
ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ಅಭಿವೃದ್ಧಿ ಖಾತೆಯನ್ನು ನೀಡದೆ ವಂಚಿಸಲಾಗಿದೆ ಎಂದು ಅವರ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಡಿಕೆಶಿಗೆ ತಿರುಗುಬಾಣವಾದ ‘ವರ್ಡ್ ಪವರ್’ ಅಸ್ತ್ರ: ಸಿಎಂಗೆ ಅವರದ್ದೇ ಮಾತು ನೆನಪಿಸಿದ ರಾಮಲಿಂಗಾರೆಡ್ಡಿ ಬೆಂಬಲಿಗರು
ಬೆಂಗಳೂರು ಖಾತೆ ಸಿಗದ್ದಕ್ಕೆ ಸಿಎಂ ಡಿಕೆಶಿ ವಿರುದ್ಧ ತಿರುಗಿಬಿದ್ದ ರಾಮಲಿಂಗಾರೆಡ್ಡಿ ಬೆಂಬಲಿಗರು. ವರ್ಡ್ ಪವರ್ ಹಳೇ ಹೇಳಿಕೆ ಮುಂದಿಟ್ಟುಕೊಂಡು ಫ್ಲೆಕ್ಸ್ ತೆರವು, ರಾಜೀನಾಮೆ ಅಸ್ತ್ರ.
ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯಾಗಿ ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ಕಾಂಗ್ರೆಸ್‌ನಲ್ಲಿ ಭಿನ್ನಮತದ ಭುಗಿಲೆದ್ದಿದೆ. ಈ ಹಿಂದೆ ಕೆಪಿಸಿಸಿ ಅಧ್ಯಕ್ಷರಾಗಿ ಹಾಗೂ ನಾಯಕರಾಗಿ ಡಿ.ಕೆ ಶಿವಕುಮಾರ್ ಅವರು ಪದೇ ಪದೇ ಹೇಳುತ್ತಿದ್ದ ಸ್ವಂತ ಹೇಳಿಕೆಗಳೇ ಈಗ ಅವರಿಗೆ ತಿರುಗುಬಾಣವಾಗತೊಡಗಿವೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಹಾಗೂ ಅಧಿಕಾರ ಹಂಚಿಕೆಯ ಚರ್ಚೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ, ಡಿ.ಕೆ ಶಿವಕುಮಾರ್ ಅವರು "ವರ್ಡ್ ಪವರ್ ಈಸ್ ವರ್ಲ್ಡ್ ಪವರ್" (ಕೊಟ್ಟ ಮಾತಿಗೆ ಬದ್ಧವಾಗಿರುವುದೇ ಜಗದ ಶಕ್ತಿ) ಎಂದು ಪದೇ ಪದೇ ಹೇಳುತ್ತಿದ್ದರು. ಹೈಕಮಾಂಡ್ ತಮಗೆ ಕೊಟ್ಟಿರುವ ಭರವಸೆ ಮತ್ತು ಅಧಿಕಾರ ಹಂಚಿಕೆಯ ಒಪ್ಪಂದವನ್ನು ಪರೋಕ್ಷವಾಗಿ ಪ್ರಸ್ತಾಪಿಸುತ್ತಾ ಈ ಮಾತುಗಳನ್ನು ಆಡುತ್ತಿದ್ದರು. ಆದರೆ, ಈಗ ಸಿಎಂ ಹುದ್ದೆ ಅಲಂಕರಿಸಿದ ಬಳಿಕ ಸಂಪುಟ ದರ್ಜೆ ಹಂಚಿಕೆಯಲ್ಲಿ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ಅಭಿವೃದ್ಧಿ ಖಾತೆಯನ್ನು ನೀಡದೆ ವಂಚಿಸಲಾಗಿದೆ ಎಂದು ಅವರ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಡಿಕೆಶಿಗೆ ಅವರದ್ದೇ ಮಾತು ನೆನಪಿಸಿದ ಬೆಂಬಲಿಗರು
ಬೆಂಗಳೂರು ನಗರಾಭಿವೃದ್ಧಿ ಖಾತೆಯ ನಿರೀಕ್ಷೆಯಲ್ಲಿದ್ದ ರಾಮಲಿಂಗಾರೆಡ್ಡಿ ಅವರಿಗೆ ನೀರಾವರಿ ಖಾತೆ ನೀಡಿರುವುದಕ್ಕೆ ಅವರ ಬೆಂಬಲಿಗರು ತೀವ್ರ ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಿ.ಕೆ ಶಿವಕುಮಾರ್ ಈ ಹಿಂದೆ ಆಡಿದ್ದ "ವರ್ಡ್ ಪವರ್ ಈಸ್ ವರ್ಲ್ಡ್ ಪವರ್" ಎಂಬ ಹೇಳಿಕೆಯನ್ನೇ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವ ಅವರ ಬೆಂಬಲಿಗರು, "ಈಗ ನಿಮ್ಮ ಮಾತು ಎಲ್ಲಿ ಹೋಯಿತು? ಕೊಟ್ಟ ಮಾತಿನಂತೆ ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ಖಾತೆ ಏಕೆ ನೀಡಲಿಲ್ಲ?" ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ರಾಜಕೀಯ ವಲಯದಲ್ಲಿ ಪ್ರಶ್ನಿಸುತ್ತಿದ್ದಾರೆ. ಶಿವಕುಮಾರ್ ಅವರ ಮಾತನ್ನು ಅವರಗೇ ನೆನಪಿಸುವ ಮೂಲಕ ತಿರುಗೇಟು ನೀಡುತ್ತಿದ್ದಾರೆ.
ಫ್ಲೆಕ್ಸ್ ಬ್ಯಾನರ್ ತೆರವು
ಈ ಅಸಮಾಧಾನ ಕೇವಲ ಹೇಳಿಕೆಗಳಿಗೆ ಸೀಮಿತವಾಗಿಲ್ಲ. ಕ್ಷೇತ್ರದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ರಾಮಲಿಂಗಾರೆಡ್ಡಿ ಅವರ ಬೆಂಬಲಿಗರು, ಡಿ.ಕೆ ಶಿವಕುಮಾರ್ ಮತ್ತು ರಾಮಲಿಂಗಾರೆಡ್ಡಿ ಇಬ್ಬರೂ ಜೊತೆಯಾಗಿರುವ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಸ್ವಯಂಪ್ರೇರಿತರಾಗಿ ತೆರವುಗೊಳಿಸುತ್ತಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ರೆಡ್ಡಿ ಬೆಂಬಲಿಗರು ಹಾಗೂ ಸ್ಥಳೀಯ ಕಾಂಗ್ರೆಸ್ ಪದಾಧಿಕಾರಿಗಳು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡ ಆರಂಭದ ದಿನಗಳಲ್ಲೇ ಡಿ.ಕೆ ಶಿವಕುಮಾರ್ ಅವರಿಗೆ ಸ್ವಪಕ್ಷೀಯರ ಬಂಡಾಯ ಹಾಗೂ ತಮ್ಮದೇ ಹಳೆಯ ಹೇಳಿಕೆಗಳು ದೊಡ್ಡ ಮಟ್ಟದ ರಾಜಕೀಯ ತಲೆನೋವಾಗಿ ಪರಿಣಮಿಸಿವೆ.

