Mekedatu scheme; DCM DKshi exercises to gain the trust of opposition leaders
x

ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ

ಮೇಕೆದಾಟು ಯೋಜನೆ ಜಾರಿಗೆ ಪಣ; ವಿಪಕ್ಷ ನಾಯಕರ ವಿಶ್ವಾಸ ಗಳಿಸಲು ಡಿಕೆಶಿ ಕಸರತ್ತು

ರಾಜ್ಯದ ಹಿತದ ಬಗ್ಗೆ ಬದ್ಧತೆ ಇದ್ದರೆ ಯೋಜನೆಯ ಅನುಷ್ಠಾನಕ್ಕೆ ಅಗತ್ಯವಿರುವ ಅನುಮೋದನೆ ಪಡೆಯಲು ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಹಾಗೂ ಬಿಜೆಪಿ ನಾಯಕರು ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಡಿಸಿಎಂ ಡಿಕೆಶಿ ಆಗ್ರಹಿಸಿದ್ದಾರೆ.


Click the Play button to hear this message in audio format

ರಾಜಧಾನಿ ಬೆಂಗಳೂರಿನ ಕುಡಿಯುವ ನೀರಿನ ದಾಹ ನೀಗಿಸುವ ಸಲುವಾಗಿ ನಿರ್ಮಿಸಲು ಉದ್ದೇಶಿಸಿರುವ ಬಹುನಿರೀಕ್ಷಿತ 'ಮೇಕೆದಾಟು ಸಮತೋಲನ ಜಲಾಶಯ' ಯೋಜನೆ ಅನುಷ್ಠಾನಕ್ಕೆ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಪಣ ತೊಟ್ಟಿದೆ. ಅದರಲ್ಲೂ ಯೋಜನೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಕೇಂದ್ರದ ಮೇಲೆ ಪಕ್ಷಾತೀತವಾಗಿ ಒತ್ತಡ ಹೇರುವ ತಂತ್ರದ ಮೊರೆ ಹೋಗಿದ್ದಾರೆ.

ಮೇಕೆದಾಟು ಯೋಜನೆ ಕುರಿತಂತೆ ಸುಪ್ರೀಂಕೋರ್ಟ್ ನಿರ್ದೇಶನವನ್ನು ಕಾನೂನು ಚೌಕಟ್ಟಿನಲ್ಲಿ ಅನುಷ್ಠಾನಗೊಳಿಸಲು ಸಹಕರಿಸುವಂತೆ ತಮ್ಮ ರಾಜಕೀಯ ಎದುರಾಳಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ಸಂಬಂಧ ಕೇಂದ್ರ ಸಚಿವರಾದ ಹೆಚ್‌.ಡಿ. ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಸೇರಿ ಹಲವು ಬಿಜೆಪಿ ನಾಯಕರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಮನವಿ ಮಾಡಿದ್ದು, ಕೇಂದ್ರದ ಮೇಲೆ ಒತ್ತಡ ಹೇರುವಂತೆ ಕೋರಿದ್ದಾರೆ.

ರಾಜ್ಯದ ಹಿತ ಕಾಯುವ ಸಲುವಾಗಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಗತ್ಯವಿರುವ ಅನುಮೋದನೆ ಪಡೆಯಲು ಕೇಂದ್ರ ಸರ್ಕಾರವನ್ನು ಆಗ್ರಹಿಸುವಂತೆ ವಿರೋಧ ಪಕ್ಷದ ನಾಯಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಆಗ್ರಹಿಸಿದ್ದಾರೆ.

ಏನಿದು ಮೇಕೆದಾಟು ಯೋಜನೆ ?

ಮೇಕೆದಾಟು ಸಮತೋಲನಾ ಅಣೆಕಟ್ಟು ಯೋಜನೆ ಕುಡಿಯುವ ನೀರಿನ ಯೋಜನೆಯಾಗಿದ್ದು, ಪ್ರಸ್ತುತ 1.50 ಕೋಟಿ ಆಸುಪಾಸಿನಲ್ಲಿರುವ ಬೆಂಗಳೂರು ಮಹಾನಗರದ ಜನರಿಗೆ ಭವಿಷ್ಯದಲ್ಲಿ ಕುಡಿಯುವ ನೀರು ಒದಗಿಸುವ ಉದ್ದೇಶವಿದೆ. ಕುಡಿಯುವ ನೀರು ಪೂರೈಕೆಗಾಗಿ 4.75 ಟಿಎಂಸಿ ನೀರು ಮೀಸಲಿರಿಸಿದ್ದು, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಮಂಡ್ಯ ಹಾಗೂ ಸುತ್ತಲಿನ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಬಹುದಾಗಿದೆ.

ಸುಮಾರು 400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ನೀಲನಕ್ಷೆ ಸಿದ್ಧಪಡಿಸಿದ್ದು, ಈ ಯೋಜನೆ ಪೂರ್ಣಗೊಂಡಿದ್ದೇ ಆದಲ್ಲಿ ರಾಜ್ಯದ ಗ್ರಿಡ್‌ಗೆ 400 ಮೆ.ವ್ಯಾಟ್ ಗುಣಮಟ್ಟದ ವಿದ್ಯುತ್ ಹೆಚ್ಚುವರಿಯಾಗಿ ಲಭಿಸಲಿದೆ.

ಹೊಸ ಡಿಪಿಆರ್‌ನಲ್ಲಿ ಏನಿದೆ?

ತಮಿಳುನಾಡಿನ ವಿರೋಧ ತಣಿಸಲು ಮತ್ತು ಕಾನೂನು ತೊಡಕು ನಿವಾರಿಸಲು ರಾಜ್ಯ ಸರ್ಕಾರವು ಪರಿಷ್ಕೃತ ವಿಸ್ತೃತ ಯೋಜನಾ ವರದಿಯನ್ನು ಕಳೆದ ಫೆ.2 ರಂದು ಕೇಂದ್ರ ಜಲ ಆಯೋಗಕ್ಕೆ (CWC) ಸಲ್ಲಿಸಿದೆ. ಜಲಾಶಯವನ್ನು ಕೇವಲ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಬಳಸಲಾಗುವುದು, ತಮಿಳುನಾಡಿಗೆ ಕಾವೇರಿ ನ್ಯಾಯಾಧೀಕರಣದ ಆದೇಶದಂತೆ ಹರಿಸಬೇಕಾದ ನೀರಿನ ಪ್ರಮಾಣದಲ್ಲಿ ಯಾವುದೇ ಕಡಿತ ಮಾಡುವುದಿಲ್ಲ ಎಂಬ ಭರವಸೆ ನೀಡಿದೆ.

2019ರಲ್ಲಿ 4,500 ಕೋಟಿ ರೂ. ಇದ್ದ ಅಂದಾಜು ವೆಚ್ಚ, ಇದೀಗ 14,000 ಕೋಟಿ ರೂ. ಗಡಿ ದಾಟುವ ನಿರೀಕ್ಷೆಯಿದೆ. ಮುಳುಗಡೆಯಾಗಲಿರುವ ಅರಣ್ಯ ಪ್ರದೇಶಕ್ಕೆ ಪ್ರತಿಯಾಗಿ ಮೂರು ಪಟ್ಟು ಹೆಚ್ಚಿನ ಅರಣ್ಯ ಭೂಮಿಯನ್ನು ಮೀಸಲಿಡಲಾಗಿದೆ ಎಂದು ಡಿಪಿಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ತಮಿಳುನಾಡಿನ ವಿರೋಧ ಏಕೆ?

