
ಗ್ರಾಮಠಾಣಾ ವ್ಯಾಪ್ತಿಯ ಹೊರಗಿನ ಭೂಪರಿವರ್ತಿತ ಹಾಗೂ ಭೂಪರಿವರ್ತನೆ ಆಗದ ಕಂದಾಯ ಭೂಮಿಗಳಲ್ಲಿ ಹಲವು ಬಡಾವಣೆಗಳು ಮತ್ತು ಕಟ್ಟಡಗಳು ನಿರ್ಮಾಣವಾಗಿವೆ.
ಇ-ಸ್ವತ್ತು ತೊಡಕು ನಿವಾರಣೆಗೆ ಪಂಚ ಸದಸ್ಯರ ಸಮಿತಿ; 10 ದಿನಗಳಲ್ಲಿ ವರದಿ ಸಲ್ಲಿಸಲು ಸರ್ಕಾರ ಸೂಚನೆ
ರಾಜ್ಯದ ಗ್ರಾಮಠಾಣಾ ಪ್ರದೇಶಗಳಲ್ಲಿ ಹಲವು ದಶಕಗಳಿಂದ ಹಾಗೂ ತಲೆಮಾರುಗಳಿಂದ ವಾಸಿಸುತ್ತಿರುವ ಅನೇಕ ಕುಟುಂಬಗಳ ಬಳಿ ತಮ್ಮ ಆಸ್ತಿಯ ಅಧಿಕೃತ ದಾಖಲೆಗಳಿಲ್ಲದ ಕಾರಣ ಇ-ಸ್ವತ್ತು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಇಲಾಖೆ ಗಮನಿಸಿದೆ.
ಗ್ರಾಮೀಣ ಪ್ರದೇಶದ ನಿವಾಸಿಗಳು ಇ-ಸ್ವತ್ತು ಪಡೆಯಲು ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಪದೇ ಪದೇ ಅಲೆದಾಡುವ ಪರಿಸ್ಥಿತಿ ತಪ್ಪಿಸಿ, ಮನೆಬಾಗಿಲಿಗೇ ಇ-ಸ್ವತ್ತು ಸೇವೆ ತಲುಪಿಸುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಹತ್ವದ ಕ್ರಮಕ್ಕೆ ಮುಂದಾಗಿದೆ.
ಇ-ಸ್ವತ್ತು ವಿತರಣೆಯಲ್ಲಿರುವ ತಾಂತ್ರಿಕ ಹಾಗೂ ಆಡಳಿತಾತ್ಮಕ ತೊಡಕುಗಳನ್ನು ನಿವಾರಿಸುವ ಉದ್ದೇಶದಿಂದ ಪಂಚ ಸದಸ್ಯರ ಸಮಿತಿ ರಚಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಸೂಚನೆ ನೀಡಿದ್ದಾರೆ.
ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ
ಈ ಕುರಿತು ಇಲಾಖೆಯ ಕಾರ್ಯದರ್ಶಿಗೆ ಲಿಖಿತ ಸೂಚನೆ ನೀಡಿರುವ ಸಚಿವರು, ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಡಿ. ರಂದೀಪ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸುವಂತೆ ನಿರ್ದೇಶಿಸಿದ್ದಾರೆ.
ಸಮಿತಿಯಲ್ಲಿ ಬೆಂಗಳೂರು, ಮಂಗಳೂರು, ಕಲಬುರಗಿ ಹಾಗೂ ಬೆಳಗಾವಿ ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಸದಸ್ಯರನ್ನಾಗಿ ಒಳಗೊಂಡಿರಬೇಕು ಎಂದು ಸೂಚಿಸಲಾಗಿದೆ. ತಂತ್ರಾಂಶ ಮತ್ತು ಸರ್ವರ್ ಸಮಸ್ಯೆಯಿಂದ ರಾಜ್ಯದಾದ್ಯಂತ ಸಾವಿರಾರು ಇ-ಸ್ವತ್ತು ಅರ್ಜಿಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ, ಪ್ರಸ್ತುತ ನಿಯಮಗಳಲ್ಲಿ ಯಾವ ಬದಲಾವಣೆಗಳನ್ನು ಮಾಡಬಹುದು ಎಂಬುದರ ಕುರಿತು ಪರಿಶೀಲಿಸಿ 10 ದಿನಗಳೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.
