
ಅಬಕಾರಿ ಅಧಿಕಾರಿಯಿಂದ ಸಿಂಡಿಕೇಟ್ ಜಾಲ: 13.3 ಕೋಟಿ ನಗದು, ಚಿನ್ನ ಇಡಿ ಜಪ್ತಿ
ಸಚಿವ ಸತೀಶ್ ಜಾರಕಿಹೊಳಿ ಭಾವ ಮತ್ತು ಅಬಕಾರಿ ಇಲಾಖೆ ಹಿರಿಯ ಅಧಿಕಾರಿ ವೈ.ಡಿ. ಮಂಜುನಾಥ್‌ಗೆ ಸೇರಿದ ಸ್ಥಳ ಸೇರಿ ಬೆಂಗಳೂರು, ಮೈಸೂರು, ಬೆಳಗಾವಿ ಜಿಲ್ಲೆಯ 14 ಸ್ಥಳಗಳಲ್ಲಿ ಏಕಕಾಲಕ್ಕೆ ಇಡಿ ದಾಳಿ ನಡೆಸಲಾಗಿತ್ತು.
ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಅಬಕಾರಿ ಇಲಾಖೆಯು ವಿವಾದದ ಕೇಂದ್ರಬಿಂದುವಾಗಿದ್ದು, ಜಾರಿ ನಿರ್ದೇಶನಾಲಯ ಅಧಿಕಾರಿಗಳು ರಾಜ್ಯದ ಅಬಕಾರಿ ಇಲಾಖೆಯ ಉನ್ನತ ಅಧಿಕಾರಿಗಳ ಮೇಲೆ ನಡೆಸಿದ ದಿಢೀರ್ ದಾಳಿಗಳು, ಆಡಳಿತ ಯಂತ್ರದೊಳಗೆ ಬೇರೂರಿರುವ ಭ್ರಷ್ಟಾಚಾರದ ಅಸಲಿ ಮುಖವನ್ನು ತೆರೆದಿಟ್ಟಿವೆ.
ರಾಜ್ಯದ 14 ಕಡೆ ನಡೆಸಿದ್ದ ದಾಳಿ ವೇಳೆ ಅಬಕಾರಿ ಇಲಾಖೆ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತ ಮತ್ತು ಲೋಕೋಕಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭಾವ ವೈ.ಡಿ.ಮಂಜುನಾಥ್, ಅವರ ಚಾಲಕ, ಕುಟುಂಬದ ಸದಸ್ಯರು ಹಾಗೂ ಸಹಚರರ ಬಳಿ 13.3 ಕೋಟಿ ರೂ. ಆದಾಯ ಪತ್ತೆಯಾಗಿದೆ. ಅಲ್ಲದೇ, ಸಂಘಟಿತ ಸಿಂಡಿಕೇಟ್ ಜಾಲ ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿರುವುದು ಇಡಿ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಲೋಕಾಯುಕ್ತ ಪೊಲೀಸರು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳ ವಿರುದ್ಧ ದಾಖಲಿಸಿದ್ದ ಎಫ್‌ಐಆರ್ ಆಧಾರದ ಮೇಲೆ, ಜಾರಿ ನಿರ್ದೇಶನಾಲಯವು ಪಿಎಂಎಲ್‌ಎ 2002 ಕಾಯ್ದೆಯ ಅಡಿಯಲ್ಲಿ ತನಿಖೆಯನ್ನು ಕೈಗೆತ್ತಿಕೊಂಡಿತು. ಈ ತನಿಖೆಯ ಭಾಗವಾಗಿ ರಾಜ್ಯದ ಬೆಂಗಳೂರು, ಮೈಸೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿರುವ ಸುಮಾರು 14 ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯಾಚರಣೆ ನಡೆಯಿತು. ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿ ವೈ.ಡಿ. ಮಂಜುನಾಥ್ ಸೇರಿದಂತೆ ಇತರರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಲಾಯಿತು.