ಮೇಕೆದಾಟು ಯೋಜನೆಯು ದಶಕಗಳಿಂದಲೂ ರಾಜಕೀಯ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದೆ. ತಮಿಳುನಾಡು ಇದನ್ನು ಕೇವಲ ತಾಂತ್ರಿಕ ವಿಚಾರವಾಗಿ ನೋಡದೆ, ತನ್ನ ಕೃಷಿ ಹಿತಾಸಕ್ತಿ ಮತ್ತು ರಾಜಕೀಯ ಅಸ್ತಿತ್ವದ ಪ್ರಶ್ನೆಯಾಗಿ ಪರಿಗಣಿಸಿದೆ. ರಾಜಕೀಯ ಪಕ್ಷಗಳಿಗೆ ಮೇಕೆದಾಟು ಯೋಜನೆ ವಿರೋಧಿಸುವುದು ಒಂದು ಸುಲಭ ರಾಜಕೀಯ ಅಸ್ತ್ರವಾಗಿದೆ. ಡಿಎಂಕೆ ಮತ್ತು ಎಐಎಡಿಎಂಕೆ ಎರಡೂ ಪಕ್ಷಗಳು ಇದನ್ನು ಪ್ರತಿ ಚುನಾವಣೆಯಲ್ಲಿ ಬಳಸಿಕೊಳ್ಳುತ್ತಾ ಬಂದಿದ್ದು, 2026ರ ವಿಧಾನಸಭೆ ಚುನಾವಣೆಯಲ್ಲೂ ಪ್ರಮುಖ ಅಸ್ತ್ರವಾಗಿದೆ. ಅಣೆಕಟ್ಟು ನಿರ್ಮಾಣದಿಂದ ಬಿಳಿಗುಂಡ್ಲು ಮಾಪನ ಕೇಂದ್ರಕ್ಕೆ ಬರುವ ನೀರಿನ ಹರಿವು ಕಡಿಮೆಯಾಗುತ್ತದೆ ಮತ್ತು ಮೆಟ್ಟೂರು ಜಲಾಶಯಕ್ಕೆ ಧಕ್ಕೆಯಾಗುತ್ತದೆ ಎಂಬುದು ತಮಿಳುನಾಡಿನ ವಾದ.

ತಮಿಳುನಾಡು ಅರ್ಜಿ ವಜಾ

ಬೆಂಗಳೂರಿನ ಜನಸಂಖ್ಯೆ ಮತ್ತು ಮುಂದಿನ 50 ವರ್ಷಗಳ ಕುಡಿಯುವ ನೀರಿನ ಅಗತ್ಯತೆಯನ್ನು ಗಮನಿಸಿದರೆ, ಮೇಕೆದಾಟು ಯೋಜನೆ ಕರ್ನಾಟಕದ ಪಾಲಿಗೆ 'ಜೀವನಾಡಿ'. ಸುಪ್ರೀಂ ಕೋರ್ಟ್ ತಮಿಳುನಾಡಿನ ಅರ್ಜಿಯನ್ನು ವಜಾಗೊಳಿಸಿದ ನಂತರ ರಾಜ್ಯ ಸರ್ಕಾರಕ್ಕೆ ಹೊಸ ಭರವಸೆ ಮೂಡಿದೆ. ಈ ಯೋಜನೆಯು ಡಿ.ಕೆ. ಶಿವಕುಮಾರ್ ಸ್ವಕ್ಷೇತ್ರವಾದ ಕನಕಪುರದಲ್ಲಿ ಬರುವುದರಿಂದ ಮತ್ತು ಅವರು ಸ್ವತಃ ಈ ಯೋಜನೆಗಾಗಿ ಪಾದಯಾತ್ರೆ ನಡೆಸಿದ್ದರಿಂದ, ಇದು ಅವರ ರಾಜಕೀಯ ಪ್ರತಿಷ್ಠೆಯೂ ಹೌದು.

