಂದ, ಅಲ್ಲಿ ನಡೆಯುವ ಪ್ರತಿ ಚಟುವಟಿಕೆಯೂ ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಉನ್ನತ ಮಟ್ಟದಲ್ಲಿರಬೇಕು ಎಂದು ಸರ್ಕಾರ ಹೇಳಿದೆ.
ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಮೇಲೆ ನಿಗಾ ಇಡಲು ಶಿಕ್ಷಣ ಇಲಾಖೆಯು ನಿರ್ದೇಶನ ನೀಡಿದೆ. ಇತ್ತೀಚಿನ ದಿನಗಳಲ್ಲಿ ಶಾಲಾ ಕಾರ್ಯಕ್ರಮಗಳಲ್ಲಿ ಮಕ್ಕಳು ಅಶ್ಲೀಲ ಹಾಡುಗಳಿಗೆ ಮತ್ತು ಸಂಸ್ಕೃತಿಗೆ ಹೊಂದಿಕೆಯಾಗದ ರೀತಿಯಲ್ಲಿ ನೃತ್ಯ ಮಾಡುವುದು ಹೆಚ್ಚುತ್ತಿರುವುದನ್ನು ಗಮನಿಸಿ ಮೇರೆಗೆ ಸರ್ಕಾರವು ಈ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದೆ. ಈ ಮೂಲಕ ರಾಜ್ಯದ ಶೈಕ್ಷಣಿಕ ವಾತಾವರಣದಲ್ಲಿ ನೈತಿಕತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಹೊರಡಿಸಿರುವ ಈ ಸುತ್ತೋಲೆಯು ಅತ್ಯಂತ ಮಹತ್ವದ್ದಾಗಿದೆ.
ಶಾಲೆ ಎಂಬುದು ಕೇವಲ ಪಠ್ಯಪುಸ್ತಕದ ಜ್ಞಾನ ನೀಡುವ ಸ್ಥಳವಲ್ಲ, ಬದಲಾಗಿ ಅದು ಮಗುವಿನ ವ್ಯಕ್ತಿತ್ವ ರೂಪಿಸುವ ತಾಣ. ಮಗುವಿನ ಬೆಳವಣಿಗೆಯಲ್ಲಿ ಸಂಸ್ಕಾರ, ವಿನಯತೆ, ಉತ್ತಮ ನಡತೆ, ಮಾನಸಿಕ ಸ್ಥಿತಿ ಮತ್ತು ನೈತಿಕ ಮೌಲ್ಯಗಳು ಅತ್ಯಗತ್ಯ. ಈ ಎಲ್ಲಾ ಗುಣಗಳು ಮಗುವಿನಲ್ಲಿ ಶಾಲಾ ಪರಿಸರದಲ್ಲಿ ಮೊಳಕೆಯೊಡೆಯುತ್ತದೆ. ಶಾಲೆಯು ಮಗುವಿನ ಭವಿಷ್ಯಕ್ಕೆ ಅಡಿಪಾಯ ಹಾಕುವ ಕೇಂದ್ರವಾಗಿರುವುದರಿಂದ, ಅಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯೂ ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಉನ್ನತ ಮಟ್ಟದಲ್ಲಿರಬೇಕು ಎಂದು ಸರ್ಕಾರ ಹೇಳಿದೆ.
