ಅರ್ಹ ರೈತರಿಗೆ ಎರಡು ಕಂತುಗಳಲ್ಲಿ ಬರ ಪರಿಹಾರ; ಗೊಂದಲಗಳಿಗೆ ಸರ್ಕಾರದ ಸ್ಪಷ್ಟನೆ
x

ಅರ್ಹ ರೈತರಿಗೆ ಎರಡು ಕಂತುಗಳಲ್ಲಿ ಬರ ಪರಿಹಾರ; ಗೊಂದಲಗಳಿಗೆ ಸರ್ಕಾರದ ಸ್ಪಷ್ಟನೆ

ಕೇಂದ್ರ ಸರ್ಕಾರ ಬರ ಪರಿಹಾರದ ಪಾಲನ್ನು ಬಿಡುಗಡೆ ಮಾಡದಿದ್ದರೂ, ರಾಜ್ಯ ಸರ್ಕಾರವೇ ತನ್ನ ಆಂತರಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಪಾವತಿ ಮಾಡಲಿದೆ ಎಂದು ಸರ್ಕಾರ ಹೇಳಿದೆ.


Click the Play button to hear this message in audio format

ರಾಜ್ಯದಲ್ಲಿ ತಲೆದೋರಿರುವ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ರೈತ ಸಮುದಾಯಕ್ಕೆ ತುರ್ತು ಆರ್ಥಿಕ ನೆರವು ಒದಗಿಸಲು ಬದ್ಧವಾಗಿರುವ ರಾಜ್ಯ ಸರ್ಕಾರ, ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಪ್ರತಿಯೊಬ್ಬ ಅರ್ಹ ರೈತ ಕುಟುಂಬಕ್ಕೂ ಎರಡು ಕಂತುಗಳಲ್ಲಿ ಒಟ್ಟು 5 ಸಾವಿರ ರೂಪಾಯಿ ಪರಿಹಾರವನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ತಲುಪಿಸಲಿದೆ ಎಂದು ಸ್ಪಷ್ಟಪಡಿಸಿದೆ.

ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಈ ಕುರಿತು ಮಾತನಾಡಿದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ಬರ ಪರಿಹಾರದ ಕುರಿತು ರೈತರಲ್ಲಿ ಯಾವುದೇ ರೀತಿಯ ಆತಂಕ ಅಥವಾ ಗೊಂದಲ ಬೇಡ. ಕೇಂದ್ರ ಸರ್ಕಾರ ಬರ ಪರಿಹಾರದ ಪಾಲನ್ನು ಸಕಾಲದಲ್ಲಿ ಬಿಡುಗಡೆ ಮಾಡದಿದ್ದರೂ, ರಾಜ್ಯ ಸರ್ಕಾರವೇ ತನ್ನ ಆಂತರಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಪ್ರತಿಯೊಬ್ಬ ಅರ್ಹ ರೈತನಿಗೂ ಎರಡು ಕಂತುಗಳಲ್ಲಿ ಒಟ್ಟು 5 ಸಾವಿರ ರೂಪಾಯಿ ಪಾವತಿ ಮಾಡಲಿದೆ ಎಂದು ತಿಳಿಸಿದರು.