ಯೋಜನೆಗಿದೆ 78 ವರ್ಷದ ಇತಿಹಾಸ

ಮೇಕೆದಾಟು ಯೋಜನೆಯ ಪ್ರಯತ್ನಕ್ಕೆ 78 ವರ್ಷಗಳ ಇತಿಹಾಸವಿದೆ. 1948ರಲ್ಲಿ ಮೊದಲ ಬಾರಿಗೆ ಮೇಕೆದಾಟು ಜಲವಿದ್ಯುತ್ ಯೋಜನೆಯ ಪ್ರಸ್ತಾಪ ಪ್ರಾರಂಭವಾಯಿತಾದರೂ, ರಾಜ್ಯಗಳ ಪುನರ್ವಿಂಗಡಣೆ ವಿಚಾರದಿಂದ ಇದು ನನೆಗುದಿಗೆ ಬಿದ್ದಿತ್ತು. 1956ರಲ್ಲಿ ಜಲವಿದ್ಯುತ್ ಯೋಜನೆ ತನಿಖಾ ಆಯೋಗ ಈ ಯೋಜನೆಗೆ ಸಂಬಂಧಿಸಿದಂತೆ ವಿವರಗಳನ್ನು ಸಂಗ್ರಹಿಸುವ ಪ್ರಯತ್ನ ಆರಂಭಿಸಿತು.

1986ರಲ್ಲಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಯೋಜನೆಯ ಬಗ್ಗೆ ತನಿಖೆ ನಡೆಸಿತು. 1996ರಲ್ಲಿ ಇದೇ ಆಯೋಗ ಮೇಕೆದಾಟು ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಯೋಜನಾ ವರದಿ ನೀಡಿತು. ಆದರೆ, ಕಾವೇರಿ ಜಲವಿವಾದದಿಂದ ಈ ಯೋಜನೆ ನನೆಗುದಿಗೆ ಬಿದ್ದಿತು. 2007ರಲ್ಲಿ ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪು ಬಂದ ಬಳಿಕ ಮೇಕೆದಾಟು ಯೋಜನೆಯ ಚರ್ಚೆಗೆ ಮತ್ತೆ ಜೀವ ಬಂದಿತು. 2015ರಲ್ಲಿ ಕೆಲ ರೈತರು ಯೋಜನೆ ಬಗ್ಗೆ ಸರ್ಕಾರವನ್ನು ಒತ್ತಾಯಿಸಲಾರಂಭಿಸಿದರು.

2018ರಲ್ಲಿ ರಾಜ್ಯ ಸರ್ಕಾರ ಕಾವೇರಿ ನ್ಯಾಯಾಧೀಕರಣಕ್ಕೆ ಯೋಜನೆಯ ಡಿಪಿಆರ್ ಸಿದ್ಧಪಡಿಸಲು ಅನುಮತಿ ಕೋರಿತು. ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಶಕ್ತಿ ಆಯೋಗ ಅನುಮತಿ ನೀಡುತ್ತಿದ್ದಂತೆ ತಮಿಳುನಾಡು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. 2025ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ತಮಿಳುನಾಡಿನ ಅರ್ಜಿ ವಜಾಗೊಳಿಸಿತು. ಇದೀಗ ರಾಜ್ಯ ಸರ್ಕಾರ ಪರಿಷ್ಕೃತ ಡಿಪಿಆರ್ ಸಲ್ಲಿಸಿ ಕೇಂದ್ರದ ಅನುಮತಿ ಕೋರಿದೆ.

