x

ಸಂಪುಟ ಸಭೆಯಲ್ಲಿ ʼಬರ ವರದಿʼ; ಡಿಕೆಶಿಗೆ ಸಿಗದ ʼಹೈʼ ಪರಿಹಾರ; ದರ್ಶನ್‌ಗೆ ಸಂಕಷ್ಟ ತಂದ ಮಾಫಿ ಸಾಕ್ಷಿ

ಸಚಿವ ಸಂಪುಟ ಸಭೆಯಲ್ಲಿ ಸಚಿವರು ಬರ ವರದಿ ಮಂಡಿಸಲಿದ್ದಾರೆ; ಒಬ್ಬನೇ ಉತ್ತರ ಕೊಡ್ತಿನಿ ಎಂದ ಸಿಎಂ ಡಿ.ಕೆ.ಶಿವಕುಮಾರ್; ಪ್ರದೋಷ್‌ ಅರ್ಜಿ ಮಾನ್ಯ ಮಾಡಿದ ಸೆಷನ್ಸ್‌ ನ್ಯಾಯಾಲಯ


Click the Play button to hear this message in audio format

ಕರ್ನಾಟಕ ರಾಜ್ಯವು ಭೌಗೋಳಿಕವಾಗಿ ವೈವಿಧ್ಯಮಯವಾಗಿದ್ದು, ಒಂದೆಡೆ ಉತ್ತರ ಕರ್ನಾಟಕದ ಬಯಲು ಸೀಮೆಯಲ್ಲಿ ತೀವ್ರ ಬರಗಾಲದ ಛಾಯೆ ಇದ್ದರೆ, ಇನ್ನೊಂದೆಡೆ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಅತಿಯಾದ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯ ಅಸಮರ್ಪಕ ಹಂಚಿಕೆಯಿಂದಾಗಿ ರೈತರು ಮತ್ತು ಸಾರ್ವಜನಿಕರು ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ, ರಾಜ್ಯ ಸಚಿವರು ಅಧ್ಯಯನ ಕೈಗೊಂಡಿದ್ದು, ವಾಸ್ತವಾಂಶ ತಿಳಿದುಕೊಳ್ಳಲು ಸ್ಥಳ ಪರಿಶೀಲನೆಯಲ್ಲಿ ಕೈಗೊಂಡಿದ್ದಾರೆ.

ರಾಜ್ಯದ ವಿವಿಧ ಭಾಗಗಳಲ್ಲಿ ಬೆಳೆ ಹಾನಿ, ಕುಡಿಯುವ ನೀರಿನ ಸಮಸ್ಯೆ, ಮತ್ತು ಮೂಲಸೌಕರ್ಯಗಳ ಕುಸಿತದ ಬಗ್ಗೆ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ಸೂಚನೆಯ ಮೇರೆಗೆ ಸಚಿವರು ತಮ್ಮ ತಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದಾರೆ. ಇದೇ 13ರಿಂದ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಉತ್ತರ ನೀಡಬೇಕಿರುವ ಕಾರಣ ಸಚಿವರು ಅಧ್ಯಯನದಲ್ಲಿ ತೊಡಗಿದ್ದಾರೆ. ಕೇಂದ್ರ ಸರ್ಕಾರಕ್ಕೆ ಬರ ಪೀಡಿತ ಪ್ರದೇಶಗಳ ಪಟ್ಟಿ ಸಲ್ಲಿಸಲು ವೈಜ್ಞಾನಿಕವಾದ ಮಾಹಿತಿಯನ್ನು ಕಲೆಹಾಕುವುದು ಪ್ರಮುಖ ಉದ್ದೇಶವಾಗಿದೆ. ಅಲ್ಲದೇ, ಕರಾವಳಿ ಮತ್ತು ಮಲೆನಾಡು ಭಾಗದಲ್ಲಿನ ನಷ್ಟದ ಕುರಿತು ಅವಲೋಕನ ನಡೆಸಿ ಕೇಂದ್ರಕ್ಕೆ ಮಾಹಿತಿ ನೀಡಲಾಗುತ್ತದೆ.