ಈಗಾಗಲೇ ಮೊದಲ ಕಂತಿನ ಪರಿಹಾರ ಮೊತ್ತ ಲಕ್ಷಾಂತರ ರೈತರ ಖಾತೆಗಳನ್ನು ತಲುಪಿದೆ. ಹಣ ತಲುಪದ ಅಥವಾ ಮೊತ್ತದಲ್ಲಿ ವ್ಯತ್ಯಾಸವಾಗಿರುವ ರೈತರ ಸಮಸ್ಯೆಗಳನ್ನು ಬಗೆಹರಿಸಲು ಕಂದಾಯ ಮತ್ತು ಆಡಳಿತ ಯಂತ್ರ ಸೂಕ್ತ ಸೂತ್ರ ರೂಪಿಸಿದೆ. ಕೆಲವೆಡೆ ಬ್ಯಾಂಕ್ ಖಾತೆಗಳು ಸರಿಯಾಗಿ ಲಿಂಕ್ ಆಗದಿರುವುದು ಅಥವಾ ಸಾಲದ ಖಾತೆಗಳಿಗೆ ಲಿಂಕ್ ಆಗಿರುವ ಕಾರಣ ತಾಂತ್ರಿಕ ಅಡಚಣೆಗಳು ಸೃಷ್ಟಿಯಾಗಿವೆ. ಒಂದೇ ಬಟನ್ ಕ್ಲಿಕ್ ಮೂಲಕ ಪಾರದರ್ಶಕವಾಗಿ ಡಿಬಿಟಿ ಮಾಡಲಾಗುತ್ತಿದ್ದು, ದಾಖಲೆಗಳನ್ನು ತ್ವರಿತವಾಗಿ ಪರಿಶೀಲಿಸಿ ಬಾಕಿ ಉಳಿದಿರುವ ರೈತರ ಖಾತೆಗಳಿಗೂ ಶೀಘ್ರವೇ ಹಣ ಜಮೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಪರಿಹಾರ ಮೊತ್ತದ ವ್ಯತ್ಯಾಸಕ್ಕೆ ಆಡಳಿತಾತ್ಮಕ ಗೊಂದಲವೇ ಕಾರಣ - ಡಾ. ಜಿ. ಪರಮೇಶ್ವರ್ ಸ್ಪಷ್ಟನೆ

ಬರ ಪರಿಹಾರ ವಿತರಣೆಯಲ್ಲಿ ಕೆಲವೆಡೆ ವ್ಯತ್ಯಾಸಗಳು ಕಂಡುಬಂದಿರುವ ಬಗ್ಗೆ ವಿವರಣೆ ನೀಡಿದ ಡಾ. ಜಿ. ಪರಮೇಶ್ವರ್ ಅವರು, ಸದನದಲ್ಲಿ ಮುಖ್ಯಮಂತ್ರಿಗಳು ಹಾಗೂ ನಾನು ಚರ್ಚಿಸಿ ಒಂದು ಕುಟುಂಬಕ್ಕೆ 2,500 ರೂ. ರಂತೆ ಮೊದಲ ಕಂತು ನೀಡುವುದಾಗಿ ಘೋಷಿಸಿದ್ದೆವು. ಆದರೆ ಅಧಿಕಾರಿಗಳ ಹಂತದಲ್ಲಿ ಎನ್‌ಡಿಆರ್‌ಎಫ್ ನಿಯಮಾವಳಿಗಳನ್ನು ಅರ್ಥೈಸಿಕೊಳ್ಳುವಲ್ಲಿ ಲೋಪವಾಗಿದೆ. ಅಧಿಕಾರಿಗಳು ಪ್ರತಿ ಹೆಕ್ಟೇರ್ ಅಥವಾ ಎಕರೆ ಆಧಾರದ ಮೇಲೆ ಕನಿಷ್ಠ ಮೊತ್ತವನ್ನು ಲೆಕ್ಕ ಹಾಕಿದ್ದರಿಂದ ಕೆಲವು ರೈತರಿಗೆ 1,500 ರೂ. ಹಾಗೂ ಇನ್ನು ಕೆಲವರಿಗೆ 2 ಸಾವಿರ ರೂ. ಮಾತ್ರ ಪಾವತಿಯಾಗಿದೆ" ಎಂದು ಹೇಳಿದರು.

