ಇತರೆ ರಾಜ್ಯಗಳ ಮಾದರಿಯಲ್ಲಿ ಕ್ರೀಡಾಪಟುಗಳ ಬಹುಮಾನ ಮರುಪರಿಶೀಲನೆ: ಪರಮೇಶ್ವರ್‌
x

ಇತರೆ ರಾಜ್ಯಗಳ ಮಾದರಿಯಲ್ಲಿ ಕ್ರೀಡಾಪಟುಗಳ ಬಹುಮಾನ ಮರುಪರಿಶೀಲನೆ: ಪರಮೇಶ್ವರ್‌

ರಾಜ್ಯದ ಕ್ರೀಡಾಪಟುಗಳಿಗೆ ನೀಡಲಾಗುವ ಬಹುಮಾನ ಮೊತ್ತವನ್ನುಇತರ ರಾಜ್ಯಗಳಿಗಿಂತ ಸ್ಪರ್ಧಾತ್ಮಕವಾಗಿ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.


Click the Play button to hear this message in audio format

ರಾಜ್ಯದ ಕ್ರೀಡಾಪಟುಗಳಿಗೆ ನೀಡಲಾಗುತ್ತಿರುವ ಪ್ರೋತ್ಸಾಹಕ ಬಹುಮಾನ ಮೊತ್ತವನ್ನು ಮರುಪರಿಶೀಲಿಸಿ, ಇತರ ರಾಜ್ಯಗಳಿಗಿಂತ ಸ್ಪರ್ಧಾತ್ಮಕವಾಗಿ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕ್ರೀಡಾ ಕ್ಷೇತ್ರದ ಜೊತೆಗೆ ರಾಜ್ಯವನ್ನು ಕಾಡುತ್ತಿರುವ ಭೀಕರ ಬರಗಾಲ, ಜಿಎಸ್‌ಟಿ ಸಂಗ್ರಹ, ಕಂದಾಯ ಇಲಾಖೆಯ ಸೇವಾ ಶುಲ್ಕ ಹಾಗೂ ಫಾರಂ-7 ದುರುಪಯೋಗದಂತಹ ಗಂಭೀರ ವಿಷಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ರಾಜ್ಯದ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದರೂ, ಬಹುಮಾನ ಮೊತ್ತದ ವಿಚಾರದಲ್ಲಿ ಇತರ ರಾಜ್ಯಗಳೊಂದಿಗೆ ತುಲನೆ ಮಾಡಿದಾಗ ಅಸಮಾಧಾನ ವ್ಯಕ್ತಪಡಿಸಿದ್ದರು. ಕ್ರೀಡಾಪಟುಗಳ ಬೇಡಿಕೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಇತರ ರಾಜ್ಯಗಳಲ್ಲಿ ಅಥ್ಲೀಟ್‌ಗಳಿಗೆ ನೀಡಲಾಗುತ್ತಿರುವ ಬಹುಮಾನದ ಮೊತ್ತದ ಕುರಿತಾದ ಅಂಕಿ-ಅಂಶಗಳನ್ನು ತರಿಸಿಕೊಳ್ಳಲಾಗಿದ್ದು, ನಮ್ಮ ರಾಜ್ಯದಲ್ಲಿ ಅದನ್ನು ಎಷ್ಟು ಹೆಚ್ಚಿಸಬೇಕು ಎಂಬುದರ ಕುರಿತು ಶೀಘ್ರದಲ್ಲೇ ಅಂತಿಮ ಘೋಷಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಇತ್ತೀಚೆಗೆ ಜಪಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್ ಸೇರಿದಂತೆ ವಿವಿಧ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿರುವ ಅಥ್ಲೀಟ್ ಪೂವಮ್ಮ ಅವರೊಂದಿಗೆ ತಾವು ಮಾತುಕತೆ ನಡೆಸಿರುವುದಾಗಿ ತಿಳಿಸಿದ ಅವರು, ಕ್ರೀಡಾಪಟುಗಳ ಕಷ್ಟ-ನಷ್ಟಗಳಿಗೆ ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಹೇಳಿದರು.