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆ ವಿಫಲವಾದ ಪರಿಣಾಮ ಬಿತ್ತನೆ ಮಾಡಿದ್ದ ಬೆಳೆಗಳು ಒಣಗಿ ಹೋಗಿವೆ. ಸಚಿವರು ಈ ಭಾಗಗಳಿಗೆ ಭೇಟಿ ನೀಡಿದಾಗ ಕಂಡ ದೃಶ್ಯಗಳು ಭೀಕರವಾಗಿವೆ. ಮೆಕ್ಕೆಜೋಳ, ಹೆಸರು, ಶೇಂಗಾ ಬೆಳೆಗಳು ಬಾಡಿ ಹೋಗಿದ್ದು, ರೈತರು ಅತೀವ ನಷ್ಟವನ್ನು ಅನುಭವಿಸುತ್ತಿದ್ದಾರೆ. ಸಚಿವರು ಸ್ಥಳ ಪರಿಶೀಲನೆ ನಡೆಸಿದಾಗ, ರೈತರು ಕೃಷಿ ಸಾಲ ಮನ್ನಾ ಮತ್ತು ವಿಮಾ ಪರಿಹಾರಕ್ಕಾಗಿ ಆಗ್ರಹಿಸುತ್ತಿದ್ದಾರೆ. ಇವತ್ತು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಚಿವರಾದ ಪ್ರಿಯಾಂಕ್‌ಖರ್ಗೆ ಮತ್ತು ಎಂ.ಬಿ.ಪಾಟೀಲ್‌ಅವರು ತಮಗೆ ವಹಿಸಿರುವ ಉಸ್ತುವಾರಿ ಜಿಲ್ಲೆಗಳಿಗೆ ಭೇಟಿ ನೀಡಿ ಬರಗಾಲ ಕುರಿತು ಅಧ್ಯಯನ ನಡೆಸಿದರು.

ಕಗ್ಗಂಟಾದ ಖಾತೆ ಹಂಚಿಕೆ

ರಾಜ್ಯ ರಾಜಕೀಯ ಅಂಗಳದಲ್ಲಿ ಸದ್ಯ ಖಾತೆ ಹಂಚಿಕೆ ಎಂಬುದು ದೊಡ್ಡ ಕಗ್ಗಂಟಾಗಿ ಪರಿಣಮಿಸಿದೆ. ಸಚಿವ ಸಂಪುಟ ವಿಸ್ತರಣೆಯಾಗಿ ಒಂದು ವಾರ ಕಳೆದರೂ, ನೂತನ ಸಚಿವರಿಗೆ ಅಧಿಕೃತವಾಗಿ ಖಾತೆಗಳನ್ನು ಹಂಚಿಕೆ ಮಾಡದಿರುವುದು ರಾಜ್ಯ ಸರ್ಕಾರದಲ್ಲಿ ಒಂದು ರೀತಿಯ ಆಡಳಿತಾತ್ಮಕ ಅನಿಶ್ಚಿತತೆಯನ್ನು ಸೃಷ್ಟಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ದೌಡಾಯಿಸಿ, ಹೈಕಮಾಂಡ್‌ನೊಂದಿಗೆ ಸುದೀರ್ಘ ಮಾತುಕತೆ ನಡೆಸಿದರೂ, ಈ ಸಮಸ್ಯೆಗೆ ಪರಿಹಾರ ಇನ್ನೂ ದೊರೆತಿಲ್ಲ. ಹೀಗಾಗಿ ಬರಿಗೈಲಿ ಅವರು ವಾಪಸ್‌ಆಗಿದ್ದಾರೆ.

