ಎರಡು ಆನೆಗಳ ಕಾದಾಟಕ್ಕೆ ಮಹಿಳೆ ಬಲಿ; ಸಾಕಾನೆ ಶಿಬಿರಗಳಿಗೆ ಅರಣ್ಯ ಸಚಿವರಿಂದ ಹೊಸ ಗೈಡ್‌ಲೈನ್ಸ್!
x

ಎರಡು ಆನೆಗಳ ಕಾದಾಟಕ್ಕೆ ಮಹಿಳೆ ಬಲಿ; ಸಾಕಾನೆ ಶಿಬಿರಗಳಿಗೆ ಅರಣ್ಯ ಸಚಿವರಿಂದ ಹೊಸ ಗೈಡ್‌ಲೈನ್ಸ್!

ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ ಆನೆಗಳ ಜಗಳದ ನಡುವೆ ಸಿಲುಕಿ ಚೆನ್ನೈ ಮೂಲದ ಪ್ರವಾಸಿಗ ಸಾವು. ಮೇ 19ರಿಂದ ಜಾರಿಗೆ ಬರುವಂತೆ ಆನೆಗಳ ಬಳಿ ಸೆಲ್ಫಿ, ಆಹಾರ ನೀಡುವುದನ್ನು ನಿಷೇಧಿಸಿ ಸಚಿವ ಈಶ್ವರ ಖಂಡ್ರೆ ಆದೇಶಿಸಿದ್ದಾರೆ.


ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಪ್ರಸಿದ್ಧ ದುಬಾರೆ ಸಾಕಾನೆ ಶಿಬಿರದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಆನೆಗಳ ಮೈತೊಳೆಯುವ ಅವಧಿಯಲ್ಲಿ ಎರಡು ಆನೆಗಳ ನಡುವೆ ಇದ್ದಕ್ಕಿದ್ದಂತೆ ನಡೆದ ಕಾದಾಟದ ಸಂದರ್ಭದಲ್ಲಿ, ಆಯತಪ್ಪಿ ಬಿದ್ದ ಆನೆಯ ಕೆಳಗೆ ಸಿಲುಕಿ ಚೆನ್ನೈನಿಂದ ಬಂದಿದ್ದ ಪ್ರವಾಸಿಗರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಘಟನೆಗೆ ತೀವ್ರ ಕಳವಳ ಮತ್ತು ಸಂತಾಪ ವ್ಯಕ್ತಪಡಿಸಿರುವ ರಾಜ್ಯ ಅರಣ್ಯ ಹಾಗೂ ಪರಿಸರ ಸಚಿವ ಈಶ್ವರ ಬಿ. ಖಂಡ್ರೆ, ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ರಾಜ್ಯದ ಎಲ್ಲಾ ಸಾಕಾನೆ ಶಿಬಿರಗಳಿಗೆ ಅನ್ವಯವಾಗುವಂತೆ ಮೇ 19 ರಿಂದಲೇ ಜಾರಿಗೆ ಬರುವಂತೆ ಅತ್ಯಂತ ಕಟ್ಟುನಿಟ್ಟಿನ ಹೊಸ ನಿಯಮಾವಳಿಗಳನ್ನು ಪ್ರಕಟಿಸಿದ್ದಾರೆ.

ಏನಿದು ಹೊಸ ನಿಯಮ?

ಅರಣ್ಯ ಭವನದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸಚಿವರು ತುರ್ತು ನಿರ್ದೇಶನ ನೀಡಿದ್ದು, ಸಾಕಾನೆ ಶಿಬಿರಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ತಕ್ಷಣವೇ ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP) ರೂಪಿಸಲು ಆದೇಶಿಸಿದ್ದಾರೆ. ಅದರಂತೆ ನಾಳೆಯಿಂದಲೇ ಈ ಕೆಳಗಿನ ನಿಯಮಗಳು ಜಾರಿಯಾಗಲಿವೆ:

• 100 ಅಡಿ ದೂರ ಕಡ್ಡಾಯ: ಯಾವುದೇ ಸಾಕಾನೆ ಶಿಬಿರದಲ್ಲಿ ಪ್ರವಾಸಿಗರು ಆನೆಗಳ ಹತ್ತಿರ ಹೋಗುವಂತಿಲ್ಲ. ಆನೆಗಳು ಸ್ನಾನ ಮಾಡುವುದನ್ನು ಕನಿಷ್ಠ 100 ಅಡಿ ದೂರದಲ್ಲಿ ನಿಂತು ಮಾತ್ರ ವೀಕ್ಷಿಸಬೇಕು.

• ಸೆಲ್ಫಿ, ಫೋಟೋ ಬ್ಯಾನ್: ಯಾವುದೇ ಕಾರಣಕ್ಕೂ ಆನೆಗಳ ಬಳಿ ಹೋಗಿ ಸೆಲ್ಫಿ ಅಥವಾ ಫೋಟೋ ತೆಗೆದುಕೊಳ್ಳಲು ಪ್ರವಾಸಿಗರಿಗೆ ಅವಕಾಶ ನೀಡುವಂತಿಲ್ಲ.

• ಮೈತೊಳೆಯಲು ನೋ ಎಂಟ್ರಿ: ಪ್ರವಾಸಿಗರು ಆನೆಗಳ ಮೈತೊಳೆಯುವ ಪ್ರಕ್ರಿಯೆಯಲ್ಲಿ ನೇರವಾಗಿ ಭಾಗವಹಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

• ಆಹಾರ ನೀಡುವುದು ನಿಷೇಧ: ಪ್ರವಾಸಿಗರು ತಮ್ಮ ಕೈಯಾರೆ ಆನೆಗಳಿಗೆ ಬಾಳೆಹಣ್ಣು, ಬೆಲ್ಲ, ಕಬ್ಬು ಸೇರಿದಂತೆ ಯಾವುದೇ ರೀತಿಯ ಆಹಾರವನ್ನು ತಿನ್ನಿಸುವಂತಿಲ್ಲ.

ಚಾರಣ ಪಥಗಳೂ ತಾತ್ಕಾಲಿಕ ಸ್ಥಗಿತ

ಪರಿಸರ ಪ್ರವಾಸೋದ್ಯಮದ ಚಾರಣ ಪಥಗಳಲ್ಲಿ ಚಾರಣಿಗರ ಮತ್ತು ಪ್ರವಾಸಿಗರ ರಕ್ಷಣೆಗಾಗಿ ಈಗಾಗಲೇ ಎಸ್‌ಒಪಿ (SOP) ರೂಪಿಸಲಾಗುತ್ತಿದೆ. ಈ ಎಸ್‌ಒಪಿ ಜಾರಿ ಅಧಿಕೃತವಾಗಿ ಖಚಿತವಾಗುವವರೆಗೂ ರಾಜ್ಯದ ಎಲ್ಲಾ ಚಾರಣ ಪಥಗಳ ಕಾರ್ಯಾಚರಣೆಯನ್ನು ಸಹ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ದುಬಾರೆಯಂತಹ ಸೂಕ್ಷ್ಮ ವನ್ಯಜೀವಿ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಅತಿಯಾದ ನಿಕಟತೆ ಇಂತಹ ದುರಂತಗಳಿಗೆ ಕಾರಣವಾಗುತ್ತಿರುವುದರಿಂದ, ಇಲಾಖೆಯು ಇನ್ನು ಮುಂದೆ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

Read More
Next Story