ಕಾವೇರಿ ನದಿಯ ದೊಡ್ಡ ಅಣೆಕಟ್ಟು

ದಕ್ಷಿಣ ಕರ್ನಾಟಕದ ಅತಿ ದೊಡ್ಡ ನದಿಯಾಗಿರುವ ಕಾವೇರಿ ನದಿ 802 ಕಿ.ಮೀ. ಉದ್ದ ಹರಿಯುತ್ತಿದ್ದು, ಕರ್ನಾಟಕದಲ್ಲಿ ಕಾವೇರಿ ನದಿ 381 ಕಿ.ಮೀ. ದೂರ ಹರಿಯುತ್ತದೆ. ಅದರಲ್ಲೂ 64 ಕಿ.ಮೀ. ದೂರ ಕರ್ನಾಟಕ ಮತ್ತು ತಮಿಳುನಾಡು ಗಡಿಭಾಗದಲ್ಲಿ ಅರಣ್ಯ ಪ್ರದೇಶದಂಚಿನಲ್ಲೇ ಹರಿಯುತ್ತದೆ. ಕರ್ನಾಟಕದಲ್ಲಿ ಕಾವೇರಿ ಜಲಾನಯನ ಪ್ರದೇಶ 34,273 ಚದರ ಕಿ.ಮೀ. ಇದ್ದು, ಇದರಲ್ಲಿ ಕೆಆರ್‌ಎಸ್ ಜಲಾಶಯದ ಕೆಳಭಾಗದಲ್ಲಿ 23,231 ಚದರ ಕಿ.ಮೀ. ಪ್ರದೇಶದಲ್ಲಿ ಸಂಗ್ರಹವಾಗುವ ಮಳೆ ನೀರನ್ನು ಹಿಡಿದಿಟ್ಟುಕೊಳ್ಳಲು ಯಾವುದೇ ನೀರಾವರಿ ಯೋಜನೆ ಇಲ್ಲವಾಗಿದೆ.

ಇದರಿಂದಾಗಿ ರಾಜ್ಯಕ್ಕೆ ಕಾವೇರಿ ನ್ಯಾಯಾಧೀಕರಣದ ಅಂತಿಮ ವರದಿಯಲ್ಲಿ ಹಂಚಿಕೆಯಾಗಿರುವ 270+14 ಟಿಎಂಸಿ ನೀರನ್ನು ಪೂರ್ಣ ಬಳಕೆ ಮಾಡಿಕೊಳ್ಳಲು ರಾಜ್ಯಕ್ಕೆ ಸಾಧ್ಯವಾಗುತ್ತಿಲ್ಲ. ಇದೀಗ ಮೇಕೆದಾಟು ಯೋಜನೆ ಈ ಕೊರತೆಯನ್ನು ನೀಗಿಸಲಿದೆ. ರಾಜ್ಯದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಾಣವಾಗಲಿರುವ ಅತಿ ದೊಡ್ಡ ಅಣೆಕಟ್ಟು ಇದೇ ಎನಿಸಿದೆ.

ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿರುವ ಎಲ್ಲಾ ಅಣೆಕಟ್ಟುಗಳಿಂದ ಸಂಗ್ರಹಣೆ ಮಾಡಲು ಸಾಧ್ಯವಿರುವ ನೀರಿನ ಪ್ರಮಾಣ 114.57 ಟಿಎಂಸಿ ಮಾತ್ರ. ಇನ್ನು ಕಾವೇರಿ ಕೊಳ್ಳದ ಕೆರೆಗಳನ್ನು ಸೇರಿಸಿದರೆ ಮಳೆಗಾಲದಲ್ಲಿ ನಮ್ಮ ರಾಜ್ಯ 120 ಟಿಎಂಸಿಗಿಂತ ಹೆಚ್ಚು ನೀರನ್ನು ಸಂಗ್ರಹಣೆ ಮಾಡಿಕೊಳ್ಳುವ ವ್ಯವಸ್ಥೆ ಇಲ್ಲವಾಗಿದೆ. ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪಿನನ್ವಯ ಪ್ರತಿ ಜಲ ವರ್ಷ (ಜೂನ್‌ನಿಂದ ಮೇ ವರೆಗೆ) 177.25 ಟಿಎಂಸಿ ನೀರನ್ನು ಬಿಡಬೇಕಿದೆ. ಆದರೆ, ಕೆಲವೊಂದು ಸಂಕಷ್ಟದ ಮಳೆ ವರ್ಷಗಳನ್ನು ಹೊರತುಪಡಿಸಿದರೆ, ನಮ್ಮ ರಾಜ್ಯದಿಂದ ಅಗತ್ಯಕ್ಕಿಂತ ಹೆಚ್ಚಿನ ನೀರು ತಮಿಳುನಾಡಿಗೆ ಹರಿದು ಹೋಗಿದೆ. ಮಳೆಗಾಲದ ಸಮಯದಲ್ಲಿ ನೀರನ್ನು ಹರಿಯಬಿಟ್ಟು ಬೇಸಿಗೆಯ ದಿನಗಳಲ್ಲಿ ಬೆಂಗಳೂರು ನಗರ ಸೇರಿದಂತೆ ಕಾವೇರಿ ಕೊಳ್ಳದ ಹಲವು ಪಟ್ಟಣ, ಗ್ರಾಮಗಳು ಕುಡಿಯುವ ನೀರಿಗೆ ಪರದಾಡಿದ ಉದಾಹರಣೆ ಸಾಕಷ್ಟಿದೆ. ಇದಕ್ಕೆಲ್ಲ ಮೇಕೆದಾಟು ಪರಿಹಾರ ನೀಡಲಿದೆ.

