ರಾಜ್ಯದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ನಾಳೆ ಅಧಿಕೃತ ಪದಗ್ರಹಣ
x

ರಾಜ್ಯದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ನಾಳೆ ಅಧಿಕೃತ ಪದಗ್ರಹಣ

ನೂತನ ರಾಜ್ಯಪಾಲರ ಪದಗ್ರಹಣ ಸಮಾರಂಭಕ್ಕಾಗಿ ಲೋಕಭವನದಲ್ಲಿ ಸಿದ್ಧತೆಗಳು ನಡೆದಿವೆ. ಈ ಕ್ಷಣಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರು ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾಗಲಿದ್ದಾರೆ.


Click the Play button to hear this message in audio format

ರಾಜ್ಯದ ನೂತನ ರಾಜ್ಯಪಾಲರಾಗಿ ಬಿಜೆಪಿಯ ಹಿರಿಯ ನಾಯಕಿ, ಕರ್ತವ್ಯದ ಹಾದಿಯಲ್ಲಿ ಬಲಿದಾನಗೈದ ಯೋಧನ ಧರ್ಮಪತ್ನಿ ಡಾ. ಸುಧಾ ಯಾದವ್ ಅವರು ಗುರುವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕಳೆದ ಐದು ವರ್ಷಗಳ ಕಾಲ ಅತ್ಯಂತ ಘನತೆಯಿಂದ ರಾಜ್ಯಪಾಲರ ಹುದ್ದೆಯನ್ನು ನಿರ್ವಹಿಸಿದ್ದ ಥಾವರ್ ಚಂದ್ ಗೆಹ್ಲೋಟ್ ಬದಲಿಗೆ ಅವರ ಸ್ಥಾನಕ್ಕೆ ಡಾ. ಸುಧಾ ಯಾದವ್ ಅವರು ನಿಯೋಜನೆಗೊಂಡಿದ್ದಾರೆ.

ಡಾ. ಸುಧಾ ಯಾದವ್ ಅವರು ಕೇವಲ ರಾಜಕೀಯ ನಾಯಕಿಯಲ್ಲ, ಬದಲಾಗಿ ದೇಶಪ್ರೇಮ ಮತ್ತು ಸಂಘರ್ಷದ ಬದುಕನ್ನು ಹತ್ತಿರದಿಂದ ಕಂಡವರು. ಅವರು ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣ ಅರ್ಪಿಸಿದ ಹುತಾತ್ಮ ಯೋಧನ ಪತ್ನಿ. ವೈಯಕ್ತಿಕ ಬದುಕಿನಲ್ಲಿ ಅಪಾರ ನೋವನ್ನುಂಡರೂ, ಅದನ್ನು ದೃಢತೆಯಿಂದ ಮೆಟ್ಟಿ ನಿಂತು ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿದವರು. ರಸಾಯನಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಇವರು, ಉನ್ನತ ಶಿಕ್ಷಣ ಮತ್ತು ಸಂಶೋಧನೆಯ ಹಿನ್ನೆಲೆಯನ್ನು ಹೊಂದಿದ್ದಾರೆ. ಮಾಜಿ ಸಂಸದೆಯಾಗಿಯೂ ಕಾರ್ಯನಿರ್ವಹಿಸಿರುವ ಇವರು, ಪ್ರಸ್ತುತ ಬಿಜೆಪಿಯ ಅತ್ಯುನ್ನತ ನಿರ್ಧಾರಕ ಮಂಡಳಿಯಾದ ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯೆಯಾಗಿ ಪಕ್ಷದ ವರಿಷ್ಠರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.

ಬೆಂಗಳೂರಿಗೆ ಆಗಮನ

ಡಾ. ಸುಧಾ ಯಾದವ್ ಅವರು ಬುಧವಾರ ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಡಿಜಿ ಮತ್ತು ಐಜಿಪಿ ಡಾ. ಎಂ.ಎ. ಸಲೀಂ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು ವಿಮಾನ ನಿಲ್ದಾಣದಲ್ಲಿ ರಾಜ್ಯಪಾಲರನ್ನು ಬರಮಾಡಿಕೊಂಡರು. ಶುಕ್ರವಾರ ಬೆಳಗ್ಗೆ 10 ಗಂಟೆಗೆ ಲೋಕಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಅವರಿಗೆ ಅಧಿಕೃತವಾಗಿ ಪ್ರಮಾಣವಚನ ಬೋಧಿಸಲಿದ್ದಾರೆ.