ಈ ಲೋಪವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ವ್ಯತ್ಯಾಸದ ಮೊತ್ತವನ್ನು ಸರಿಪಡಿಸಲು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಂಬಂಧಪಟ್ಟ ಇಲಾಖೆಗೆ ಈಗಾಗಲೇ ಅಗತ್ಯ ಅನುದಾನ ನೀಡಲಾಗಿದೆ. ಹಣಕಾಸು ಇಲಾಖೆಯ ಅನುಮೋದನೆ ದೊರೆತ ತಕ್ಷಣವೇ ವ್ಯತ್ಯಾಸದ ಮೊತ್ತವನ್ನು ಪಾವತಿಸಲಾಗುವುದು. ಅಗತ್ಯವಿದ್ದಲ್ಲಿ ಮೊದಲ ಹಂತದಲ್ಲಿ ಕಡಿತಗೊಂಡ ಹಣವನ್ನು ಎರಡನೇ ಕಂತಿನ ಜೊತೆ ಸೇರಿಸಿ 3 ಸಾವಿರ ರೂ. ಅಥವಾ 3,500 ರೂ. ಜಮೆ ಮಾಡುವ ಆಯ್ಕೆಯನ್ನೂ ಪರಿಶೀಲಿಸಲಾಗುತ್ತಿದೆ. ರಾಜ್ಯದ ಸುಮಾರು 50 ಲಕ್ಷ ರೈತ ಕುಟುಂಬಗಳಿಗೆ ತಲಾ 2,500 ರೂ.ನಂತೆ ಮೊದಲ ಹಂತದಲ್ಲಿ 1,250 ಕೋಟಿ ರೂ. ಅಂದಾಜಿಸಲಾಗಿದೆ. ಎರಡನೇ ಹಂತದಲ್ಲೂ ಅಷ್ಟೇ ಮೊತ್ತ ಮೀಸಲಿಡಲಾಗಿದ್ದು, ಒಟ್ಟಾರೆ 2,500 ಕೋಟಿ ರೂ.ಗಿಂತ ಅಧಿಕ ಪರಿಹಾರ ರೈತರ ಕೈಸೇರಲಿದೆ. ಈ ಪರಿಷ್ಕೃತ ವ್ಯವಸ್ಥೆಯನ್ನು ಯಾದಗಿರಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಯಶಸ್ವಿಯಾಗಿ ಜಾರಿಗೊಳಿಸಲಾಗಿದ್ದು, ಇದೀಗ ಇಡೀ ರಾಜ್ಯಕ್ಕೆ ವಿಸ್ತರಿಸಲಾಗುತ್ತಿದೆ ಎಂದು ಹೇಳಿದರು.

ಕೇಂದ್ರದ ನಿರ್ಲಕ್ಷ್ಯ ಮತ್ತು ಪ್ರಧಾನಿ ಭೇಟಿಯ ವಾಸ್ತವ

ಬರ ಅಧ್ಯಯನ ಮುಗಿದು ತಿಂಗಳುಗಳೇ ಕಳೆದರೂ ಎನ್‌ಡಿಆರ್‌ಎಫ್ ಪರಿಹಾರ ಬಿಡುಗಡೆಗೆ ಕೇಂದ್ರ ಸರ್ಕಾರದಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು. ಕೇಂದ್ರಕ್ಕೆ ಪತ್ರ ಬರೆದು ಎರಡು ವಾರ ಕಳೆದರೂ ಭೇಟಿಗೆ ಕಾಲಾವಕಾಶ ಸಿಕ್ಕಿಲ್ಲ. ಪ್ರಧಾನಮಂತ್ರಿಗಳು ಮೈಸೂರಿಗೆ ಆಗಮಿಸಿದ ಸಂದರ್ಭದಲ್ಲಿ ಭೇಟಿ ಮಾಡದಿರುವ ಬಗ್ಗೆ ಸ್ಪಷ್ಟನೆ ನೀಡಿದ ಅವರು, "ಪ್ರಧಾನಿಗಳ ಭೇಟಿಯ ವೇಳಾಪಟ್ಟಿ ನಿಮಿಷ-ನಿಮಿಷಕ್ಕೂ ಕಟ್ಟುನಿಟ್ಟಾಗಿ ನಿಗದಿಯಾಗಿರುತ್ತದೆ. ಇಂತಹ ಒತ್ತಡದ ಕಾರ್ಯಕ್ರಮಗಳ ನಡುವೆ ತರಾತುರಿಯಲ್ಲಿ ಮನವಿ ಸಲ್ಲಿಸುವುದರಿಂದ ರೈತರಿಗೆ ನ್ಯಾಯ ಸಿಗುವುದಿಲ್ಲ. ಕೇಂದ್ರ ಸರ್ಕಾರ ಸಮಯಾವಕಾಶ ನೀಡಿದ ತಕ್ಷಣವೇ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದೊಯ್ದು ರಾಜ್ಯದ ಹಕ್ಕನ್ನು ಪ್ರತಿಪಾದಿಸಲಾಗುವುದು" ಎಂದರು.

