
ಬರ ಘೋಷಣೆಗೆ ಕೇಂದ್ರದ ಮಾನದಂಡವೇ ಆಧಾರ: ಡಿಸಿಎಂ ಡಾ. ಜಿ. ಪರಮೇಶ್ವರ್ ಸ್ಪಷ್ಟನೆ
ಮುಂದಿನ ಒಂದು ವಾರದಲ್ಲಿ ಮತ್ತೆ ಪರಿಶೀಲನೆ ನಡೆಸಿ, ಮಾನದಂಡಗಳಿಗೆ ಒಳಪಡುವ ಉಳಿದ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗುವುದು ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ರಾಜ್ಯದಲ್ಲಿ ಉಂಟಾಗಿರುವ ತೀವ್ರ ಬರ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಯುದ್ಧೋಪಾದಿಯಲ್ಲಿ ಸಿದ್ಧತೆ ನಡೆಸಿದ್ದು, ಕೇಂದ್ರ ಸರ್ಕಾರದ ಮಾನದಂಡಗಳ ಅನ್ವಯವೇ ಬರಪೀಡಿತ ಪ್ರದೇಶಗಳ ಘೋಷಣೆ ಮಾಡಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಮೈಸೂರಿನ ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ಬರಗಾಲದ ಸ್ಥಿತಿಗತಿಗಳನ್ನು ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ರೈತರ ಸಂಕಷ್ಟಕ್ಕೆ ಸ್ಪಂದಿಸಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ ಈಗಾಗಲೇ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ರಾಜ್ಯದ ಕಾನೂನಿನ ಅಡಿ ಮಾತ್ರ ಬರ ಘೋಷಣೆ ಮಾಡಿದರೆ ಕೇಂದ್ರದಿಂದ ಪರಿಹಾರ ಸಿಗುವುದಿಲ್ಲ. ಕೇಂದ್ರ ಸರ್ಕಾರದ ಕಟ್ಟುನಿಟ್ಟಾದ ನಿಯಮಗಳ ಅಡಿಯಲ್ಲೇ ಬರಪೀಡಿತ ತಾಲೂಕುಗಳನ್ನು ಘೋಷಿಸಬೇಕಿದೆ. ಮುಂದಿನ ಒಂದು ವಾರದಲ್ಲಿ ಮತ್ತೆ ಪರಿಶೀಲನೆ ನಡೆಸಿ, ಮಾನದಂಡಗಳಿಗೆ ಒಳಪಡುವ ಉಳಿದ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗುವುದು. ಇನ್ನೆರಡು ವಾರಗಳಲ್ಲಿ ಸಮಗ್ರ ಬರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು. ಕೇಂದ್ರದ ತಂಡವು ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರವಷ್ಟೇ ಎನ್‌ಡಿಆರ್‌ಎಫ್ ಅಡಿಯಲ್ಲಿ ಪರಿಹಾರ ನಿಧಿ ಬಿಡುಗಡೆಯಾಗಲಿದೆ ಎಂದು ಹೇಳಿದರು.
ಸಚಿವರ ತಂಡದ ಸಕ್ರಿಯ ವೀಕ್ಷಣೆ
ಮುಖ್ಯಮಂತ್ರಿಗಳು ಸ್ವತಃ ಗದಗ ಜಿಲ್ಲೆಯಲ್ಲಿ ಬರ ಪರಿಶೀಲನೆ ನಡೆಸುತ್ತಿದ್ದರೆ, ಎಲ್ಲಾ ಸಚಿವರು ತಮಗೆ ನಿಯೋಜಿತವಾಗಿರುವ ಜಿಲ್ಲೆಗಳಲ್ಲಿ ಕ್ಷೇತ್ರ ಭೇಟಿ ನೀಡುತ್ತಿದ್ದಾರೆ. ಈ ಮೂಲಕ ವಾಸ್ತವ ಸ್ಥಿತಿಯನ್ನು ಅರಿತು, ರೈತರಿಗೆ ಬೆಳೆ ವಿಮೆ, ಪರಿಹಾರದ ಕ್ರಮಗಳ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಹುಣಸೂರು ಮತ್ತು ಪಿರಿಯಾಪಟ್ಟಣ ತಾಲೂಕುಗಳಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ತಂಬಾಕು ರೈತರು ಭಾರಿ ನಷ್ಟ ಅನುಭವಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಜೋಳದ ಬೆಳೆಗೆ ಅಂಟಿಕೊಂಡಿರುವ ಬಿಳಿಸುಳಿ ರೋಗವು ಆತಂಕವನ್ನುಂಟು ಮಾಡಿದೆ. ಪ್ರಸ್ತುತ ವಿಮಾ ನಿಯಮಗಳ ಪ್ರಕಾರ ಬಿಳಿಸುಳಿ ರೋಗಕ್ಕೆ ಪರಿಹಾರ ಸಿಗುವುದಿಲ್ಲ. ಈ ಬಗ್ಗೆ ವಿಮಾ ಕಂಪನಿಗಳೊಂದಿಗೆ ಚರ್ಚಿಸಿ ರೈತರಿಗೆ ಸಹಾಯ ಮಾಡಲಾಗುವುದು ಎಂದು ಅಶ್ವಾಸನೆ ನೀಡಿದರು.