ಸಮಸ್ಯೆಯ ಸ್ವರೂಪ ಹಾಗೂ ಪರಿಣಾಮಗಳು
ಇತ್ತೀಚಿನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಶ್ಲೀಲ ಭಾವನೆಗಳನ್ನು ಕೆರಳಿಸುವ ಸಿನಿಮಾ ಹಾಡುಗಳಿಗೆ ಮಕ್ಕಳನ್ನು ಕುಣಿಸುವುದು ಕಂಡುಬರುತ್ತಿದೆ. ಇದರಿಂದ ಉಂಟಾಗುವ ದುಷ್ಪರಿಣಾಮಗಳು ಉಂಟಾಗುತ್ತಿವೆ. ಚಿಕ್ಕ ವಯಸ್ಸಿನ ಮಕ್ಕಳು ಅಶ್ಲೀಲ ಪದಗಳ ಅರ್ಥ ತಿಳಿಯದಿದ್ದರೂ ಆ ಹಾಡುಗಳಿಗೆ ನರ್ತಿಸುವುದರಿಂದ ಅವರ ಮುಗ್ಧತೆ ನಾಶವಾಗುತ್ತದೆ. ಶಾಲೆಯಲ್ಲಿ ಸಿಗಬೇಕಾದ ಶಿಸ್ತು ಮತ್ತು ಸಂಸ್ಕೃತಿಯ ಬದಲಿಗೆ ಅನಗತ್ಯ ಚಟುವಟಿಕೆಗಳು ಮಕ್ಕಳ ನಡವಳಿಕೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಜ್ಞಾನಾರ್ಜನೆಯ ಕೇಂದ್ರಗಳು ಕೇವಲ ಮನರಂಜನೆಯ ಕೇಂದ್ರಗಳಾಗಿ ಬದಲಾಗುವುದು ಶಿಕ್ಷಣದ ಮೂಲ ಉದ್ದೇಶಕ್ಕೆ ಮಾರಕವಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಸರ್ಕಾರದ ಪ್ರಮುಖ ನಿರ್ದೇಶನಗಳು
ಸರ್ಕಾರವು ಈ ಪರಿಸ್ಥಿತಿಯನ್ನು ಸುಧಾರಿಸಲು ಐದು ಪ್ರಮುಖ ಮಾರ್ಗಸೂಚಿಗಳನ್ನು ಅನುಷ್ಠಾನಕ್ಕೆ ತಂದಿದೆ. ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಮಾರಂಭಗಳಲ್ಲಿ ಅಶ್ಲೀಲ ಅಥವಾ ದ್ವಂದ್ವಾರ್ಥವಿರುವ ಹಾಡುಗಳಿಗೆ ಮಕ್ಕಳಿಂದ ನೃತ್ಯ ಮಾಡಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಮಕ್ಕಳಲ್ಲಿ ರಾಷ್ಟ್ರಾಭಿಮಾನ, ನಾಡಪ್ರೇಮ ಮತ್ತು ಸಕಾರಾತ್ಮಕತೆಯನ್ನು ಮೂಡಿಸುವ ಹಾಡುಗಳನ್ನು ಆರಿಸಿಕೊಳ್ಳಬೇಕು. ಕನ್ನಡ ನಾಡಿನ ಹಿರಿಮೆ, ಗರಿಮೆ ಮತ್ತು ಮೌಲ್ಯಾಧಾರಿತ ಹಾಡುಗಳಿಗೆ ಆದ್ಯತೆ ನೀಡಬೇಕು. ಮಕ್ಕಳಲ್ಲಿ ನೈತಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವಂತಹ ಸಾಹಿತ್ಯದ ಹಾಡುಗಳನ್ನೇ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಬೇಕು. ಹಾಡುಗಳು ಮತ್ತು ನೃತ್ಯಗಳ ಆಯ್ಕೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿಯೇ ನೇರ ಜವಾಬ್ದಾರರಾಗಿರುತ್ತಾರೆ. ಯಾವುದೇ ತಪ್ಪುಗಳಾದಲ್ಲಿ ಇವರನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ನೃತ್ಯ ಅಥವಾ ಯಾವುದೇ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸುವ ಮಕ್ಕಳು ಸಭ್ಯವಾದ ಮತ್ತು ಸಂಸ್ಕೃತಿಗೆ ಪೂರಕವಾದ ಉಡುಪುಗಳನ್ನು ಧರಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ರಾಜ್ಯದ ಎಲ್ಲಾ ಉಪನಿರ್ದೇಶಕರು (ಆಡಳಿತ) ಈ ಬಗ್ಗೆ ನಿಗಾ ವಹಿಸಲು ಸೂಚಿಸಲಾಗಿದೆ. ಒಂದು ವೇಳೆ ಯಾವುದಾದರೂ ಶಾಲೆಯಲ್ಲಿ ಅಶ್ಲೀಲ ಹಾಡುಗಳಿಗೆ ಮಕ್ಕಳಿಂದ ನೃತ್ಯ ಮಾಡಿಸುವುದು ಕಂಡುಬಂದಲ್ಲಿ, ಅಂತಹ ಶಾಲೆಯ ಮುಖ್ಯೋಪಾಧ್ಯಾಯರ ಮೇಲೆ ಮತ್ತು ಆಡಳಿತ ಮಂಡಳಿಯ ಮೇಲೆ ಕಾನೂನು ಅಥವಾ ಇಲಾಖಾ ರೀತಿಯ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ಆದೇಶದ ಸಾಮಾಜಿಕ ಮಹತ್ವ
ಸರ್ಕಾರದ ನಿರ್ಧಾರವು ಕೇವಲ ಶಿಕ್ಷಣ ಇಲಾಖೆಯ ಆಡಳಿತಾತ್ಮಕ ಬದಲಾವಣೆಯಲ್ಲ, ಇದು ಸಮಾಜದ ಸ್ವಾಸ್ಥ್ಯವನ್ನು ಕಾಯುವಲ್ಲಿ ಇಟ್ಟಿರುವ ದೊಡ್ಡ ಹೆಜ್ಜೆ. ಇಂದು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಮಕ್ಕಳು ಬೇಗನೆ ದಾರಿ ತಪ್ಪುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಶಾಲೆಗಳು ದಾರಿದೀಪವಾಗಬೇಕು. ನಾಡಿನ ಸಂಸ್ಕೃತಿ, ಜಾನಪದ ಕಲೆ ಮತ್ತು ದೇಶಪ್ರೇಮದ ಹಾಡುಗಳಿಗೆ ಒತ್ತು ನೀಡುವುದರಿಂದ ಮಕ್ಕಳು ತಮ್ಮ ಬೇರುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎನ್ನಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮ ಮೌಲ್ಯಾಧಾರಿತವಾಗಿರುವುದು ಅಗತ್ಯ
ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಕಟಪೂರ್ವ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ., ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಮಕ್ಕಳಿಂದ ಅಶ್ಲೀಲ ಅಥವಾ ಅಸಭ್ಯ ಹಾಡುಗಳಿಗೆ ನೃತ್ಯ ಮಾಡಿಸುವ ಪ್ರವೃತ್ತಿಯನ್ನು ನಿಷೇಧಿಸುವಂತೆ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶ ಸ್ವಾಗತಾರ್ಹ ಕ್ರಮವಾಗಿದೆ. ಶಾಲೆಗಳು ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಪವಿತ್ರ ವೇದಿಕೆಗಳಾಗಿದ್ದು, ಇಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮೌಲ್ಯಾಧಾರಿತವಾಗಿರಬೇಕು. ಮಕ್ಕಳ ಮನೋವಿಕಾಸದ ಮೇಲೆ ದುಷ್ಪರಿಣಾಮ ಬೀರುವಂತಹ ವಿಷಯಗಳಿಗೆ ಅವಕಾಶ ನೀಡದೇ, ಸಂಸ್ಕೃತಿ, ಶಿಷ್ಟತೆ ಮತ್ತು ಸೃಜನಾತ್ಮಕತೆಯನ್ನು ಉತ್ತೇಜಿಸುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವುದು ಅತ್ಯಂತ ಅಗತ್ಯ. ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದರೊಂದಿಗೆ ಶಿಕ್ಷಕರು ಹಾಗೂ ಪೋಷಕರು ಸಹ ಜಾಗೃತಿಯಿಂದ ನಡೆದುಕೊಳ್ಳಬೇಕು ಎಂದರು.