ರೈತರ ಸಾಲ ವಸೂಲಾತಿಗೆ 6 ತಿಂಗಳ ತಡೆ

ಬರಗಾಲದ ನಡುವೆಯೂ ರೈತರ ಆತ್ಮಹತ್ಯೆ ಪ್ರಮಾಣ ಹಿಂದಿನ ವರ್ಷಗಳಿಗೆ ಹೋಲಿಸಿದರೆ ತಗ್ಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ. ಹಿಂದಿನ ನಾಲ್ಕೈದು ವರ್ಷಗಳ ಅವಧಿಯಲ್ಲಿ ನೂರಾರು ರೈತರು ಸಾವಿಗೆ ಶರಣಾಗುತ್ತಿದ್ದರು. ಆದರೆ ಈ ಬಾರಿ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಕಿರುಹಣಕಾಸು ಸಂಸ್ಥೆಗಳು ರೈತರಿಗೆ ಕಿರುಕುಳ ನೀಡುವುದನ್ನು ತಡೆಯಲು ಕಠಿಣ ಕಾನೂನು ತರಲಾಗಿದೆ. ಬರ ಪರಿಸ್ಥಿತಿ ಮುಗಿಯುವವರೆಗೆ ಕನಿಷ್ಠ 6 ತಿಂಗಳ ಕಾಲ ಸಾಲ ಮರುಪಾವತಿಯನ್ನು ಮುಂದೂಡಲು ತೀರ್ಮಾನಿಸಲಾಗಿದೆ. ಸಹಕಾರಿ ಬ್ಯಾಂಕ್‌ಗಳಿಂದ ರೈತರಿಗೆ ಜಪ್ತಿ ಅಥವಾ ವಸೂಲಾತಿ ನೋಟಿಸ್ ಜಾರಿಯಾಗದಂತೆ ಸಹಕಾರ ಸಚಿವರ ಮೂಲಕ ಅಧಿಕೃತ ನಿರ್ದೇಶನ ರವಾನಿಸಲಾಗಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಅನಧಿಕೃತವಾಗಿ ನಡೆಯುವ ಖಾಸಗಿ ಕೈ ಸಾಲ ವ್ಯವಹಾರಗಳು ಸರ್ಕಾರದ ದಾಖಲೆಗೆ ಸಿಗದಿರುವುದು ಮತ್ತು ಸಾಲದಾತರ ಹಿಂಸೆಯಿಂದ ಕೆಲವು ಅಹಿತಕರ ಘಟನೆಗಳು ಸಂಭವಿಸುತ್ತಿದ್ದು, ಇವುಗಳ ನಿಯಂತ್ರಣಕ್ಕೂ ಸ್ಥಳೀಯ ಆಡಳಿತಕ್ಕೆ ಸೂಚಿಸಲಾಗಿದೆ.