ಕೇಂದ್ರ ತಂಡದ ಪರಿಶೀಲನೆ ಹಾಗೂ ಪರಿಹಾರದ ನಿರೀಕ್ಷೆ

ರಾಜ್ಯದ 177 ತಾಲೂಕುಗಳಲ್ಲಿ ಸಂಭವಿಸಿರುವ ಭೀಕರ ಬರಗಾಲದ ಕುರಿತು ಮಾತನಾಡಿದ ಡಾ. ಪರಮೇಶ್ವರ ಅವರು, ಕೇಂದ್ರದ ಬರ ಅಧ್ಯಯನ ತಂಡವು ರಾಜ್ಯದ ಮೂಲೆಮೂಲೆಗಳಲ್ಲೂ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ ಎಂದರು. ಕೇಂದ್ರದ ತಂಡಗಳು ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದು, ಬೆಳೆ ಹಾನಿ ಮತ್ತು ರೈತರ ಸಂಕಷ್ಟಗಳನ್ನು ಕಣ್ಣಾರೆ ಕಂಡಿವೆ. ಮೊದಲ ಹಂತದಲ್ಲಿ ಘೋಷಿಸಲಾದ 101 ತಾಲೂಕುಗಳ ಜೊತೆಗೆ, ಎರಡನೇ ಹಂತದ 77 ತಾಲೂಕುಗಳನ್ನೂ ಪರಿಶೀಲಿಸುವಂತೆ ಸರ್ಕಾರ ಮನವಿ ಮಾಡಿದೆ. ರಾಜ್ಯದಲ್ಲಿ ಈವರೆಗೆ ಸುಮಾರು 46 ಸಾವಿರ ಕೋಟಿ ರೂ. ಮೌಲ್ಯದ ಬೆಳೆ ನಷ್ಟ ಉಂಟಾಗಿದೆ. ಇದರಲ್ಲಿ ಕನಿಷ್ಠ 10 ಸಾವಿರ ರೂ.ನಿಂದ 11 ಸಾವಿರ ಕೋಟಿ ರೂ. ಪರಿಹಾರವನ್ನು ಕೇಂದ್ರ ಸರ್ಕಾರದಿಂದ ನಿರೀಕ್ಷಿಸುತ್ತಿದ್ದೇವೆ ಎಂದು ವಿವರಿಸಿದರು. ಪರಿಶೀಲನೆ ಮುಗಿದ ಬಳಿಕ ಕೇಂದ್ರ ತಂಡ ಸಲ್ಲಿಸುವ ವರದಿಯ ಆಧಾರದ ಮೇಲೆ ಅಂತಿಮ ಮನವಿ ಸಲ್ಲಿಸಲಾಗುವುದು. ಅಗತ್ಯ ಬಿದ್ದರೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸರ್ವಪಕ್ಷ ನಿಯೋಗ ದೆಹಲಿಗೆ ತೆರಳಿ ಪ್ರಧಾನಿಯವರನ್ನು ಭೇಟಿ ಮಾಡಲಿದೆ ಎಂದು ತಿಳಿಸಿದರು.

ಕಂದಾಯ ಇಲಾಖೆಯ ವಿವಿಧ ಸೇವೆಗಳ ಶುಲ್ಕ ಏರಿಕೆಯ ಬಗ್ಗೆ ಸ್ಪಷ್ಟನೆ ನೀಡಿದ ಡಾ. ಪರಮೇಶ್ವರ, "ಜೀವನ ವೆಚ್ಚ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ಸರ್ಕಾರಿ ಸೇವೆಗಳ ನಿರ್ವಹಣಾ ವೆಚ್ಚವೂ ಹೆಚ್ಚಾಗುತ್ತದೆ. ರಾಜ್ಯಕ್ಕೆ ಬರಬೇಕಾದ ಕೇಂದ್ರದ ಅನುದಾನದಲ್ಲಿ ಕೊರತೆಯಾಗುತ್ತಿರುವಾಗ, ಆಡಳಿತಾತ್ಮಕವಾಗಿ ರಾಜ್ಯದ ಆದಾಯ ಮೂಲಗಳನ್ನು ಕ್ರೋಢೀಕರಿಸುವುದು ಅನಿವಾರ್ಯವಾಗಿದೆ. ಆದ್ದರಿಂದ ಕೆಲವು ಸೇವೆಗಳ ಶುಲ್ಕವನ್ನು ಸಣ್ಣ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ" ಎಂದು ಸಮರ್ಥಿಸಿಕೊಂಡರು.