'ಸಿಂಡಿಕೇಟ್' ಮಾದರಿಯ ಭ್ರಷ್ಟಾಚಾರದ ಜಾಲ
ಇಡಿ ಮಾಹಿತಿ ಪ್ರಕಾರ, ಇದು ಯಾವುದೇ ವೈಯಕ್ತಿಕ ಭ್ರಷ್ಟಾಚಾರವಲ್ಲ. ಬದಲಾಗಿ, ಇದು ಇಲಾಖೆಯನ್ನೇ ಒಂದು 'ಖಾಸಗಿ ಸಿಂಡಿಕೇಟ್' ಆಗಿ ಬದಲಾಯಿಸಿಕೊಂಡು ನಡೆಸುತ್ತಿದ್ದ ವ್ಯವಸ್ಥಿತ ಅಪರಾಧವಾಗಿದೆ. ಇಲಾಖೆಯ ಅಧಿಕಾರಿಗಳು ನೇರವಾಗಿ ಲಂಚ ಪಡೆಯುವ ಬದಲು, ಮಧ್ಯವರ್ತಿಗಳು ಮತ್ತು ಖಾಸಗಿ ವ್ಯಕ್ತಿಗಳನ್ನು ಒಳಗೊಂಡ ಒಂದು ಬಲವಾದ ಜಾಲವನ್ನು ಸೃಷ್ಟಿಸಿಕೊಂಡಿದ್ದರು. ಮದ್ಯದ ಅಂಗಡಿಗಳ ಮಾಲೀಕರಿಂದ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತದ ಹಫ್ತಾ ವಸೂಲಿ ಮಾಡಲಾಗುತ್ತಿತ್ತು. ಹೊಸ ಮದ್ಯದ ಪರವಾನಗಿಗಳನ್ನು ನೀಡುವಾಗ, ಹಳೆಯ ಪರವಾನಗಿಗಳನ್ನು ನವೀಕರಿಸುವಾಗ ಮತ್ತು ಮದ್ಯದ ಅಂಗಡಿಗಳನ್ನು ಸ್ಥಳಾಂತರ ಮಾಡುವಾಗ ಕೋಟ್ಯಂತರ ರೂಪಾಯಿಗಳ ಲಂಚವನ್ನು ಬೇಡಿಕೆ ಇಡಲಾಗುತ್ತಿತ್ತು. ಈ ಹಗರಣದ ಅತಿ ದೊಡ್ಡ ಪುರಾವೆಯೆಂದರೆ, ಅಧಿಕಾರಿಗಳು ನಿರ್ವಹಿಸುತ್ತಿದ್ದ ರಹಸ್ಯ ನಗದು ಪುಸ್ತಕ. ಇದರಲ್ಲಿ ಲಂಚದ ಹಣವನ್ನು ಯಾರಿಂದ ಪಡೆದರು, ಎಷ್ಟು ಪಡೆದರು ಮತ್ತು ಯಾರಿಗೆ ತಲುಪಿಸಿದರು ಎಂಬುದನ್ನು ಅಕ್ಷರಶಃ ನಮೂದಿಸಲಾಗಿತ್ತು. ಇ.ಡಿ. ಅಧಿಕಾರಿಗಳು ದಾಳಿಯ ವೇಳೆ ಈ ಪುಸ್ತಕವನ್ನು ವಶಪಡಿಸಿಕೊಂಡಿದ್ದು, ತನಿಖೆಗೆ ದೊಡ್ಡ ಬಲ ಬಂದಿದೆ.