ಎಲ್ ನಿನೋ ಪ್ರಭಾವ, ಹವಾಮಾನ ವೈಪರೀತ್ಯ
123 ವರ್ಷಗಳ ಬಳಿಕ ಎಲ್ ನಿನೋ ಪ್ರಭಾವದಿಂದಾಗಿ ಮಳೆಯ ಪ್ರಮಾಣದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಸೆಪ್ಟೆಂಬರ್ ಮೊದಲ ಅಥವಾ ಎರಡನೇ ವಾರದ ಬಳಿಕ ಮಳೆ ಸಂಪೂರ್ಣವಾಗಿ ನಿಂತು ಹೋಗುವ ಸಾಧ್ಯತೆಯಿದೆ ಎಂಬ ಮಾಹಿತಿಯಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿಗಾಗಿ ಸರ್ಕಾರ ಈಗಿನಿಂದಲೇ ಸಿದ್ಧತೆಗಳನ್ನು ಆರಂಭಿಸಿದೆ. ಮೋಡ ಬಿತ್ತನೆ ಸಂಬಂಧ ಈಗಾಗಲೇ ಸರ್ಕಾರ ಆದೇಶ ನೀಡಿದೆ. ತಾಂತ್ರಿಕ ತಂಡವು ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಮೋಡ ಬಿತ್ತನೆಯಿಂದ ಅಧಿಕ ಮಳೆಯಾಗದಿದ್ದರೂ, ಬೆಳೆಗಳಿಗೆ ತುಂತುರು ಮಳೆ ಲಭ್ಯವಾದರೆ ಸಾಕು ಎಂಬ ನಿಟ್ಟಿನಲ್ಲಿ ತಾಂತ್ರಿಕ ವರದಿಯನ್ನು ಆಧರಿಸಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದರು.
ತಂಬಾಕು ಬೆಳೆಗಾರರ ಸಂಕಷ್ಟ - ಪರಿಹಾರ
ಹುಣಸೂರು ತಾಲೂಕೊಂದರಲ್ಲೇ 16 ಸಾವಿರ ಹೆಕ್ಟೇರ್‌ಗೂ ಹೆಚ್ಚು ತಂಬಾಕು ಬೆಳೆ ಹಾನಿಯಾಗಿದೆ. ಕೇಂದ್ರ ಸರ್ಕಾರದ ನಿಯಮದಂತೆ ವಾಣಿಜ್ಯ ಬೆಳೆಗಳಿಗೆ ಪರಿಹಾರ ನೀಡುವ ಅವಕಾಶವಿಲ್ಲದಿದ್ದರೂ, ರಾಜ್ಯ ಸರ್ಕಾರವು ತನ್ನದೇ ಆದ ಪರಿಹಾರ ನೀತಿಯನ್ನು ರೂಪಿಸುವ ಕುರಿತು ಚರ್ಚೆ ನಡೆಸಲಿದೆ. ಈ ನಷ್ಟವು ಕೇವಲ ಒಂದು ತಾಲೂಕಿಗೆ ಸೀಮಿತವಾಗಿಲ್ಲ, ನೆರೆಯ ಆರು ತಾಲೂಕುಗಳಲ್ಲೂ ಇದೇ ಪರಿಸ್ಥಿತಿಯಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ರೈತರಿಗೆ ಮಾನವೀಯ ನೆಲೆಯಲ್ಲಿ ಏನು ಸಹಾಯ ಮಾಡಬಹುದು ಎಂಬುದನ್ನು ಅಂತಿಮಗೊಳಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