ಒಂದು ಸರ್ಕಾರ ರಚನೆಯಾದ ಬಳಿಕ ಸಚಿವರು ಪ್ರಮಾಣ ವಚನ ಸ್ವೀಕರಿಸುವುದು ಎಷ್ಟು ಮುಖ್ಯವೋ, ಅವರಿಗೆ ಖಾತೆ ನಿಗದಿಪಡಿಸುವುದು ಅಷ್ಟೇ ಮುಖ್ಯ. ಆದರೆ, ಕರ್ನಾಟಕದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಸಚಿವ ಸ್ಥಾನ ವಂಚಿತ ಹಿರಿಯ ಶಾಸಕರ ಅಸಮಾಧಾನ ತಣಿಸುವುದು ಮತ್ತು ಹೊಸ ಸಚಿವರಿಗೆ ಖಾತೆಗಳ ಹಂಚಿಕೆ ತಲೆಬಿಸಿಯಾಗಿದೆ. ಈ ವಿಷಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಾಕಷ್ಟು ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ನಿನ್ನೆ ತಡರಾತ್ರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಆಗಸ್ಟ್ 13ರಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಅದಕ್ಕೂ ಮುನ್ನ ಖಾತೆ ಹಂಚಿಕೆ ಪೂರ್ಣಗೊಳಿಸುವ ಒತ್ತಡವೂ ಹೆಚ್ಚಾಗಿದೆ. ಅಲ್ಲದೇ, ಸಚಿವರ ಬದಲಾವಣೆ ಮತ್ತು ಖಾತೆಗಳ ಅದಲು-ಬದಲು ಮಾಡುವ ಆಲೋಚನೆಗಳು ಕಾಂಗ್ರೆಸ್ ಆಂತರಿಕ ವಲಯದಲ್ಲಿ ಜೋರಾಗಿ ಕೇಳಿಬರುತ್ತಿವೆ.

ಆಪ್ತ ಸ್ನೇಹಿತನೇ ಮಾಫಿ ಸಾಕ್ಷಿ

ಕನ್ನಡ ಚಿತ್ರರಂಗದ ಸ್ಟಾರ್ ನಟ ದರ್ಶನ್ ತೂಗುದೀಪ ಭಾಗಿಯಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನೇ ದಿನೇ ಹೊಸ ತಿರುವುಗಳನ್ನು ಪಡೆಯುತ್ತಿದೆ. ಆರೋಪಿಯಾಗಿರುವ ದರ್ಶನ್‌ಗೆ ಕಾನೂನುಬದ್ಧವಾಗಿ ಅತ್ಯಂತ ಕ್ಲಿಷ್ಟಕರವಾದ ಹಂತವನ್ನು ತಲುಪಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಪ್ರದೋಷ್ ತಾವು ‘ಮಾಫಿ ಸಾಕ್ಷಿ’ ಆಗುವುದಾಗಿ ಸಲ್ಲಿಸಿದ ಅರ್ಜಿಯನ್ನು ಸೆಷನ್ಸ್‌ನ್ಯಾಯಾಲಯ ಮಾನ್ಯ ಮಾಡಿದೆ. ನಟ ದರ್ಶನ್‌ಅರ್ಜಿಯನ್ನು ತಿರಸ್ಕರಿಸಿದೆ. ಇದು ದರ್ಶನ್ ಪಾಲಿಗೆ ಅಕ್ಷರಶಃ ‘ಬ್ರಹ್ಮಾಸ್ತ್ರ’ವಾಗಿ ಪರಿಣಮಿಸಿದೆ.

