ರಾಜ್ಯದಲ್ಲಿ ಬರ ಪರಿಸ್ಥಿತಿ: ರೈತರ ನೆರವಿಗೆ ಸರ್ಕಾರ ಬದ್ಧ - ಡಿಸಿಎಂ ಪರಮೇಶ್ವರ
x

ರಾಜ್ಯದಲ್ಲಿ ಬರ ಪರಿಸ್ಥಿತಿ: ರೈತರ ನೆರವಿಗೆ ಸರ್ಕಾರ ಬದ್ಧ - ಡಿಸಿಎಂ ಪರಮೇಶ್ವರ

ರಾಜ್ಯದ ಶೇ. 90ರಷ್ಟು ಬೆಳೆಗಳು ಮಳೆಯ ಅಭಾವದಿಂದ ಸಂಪೂರ್ಣ ನಾಶವಾಗಿವೆ. ಈ ಕ್ಲಿಷ್ಟಕರ ಸಮಯದಲ್ಲಿ ರೈತರನ್ನು ಹತಾಶೆಯಿಂದ ಪಾರು ಮಾಡುವುದೇ ಸರ್ಕಾರದ ಮೊದಲ ಆದ್ಯತೆ ಎಂದು ಡಿಸಿಎಂ ಹೇಳಿದ್ದಾರೆ.


Click the Play button to hear this message in audio format

ರಾಜ್ಯವು ಕಳೆದ 75 ವರ್ಷಗಳಲ್ಲಿಯೇ ಕಾಣದಂತಹ ಭೀಕರ ಬರಗಾಲದ ಸಂಕಷ್ಟವನ್ನು ಎದುರಿಸುತ್ತಿದೆ. ರಾಜ್ಯದ ಶೇ. 90ರಷ್ಟು ಬೆಳೆಗಳು ಮಳೆಯ ಅಭಾವದಿಂದ ಸಂಪೂರ್ಣ ನಾಶವಾಗಿವೆ. ಈ ಕ್ಲಿಷ್ಟಕರ ಸಮಯದಲ್ಲಿ ರೈತರನ್ನು ಹತಾಶೆಯಿಂದ ಪಾರು ಮಾಡುವುದೇ ಸರ್ಕಾರದ ಮೊದಲ ಆದ್ಯತೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಘೋಷಿಸಿದ್ದಾರೆ. ಬಳ್ಳಾರಿ ತಾಲೂಕಿನ ಬರಪೀಡಿತ ಹಲಕುಂದಿ ಗ್ರಾಮಕ್ಕೆ ಭೇಟಿ ನೀಡಿ, ಒಣಗಿದ ತೊಗರಿ ಬೆಳೆಯನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು, ರಾಜ್ಯದ 240 ತಾಲೂಕುಗಳ ಪೈಕಿ ಬಹುತೇಕ ತಾಲೂಕುಗಳು ಬರಪೀಡಿತವಾಗಿವೆ. ಈಗಾಗಲೇ 217 ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದೆ. ಇನ್ನುಳಿದ 23 ತಾಲೂಕುಗಳಲ್ಲಿ ಗ್ರೌಂಡ್ ಟ್ರೂತಿಂಗ್ ಪ್ರಕ್ರಿಯೆ ನಡೆಯುತ್ತಿದ್ದು, ಆ ಪೈಕಿ ಸುಮಾರು 10-15 ತಾಲೂಕುಗಳು ಶೀಘ್ರವೇ ಬರ ಪಟ್ಟಿಗೆ ಸೇರಲಿವೆ. ಕರಾವಳಿ ಭಾಗವನ್ನು ಹೊರತುಪಡಿಸಿ, ರಾಜ್ಯದ ರೈತರು ಅಕ್ಷರಶಃ ಮಳೆಗಾಗಿ ಹಲುಬುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ ಮಳೆಯಾಶ್ರಿತ ಪ್ರದೇಶಗಳಷ್ಟೇ ಅಲ್ಲದೆ, ನೀರಾವರಿ ಪ್ರದೇಶಗಳಲ್ಲೂ ಬೆಳೆ ನಾಶವಾಗಿರುವುದು ರೈತನ ಬದುಕನ್ನು ಅತಂತ್ರಗೊಳಿಸಿದೆ ಎಂದು ಹೇಳಿದರು.

