ಡಿಸೆಂಬರ್ ವೇಳೆಗೆ 5 ಲಕ್ಷ ನಿವೇಶನ ಹಂಚಿಕೆ ಮಾಡುವ ಗುರಿ - ಡಾ.ಜಿ.ಪರಮೇಶ್ವರ್‌
x

ಡಿಸೆಂಬರ್ ವೇಳೆಗೆ 5 ಲಕ್ಷ ನಿವೇಶನ ಹಂಚಿಕೆ ಮಾಡುವ ಗುರಿ - ಡಾ.ಜಿ.ಪರಮೇಶ್ವರ್‌

ರಾಜ್ಯದಲ್ಲಿ ಒಟ್ಟು 15.5 ಲಕ್ಷ ನಿವೇಶನ ಹಂಚುವ ಗುರಿಯಿದ್ದು, ಮೊದಲ ಹಂತದಲ್ಲಿ ಡಿ. 31ರೊಳಗೆ 5 ಲಕ್ಷ ನಿವೇಶನಗಳನ್ನು ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಉಪಮುಖ್ಯಮಂತ್ರಿಗಳು ಸೂಚಿಸಿದ್ದಾರೆ.


Click the Play button to hear this message in audio format

ರಾಜ್ಯದ ಲಕ್ಷಾಂತರ ಬಡವರಿಗೆ ಸ್ವಂತ ಸೂರು ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆಗೆ ವೇಗ ನೀಡಲು ಮುಂದಾಗಿರುವ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್, ಡಿಸೆಂಬರ್ ವೇಳೆಗೆ ರಾಜ್ಯದಲ್ಲಿ 5 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡುವ ಗುರಿ ನಿಗದಿಪಡಿಸಿದ್ದಾರೆ. ವಿಕಾಸಸೌಧದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ನಡೆದ ವೀಡಿಯೊ ಕಾನ್ಫರೆನ್ಸ್‌ನಲ್ಲಿ, ಬಾಕಿ ಉಳಿದಿರುವ ಕಂದಾಯ ದಾಖಲೆಗಳ ವಿಲೇವಾರಿ, ಭೂಮಿ ಗುರುತಿಸುವಿಕೆ ಮತ್ತು ಬರ ನಿರ್ವಹಣೆಯ ಕುರಿತು ಅವರು ಕಠಿಣ ನಿಲುವು ತಳೆದಿದ್ದಾರೆ.

ಬಡವರಿಗೆ ನಿವೇಶನ ನೀಡುವುದು ಕೇವಲ ಆಶ್ರಯ ಯೋಜನೆಯಲ್ಲ, ಇದು ಸರ್ಕಾರದ ವಿಶೇಷ ಆದ್ಯತೆಯ ಕಾರ್ಯಕ್ರಮ. ರಾಜ್ಯದಲ್ಲಿ ಒಟ್ಟು 15.5 ಲಕ್ಷ ನಿವೇಶನಗಳನ್ನು ಹಂಚುವ ಗುರಿಯಿದ್ದು, ಮೊದಲ ಹಂತದಲ್ಲಿ ಡಿ. 31ರೊಳಗೆ 5 ಲಕ್ಷ ನಿವೇಶನಗಳನ್ನು ನೀಡಲೇಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 50 ಸಾವಿರ ನಿವೇಶನಗಳಿಗೆ ಸೂಕ್ತವಾದ ಜಮೀನನ್ನು ಸೆಪ್ಟೆಂಬರ್ 15ರೊಳಗೆ ಗುರುತಿಸಲು ನಿರ್ದೇಶನ ನೀಡಿದ್ದಾರೆ. ಆಯ್ಕೆ ಮಾಡುವ ಜಮೀನು ರಸ್ತೆ ಮತ್ತು ನೀರಿನ ಸೌಲಭ್ಯ ಹೊಂದಿರಬೇಕು ಹಾಗೂ ಗ್ರಾಮಗಳಿಗೆ ಹತ್ತಿರವಾಗಿರಬೇಕು. ಫಲಾನುಭವಿಗಳ ಪಟ್ಟಿಯಲ್ಲಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಅಂಗವಿಕಲರು ಮತ್ತು ವಿಧವೆಯರಿಗೆ ಮೊದಲ ಆದ್ಯತೆ ನೀಡಬೇಕು ಎಂದಿದ್ದಾರೆ.