ಬೆಲೆ ಏರಿಕೆಗೆ ಕೇಂದ್ರದ ನೀತಿಗಳೇ ಹೊಣೆ

ರಾಜ್ಯದಲ್ಲಿ ಹಾಲು, ಮೊಸರು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳದಿದ್ದರೂ, ಅದರ ಹಿಂದಿನ ಅನಿವಾರ್ಯತೆಯನ್ನು ಸರ್ಕಾರ ತೆರೆದಿಟ್ಟಿದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ತೆರಿಗೆ ಪಾಲು ಮತ್ತು ಜಿಎಸ್‌ಟಿ ಪರಿಹಾರ ಸರಿಯಾಗಿ ಸಿಗದಿರುವುದರಿಂದ ರಾಜ್ಯದ ಬೊಕ್ಕಸದ ಮೇಲೆ ತೀವ್ರ ಆರ್ಥಿಕ ಹೊರೆ ಬಿದ್ದಿದೆ. ಈ ವರ್ಷ ರಾಜ್ಯದಲ್ಲಿ ಭೀಕರ ಬರದ ಕಾರಣ ಹಾಲಿನ ಉತ್ಪಾದನೆ ತೀವ್ರವಾಗಿ ಕುಸಿದಿದೆ. ಹಾಲು ಉತ್ಪಾದಕ ರೈತರಿಗೆ ಪ್ರೋತ್ಸಾಹದಾಯಕ ದರ ನೀಡದಿದ್ದರೆ ಹೈನುಗಾರಿಕೆ ಸಂಪೂರ್ಣ ನಾಶವಾಗುವ ಅಪಾಯವಿತ್ತು. ಡೀಸೆಲ್ ಮತ್ತು ಕೃಷಿ ಪರಿಕರಗಳ ವೆಚ್ಚ ಹೆಚ್ಚಿರುವುದರಿಂದ ರೈತರ ಹಿತದೃಷ್ಟಿಯಿಂದ ಹಾಲಿನ ದರ ಪರಿಷ್ಕರಣೆ ಅನಿವಾರ್ಯವಾಯಿತು. ಕೇಂದ್ರ ಸರ್ಕಾರ ಮೊಸರಿನ ಮೇಲೂ ಶೇ. 5ರಷ್ಟು ಜಿಎಸ್‌ಟಿ ವಿಧಿಸಿರುವುದು ಸಾಮಾನ್ಯ ಗ್ರಾಹಕರಿಗೆ ಹೊರೆಯಾಗಿದ್ದು, ಕೇಂದ್ರವು ತನ್ನ ತೆರಿಗೆ ನೀತಿಯನ್ನು ಮರುಪರಿಶೀಲಿಸಬೇಕು ಎಂದು ಸರ್ಕಾರ ಒತ್ತಾಯಿಸಿದೆ.

ಶೇ. 56ರ ಮೀಸಲಾತಿ ರಕ್ಷಣೆ

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಒಳಗೊಂಡಂತೆ ಒಟ್ಟು ಮೀಸಲಾತಿ ಪ್ರಮಾಣವನ್ನು ಶೇ. 56ಕ್ಕೆ ಹೆಚ್ಚಿಸಿದ್ದ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ರದ್ದುಗೊಳಿಸಿ, ಶೇ. 50ರ ಮಿತಿಗೆ ಸೀಮಿತಗೊಳಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಈ ಕುರಿತು ಮಾತನಾಡಿದ ಡಾ. ಪರಮೇಶ್ವರ್, "ತಮಿಳುನಾಡಿನಲ್ಲಿ ಶೇ. 69ರಷ್ಟು ಮೀಸಲಾತಿಯನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸಿ ಸಾಂವಿಧಾನಿಕ ರಕ್ಷಣೆ ನೀಡಲಾಗಿದೆ. ಅದೇ ಮಾದರಿಯನ್ನು ಕರ್ನಾಟಕಕ್ಕೂ ಅನ್ವಯಿಸಬೇಕೆಂಬುದು ನಮ್ಮ ವಾದ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ಹೆಚ್ಚಳ ಮಾಡಿದ ಸಂದರ್ಭದಲ್ಲೇ ಕೇಂದ್ರದ ಮೇಲೆ ಒತ್ತಡ ಹೇರಿ 9ನೇ ಅನುಸೂಚಿಗೆ ಸೇರಿಸಿದ್ದರೆ ಕಾನೂನು ತೊಡಕು ಉಂಟಾಗುತ್ತಿರಲಿಲ್ಲ. ಈಗ ನೇಮಕಾತಿ ಪ್ರಕ್ರಿಯೆಗಳಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದ ಮೇಲೆ ಮುಂದಿನ ಹೆಜ್ಜೆ ಇಡಲಾಗುವುದು" ಎಂದರು.

Read More
Next Story