ರೈತನ ಕಣ್ಣೀರು: ಬಿತ್ತಿದ ಬೆಳೆ ಕೈಗೆ ಸಿಗುತ್ತಿಲ್ಲ

"ರೈತರು ಮೊದಲು ತೊಗರಿ ಬಿತ್ತಿದರು, ಮಳೆ ಕೈಕೊಟ್ಟಿತು. ನಂತರ ಸ್ವಲ್ಪ ಮಳೆ ಬಂದಾಗ ಜೋಳ ಸೇರಿದಂತೆ ಪರ್ಯಾಯ ಬೆಳೆಗಳನ್ನು ಬಿತ್ತಿದರು, ಅದೂ ಉಳಿಯಲಿಲ್ಲ. ಈಗ ರೈತನ ಕೈಗೆ ಯಾವುದೇ ಬೆಳೆ ಸಿಗುತ್ತಿಲ್ಲ. ಮಹಾರಾಷ್ಟ್ರ ಮತ್ತು ಕಾವೇರಿ ಜಲಾಶಯಗಳ ಜಲಾನಯನ ಪ್ರದೇಶಗಳಲ್ಲಿ ಸ್ವಲ್ಪ ಮಳೆಯಾಗಿ ಆಲಮಟ್ಟಿ, ಕೆಆರ್‌ಎಸ್, ಹಾರಂಗಿ ಜಲಾಶಯಗಳಿಗೆ ಅಲ್ಪ ಪ್ರಮಾಣದ ನೀರು ಬಂದಿದೆಯಾದರೂ, ಅದರಲ್ಲಿಯೂ ರಾಜ್ಯದ ಪಾಲಿನ ನೀರನ್ನು ತಮಿಳುನಾಡಿಗೆ ಹರಿಸುವ ಅನಿವಾರ್ಯತೆ ಎದುರಾಗಿದೆ" ಎಂದು ಹೇಳಿದರು. ಕೇಂದ್ರ ಸರ್ಕಾರದಿಂದ ಪರಿಹಾರ ಬರಲು ತಡವಾಗುತ್ತಿದ್ದರೂ, ಸರ್ಕಾರ ಕೈ ಕಟ್ಟಿ ಕೂರಲು ಸಿದ್ಧವಿಲ್ಲ. ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಪ್ರತಿ ಹೆಕ್ಟೇರ್‌ಗೆ 8,500 ರೂ. ಪರಿಹಾರ ನೀಡಬೇಕಿದೆ. ಆದರೆ, ಕೇಂದ್ರದಿಂದ ಇದುವರೆಗೆ ಒಂದು ಪೈಸೆಯೂ ಬಿಡುಗಡೆಯಾಗಿಲ್ಲ. ಆದರೂ, ರೈತರ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ತನ್ನದೇ ಸಂಪನ್ಮೂಲದಿಂದ ಮೊದಲ ಕಂತಿನ ಪರಿಹಾರವಾಗಿ ಎಕರೆಗೆ 2,500 ರೂ. ಬಿಡುಗಡೆ ಮಾಡಲು ಆದೇಶಿಸಿದೆ. "ಕೇಂದ್ರದ ಹಣಕ್ಕಾಗಿ ಕಾಯುತ್ತಾ ಕಾಲಹರಣ ಮಾಡುವುದಿಲ್ಲ. ಸಾಧ್ಯವಾದಷ್ಟು ನೆರವನ್ನು ರೈತರಿಗೆ ತಲುಪಿಸುತ್ತೇವೆ ಎಂದು ಭರವಸೆ ನೀಡಿದರು.

