
ಹಳ್ಳಿಕಾರ್ ಸಮುದಾಯಕ್ಕೆ ಮೀಸಲಾತಿ ಕುರಿತು ಸಿಎಂ ಜೊತೆ ಚರ್ಚೆ: ಡಿಸಿಎಂ ಪರಮೇಶ್ವರ್
ದಶಕಗಳಿಂದ ನಿರ್ಲಕ್ಷ್ಯಕ್ಕೊಳಗಾಗಿರುವ ಹಳ್ಳಿಕಾರ್ ಸಮುದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗಕ್ಕೆ ಸೇರ್ಪಡಿಸಲು ಸರ್ಕಾರ ಬದ್ಧವಾಗಿದೆ ಎಂದು ಡಿಸಿಎಂ ಡಾ. ಜಿ. ಪರಮೇಶ್ವರ ಭರವಸೆ ನೀಡಿದ್ದಾರೆ.
ರಾಜ್ಯದಲ್ಲಿ ಅತೀ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಹಾಗೂ ದಶಕಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಹಳ್ಳಿಕಾರ್ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಕಲ್ಪಿಸುವ ಅಗತ್ಯವಿದೆ. ಈ ಸಮುದಾಯವನ್ನು ಹಿಂದುಳಿದ ವರ್ಗಗಳ ಸೂಕ್ತ ಪ್ರವರ್ಗಕ್ಕೆ ಸೇರ್ಪಡೆಗೊಳಿಸುವ ವಿಚಾರದಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಭರವಸೆ ನೀಡಿದ್ದಾರೆ.
ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್ ಕನ್ವೆನ್ಷನ್ ಹಾಲ್ನಲ್ಲಿ ಆರ್.ಎಂ.ಆರ್. ಹಳ್ಳಿಕಾರ್ ಫೌಂಡೇಷನ್ ಟ್ರಸ್ಟ್ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಮಾರಂಭದಲ್ಲಿ 2025-26ನೇ ಸಾಲಿನ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಸಾಧನೆಗೈದ ಹಳ್ಳಿಕಾರ್ ಸಮುದಾಯದ ನೂರಾರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಡಾ. ಪರಮೇಶ್ವರ, "ಸಮಾಜದ ಕಡೆಯ ಸಾಲಿನಲ್ಲಿರುವ ಸಣ್ಣ ಸಮುದಾಯಗಳು ಇಂದಿಗೂ ಅಭಿವೃದ್ಧಿಯ ಮುಖ್ಯವಾಹಿನಿಯಿಂದ ದೂರವಿವೆ. ಈ ಸಮುದಾಯಗಳ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ, ಅವರಿಗೆ ಅಗತ್ಯವಾದ ಉತ್ತೇಜನ ನೀಡಲು ಈ ಹಿಂದೆ ಚಿನ್ನಸ್ವಾಮಿ ಆಯೋಗ, ವೆಂಕಟಸ್ವಾಮಿ ಆಯೋಗ ಮತ್ತು ಕಾಂತರಾಜ್ ಆಯೋಗದಂತಹ ಅನೇಕ ಆಯೋಗಗಳನ್ನು ರಚಿಸಲಾಗಿತ್ತು. ಆದರೆ, ವಾಸ್ತವದಲ್ಲಿ ಇನ್ನೂ ಅನೇಕ ಸಮುದಾಯಗಳಿಗೆ ಸೂಕ್ತ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯ ಸಿಕ್ಕಿಲ್ಲ" ಎಂದು ವಿಷಾದಿಸಿದರು. ಹಳ್ಳಿಕಾರ್ ಸಮುದಾಯವನ್ನು ಹಿಂದುಳಿದ ವರ್ಗದ ಪ್ರವರ್ಗಕ್ಕೆ ಸೇರಿಸುವ ಕುರಿತು ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, "ಈ ಸಮುದಾಯದ ಬೇಡಿಕೆ ಅತ್ಯಂತ ನ್ಯಾಯಯುತವಾಗಿದೆ. ನಾನು ಈ ಪ್ರಸ್ತಾವನೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಈ ಕುರಿತು ಸವಿಸ್ತಾರವಾಗಿ ಚರ್ಚಿಸುತ್ತೇನೆ. ಮುಖ್ಯಮಂತ್ರಿ ಅವರು ಮನಸ್ಸು ಮಾಡಿದರೆ, ಈ ಸಮುದಾಯಕ್ಕೆ ಸಿಗಬೇಕಾದ ಸ್ಥಾನಮಾನವನ್ನು ಖಂಡಿತವಾಗಿಯೂ ಕಲ್ಪಿಸಿಕೊಡಬಹುದು. ಅವರ ಒಪ್ಪಿಗೆ ಪಡೆಯಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ" ಎಂದು ಅಶ್ವಾಸನೆ ನೀಡಿದರು.