ವೈ.ಡಿ. ಮಂಜುನಾಥ್ ಮತ್ತು ಅವರ ಬೆನಾಮಿ ಸಾಮ್ರಾಜ್ಯ
ಬೆಳಗಾವಿ ವಿಭಾಗದ ಹೆಚ್ಚುವರಿ ಅಬಕಾರಿ ಆಯುಕ್ತರಾಗಿರುವ ವೈ.ಡಿ. ಮಂಜುನಾಥ್ ಅವರ ಹೆಸರು ಈ ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿಬಂದಿದೆ. ಅವರ ಚಾಲಕ, ಕುಟುಂಬದ ಸದಸ್ಯರು ಮತ್ತು ನಿಕಟವರ್ತಿಗಳ ಮೂಲಕ ಅವರು ನಡೆಸುತ್ತಿದ್ದ ಆರ್ಥಿಕ ವಹಿವಾಟುಗಳು ಅಚ್ಚರಿ ಮೂಡಿಸುವಂತಿವೆ. ಕುಟುಂಬ ಸದಸ್ಯರ ಹೆಸರಿನಲ್ಲಿಯೇ ಮದ್ಯದ ಪರವಾನಗಿಗಳನ್ನು ಪಡೆದು, ಅಕ್ರಮವಾಗಿ ಮದ್ಯದ ವ್ಯವಹಾರ ನಡೆಸುತ್ತಿದ್ದರು. ಆ ವ್ಯವಹಾರಗಳಿಂದ ಬಂದ ಲಾಭವನ್ನು ಕಾನೂನುಬದ್ಧ ಆದಾಯ ಎಂದು ತೋರಿಸಿ, ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಬದಲಾಯಿಸುತ್ತಿದ್ದದ್ದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಇಡಿ ಹೇಳಿದೆ.
ದಾಳಿಯಲ್ಲಿ ಸಿಕ್ಕಿದ ಭಾರಿ ನಗದು ಮತ್ತು ಚಿನ್ನ
ಇ.ಡಿಯ ದಾಳಿಯು ಅಬಕಾರಿ ಇಲಾಖೆಯ ಭ್ರಷ್ಟಾಚಾರದ ಪ್ರಮಾಣ ಎಷ್ಟರ ಮಟ್ಟಿಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. 5.5 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. ಸುಮಾರು 7.8 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಜಪ್ತಿ ಮಾಡಲಾಗಿದೆ. 3.3 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಹಣವೂ ಪತ್ತೆಯಾಗಿದೆ.
ಒಟ್ಟಾರೆಯಾಗಿ, ಈವರೆಗೆ 13.3 ಕೋಟಿ ರೂಪಾಯಿ ಮೌಲ್ಯದ ಅಪರಾಧದ ಆದಾಯ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣವು ಸರ್ಕಾರಿ ಸೇವಾ ನಿಯಮಗಳ ಉಲ್ಲಂಘನೆ ಮಾತ್ರವಲ್ಲದೆ, ಗಂಭೀರ ಅಪರಾಧವಾಗಿದೆ. ಸರ್ಕಾರದ ಬೊಕ್ಕಸಕ್ಕೆ ಸೇರಬೇಕಿದ್ದ ಆದಾಯವು ಭ್ರಷ್ಟ ಅಧಿಕಾರಿಗಳ ಜೇಬು ಸೇರುತ್ತಿರುವುದು ರಾಜ್ಯದ ಆರ್ಥಿಕತೆಗೆ ದೊಡ್ಡ ಹೊಡೆತವಾಗಿದೆ.
ವೈ.ಡಿ. ಮಂಜುನಾಥ್ ಅವರು ಪ್ರಭಾವಿ ರಾಜಕೀಯ ಕುಟುಂಬದ ಸಂಬಂಧಿಕರಾಗಿರುವುದರಿಂದ, ಈ ಪ್ರಕರಣವು ರಾಜಕೀಯ ವಲಯದಲ್ಲೂ ಸಂಚಲನ ಮೂಡಿಸಿದೆ. ತನಿಖೆಯು ಯಾವ ಹಂತಕ್ಕೆ ಹೋಗಲಿದೆ ಮತ್ತು ಯಾರ್ಯಾರನ್ನು ಬಲೆಗೆ ಬೀಳಿಸಲಿದೆ ಎಂಬುದು ಸದ್ಯದ ಕುತೂಹಲ. ಇ.ಡಿ. ವಶಪಡಿಸಿಕೊಂಡಿರುವ ಡಿಜಿಟಲ್ ಸಾಧನಗಳು (ಲ್ಯಾಪ್‌ಟಾಪ್, ಮೊಬೈಲ್, ಹಾರ್ಡ್ ಡಿಸ್ಕ್) ತನಿಖೆಯ ದಿಕ್ಕನ್ನೇ ಬದಲಾಯಿಸಬಲ್ಲವು. ಇದರಲ್ಲಿರುವ ಇಮೇಲ್‌ಗಳು ಮತ್ತು ವಾಟ್ಸಾಪ್ ಚಾಟ್‌ಗಳು ಭ್ರಷ್ಟಾಚಾರದ ಜಾಲದ ಉನ್ನತ ಮಟ್ಟದ ನಾಯಕರನ್ನೂ ಬಯಲಿಗೆಳೆಯುವ ಸಾಧ್ಯತೆಯಿದೆ.