ದಾಖಲೆಗಳಿಲ್ಲದ ಗ್ರಾಮಠಾಣಾ ನಿವಾಸಿಗಳಿಗೂ ಪರಿಹಾರ
ರಾಜ್ಯದ ಗ್ರಾಮಠಾಣಾ ಪ್ರದೇಶಗಳಲ್ಲಿ ಹಲವು ದಶಕಗಳಿಂದ ಹಾಗೂ ತಲೆಮಾರುಗಳಿಂದ ವಾಸಿಸುತ್ತಿರುವ ಅನೇಕ ಕುಟುಂಬಗಳ ಬಳಿ ತಮ್ಮ ಆಸ್ತಿಯ ಅಧಿಕೃತ ದಾಖಲೆಗಳಿಲ್ಲದ ಕಾರಣ ಇ-ಸ್ವತ್ತು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಇಲಾಖೆ ಗಮನಿಸಿದೆ.
ಇದರಿಂದ ಬ್ಯಾಂಕ್ ಸಾಲ ಪಡೆಯುವುದು, ಮನೆ ದುರಸ್ತಿ ಅಥವಾ ಪುನರ್‌ನಿರ್ಮಾಣ, ಕಟ್ಟಡ ನಕ್ಷೆ ಅನುಮೋದನೆ ಹಾಗೂ ಆಸ್ತಿ ಖರೀದಿ-ಮಾರಾಟದಂತಹ ವ್ಯವಹಾರಗಳು ಅಸಾಧ್ಯವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮನೆಮನೆ ಸಮೀಕ್ಷೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ಕುರಿತು ಮಾರ್ಗೋಪಾಯಗಳನ್ನು ಸೂಚಿಸುವಂತೆ ಸಮಿತಿಗೆ ನಿರ್ದೇಶಿಸಲಾಗಿದೆ.
'ಬಿ' ಖಾತೆ ನೀಡಿಕೆ ಬಗ್ಗೆಯೂ ಪರಿಶೀಲನೆ
ಗ್ರಾಮಠಾಣಾ ವ್ಯಾಪ್ತಿಯ ಹೊರಗಿನ ಭೂಪರಿವರ್ತಿತ ಹಾಗೂ ಭೂಪರಿವರ್ತನೆ ಆಗದ ಕಂದಾಯ ಭೂಮಿಗಳಲ್ಲಿ ಹಲವು ಬಡಾವಣೆಗಳು ಮತ್ತು ಕಟ್ಟಡಗಳು ನಿರ್ಮಾಣವಾಗಿವೆ. ಕೆಲವು ಕಡೆ ಬಿ ಖರಾಬು ಹಾಗೂ ಗೋಮಾಳದಂತಹ ಸರ್ಕಾರಿ ಭೂಮಿಯನ್ನು ಸೇರಿಸಿಕೊಂಡು ಬಡಾವಣೆ ಅಭಿವೃದ್ಧಿಪಡಿಸಿರುವ ಕಾರಣ ನಮೂನೆ 11-ಬಿ ನೀಡಲು ತೊಡಕು ಎದುರಾಗುತ್ತಿದೆ. ಆದರೆ ಇಂತಹ ಪ್ರದೇಶಗಳಿಗೂ ಗ್ರಾಮ ಪಂಚಾಯಿತಿಗಳು ರಸ್ತೆ, ಕುಡಿಯುವ ನೀರು, ಚರಂಡಿ, ಬೀದಿ ದೀಪ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತಿದ್ದು, ತೆರಿಗೆ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ.
ಈ ಎಲ್ಲ ಸಮಸ್ಯೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ಗ್ರಾಮೀಣ ಪ್ರದೇಶದ ಎಲ್ಲಾ ಸ್ವತ್ತುಗಳಿಗೆ ಸುಗಮವಾಗಿ ಇ-ಸ್ವತ್ತು ನೀಡುವ ವ್ಯವಸ್ಥೆ ರೂಪಿಸುವ ಕುರಿತು ಶಿಫಾರಸು ಸಲ್ಲಿಸುವಂತೆ ಸಚಿವ ಈಶ್ವರ ಖಂಡ್ರೆ ಸಮಿತಿಗೆ ಸೂಚನೆ ನೀಡಿದ್ದಾರೆ.

