ದೇಶದ ಪ್ರಗತಿಗೆ ದಕ್ಷಿಣದ ರಾಜ್ಯಗಳೇ ಬೆನ್ನೆಲುಬು: ಸಿಎಂ ಡಿ.ಕೆ.ಶಿವಕುಮಾರ್‌
x

ದೇಶದ ಪ್ರಗತಿಗೆ ದಕ್ಷಿಣದ ರಾಜ್ಯಗಳೇ ಬೆನ್ನೆಲುಬು: ಸಿಎಂ ಡಿ.ಕೆ.ಶಿವಕುಮಾರ್‌

ದೆಹಲಿ, ಮುಂಬೈ ನಗರಗಳ ಜೊತೆ ರಾಜ್ಯ ಸ್ಪರ್ಧೆ ಮಾಡುತ್ತಿದ್ದು, 1 ಲಕ್ಷ ಇಂಜಿನಿಯರ್‌ಗಳು ಹಾಗೂ 1 ಲಕ್ಷ ಆರೋಗ್ಯ ಕ್ಷೇತ್ರದ ಸಿಬ್ಬಂದಿ ಕರ್ನಾಟಕದಲ್ಲಿ ತಯಾರಾಗುತ್ತಿದ್ದಾರೆ.


Click the Play button to hear this message in audio format

ನೆರೆಯ ಚೆನ್ನೈ, ತೆಲಂಗಾಣ, ಹೈದರಾಬಾದ್, ವಿಶಾಖಪಟ್ಟಣದ ಜೊತೆ ನಾವು ಸ್ಪರ್ಧೆ ಮಾಡುವುದಿಲ್ಲ. ದಕ್ಷಿಣ ಭಾರತದ ನಗರಗಳು ಒಂದು ತಂಡವಾಗಿ ಕೆಲಸ ಮಾಡಲಿವೆ. ದೇಶದ ಪ್ರಗತಿಗೆ ಈ ನಗರಗಳು ಶೇ.30ರಷ್ಟು ಕೊಡುಗೆ ನೀಡುತ್ತಿವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಖಾಸಗಿ ವಾಹಿನಿ ಆಯೋಜಿಸಿದ ರೈಸಿಂಗ್ ಭಾರತ್ ಸಮ್ಮೇಳನದಲ್ಲಿ ಮಾತನಾಡಿದ ಅವರು, ದೆಹಲಿ, ಮುಂಬೈ ನಗರಗಳ ಜೊತೆ ಸ್ಪರ್ಧೆ ಮಾಡುತ್ತಿದ್ದು, ರಾಜ್ಯದಲ್ಲಿ 250 ಇಂಜಿನಿಯರಿಂಗ್ ಕಾಲೇಜುಗಳಿವೆ, 13,940 ವೈದ್ಯರು ಪ್ರತಿ ವರ್ಷ ತಯಾರಾಗುತ್ತಿದ್ದಾರೆ. 1 ಲಕ್ಷ ಇಂಜಿನಿಯರ್‌ಗಳು ಹಾಗೂ 1 ಲಕ್ಷ ಆರೋಗ್ಯ ಕ್ಷೇತ್ರದ ಸಿಬ್ಬಂದಿ ಕರ್ನಾಟಕದಲ್ಲಿ ತಯಾರಾಗುತ್ತಿದ್ದಾರೆ. ಈ ವಿಚಾರದಲ್ಲಿ ದೇಶದ ಬೇರೆ ಯಾವುದೇ ನಗರ ನಮ್ಮ ಜೊತೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಕ್ಯಾಲಿಫೋರ್ನಿಯಾದಲ್ಲಿ 16 ಲಕ್ಷ ಇಂಜಿನಿಯರ್ ಗಳಿದ್ದರೆ, ಬೆಂಗಳೂರಿನಲ್ಲಿ 26 ಲಕ್ಷ ಇಂಜಿನಿಯರ್ ಗಳಿದ್ದಾರೆ. ಇದು ನಮ್ಮ ಶಕ್ತಿ. ಭಾರತದ ಪ್ರಗತಿ ದಕ್ಷಿಣದಿಂದ ಉತ್ತರಕ್ಕೆ ಹೋಗುತ್ತಿದೆಯೇ ಹೊರತು, ಉತ್ತರದಿಂದ ದಕ್ಷಿಣಕ್ಕೆ ಬರುತ್ತಿಲ್ಲ ಎಂದು ತಿಳಿಸಿದರು.

