
ರಾಹುಲ್ ಗಾಂಧಿ ವಿರುದ್ಧದ ಎಫ್‌ಐಆರ್ ಖಂಡಿಸಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ
ರಾಹುಲ್ ಗಾಂಧಿ ಅವರು ಬೇರೆಯವರಂತೆ ಕ್ಷಮೆ ಕೇಳುವವರಲ್ಲ. ಅವರ ಮೇಲೆ ನೂರು ಕೇಸ್ ಹಾಕಿದರೂ ಅವರು ಹೆದರುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಉತ್ತರಾಖಂಡದಲ್ಲಿ ದಾಖಲಾಗಿರುವ ಎಫ್‌ಐಆರ್ ರಾಜಕೀಯ ದುರುದ್ದೇಶಪೂರಿತ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇಂದ್ರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ನಗರದ ಫ್ರೀಡಂ ಪಾರ್ಕ್‌ನಲ್ಲಿ ಬುಧವಾರ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂತಹ ಗೊಡ್ಡು ಬೆದರಿಕೆಗಳಿಗೆ ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ಪಕ್ಷ ಬಗ್ಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ಅವರು ಬೇರೆಯವರಂತೆ ಮುಚ್ಚಳಿಕೆ ಬರೆದುಕೊಡುವವರಲ್ಲ ಅಥವಾ ಕ್ಷಮೆ ಕೇಳುವವರಲ್ಲ. ಅವರ ಮೇಲೆ ನೂರು ಕೇಸ್ ಹಾಕಿದರೂ ಅವರು ಹೆದರುವ ಪ್ರಶ್ನೆಯೇ ಇಲ್ಲ. ಸತ್ಯದ ಪರವಾಗಿ ಧ್ವನಿ ಎತ್ತಿದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸುವುದು ಬಿಜೆಪಿಯ ಹತಾಶೆಯ ಸಂಕೇತ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು, ಸಂವಿಧಾನ ನೀಡಿ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸಿದವರು ಯಾರು? ಬಿಜೆಪಿಯ ಯಾವ ನಾಯಕನಾದರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಾರೆಯೇ? ಇತಿಹಾಸದಲ್ಲಿ ಅವರ ಕೊಡುಗೆ ಏನು?" ಎಂದು ನೇರ ಪ್ರಶ್ನೆಗಳನ್ನು ಹಾಕಿದರು. ಗಾಂಧಿ ಕುಟುಂಬವು ದೇಶದ ಐಕ್ಯತೆಗಾಗಿ ನೀಡಿದ ತ್ಯಾಗ ಮತ್ತು ಬಲಿದಾನಗಳು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿವೆ ಎಂದರು.
ಉತ್ತರಾಖಂಡದಲ್ಲಿ ನಡೆದ ಅವಮಾನದ ವಿರುದ್ಧ ಸಿಎಂ ಆಕ್ರೋಶ
ಉತ್ತರಾಖಂಡದಲ್ಲಿ ಕಾಂಗ್ರೆಸ್ ಸಮಾವೇಶ ನಡೆದ ಜಾಗವನ್ನು ಬಿಜೆಪಿ ನಾಯಕರು 'ಶುದ್ಧೀಕರಣ' ಮಾಡಿದ್ದನ್ನು ಪ್ರಸ್ತಾಪಿಸಿದ ಡಿ.ಕೆ. ಶಿವಕುಮಾರ್, "ಇದು ಅಮಾನವೀಯ ಕೃತ್ಯ. ಸಾರ್ವಜನಿಕ ವೇದಿಕೆಯನ್ನು ಗಂಗಾಜಲದಿಂದ ಶುದ್ಧೀಕರಣ ಮಾಡುವ ಮೂಲಕ ನೀವು ದಲಿತರು ಮತ್ತು ಶೂದ್ರರನ್ನು ಅವಮಾನಿಸಿದ್ದೀರಿ. ಇಂತಹ ಹೀನ ಕೃತ್ಯವನ್ನು ಖಂಡಿಸಲು ಸಾಧ್ಯವಿಲ್ಲದ ಬಿಜೆಪಿ ನಾಯಕರು, ಅದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು. ಬಿಜೆಪಿಯವರು ಎಲ್ಲರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ, ಆದರೆ ಅವರಿಗೆ ಕೊನೆಗಾಲ ಸಮೀಪಿಸಿದೆ. 2028ರಲ್ಲಿ ಕರ್ನಾಟಕದಲ್ಲಿ ಮತ್ತು 2029ರಲ್ಲಿ ದೇಶದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ನಮ್ಮ ಆಡಳಿತ ಮತ್ತು ಗ್ಯಾರಂಟಿ ಯೋಜನೆಗಳನ್ನು ನೋಡಿ ಬಿಜೆಪಿಯವರಿಗೆ ಭಯವಾಗಿದೆ. ನಾವು ಹುಟ್ಟುವಾಗ ಜಾತಿ-ಧರ್ಮದ ಅರ್ಜಿ ಹಾಕಿ ಬಂದಿಲ್ಲ, ಭಾರತ ಜೋಡೋ ಯಾತ್ರೆಯ ಮೂಲಕ ನಾವು ದೇಶದ ಜನರನ್ನು ಒಗ್ಗೂಡಿಸುತ್ತಿದ್ದೇವೆ ಎಂದು ಹೇಳಿದರು.