ಭಾರತೀಯ ಸಾಕ್ಷ್ಯ ಕಾಯ್ದೆಯಡಿ, ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಗುಂಪಿನಲ್ಲಿರುವ ವ್ಯಕ್ತಿಯೊಬ್ಬ ಸಂಪೂರ್ಣ ಸತ್ಯವನ್ನು ನ್ಯಾಯಾಲಯದ ಮುಂದೆ ಒಪ್ಪಿಕೊಳ್ಳಲು ಸಿದ್ಧನಿದ್ದರೆ, ನ್ಯಾಯಾಲಯ ಆತನನ್ನು ‘ಅಪ್ರೂವರ್’ ಎಂದು ಘೋಷಿಸಬಹುದು. ಇತ್ತೀಚೆಗೆ ದರ್ಶನ್ ಆಪ್ತ ಪ್ರದೋಷ್ ಈ ಹಾದಿಯನ್ನು ತುಳಿದಿದ್ದಾರೆ. ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಅವರು ಈ ಅರ್ಜಿಯನ್ನು ತೀವ್ರವಾಗಿ ವಿರೋಧಿಸಿದ್ದರು. "ಪ್ರಾಸಿಕ್ಯೂಷನ್ ತನ್ನ ಬಲವರ್ಧನೆಗಾಗಿ ಆರೋಪಿಗಳನ್ನು ಬಳಸಿಕೊಳ್ಳುತ್ತಿದೆ" ಎಂಬುದು ಅವರ ವಾದವಾಗಿತ್ತು. ಆದರೆ, ಈ ವಾದವನ್ನು ತಿರಸ್ಕರಿಸಿದ ನ್ಯಾಯಾಲಯವು, ಆರೋಪಿಗಳ ಅರ್ಜಿಯನ್ನು ಮಾನ್ಯ ಮಾಡುವ ಮೂಲಕ ದರ್ಶನ್ ಅವರ ಕಾನೂನು ತಂಡಕ್ಕೆ ತೀವ್ರ ಹಿನ್ನಡೆ ಉಂಟುಮಾಡಿದೆ. ದರ್ಶನ್ ಅವರೇ ಈ ಅರ್ಜಿಯನ್ನು ಆಲಿಸಬೇಕೆಂದು ಕೋರಿದ್ದ ಮನವಿಯನ್ನು ನ್ಯಾಯಾಲಯ ತಳ್ಳಿಹಾಕಿದ್ದು, ಇದು ಪ್ರಕರಣದ ಗಂಭೀರತೆಯನ್ನು ತೋರಿಸುತ್ತದೆ.

ಭಾರತೀಯ ಸಾಕ್ಷ್ಯ ಕಾಯ್ದೆ ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆಯ ಪ್ರಕಾರ, ಗಂಭೀರ ಅಪರಾಧ ಪ್ರಕರಣಗಳಲ್ಲಿ ತಪ್ಪೊಪ್ಪಿಗೆಯ ಮೂಲಕ ಸತ್ಯವನ್ನು ಹೊರಹಾಕಲು ಬಯಸುವ ಆರೋಪಿಗೆ ನ್ಯಾಯಾಲಯವು ‘ಮಾಫಿ ಸಾಕ್ಷಿ’ಯ ಸ್ಥಾನಮಾನವನ್ನು ನೀಡಬಹುದು. ಇದನ್ನೇ ‘ಅಪ್ರೂವರ್’ ಎಂದು ಕರೆಯುತ್ತಾರೆ. ಹೀಗೆ ಮಾಫಿ ಸಾಕ್ಷಿಯಾಗುವವರು ಪ್ರಕರಣದ ಸಂಪೂರ್ಣ ವಿವರವನ್ನು, ಅಂದರೆ ಕೊಲೆ ನಡೆದ ರೀತಿ, ಸಂಚು ಮತ್ತು ಅದರಲ್ಲಿ ಭಾಗಿಯಾದ ಪ್ರತಿಯೊಬ್ಬರ ಪಾತ್ರವನ್ನು ನ್ಯಾಯಾಲಯದ ಮುಂದೆ ಎಳೆಎಳೆಯಾಗಿ ಬಿಚ್ಚಿಡಬೇಕಾಗುತ್ತದೆ. ಇವರನ್ನು ಶಿಕ್ಷೆಯಿಂದ ಮುಕ್ತಗೊಳಿಸಲಾಗುತ್ತದೆ ಅಥವಾ ಶಿಕ್ಷೆಯ ಪ್ರಮಾಣದಲ್ಲಿ ರಿಯಾಯಿತಿ ನೀಡಲಾಗುತ್ತದೆ.

Read More
Next Story