ಮತದಾರರ ಪಟ್ಟಿಯಿಂದ ಯಾರೂ ಹೊರಗುಳಿಯಬಾರದು: ಜಿಲ್ಲಾಧಿಕಾರಿಗಳಿಗೆ ಡಿಸಿಎಂ ಸೂಚನೆ
x

ಮತದಾರರ ಪಟ್ಟಿಯಿಂದ ಯಾರೂ ಹೊರಗುಳಿಯಬಾರದು: ಜಿಲ್ಲಾಧಿಕಾರಿಗಳಿಗೆ ಡಿಸಿಎಂ ಸೂಚನೆ

ರಾಜ್ಯದಲ್ಲಿ ಸುಮಾರು 43.81 ಲಕ್ಷ ಮತದಾರರ ಮ್ಯಾಪಿಂಗ್ ಬಾಕಿ ಇರುವುದು ಗಂಭೀರ ವಿಷಯ. ಹೆಸರು ತಿದ್ದುಪಡಿ ಸೇರಿದಂತೆ ಹಲವು ಕಾರಣಗಳಿಗಾಗಿ ನೋಟಿಸ್‌ ನೀಡಲಾಗಿದೆ ಎಂದು ಡಿಸಿಎಂ ತಿಳಿಸಿದ್ದಾರೆ.


Click the Play button to hear this message in audio format

ರಾಜ್ಯದಲ್ಲಿನ ಅರ್ಹ ಮತದಾರರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು. ವಲಸೆ ಹೋಗಿರುವವರ ಮಾಹಿತಿಯನ್ನು ಕರಾರುವಾಕ್ಕಾಗಿ ದಾಖಲಿಸಬೇಕು ಮತ್ತು ಬಡವರಿಗೆ ನಿವೇಶನ ನೀಡುವ ಯೋಜನೆಯನ್ನು ತಿಂಗಳಾಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ರಾಜ್ಯದಲ್ಲಿ ಸುಮಾರು 43.81 ಲಕ್ಷ ಮತದಾರರ ಮ್ಯಾಪಿಂಗ್ ಇನ್ನೂ ಬಾಕಿ ಇರುವುದು ಗಂಭೀರ ವಿಷಯ. ಹೆಸರು ತಿದ್ದುಪಡಿ ಸೇರಿದಂತೆ ಹಲವು ಕಾರಣಗಳಿಗಾಗಿ ನೋಟಿಸ್‌ಗಳನ್ನು ನೀಡಲಾಗಿದೆ. ಆದರೆ, ಬೇರೆ ಊರುಗಳಿಗೆ ಸ್ಥಳಾಂತರಗೊಂಡಿರುವವರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿ. ಸ್ಥಳಾಂತರಗೊಂಡಿರುವವರ ನಿಖರ ಮಾಹಿತಿಯನ್ನು ಎಸ್‌ಐಆರ್ ಪ್ರಕ್ರಿಯೆಯಲ್ಲಿ ದಾಖಲಿಸಬೇಕು. ಶಾಶ್ವತ ನಿವಾಸಿಗಳ ಪ್ರಮಾಣಪತ್ರ ನೀಡುವಲ್ಲಿ ವಿಳಂಬ ಮಾಡಬಾರದು ಮತ್ತು ಅರ್ಜಿ ನಮೂನೆ 6ರ ಮೂಲಕ ಸಲ್ಲಿಕೆಯಾಗುವ ಅರ್ಜಿಗಳಿಗೆ ಹೆಚ್ಚಿನ ಒತ್ತು ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದರು.