ಕಂದಾಯ ಗ್ರಾಮಗಳ ಘೋಷಣೆ

ರಾಜ್ಯದಲ್ಲಿ ಈವರೆಗೆ ಕೇವಲ 3,354 ಗ್ರಾಮಗಳನ್ನು ಮಾತ್ರ ಕಂದಾಯ ಗ್ರಾಮಗಳೆಂದು ಘೋಷಿಸಲಾಗಿದೆ. ಇನ್ನೂ 10,896 ಗ್ರಾಮಗಳ ಘೋಷಣೆ ಬಾಕಿ ಇದ್ದು, ಈ ಪ್ರಕ್ರಿಯೆ ವಿಳಂಬವಾಗುತ್ತಿರುವುದು ಬೇಸರದ ಸಂಗತಿ. ಬಾಕಿ ಇರುವ 5,768 ಪ್ರಾಥಮಿಕ ಅಧಿಸೂಚನೆಗಳು ಮತ್ತು 702 ಅಂತಿಮ ಅಧಿಸೂಚನೆ ಪ್ರಸ್ತಾವನೆಗಳನ್ನು ಮುಂದಿನ 15 ದಿನಗಳ ಒಳಗಾಗಿ ಸರ್ಕಾರಕ್ಕೆ ಕಳುಹಿಸಿಕೊಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಗಡುವು ನೀಡಿದ್ದಾರೆ.

ಭೂ ದಾಖಲೆಗಳ ಡಿಜಿಟಲೀಕರಣ

ಭೂ ದಾಖಲೆಗಳ ಡಿಜಿಟಲೀಕರಣದಲ್ಲಿ ಕೆಲವು ಜಿಲ್ಲೆಗಳು ತೋರುತ್ತಿರುವ ನಿರ್ಲಕ್ಷ್ಯವನ್ನು ಸಚಿವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸುಮಾರು 24 ಕೋಟಿ ಪುಟಗಳ ದಾಖಲೆಗಳು ಇನ್ನೂ ಡಿಜಿಟಲೀಕರಣಗೊಳ್ಳಬೇಕಿದ್ದು, ಪ್ರತಿದಿನದ 9,600 ಪುಟಗಳ ಗುರಿಯನ್ನು ಸಾಧಿಸದ ಜಿಲ್ಲಾಧಿಕಾರಿಗಳು ವಿವರಣೆ ನೀಡಬೇಕೆಂದು ತಾಕೀತು ಮಾಡಿದ್ದಾರೆ. ಜೊತೆಗೆ, ಶಾಸಕರು ಸಭೆಗಳಲ್ಲಿ ಪದೇ ಪದೆ ಪ್ರಸ್ತಾಪಿಸುತ್ತಿರುವ 'ಮಿಸ್ಸಿಂಗ್ ರೆಕಾರ್ಡ್' ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಅಥವಾ ನಿಯಮಾನುಸಾರ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಬಗರ್ ಹುಕುಂ ಯೋಜನೆಯಡಿ ಬಾಕಿ ಇರುವ 6.98 ಲಕ್ಷ ಅರ್ಜಿಗಳನ್ನು ತಹಶೀಲ್ದಾರ್ ಹಂತದಲ್ಲಿ ತುರ್ತಾಗಿ ವಿಲೇವಾರಿ ಮಾಡಬೇಕೆಂದು ಸೂಚನೆ ನೀಡಲಾಗಿದೆ.

ಬರ ನಿರ್ವಹಣೆ, ಮೇವಿನ ಕೊರತೆ

ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವ ಹಿನ್ನೆಲೆಯಲ್ಲಿ ಮೇವಿನ ಲಭ್ಯತೆ ಕುರಿತು ಸಚಿವರು ಎಚ್ಚರಿಕೆ ನೀಡಿದ್ದಾರೆ. ವಿಜಯನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಿತ್ತನೆಯೇ ಸರಿಯಾಗಿ ಆಗಿಲ್ಲದಿರುವುದರಿಂದ, ಮೇವಿನ ಸಮಸ್ಯೆ ತೀವ್ರವಾಗುವ ಸಾಧ್ಯತೆಯಿದೆ. 30 ವಾರಗಳಿಗಿಂತ ಕಡಿಮೆ ಮೇವು ಸಂಗ್ರಹವಿರುವ ಜಿಲ್ಲೆಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು. ರೈತರಿಗೆ ಮೇವಿನ ಬೀಜದ ಕಿಟ್ ವಿತರಿಸಲು ತಕ್ಷಣವೇ 25 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಪಶುಸಂಗೋಪನಾ ಇಲಾಖೆ ಇದನ್ನು ಕಾಲಮಿತಿಯೊಳಗೆ ವಿತರಿಸಬೇಕೆಂದು ತಿಳಿಸಿದ್ದಾರೆ. ಮೇವಿನ ವಿಷಯದಲ್ಲಿ ಲೋಪವಾದರೆ ಸರ್ಕಾರ ಸುಮ್ಮನಿರುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

Read More
Next Story