5,173 ಹೆಕ್ಟೇರ್ ಭೂಮಿ ಮುಳುಗಡೆ

99 ಮೀಟರ್ ಎತ್ತರಕ್ಕೆ ಈ ಸಮತೋಲನಾ ಅಣೆಕಟ್ಟು ನಿರ್ಮಾಣ ಮಾಡಲು ಡಿಪಿಆರ್‌ನಲ್ಲಿ ಉಲ್ಲೇಖಿಸಿದ್ದು, 67.16 ಟಿಎಂಸಿ ನೀರು ಸಂಗ್ರಹಣೆಯ ಸಾಮರ್ಥ್ಯವನ್ನು ಈ ಅಣೆಕಟ್ಟು ಹೊಂದಲಿದೆ. ಇನ್ನು ಅಣೆಕಟ್ಟು ನಿರ್ಮಾಣದಿಂದ 5,173 ಹೆಕ್ಟೇರ್ ಭೂಮಿ ಮುಳುಗಡೆಯಾಗಲಿದ್ದು, ಹೆಚ್ಚು ಜನವಸತಿ ಪ್ರದೇಶಗಳು ಮುಳುಗಡೆಯಾಗುವುದಿಲ್ಲ. ಕಾವೇರಿ ವನ್ಯಜೀವಿ ವಲಯ ಸೇರಿದಂತೆ 4,800 ಎಕರೆ ಅರಣ್ಯ ಪ್ರದೇಶ ಮುಳುಗಡೆಯಾಗಲಿದೆ. ಯೋಜನೆಗೆ ಮುಳುಗಡೆಯಾಗಲಿರುವ ಅರಣ್ಯಕ್ಕೆ ಪರ್ಯಾಯವಾಗಿ ಬೇರೆ ಸ್ಥಳದಲ್ಲಿ ಅರಣ್ಯಕ್ಕೆ ಭೂಮಿ ನೀಡುವುದಾಗಿ ಸರ್ಕಾರ ಡಿಪಿಆರ್‌ನಲ್ಲಿ ಉಲ್ಲೇಖಿಸಿದೆ.

ಕೇಂದ್ರ ಜಲ ಆಯೋಗದ ಅನುಮೋದನೆಯ ಜೊತೆಗೆ, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಒಪ್ಪಿಗೆ ಸಿಗುವುದು ಈ ಯೋಜನೆಯ ಮುಂದಿನ ಹಂತಕ್ಕೆ ಅನಿವಾರ್ಯವಾಗಿದೆ. ತಮಿಳುನಾಡಿನ ರಾಜಕೀಯ ಒತ್ತಡಗಳ ನಡುವೆ ಕೇಂದ್ರ ಸರ್ಕಾರ ಯಾವ ರೀತಿಯ ನಿಲುವು ತಳೆಯಲಿದೆ ಎಂಬುದೇ ಈಗಿನ ಕುತೂಹಲ.

Read More
Next Story