ನೂತನ ರಾಜ್ಯಪಾಲರ ಪದಗ್ರಹಣ ಸಮಾರಂಭಕ್ಕಾಗಿ ಲೋಕಭವನದಲ್ಲಿ ಈಗಾಗಲೇ ಭರ್ಜರಿ ಸಿದ್ಧತೆಗಳು ನಡೆದಿವೆ. ಈ ಐತಿಹಾಸಿಕ ಕ್ಷಣಕ್ಕೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವರು, ವಿರೋಧ ಪಕ್ಷದ ನಾಯಕರು, ಬಿಜೆಪಿಯ ಹಿರಿಯ ನಾಯಕರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಸಾಕ್ಷಿಯಾಗಲಿದ್ದಾರೆ. ಗಾಜಿನ ಮನೆಯಲ್ಲಿ ನಡೆಯಲಿರುವ ಈ ಸಮಾರಂಭವು ರಾಜ್ಯದ ಸಾಂವಿಧಾನಿಕ ಘನತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಆಯೋಜಿಸಲಾಗಿದೆ. ಐದು ವರ್ಷಗಳ ಕಾಲ ಕರ್ನಾಟಕದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಲೋಕಭವನದ ವತಿಯಿಂದ ಅತ್ಯಂತ ಆತ್ಮೀಯವಾಗಿ ಬೀಳ್ಕೊಡಲಾಗಿದೆ.

ನೂತನ ರಾಜ್ಯಪಾಲರ ಮುಂದೆ ಇರುವ ಸವಾಲುಗಳು

ಡಾ. ಸುಧಾ ಯಾದವ್ ಅವರು ರಾಜ್ಯದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ವಹಿಸಿಕೊಳ್ಳುತ್ತಿರುವುದು ಕರ್ನಾಟಕದ ಪಾಲಿಗೆ ಹೊಸ ಆಯಾಮವನ್ನು ನೀಡಲಿದೆ. ಕರ್ನಾಟಕದ ಸಂಕೀರ್ಣ ರಾಜಕೀಯ ಸನ್ನಿವೇಶದಲ್ಲಿ, ಒಬ್ಬ ಅನುಭವಿ ರಾಜಕಾರಣಿಯಾಗಿ ಮತ್ತು ಮೇಧಾವಿಯಾಗಿ ಸುಧಾ ಯಾದವ್ ಅವರು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸಬೇಕಿದೆ. ಹುತಾತ್ಮ ಯೋಧನ ಪತ್ನಿಯಾಗಿ ಇವರ ಬದ್ಧತೆ ಮತ್ತು ದೇಶಭಕ್ತಿ ರಾಜ್ಯದ ಆಡಳಿತಕ್ಕೆ ಹೊಸ ಸ್ಫೂರ್ತಿಯನ್ನು ನೀಡಲಿದೆ ಎಂಬುದು ನಾಗರಿಕರ ಆಶಯ. ಪಿಎಚ್‌ಡಿ ಪದವೀಧರೆಯಾಗಿರುವ ಇವರಿಂದ ರಾಜ್ಯದ ಶಿಕ್ಷಣ ಕ್ಷೇತ್ರಕ್ಕೆ ಹೊಸ ಚಾಲನೆ ದೊರೆಯುವ ನಿರೀಕ್ಷೆಯೂ ಇದೆ. ವಿಶೇಷವಾಗಿ ಮಹಿಳಾ ಸಬಲೀಕರಣ, ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳ ಬಗ್ಗೆ ಇವರಿಗೆ ಇರುವ ಆಸಕ್ತಿ ರಾಜ್ಯದ ಜನತೆಗೆ ಪೂರಕವಾಗಲಿದೆ.

ಸುಧಾ ಯಾದವ್ ಅವರ ನೇಮಕವು ರಾಜ್ಯ ಬಿಜೆಪಿಯಲ್ಲಿಯೂ ಹೊಸ ಹುರುಪು ಮೂಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಇವರ ನೇಮಕವು, ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಪಕ್ಷದ ಚಟುವಟಿಕೆಗಳು ಮತ್ತು ರಾಜ್ಯ ಸರ್ಕಾರದೊಂದಿಗೆ ರಾಜ್ಯಪಾಲರ ಕಚೇರಿ ಹೊಂದಲಿರುವ ಸಂಬಂಧದ ದೃಷ್ಟಿಯಿಂದ ಅತ್ಯಂತ ಕುತೂಹಲಕಾರಿ ಎನಿಸಿದೆ.

Read More
Next Story