ಪ್ರಸ್ತುತ, ಜಾರಿ ನಿರ್ದೇಶನಾಲಯವು ವಶಪಡಿಸಿಕೊಂಡ ದಾಖಲೆಗಳ ವಿಶ್ಲೇಷಣೆ ನಡೆಸುತ್ತಿದೆ. ಕೇವಲ ಅಧಿಕಾರಿಗಳಷ್ಟೇ ಅಲ್ಲದೆ, ಈ ವ್ಯವಸ್ಥೆಯಲ್ಲಿ ಭಾಗಿಯಾದ ಮಧ್ಯವರ್ತಿಗಳು ಮತ್ತು ಮದ್ಯದ ಅಂಗಡಿ ಮಾಲೀಕರ ಮೇಲೂ ಕಾನೂನು ಕ್ರಮ ಜರುಗುವ ಸಾಧ್ಯತೆ ದಟ್ಟವಾಗಿದೆ. ಬೆನಾಮಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಯೂ ಮುಂದಿನ ದಿನಗಳಲ್ಲಿ ಆರಂಭವಾಗಲಿದೆ.
ಅಬಕಾರಿ ಇಲಾಖೆ ಎಂಬುದು ಸರ್ಕಾರದ ಆದಾಯದ ಮೂಲವಾಗಿರಬೇಕೇ ಹೊರತು, ಅಧಿಕಾರಿಗಳ ಅಕ್ರಮ ಸಂಪತ್ತಿನ ಮೂಲವಲ್ಲ. ಈ ದಾಳಿಯು ಭ್ರಷ್ಟಾಚಾರದ ವಿರುದ್ಧ ಹೋರಾಡುವವರಿಗೆ ಭರವಸೆಯ ಕಿರಣವಾಗಿದೆ. ಭ್ರಷ್ಟಾಚಾರದ ಹಣದಿಂದ ಐಷಾರಾಮಿ ಜೀವನ ನಡೆಸುತ್ತಿದ್ದ ಅಧಿಕಾರಿಗಳಿಗೆ ಈಗ ಜೈಲಿನ ಕಂಬಿ ಎಣಿಸುವ ಕಾಲ ಸನ್ನಿಹಿತವಾಗಿದೆ. ಕಾನೂನಿನ ಕೈಗಳು ಎಷ್ಟೇ ಉದ್ದವಿದ್ದರೂ, ಇಂತಹ ವ್ಯವಸ್ಥಿತ ಭ್ರಷ್ಟಾಚಾರದ ಜಾಲಗಳನ್ನು ಕಿತ್ತೊಗೆಯುವಲ್ಲಿ ಸರ್ಕಾರ ಮತ್ತು ತನಿಖಾ ಸಂಸ್ಥೆಗಳು ಎಷ್ಟು ದೃಢವಾಗಿರುತ್ತವೆ ಎಂಬುದರ ಮೇಲೆ ಭವಿಷ್ಯದ ಆಡಳಿತದ ಶಿಸ್ತು ನಿರ್ಧಾರವಾಗುತ್ತದೆ. ಈ ಪ್ರಕರಣವು ರಾಜ್ಯದ ಇತರ ಇಲಾಖೆಗಳಿಗೂ ಒಂದು ಎಚ್ಚರಿಕೆಯ ಗಂಟೆಯಾಗಿದ್ದು, ಭ್ರಷ್ಟಾಚಾರ ಮಾಡಿದರೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