ಬಿಜೆಪಿಯ ಮನಸ್ಥಿತಿ ಬಿಂಬಿಸುತ್ತದೆ - ಬಿ.ಕೆ. ಹರಿಪ್ರಸಾದ್
ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದಲಿತ ಸಮುದಾಯದವರಾದ ಕಾರಣಕ್ಕೆ, ಅವರು ಭಾಷಣ ಮಾಡಿದ ಜಾಗವನ್ನು ರಾಮ ಸೇನೆಯವರು ಗೋಮೂತ್ರ ಮತ್ತು ಗಂಗಾಜಲದಿಂದ ಶುದ್ಧೀಕರಿಸಿದರು. ಇದು ಬಿಜೆಪಿಯ ಮನಸ್ಥಿತಿಯನ್ನು ತೋರಿಸುತ್ತದೆ. ದಲಿತರು, ಶೂದ್ರರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿದುಕೊಳ್ಳುವುದೇ ಇವರ ಮೂಲ ಅಜೆಂಡಾ. ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ನಾವು ಅಂತಿಮ ಹೋರಾಟಕ್ಕೆ ಸಿದ್ಧರಾಗಬೇಕು ಎಂದರು.
1950ರಲ್ಲಿ ಸಂವಿಧಾನ ಜಾರಿಯಾದಾಗ ರಾಮಲೀಲಾ ಮೈದಾನದಲ್ಲಿ ಸಂವಿಧಾನ, ರಾಷ್ಟ್ರಧ್ವಜದ ವಿರುದ್ಧ ಪ್ರತಿಭಟನೆ ಮಾಡಿದ್ದೇ ಬಿಜೆಪಿ ಮತ್ತು ಆರ್‌ಎಸ್ಎಸ್ ಸಂಘಟನೆಗಳು. ಇವರಿಗೆ ಇಂದಿಗೂ ಸಂವಿಧಾನದ ಮೇಲೆ ನಂಬಿಕೆಯಿಲ್ಲ. ಇಲ್ಲಿ ಕುಳಿತು ಘೋಷಣೆ ಕೂಗಿದರೆ ಸಾಲದು, ಬಿಜೆಪಿ ಕಚೇರಿ ಮುಂದೆ ಹೋಗಿ ಪ್ರತಿಭಟಿಸಿ, ಕಪ್ಪು ಬಾವುಟ ಪ್ರದರ್ಶಿಸಿ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಕಾಲದಲ್ಲಿ ಹೋರಾಟ ಮಾಡಿದ್ದ ನಮಗೆ ಜೈಲು ಹೊಸತಲ್ಲ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು.
ಸಮಾವೇಶದ ಪ್ರಮುಖ ನಿರ್ಣಯಗಳು
ದೇಶಾದ್ಯಂತ ರಾಹುಲ್ ಗಾಂಧಿ ಅವರ ಮೇಲೆ ನಡೆಯುತ್ತಿರುವ ರಾಜಕೀಯ ಕಿರುಕುಳವನ್ನು ಖಂಡಿಸಿ ಪ್ರತಿಭಟನೆ ಮುಂದುವರಿಸುವುದು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನಕ್ಕೆ ಧಕ್ಕೆಯುಂಟಾದರೆ, ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲು ತೀರ್ಮಾನ. ರಾಜ್ಯದ ಬಿಜೆಪಿ ನಾಯಕರು ನಡೆಸುತ್ತಿರುವ 'ಪ್ರಾಯಶ್ಚಿತ ಯಾತ್ರೆ'ಯನ್ನು ವಿರೋಧಿಸಿ, ಕಾಂಗ್ರೆಸ್ ವತಿಯಿಂದ ಸತ್ಯಾಗ್ರಹ ಯಾತ್ರೆ ಹಮ್ಮಿಕೊಳ್ಳುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.