ಕರ್ನಾಟಕ ಬೆಳೆದಾಗ ಭಾರತ ಬೆಳೆಯುತ್ತದೆ. ತಮಿಳುನಾಡು ಯಶಸ್ವಿಯಾದಾಗ ಭಾರತ ಯಶಸ್ವಿಯಾಗುತ್ತದೆ. ತೆಲಂಗಾಣ ಆವಿಷ್ಕಾರ ಮಾಡಿದಾಗ ಭಾರತ ಆವಿಷ್ಕರಿಸುತ್ತದೆ. ಆಂಧ್ರಪ್ರದೇಶ ರಫ್ತು ಮಾಡಿದಾಗ ಭಾರತ ರಫ್ತು ಮಾಡುತ್ತದೆ. ಕೇರಳ ಮಾನವ ಅಭಿವೃದ್ಧಿಯನ್ನು ಬಲಪಡಿಸಿದಾಗ ಭಾರತ ಇನ್ನಷ್ಟು ಶಕ್ತಿಶಾಲಿಯಾಗುತ್ತದೆ. ಸಹಕಾರ ಒಕ್ಕೂಟ ವ್ಯವಸ್ಥೆಯ ಗುಟ್ಟು. ದಕ್ಷಿಣದ ರಾಜ್ಯಗಳ ಯಶಸ್ಸಿನಿಂದ ಭಾರತದ ಬೆಳವಣಿಗೆಯು ಮುಂದುವರಿಯುತ್ತದೆ ಮತ್ತು ದೇಶದ ಪ್ರಗತಿಗೆ ಕೊಡುಗೆ ನೀಡಲು ಕರ್ನಾಟಕ ಬದ್ಧವಾಗಿದೆ ಎಂದರು.

ಇತಿಹಾಸ ಸೃಷ್ಟಿಸುವುದರಲ್ಲಿ ಆಸಕ್ತಿ

ನನಗೆ ಇತಿಹಾಸ ಓದುವುದರಲ್ಲಿ ಆಸಕ್ತಿ ಇಲ್ಲ, ಇತಿಹಾಸ ಸೃಷ್ಟಿಸುವುದರಲ್ಲಿ ಆಸಕ್ತಿ ಇದೆ. ರಾಜ್ಯದಲ್ಲಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಕೇವಲ 11 ಸಾವಿರ ಮೆ.ವ್ಯಾಟ್ ಇತ್ತು. ಆಗ ವಿದ್ಯುತ್ ಪರಿಸ್ಥಿತಿ ಕರ್ನಾಟಕದಲ್ಲಿ ಬಹಳ ಕೆಟ್ಟದಾಗಿತ್ತು. ಪಾವಗಡದಲ್ಲಿ 13 ಸಾವಿರ ಎಕರೆಯನ್ನು ಭೂಸ್ವಾಧೀನವಿಲ್ಲದೇ ರೈತರ ಹೆಸರಿನಲ್ಲಿ ಜಮೀನು ಇಟ್ಟುಕೊಂಡು ಅವರನ್ನು ಯೋಜನೆಯ ಪಾಲುದಾರರನ್ನಾಗಿ ಮಾಡಿಕೊಂಡು ಸೋಲಾರ್ ಪಾರ್ಕ್ ನಿರ್ಮಿಸಲಾಯಿತು. ಆಗಿನ ಕಾಲಕ್ಕೆ ಅದೇ ಅತಿ ದೊಡ್ಡ ಸೋಲಾರ್ ಪಾರ್ಕ್ ಆಗಿತ್ತು. ಒಂದೇ ಸ್ಥಳದಿಂದ 2400 ಮೆ.ವ್ಯಾಟ್ ವಿದ್ಯುತ್ ಉತ್ಪಾದಿಸುವ ಮೂಲಕ ಇತಿಹಾಸ ಬರೆಯಲಾಗಿತ್ತು. ನಂತರ ಪ್ರತಿ ತಾಲ್ಲೂಕಿನಲ್ಲಿ 20, 30 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ವಿದ್ಯುತ್ ಉತ್ಪಾದಿಸಲಾಯಿತು. ಇದರ ಆಧಾರದ ಮೇಲೆ ಕೇಂದ್ರ ಸರ್ಕಾರ ಕುಸುಮ್ ಯೋಜನೆ ಜಾರಿಗೆ ತಂದಿದೆ ಎಂದು ತಿಳಿಸಿದರು.