ಶಿಕ್ಷಣವೇ ಸಾಮಾಜಿಕ ಬದಲಾವಣೆಯ ಕೀಲಿಕೈ
ಕೆ.ಎಂ. ನಾಗರಾಜ ಅವರು ಹಮ್ಮಿಕೊಂಡಿರುವ ಸಮಾಜ ಸೇವೆಯನ್ನು ಕೊಂಡಾಡಿದ ಡಾ. ಪರಮೇಶ್ವರ, "ಸುಮಾರು 2,500 ವಿದ್ಯಾರ್ಥಿಗಳಿಗೆ 2 ಕೋಟಿ ರೂ.ಗಿಂತ ಅಧಿಕ ವಿದ್ಯಾರ್ಥಿವೇತನ ನೀಡುತ್ತಿರುವ ಕೆ.ಎಂ. ನಾಗರಾಜ ಅವರ ಕಾರ್ಯ ಶ್ಲಾಘನೀಯ. ಸಮಾಜದ ಕಳಕಳಿಯನ್ನು ವ್ಯಕ್ತಪಡಿಸಲು ಇದಕ್ಕಿಂತ ಉತ್ತಮ ಮಾರ್ಗವಿಲ್ಲ. ಇವರು ಯಾವುದೋ ಕಟ್ಟಡಗಳನ್ನೋ ಅಥವಾ ದೇವಾಲಯಗಳನ್ನೋ ನಿರ್ಮಿಸುವುದರ ಬದಲಾಗಿ, ಸಮಾಜದ ಭವಿಷ್ಯವಾದ ವಿದ್ಯಾರ್ಥಿಗಳನ್ನು ರೂಪಿಸುವ ಕೆಲಸಕ್ಕೆ ಕೈಹಾಕಿದ್ದಾರೆ. ಇದು ನಿಜಕ್ಕೂ ಸಮಾಜ ಸೇವೆಯ ಪರಾಕಾಷ್ಠೆ," ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ತಮ್ಮ ರಾಜಕೀಯ ಜೀವನದ ಆರಂಭಿಕ ದಿನಗಳನ್ನು ಸ್ಮರಿಸುತ್ತಾ, "2010ರಲ್ಲಿ ನಾನು ಕೆಪಿಸಿಸಿ ಅಧ್ಯಕ್ಷನಾಗಿ ನೇಮಕವಾದಾಗ, ನಾಗರಾಜ ಅವರ ಆಶೀರ್ವಾದ ಪಡೆಯಲು ಅವರ ಮನೆಗೆ ಹೋಗಿದ್ದೆ. ಅವರು ನನಗಾಗಿ ಬಸ್ಸಿನ ವ್ಯವಸ್ಥೆ ಮಾಡಿಕೊಟ್ಟಿದ್ದಲ್ಲದೆ, ರಾಜಕೀಯವಾಗಿ ಪಕ್ಷ ಸಂಘಟನೆ ಮಾಡಲು ನೀಡಿದ ಸಲಹೆಗಳು ಇಂದಿಗೂ ನನ್ನ ನೆನಪಿನಲ್ಲಿವೆ" ಎಂದು ನುಡಿದರು.
ತಂತ್ರಜ್ಞಾನ ಮತ್ತು ಆಧುನಿಕ ಶಿಕ್ಷಣದ ಅಗತ್ಯತೆ
ಇಂದಿನ ಬದಲಾಗುತ್ತಿರುವ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮಹತ್ವವನ್ನು ವಿವರಿಸಿದ ಡಾ. ಪರಮೇಶ್ವರ, "ತಂತ್ರಜ್ಞಾನದ ಪ್ರಭಾವದಿಂದ ಜಗತ್ತು ಕ್ಷಣಾರ್ಧದಲ್ಲಿ ಬದಲಾಗುತ್ತಿದೆ. ನಮ್ಮ ವಿದ್ಯಾರ್ಥಿಗಳು ಕೇವಲ ಹಳೆಯ ಮಾದರಿಯ ಶಿಕ್ಷಣಕ್ಕೆ ಸೀಮಿತವಾಗದೆ, ಎಐ ಸೇರಿದಂತೆ ಆಧುನಿಕ ತಂತ್ರಜ್ಞಾನಗಳನ್ನು ಕಲಿಯಬೇಕು. ಜಾಗತಿಕ ಸ್ಪರ್ಧೆಗೆ ನಾವು ಸಿದ್ಧರಾಗಬೇಕು. ಆದರೆ, ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಕಳೆದುಕೊಳ್ಳದೆಯೇ ಆಧುನಿಕತೆಯತ್ತ ನಾವು ಮುನ್ನಡೆಯಬೇಕು. ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿಕೊಳ್ಳುವ ಕೋರ್ಸ್ಗಳು ಸಮಾಜಕ್ಕೆ ಹೇಗೆ ಉಪಯುಕ್ತವಾಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು. ದೇಶದ ಅಭಿವೃದ್ಧಿಯಲ್ಲಿ ನಿಮ್ಮ ಪಾಲು ಹೆಚ್ಚಾಗಬೇಕು. ಫೌಂಡೇಶನ್ ವತಿಯಿಂದ ನೀಡುತ್ತಿರುವ ಈ ಪ್ರತಿಭಾ ಪುರಸ್ಕಾರವು ನಿಮ್ಮ ಬದುಕಿನಲ್ಲಿ ಹೊಸ ಭರವಸೆಯನ್ನು ತುಂಬಲಿ" ಎಂದು ಹಾರೈಸಿದರು.

