ED Raids: ಆಫ್ರಿಕ ದೇಶಗಳಲ್ಲಿ ಗಣಿ ಪಾಲುದಾರಿಕೆ, ಟೆಂಡರ್ ಹಗರಣ ಮತ್ತು ಲಂಚದ ಹಣ ಸಾಗಾಟ! ಜಾರಕಿಹೊಳಿ ತನಿಖೆಯಲ್ಲಿ ಬಯಲು?
ಜಾರಕಿಹೊಳಿ ಕುಟುಂಬವು ಆಫ್ರಿಕಾ ಖಂಡದ ಕಾಂಗೋದಲ್ಲಿರುವ ಮೆಸರ್ಸ್ ಎಲ್ಡೊರಾಡೊ ಮೈನಿಂಗ್ ರಿಸೋರ್ಸಸ್ ಹಾಗೂ ಜಾಂಬಿಯಾದ ಮೆಸರ್ಸ್ ನವ ಔರಮ್ ಮೈನಿಂಗ್ ಲಿಮಿಟೆಡ್ ಸೇರಿದಂತೆ ಹಲವು ವಿದೇಶಿ ಸಂಸ್ಥೆಗಳಲ್ಲಿ ಷೇರುಗಳನ್ನು ಹೊಂದಿರುವುದು ಪತ್ತೆಯಾಗಿದೆ.
ಕರ್ನಾಟಕದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತ ವಲಯದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ಬೃಹತ್ ಶೋಧ ಕಾರ್ಯಾಚರಣೆಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಹಣಕಾಸು ವಹಿವಾಟು ಹಾಗೂ ವಿದೇಶಿ ಗಣಿಗಳಲ್ಲಿನ ಬಂಡವಾಳ ಹೂಡಿಕೆಯ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ.
ಫೆಮಾ (FEMA - ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ) ಉಲ್ಲಂಘನೆ ಆರೋಪದಡಿ ಸೆಪ್ಟೆಂಬರ್ 9 ಮತ್ತು 10ರಂದು ಸಚಿವರು, ಅವರ ಕುಟುಂಬಸ್ಥರು ಹಾಗೂ ಆಪ್ತರಿಗೆ ಸೇರಿದ ಬೆಂಗಳೂರು, ಬೆಳಗಾವಿ, ಗೋಕಾಕ್ ಮತ್ತು ಕೋಲ್ಕತ್ತಾದ ಒಟ್ಟು 21 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿರುವ ಅಧಿಕಾರಿಗಳು, ಅಕ್ರಮ ಸಂಪತ್ತಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಸಚಿವರ ಪುತ್ರಿ ಹಾಗೂ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ ಹಾಗೂ ಸಚಿವರ ಸಹೋದರಿ ಮಹಾದೇವಿ ಅವರ ಪತಿ ವೈ.ಡಿ. ಮಂಜುನಾಥ್ ಅವರಿಗೆ ಸೇರಿದ ಸ್ಥಳಗಳಲ್ಲಿ ತಪಾಸಣೆ ನಡೆಸಲಾಗಿದೆ.
ಈ ವೇಳೆ ಜಾರಕಿಹೊಳಿ ಕುಟುಂಬವು ಆಫ್ರಿಕಾ ಖಂಡದ ಕಾಂಗೋದಲ್ಲಿರುವ ಮೆಸರ್ಸ್ ಎಲ್ಡೊರಾಡೊ ಮೈನಿಂಗ್ ರಿಸೋರ್ಸಸ್ ಹಾಗೂ ಜಾಂಬಿಯಾದ ಮೆಸರ್ಸ್ ನವ ಔರಮ್ ಮೈನಿಂಗ್ ಲಿಮಿಟೆಡ್ ಸೇರಿದಂತೆ ಹಲವು ವಿದೇಶಿ ಸಂಸ್ಥೆಗಳಲ್ಲಿ ಷೇರುಗಳನ್ನು ಹೊಂದಿರುವುದು ಪತ್ತೆಯಾಗಿದೆ. ಸ್ವತಃ ಸತೀಶ್ ಜಾರಕಿಹೊಳಿ ಅವರು ಕಾಂಗೋದ ಚಿನ್ನದ ಗಣಿಗಾರಿಕೆ ಕಂಪನಿ ಮೆಸರ್ಸ್ ಮ್ಯಾಗ್ನಿಟ್ಯೂಡ್ ಸ್ಟಾರ್ ಎಸ್ಎಆರ್ಎಲ್ನಲ್ಲಿ ಶೇ.40ರಷ್ಟು ಪಾಲುದಾರಿಕೆ ಹೊಂದಿರುವುದು ಶೋಧ ಕಾರ್ಯಾಚರಣೆ ವೇಳೆ ದೃಢಪಟ್ಟಿದೆ. ಇದಕ್ಕೆ ಸಂಬಂಧಿಸಿದ ಆಫ್ರಿಕನ್ ಗಣಿಗಾರಿಕೆ ಆಸ್ತಿಗಳ ಅಸಂಖ್ಯಾತ ದಾಖಲೆಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಟೆಂಡರ್ ಹಗರಣ ಮತ್ತು ಲಂಚದ ಹಣ ಸಾಗಾಟ