46 ಸಾವಿರ ರೂ. ಕೋಟಿ ನಷ್ಟ - ಕೇಂದ್ರಕ್ಕೆ ಮನವಿ

ಬರ ಪರಿಸ್ಥಿತಿಯಿಂದಾಗಿ ರಾಜ್ಯದಲ್ಲಿ ಸುಮಾರು 46 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಎನ್‌ಡಿಆರ್‌ಎಫ್ ನಿಯಮಗಳ ಅಡಿಯಲ್ಲಿ ಸುಮಾರು 11 ಸಾವಿರ ರೂ. ನಿಂದ 11,500 ಕೋಟಿ ರೂ. ನೆರವು ಕೋರಿ ಕೇಂದ್ರಕ್ಕೆ ಎರಡು ಮನವಿ ಸಲ್ಲಿಸಲಾಗಿದೆ. ಕೇಂದ್ರ ತಂಡಗಳು ರಾಜ್ಯಕ್ಕೆ ಬಂದು ಪರಿಶೀಲನೆ ನಡೆಸಿದ್ದು, ವರದಿ ಸಲ್ಲಿಕೆಯಾದ ಬಳಿಕ ಅನುದಾನ ಬಿಡುಗಡೆಯ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದರು. 2023ರ ಬರಗಾಲದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಯ ನಂತರವೇ ಕೇಂದ್ರದಿಂದ ₹3,500 ಕೋಟಿ ಸಿಕ್ಕಿತ್ತು ಎಂಬುದನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿದರು.

ಬ್ಯಾಂಕ್‌ಗಳಿಂದ ರೈತರಿಗೆ ಬರುತ್ತಿರುವ ಸಾಲ ವಸೂಲಿ ನೋಟಿಸ್‌ಗಳ ಬಗ್ಗೆ ಆತಂಕಪಡಬೇಡಿ ಎಂದು ಸಾರ್ವಜನಿಕವಾಗಿ ಮನವಿ ಮಾಡಿದ ಡಿಸಿಎಂ, ಸಾಲ ವಸೂಲಿಯನ್ನು ಮುಂದೂಡುವಂತೆ ಹಾಗೂ ಮರುಹೊಂದಾಣಿಕೆ ಮಾಡುವಂತೆ ಎಲ್ಲ ಬ್ಯಾಂಕ್‌ಗಳಿಗೆ ಸರ್ಕಾರ ಖಡಕ್ ಸೂಚನೆ ನೀಡಿದೆ ಎಂದರು. ಯಾವುದೇ ಖಾಸಗಿ ಅಥವಾ ರಾಷ್ಟ್ರೀಕೃತ ಬ್ಯಾಂಕ್ ರೈತರನ್ನು ಕಿರುಕುಳಕ್ಕೊಳಪಡಿಸದಂತೆ ಎಚ್ಚರಿಕೆ ವಹಿಸಲಾಗುವುದು. ಸರ್ಕಾರದ ವಿವಿಧ ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ಕುಟುಂಬಕ್ಕೆ ಆರ್ಥಿಕ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ರೈತನ ಬದುಕು ಉಳಿಸುವುದೇ ನಮ್ಮ ಮೊದಲ ಆದ್ಯತೆ, ರಸ್ತೆ ಅಥವಾ ಇತರೆ ಕಾಮಗಾರಿಗಳು ನಂತರದ ವಿಷಯ ಎಂದು ಸ್ಪಷ್ಟಪಡಿಸಿದರು.

ಕುಡಿಯುವ ನೀರು - ಹಾಲಿನ ದರದ ವಿಚಾರ

ಬರಗಾಲದಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುತ್ತಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಜಿಲ್ಲಾಧಿಕಾರಿಗಳಿಗೆ ಪೂರ್ಣ ಅಧಿಕಾರ ಮತ್ತು ಅನುದಾನ ನೀಡಲಾಗಿದೆ. ಇನ್ನು ಹಾಲಿನ ದರ ಏರಿಕೆಯ ವಿಚಾರಕ್ಕೆ ಸಂಬಂಧಿಸಿದಂತೆ, ಗ್ರಾಹಕರ ಹಿತ ಮತ್ತು ಹಾಲು ಉತ್ಪಾದಿಸುವ ರೈತರ ಆರ್ಥಿಕ ಭದ್ರತೆ - ಎರಡರ ನಡುವೆ ಸಮತೋಲನ ಕಾಯ್ದುಕೊಳ್ಳುವ ನಿರ್ಧಾರ ತೆಗೆದುಕೊಳ್ಳಲಾಗುವುದು. ರೈತರಿಗೆ ಪ್ರೋತ್ಸಾಹ ಇಲ್ಲದೆ ಹೈನುಗಾರಿಕೆ ಉಳಿಯಲು ಸಾಧ್ಯವಿಲ್ಲ ಎಂದರು.

Read More
Next Story