ನಮ್ಮಲ್ಲಿ ಜ್ಞಾನ ಶಕ್ತಿ ಉತ್ತಮವಾಗಿದೆ. ನಾವು ಮೊದಲ ಎಐ ವಿಶ್ವವಿದ್ಯಾಲಯ ಆರಂಭಿಸುತ್ತಿದ್ದೇವೆ. ಈ ರೀತಿ ನಮ್ಮ ರಾಜ್ಯ ಅನೇಕ ಕ್ಷೇತ್ರಗಳಲ್ಲಿ ಹಲವು ಮೊದಲ ಹೆಜ್ಜೆಗಳನ್ನಿಟ್ಟಿದೆ. ವಿಶ್ವದ ಉದ್ಯಮಗಳು ಭಾರತ ಎಲ್ಲಾ ನಗರ ಪರಿಶೀಲಿಸಿದ ಬಳಿಕ ಬೆಂಗಳೂರು ಅತ್ಯಂತ ಸುರಕ್ಷಿತ ನಗರ ಎಂದು ಭಾವಿಸಿ, ಇಲ್ಲಿ ಹೂಡಿಕೆಗೆ ಮುಂದಾದರು. 25 ವರ್ಷಗಳ ಹಿಂದೆ ಅವರು ಅಂತಾರಾಷ್ಟ್ರೀಯ ಶಾಲೆಗಳು ಬೇಕು ಎಂದು ಕೇಳಿದರು. ಈಗ ದೇಶದಲ್ಲಿ 140 ಅಂತಾರಾಷ್ಟ್ರೀಯ ಶಾಲೆಗಳಿದ್ದು, ಬೆಂಗಳೂರು ಹಾಗೂ ಕರ್ನಾಟಕದಲ್ಲಿ 38 ಶಾಲೆಗಳಿವೆ. 2 ಲಕ್ಷ ವಿದೇಶಿ ಪಾಸ್ ಪೋರ್ಟ್ ದಾರರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ತಂತ್ರಜ್ಞಾನ, ಆವಿಷ್ಕಾರ, ಉತ್ಪಾದನೆ ಮತ್ತು ಉದ್ಯಮಶೀಲತೆಯಲ್ಲಿ ಬೆಂಗಳೂರಿನ ಜಾಗತಿಕ ಸ್ಥಾನಮಾನವನ್ನು ಪರಿಗಣಿಸಿದರೆ, ಈ ವಿಷಯದ ಕುರಿತು ಚರ್ಚಿಸಲು ಬೆಂಗಳೂರಿಗಿಂತ ಸೂಕ್ತವಾದ ಸ್ಥಳ ಮತ್ತೊಂದಿರಲು. ಇಂದು ಭಾರತ ಬೆಳೆಯುತ್ತಿರುವಾಗ, ದಕ್ಷಿಣ ಭಾರತವು ದೇಶದ ಪ್ರಗತಿಯನ್ನು ಮುನ್ನಡೆಸುವ ಪ್ರಮುಖ ಇಂಜಿನ್‌ಗಳಲ್ಲಿ ಒಂದಾಗಿದೆ ಎಂದು ನುಡಿದರು.