ಲೋಕೋಪಯೋಗಿ ಇಲಾಖೆಯಲ್ಲಿ ಟೆಂಡರ್ ಪಡೆಯಲು ಖಾಸಗಿ ಕಂಪನಿಯಾದ ಮೆಸರ್ಸ್ ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈವೇಟ್ ಲಿಮಿಟೆಡ್ ಭಾರಿ ಪ್ರಮಾಣದ ಲಂಚ ಪಾವತಿಸಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಲಂಚದ ಹಣವನ್ನೇ ವಿದೇಶಿ ಆಸ್ತಿಗಳ ಖರೀದಿಗೆ ಬಳಸಿಕೊಳ್ಳಲಾಗಿದೆ ಎನ್ನುವ ಸುಳಿವು ಆಧರಿಸಿ ಬಿವಿಇಪಿಎಲ್ ಕಚೇರಿ ಹಾಗೂ ಮಾಲೀಕರ ಮನೆಗಳ ಮೇಲೂ ಅಧಿಕಾರಿಗಳು ಕಣ್ಣಿಟ್ಟಿದ್ದರು. ಲಂಚದ ಹಣ ಸಂಗ್ರಹಣೆಗೆ ಸಂಬಂಧಿಸಿದಂತೆ ಸಚಿವರ ಆಪ್ತ ಸಹಾಯಕ ಮಲಗೌಡ ಪಾಟೀಲ್, ಒಎಸ್ಡಿ ಸೇರಿದಂತೆ ರಾಜು ದರಗಶೆಟ್ಟಿ, ವಿಠ್ಠಲ್ ಪರಸನ್ನವರ್ ಮತ್ತು ಡಾ. ಗಿರೀಶ್ ಸೋನ್ವಾಲ್ಕರ್ ಅವರ ನಿವಾಸಗಳ ಮೇಲೂ ದಾಳಿ ನಡೆದಿದ್ದು, ಪಿಡಬ್ಲ್ಯೂಡಿ ಇಲಾಖೆಯ ಭ್ರಷ್ಟಾಚಾರವನ್ನು ಸಾಬೀತುಪಡಿಸುವ ಡಿಜಿಟಲ್ ಸಾಕ್ಷ್ಯಗಳು ಲಭ್ಯವಾಗಿವೆ.
ನಗದು, ವಿದೇಶಿ ಕರೆನ್ಸಿ ಮತ್ತು ಮಹತ್ವದ ದಾಖಲೆಗಳ ಜಪ್ತಿ
ಸಚಿವರ ಗೋಕಾಕ್ ನಿವಾಸ, ಡಾಲರ್ಸ್ ಕಾಲೋನಿ ಮನೆ ಮತ್ತು ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಕಚೇರಿ-ನಿವಾಸದ ಮೇಲೆ ನಡೆದ ಕಾರ್ಯಾಚರಣೆ ವೇಳೆ 3.3 ಕೋಟಿ ರೂಪಾಯಿಗಳ ಲೆಕ್ಕಕ್ಕೆ ಸಿಗದ ನಗದು ಹಾಗೂ ಅಮೆರಿಕನ್ ಡಾಲರ್, ಯುರೋ ಒಳಗೊಂಡಂತೆ 15 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿಯನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದೆ. ಅನಧಿಕೃತ ಮಾರ್ಗಗಳ ಮೂಲಕ ಕಾಂಗೋ ದೇಶದ ಸಂಸ್ಥೆಯೊಂದಕ್ಕೆ ನಗದು ರೂಪದಲ್ಲಿಯೇ ಭಾರಿ ಮೊತ್ತದ ಹಣ ರವಾನೆಯಾಗಿರುವ ಬಗ್ಗೆ ನಿಖರ ಸಾಕ್ಷ್ಯಗಳು ದೊರೆತಿವೆ. ಸಚಿವರ ಭಾವ ವೈ.ಡಿ. ಮಂಜುನಾಥ್ ನಿಯಂತ್ರಣದಲ್ಲಿರುವ ಖಾತೆಗಳು ಸೇರಿದಂತೆ ಹಲವು ಪ್ರಭಾವಿಗಳ ಖಾತೆಗಳ ಮೂಲಕ ಈ ಹಣದ ವಹಿವಾಟು ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದ್ದು, ಅಧಿಕಾರಿಗಳು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