'ಭಾರತ್ ಜೋಡೋ ಯುವ ಸಂಘ' – ಸಿಎಂ ಕನಸಿನ ಯೋಜನೆಗೆ ವೇಗ

ಮುಖ್ಯಮಂತ್ರಿಯವರ ಮಹತ್ವಾಕಾಂಕ್ಷೆಯ ಯೋಜನೆಯಾದ 'ಭಾರತ್ ಜೋಡೋ ಯುವ ಸಂಘ'ದ ನೋಂದಣಿ ಕಾರ್ಯವನ್ನು ತೀವ್ರಗೊಳಿಸುವಂತೆ ಸೂಚಿಸಿದರು. ಇದು ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಯಾಗುತ್ತಿರುವ ಕಾರ್ಯಕ್ರಮವಾಗಿದೆ. ತಾಂತ್ರಿಕ ಕಾರಣಗಳಿಂದಾಗಿ ಈವರೆಗೆ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು, ಆದರೆ ಈಗ ಅದಕ್ಕೆ ವೇಗ ನೀಡಬೇಕು. ಕೂಡಲೇ ಅರ್ಜಿ ನಮೂನೆಗಳನ್ನು ವಿತರಿಸಿ, ಭರ್ತಿ ಮಾಡಿಸುವ ಮೂಲಕ ಮೆಂಟರ್‌ಗಳ ನೇಮಕ ಮತ್ತು ಸಂಘಗಳ ನೋಂದಣಿಯನ್ನು ತ್ವರಿತಗೊಳಿಸಿ ಎಂದು ತಾಕೀತು ಮಾಡಿದರು. ಈ ಯೋಜನೆ ಯಶಸ್ವಿಯಾದರೆ ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೂ ಉತ್ತಮ ಹೆಸರು ಬರಲಿದೆ ಎಂದು ಅಭಿಪ್ರಾಯಪಟ್ಟರು.

ಪ್ರಜಾಸೇವಾ ಅಭಿಯಾನದಲ್ಲಿ ಸಲ್ಲಿಕೆಯಾಗುತ್ತಿರುವ ಹೆಚ್ಚಿನ ಅರ್ಜಿಗಳು ಕಂದಾಯ ಇಲಾಖೆಗೆ ಸಂಬಂಧಿಸಿದ್ದಾಗಿವೆ. ಅವುಗಳ ತ್ವರಿತ ವಿಲೇವಾರಿಗೆ ಆದ್ಯತೆ ನೀಡಬೇಕು. ಪಹಣಿ ತಿದ್ದುಪಡಿ, ಪೋಡಿ ಮತ್ತು ಪಿಂಚಣಿ ಸಮಸ್ಯೆ ಕುರಿತ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಬೇಕು. ಸರ್ಕಾರ ಈಗಾಗಲೇ ಆರ್‌ಟಿಸಿ ಮತ್ತು ಪೋಡಿ ಪ್ರಕರಣಗಳಿಗಾಗಿ ನಿಯಮಗಳನ್ನು ಸರಳೀಕರಿಸಿದೆ. ಇದರ ಹೊರತಾಗಿಯೂ ಎಲ್ಲಿಯಾದರೂ ಗೊಂದಲಗಳಿದ್ದರೆ, ಹಿರಿಯ ಅಧಿಕಾರಿಗಳಿಂದ ಮಾರ್ಗದರ್ಶನ ಪಡೆದು ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರು.

ಬಡವರಿಗೆ ನಿವೇಶನ: ತಿಂಗಳಾಂತ್ಯಕ್ಕೆ ಗಡುವು

ರಾಜ್ಯದಲ್ಲಿ ಬಡವರಿಗೆ ನಿವೇಶನ ನೀಡುವ ಯೋಜನೆಯು ಜನರಲ್ಲಿ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಈ ಯೋಜನೆಯ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು. ಕೆಲವು ಜಿಲ್ಲೆಗಳಲ್ಲಿ ನಿವೇಶನ ನಿರ್ಮಾಣಕ್ಕಾಗಿ ಭೂಮಿ ಗುರುತಿಸುವ ಕೆಲಸವೇ ಇನ್ನೂ ಆಗಿಲ್ಲ. ಈ ಕಾರ್ಯವನ್ನು ತಿಂಗಳಾಂತ್ಯದೊಳಗೆ ಪೂರ್ಣಗೊಳಿಸಬೇಕು. ಇದು ಬಡವರ ಬದುಕಿಗೆ ಸಂಬಂಧಿಸಿದ ಯೋಜನೆಯಾಗಿರುವುದರಿಂದ ಯಾವುದೇ ವಿಳಂಬವನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ ಅವರು, ರಾಜ್ಯದ ಆಡಳಿತ ಯಂತ್ರವು ಜನಸಾಮಾನ್ಯರಿಗೆ ತಲುಪಬೇಕಾದರೆ ಕಂದಾಯ ಇಲಾಖೆಯ ಪಾತ್ರ ಬಹಳ ಮುಖ್ಯ. ಅಧಿಕಾರಿಗಳು ಕಚೇರಿಗಳಲ್ಲಿ ಕುಳಿತುಕೊಳ್ಳುವುದಕ್ಕಿಂತ ಜನರ ಸಮಸ್ಯೆಗಳನ್ನು ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

Read More
Next Story