ದೇಶದ ಆರ್ಥಿಕತೆಗೆ ಕರ್ನಾಟಕ ಕೊಡುಗೆ

ದಕ್ಷಿಣ ಭಾರತವು ಭಾರತದ ಒಟ್ಟು ಜನಸಂಖ್ಯೆಯ ಸುಮಾರು ಐದನೇ ಒಂದು ಭಾಗವನ್ನು ಮಾತ್ರ ಹೊಂದಿದ್ದರೂ, ದೇಶದ ಒಟ್ಟು ಮೌಲ್ಯವರ್ಧನೆಗೆ ಸುಮಾರು ಮೂರನೇ ಒಂದು ಭಾಗದಷ್ಟು ಕೊಡುಗೆ ನೀಡುತ್ತದೆ. ಇದು ರಾಷ್ಟ್ರೀಯ ಆರ್ಥಿಕತೆಗೆ ಈ ಪ್ರದೇಶದ ಮಹತ್ವವನ್ನು ಎತ್ತಿಹಿಡಿಯುತ್ತದೆ. ಭಾರತದ ಭವಿಷ್ಯದ ಪ್ರಗತಿಯನ್ನು ಮುನ್ನಡೆಸುವಲ್ಲಿ ದಕ್ಷಿಣದ ರಾಜ್ಯಗಳಿಗೆ ವಿಶೇಷ ಜವಾಬ್ದಾರಿಯಿದೆ. ಬೆಂಗಳೂರಿನ ಯಶಸ್ಸಿಗೆ ಇಲ್ಲಿನ ಪ್ರತಿಭೆ, ತಂತ್ರಜ್ಞಾನ, ಉತ್ಪಾದನೆ, ಆವಿಷ್ಕಾರ ಮತ್ತು ಉದ್ಯಮಶೀಲತೆಯ ಶಕ್ತಿಯೇ ಕಾರಣ. ಕರ್ನಾಟಕದ ಮಾನವ ಬಂಡವಾಳವೇ ಅದರ ಅತಿದೊಡ್ಡ ಆಸ್ತಿ. ಕರ್ನಾಟಕವು ಉದ್ಯಮ ರಂಗ, ಶೈಕ್ಷಣಿಕ ಕ್ಷೇತ್ರ, ಕೇಂದ್ರ ಸರ್ಕಾರ, ಇತರ ರಾಜ್ಯ ಸರ್ಕಾರಗಳು ಮತ್ತು ಅಂತರರಾಷ್ಟ್ರೀಯ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ ಎಂದರು.

ಬೆಂಗಳೂರಿನ ಮೂಲಸೌಕರ್ಯಕ್ಕಾಗಿ ಕೇಂದ್ರ ಸರ್ಕಾರದಿಂದ ಹೆಚ್ಚಿನ ಆರ್ಥಿಕ ನೆರವು ನೀಡಬೇಕು. ಬೆಂಗಳೂರು ಇಡೀ ದೇಶಕ್ಕೆ ಗಮನಾರ್ಹ ಸಂಪತ್ತನ್ನು ಸೃಷ್ಟಿಸುತ್ತದೆ ಮತ್ತು ಅದರ ಪ್ರಗತಿಯನ್ನು ಕಾಯ್ದುಕೊಳ್ಳಲು ಸುಧಾರಿತ ಮೂಲಸೌಕರ್ಯ ಮತ್ತು ಸಂಚಾರ ಸೌಲಭ್ಯಗಳ ಅಗತ್ಯವಿದೆ. ಉನ್ನತ ಶಿಕ್ಷಣ, ಆರೋಗ್ಯ ರಕ್ಷಣೆ, ಉತ್ಪಾದನೆ, ಸ್ಟಾರ್ಟ್‌ಅಪ್‌ಗಳು, ಮಾಹಿತಿ ತಂತ್ರಜ್ಞಾನ, ಆವಿಷ್ಕಾರ, ಕೃಷಿ, ಹೈನುಗಾರಿಕೆ, ರೇಷ್ಮೆ ಉತ್ಪಾದನೆ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಕರ್ನಾಟಕವು ಹೂಡಿಕೆ ಅವಕಾಶಗಳನ್ನು ನೀಡುತ್ತದೆ. ರಾಜ್ಯದ ನಂಬಿಕಾರ್ಹ ವಿದ್ಯುತ್ ಪೂರೈಕೆ, ಸ್ಥಿರ ನೀತಿಗಳು ಮತ್ತು ಉದ್ಯಮ ಸ್ನೇಹಿ ವಾತಾವರಣವು ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಆಡಳಿತಾತ್ಮಕ ಸುಧಾರಣೆಗಳು, ಸುಧಾರಿತ ಸಾರ್ವಜನಿಕ ಸೇವೆಗಳು ಮತ್ತು ಬೆಂಗಳೂರನ್ನು ಹೆಚ್ಚು ಸ್ವಚ್ಛ, ವ್ಯವಸ್ಥಿತ ಮತ್ತು ವಾಸಯೋಗ್ಯವನ್ನಾಗಿ ಮಾಡುವ ಉಪಕ್ರಮಗಳ ಮೂಲಕ ಪಾರದರ್ಶಕ ಹಾಗೂ ದಕ್ಷ ಆಡಳಿತ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

Read More
Next Story