ಭೂ ಸುಧಾರಣಾ ಕಾಯ್ದೆ 79ಎ, 79ಬಿ ಮರುಪರಿಶೀಲನೆ

ಭೂ ಸುಧಾರಣಾ ಕಾಯ್ದೆಯ ವಿವಾದಿತ ಕಲಂ 79ಎ ಮತ್ತು 79ಬಿ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಈ ಕುರಿತು ಸಾಕಷ್ಟು ಮನವಿಗಳು ಸಲ್ಲಿಕೆಯಾಗಿವೆ. "ಈ ಕಾನೂನುಗಳನ್ನು ಮರುಪರಿಶೀಲಿಸುವ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ, ರಾಜ್ಯದ ರೈತರ ಹಿತದೃಷ್ಟಿಯಿಂದ ಏನು ಮಾಡಬಹುದು ಎಂಬ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು" ಎಂದರು. ರಾಜ್ಯದ ಆರ್ಥಿಕ ಪರಿಸ್ಥಿತಿಯ ಕುರಿತು ಮಾತನಾಡಿದ ಡಾ. ಪರಮೇಶ್ವರ, ರಾಜ್ಯವು ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಆದರೆ, ರಾಜ್ಯದಲ್ಲಿ ಉಂಟಾಗಿರುವ ಭೀಕರ ಬರಗಾಲವು ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು. "ಕೃಷಿ ಚಟುವಟಿಕೆಗಳು ಕುಂಠಿತಗೊಂಡರೆ ಸಹಜವಾಗಿ ಜಿಎಸ್‌ಟಿ ಸಂಗ್ರಹವೂ ಕಡಿಮೆಯಾಗುವ ಸಂಭವವಿದೆ. ನಾವು ಈ ಪರಿಸ್ಥಿತಿಯನ್ನು ನಿಭಾಯಿಸಲು ಬಫರ್ ಸ್ಟಾಕ್ (ಮೀಸಲು) ಇಟ್ಟುಕೊಂಡಿದ್ದೇವೆ. ಜಿಎಸ್‌ಟಿ ಕೌನ್ಸಿಲ್ ಸಭೆಗಳಲ್ಲಿ ರಾಜ್ಯದ ಹಕ್ಕನ್ನು ಮಂಡಿಸುತ್ತಿದ್ದೇವೆ" ಎಂದು ಸ್ಪಷ್ಟಪಡಿಸಿದರು.

ಫಾರಂ-7 ದುರುಪಯೋಗ: ಚುನಾವಣಾ ಆಯೋಗಕ್ಕೆ ದೂರು

ಚುನಾವಣಾ ಪ್ರಕ್ರಿಯೆಯಲ್ಲಿನ ಫಾರಂ-7 (ಮತದಾರರ ಪಟ್ಟಿ ಸೇರ್ಪಡೆ/ತೆಗೆದುಹಾಕುವಿಕೆ) ದುರುಪಯೋಗದ ಬಗ್ಗೆ ಕಿಡಿಕಾರಿದ ಡಾ. ಪರಮೇಶ್ವರ, "ನಾವು ಸಾಕ್ಷ್ಯ ಸಹಿತ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಒಬ್ಬನೇ ವ್ಯಕ್ತಿ ನೂರಾರು ಅರ್ಜಿಗಳನ್ನು ಸಲ್ಲಿಸುವುದು ಹೇಗೆ ಸಾಧ್ಯ? ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು, ಎಲ್ಲೋ ಮುದ್ರಿಸಿದ ಫಾರಂಗಳನ್ನು ಸಲ್ಲಿಸುತ್ತಿರುವುದು ಕಾನೂನುಬಾಹಿರ. ಆಯೋಗವು ಈ ಬಗ್ಗೆ ಎಫ್‌ಐಆರ್ ದಾಖಲಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದರು.

Read More
Next Story