
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ನಿವಾಸ ಹಾಗೂ ಕಚೇರಿಗಳಲ್ಲಿ ಜಾರಿ ನಿರ್ದೇಶನಾಲಯದ (ED) ಶೋಧ ಕಾರ್ಯಾಚರಣೆ ಗುರುವಾರವೂ ಮುಂದುವರಿದಿದೆ.
ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಇ.ಡಿ ದಾಳಿ; 15 ಕಡೆ ಶೋಧ
ಸತೀಶ್ ಜಾರಕಿಹೊಳಿ ಈ ಹಿಂದೆ ತಮ್ಮ ಸಚಿವ ಸ್ಥಾನದ ಪ್ರಭಾವ ಬಳಸಿ 18 ಬಾರ್‌ಗಳಿಗೆ ನಿಯಮಬಾಹಿರವಾಗಿ ಲೈಸೆನ್ಸ್ ಕೊಡಿಸಲು ನೆರವಾಗಿದ್ದರು ಎಂಬ ಆರೋಪ ಕೇಳಿಬಂದಿದೆ.
ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಗಳೂರಿನ ನಿವಾಸ ಸೇರಿದಂತೆ ರಾಜ್ಯ ಹಾಗೂ ಮಹಾರಾಷ್ಟ್ರದ ವಿವಿಧೆಡೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು, ಬೆಳಗಾವಿ ಹಾಗೂ ಮಹಾರಾಷ್ಟ್ರ ಸೇರಿದಂತೆ ಸುಮಾರು 15 ಸ್ಥಳಗಳಲ್ಲಿ ಇ.ಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ಮಂಜುನಾಥ್ ಎಂಬವರಿಗೆ ಸಂಬಂಧಿಸಿದ ಅಬಕಾರಿ ಅಕ್ರಮ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೀಗ ಅದೇ ಪ್ರಕರಣದ ಮುಂದುವರಿದ ತನಿಖೆಯ ಭಾಗವಾಗಿ ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲೂ ಶೋಧ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
18 ಬಾರ್ ಲೈಸೆನ್ಸ್ ನೀಡಿಕೆಯಲ್ಲಿ ಪ್ರಭಾವ ಬಳಕೆ ಆರೋಪ
ಈ ದಾಳಿಯು ಮೂಲತಃ ಸತೀಶ್ ಜಾರಕಿಹೊಳಿ ಅವರ ಬಾಮೈದ ಮಂಜುನಾಥ್ ಅವರಿಗೆ ಸಂಬಂಧಿಸಿದ್ದು ಎನ್ನಲಾಗಿದೆ. ಮಂಜುನಾಥ್ ವಿರುದ್ಧ ಈ ಹಿಂದೆಯೂ ಅಬಕಾರಿ ಅಕ್ರಮಗಳಿಗೆ ಸಂಬಂಧಿಸಿದಂತೆ ಇಡಿ ಶೋಧ ನಡೆಸಿತ್ತು. ಸತೀಶ್ ಜಾರಕಿಹೊಳಿ ಅವರು ಸಚಿವರಾಗಿದ್ದ ಪ್ರಭಾವ ಬಳಸಿ ನಿಯಮಬಾಹಿರವಾಗಿ ಬರೋಬ್ಬರಿ 18 ಬಾರ್‌ಗಳಿಗೆ ಅನಧಿಕೃತ ಲೈಸೆನ್ಸ್ ಕೊಡಿಸಲು ಸಹಾಯ ಮಾಡಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ವಿದೇಶಿ ಹಣ ಹೂಡಿಕೆಗೆ ನೆರವು ನೀಡಿದ ಆರೋಪ
ಇದರ ಜೊತೆಗೆ, ವಿದೇಶದಲ್ಲಿ ಹಣ ಹೂಡಿಕೆ ಮಾಡಲು ಸತೀಶ್ ಜಾರಕಿಹೊಳಿ ಅವರು ನೆರವು ನೀಡಿದ್ದರು ಎಂಬ ಆರೋಪವೂ ತನಿಖೆಯಲ್ಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 3 ಕೋಟಿ ರೂ. ಮೌಲ್ಯದ ಅಕ್ರಮ ವಿದೇಶಿ ಹಣ ಪತ್ತೆಯಾಗಿತ್ತು ಎನ್ನಲಾಗಿದೆ.
ಬಾರ್ ವ್ಯವಹಾರದಿಂದ ಅಕ್ರಮ ಹಣ ವರ್ಗಾವಣೆ ಆರೋಪ
ಬಾರ್ ಲೈಸೆನ್ಸ್‌ಗಳ ಮೂಲಕ ಸಂಗ್ರಹವಾದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪವೂ ಪ್ರಕರಣದಲ್ಲಿದೆ. ಈ ಹಣದ ವಹಿವಾಟು ಹಾಗೂ ಲೈಸೆನ್ಸ್ ಮಂಜೂರಾತಿಯಲ್ಲಿನ ಅಕ್ರಮಗಳ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಲು ಇ.ಡಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿಯ ವೇಳೆ ದಾಖಲೆಗಳು, ಹಣಕಾಸು ವಹಿವಾಟಿನ ವಿವರಗಳು ಹಾಗೂ ಇತರ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ, ಸತೀಶ್ ಜಾರಕಿಹೊಳಿ ವಿರುದ್ಧ ಕೇಳಿಬಂದಿರುವ ಆರೋಪಗಳು ತನಿಖೆಯ ಹಂತದಲ್ಲಿದ್ದು, ಅವುಗಳು ಇನ್ನೂ ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ.

