
ನೀರು ನಮ್ಮನ್ನು ಒಗ್ಗೂಡಿಸಬೇಕು, ವಿಭಜಿಸಬಾರದು; ತ.ನಾಡು ಸಿಎಂ ಎದುರೇ ಕಾವೇರಿ ವಿಷಯ ಪ್ರಸ್ತಾಪಿಸಿದ ಡಿಕೆಶಿ
ಕರ್ನಾಟಕ ಬಲವಾಗಿದ್ದರೆ ದಕ್ಷಿಣ ಭಾರತ ಬಲಗೊಳ್ಳುತ್ತದೆ. ದಕ್ಷಿಣ ಭಾರತ ಬಲಗೊಂಡಾಗ ಇಡೀ ಭಾರತವೇ ಆರ್ಥಿಕವಾಗಿ ಬಲಗೊಳ್ಳುತ್ತದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
"ನಮ್ಮ ನದಿಗಳಿಗೆ ರಾಜಕೀಯ ಗಡಿಗಳು ತಿಳಿದಿಲ್ಲ. ನೀರು ನಮ್ಮನ್ನು ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಪಾದಿಸಿದ್ದಾರೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆದ 31ನೇ ದಕ್ಷಿಣ ವಲಯ ಮಂಡಳಿಯ ಉನ್ನತ ಮಟ್ಟದ ಸಭೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಎದುರಲ್ಲೇ ಡಿ.ಕೆ. ಶಿವಕುಮಾರ್ ಅವರು ಕಾವೇರಿ ಜಲ ವಿವಾದ ಸೇರಿದಂತೆ ದಕ್ಷಿಣ ಭಾರತದ ಆರ್ಥಿಕ ಹಾಗೂ ರಾಜಕೀಯ ಹಕ್ಕುಗಳ ಕುರಿತು ಪ್ರಬಲ ದನಿ ಎತ್ತಿದ್ದಾರೆ.
ದಕ್ಷಿಣ ರಾಜ್ಯದ ಜೀವನದಿಗಳಾದ ಕಾವೇರಿ, ಕೃಷ್ಣಾ, ತುಂಗಭದ್ರಾ, ಪೆನ್ನಾರ್ ಮತ್ತು ಪಾಲಾರ್ ನದಿಗಳ ನೀರು ಹಂಚಿಕೆಯಲ್ಲಿ ಪರಸ್ಪರ ಸಹಕಾರ ಅಗತ್ಯ. ಜೂನ್ 25ರಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರೊಂದಿಗೆ ನಡೆಸಿದ ಜಂಟಿ ಸಭೆಯ ಸೌಹಾರ್ದಯುತ ಮಾದರಿಯನ್ನು ಉಲ್ಲೇಖಿಸಿ, ನೀರಿನ ವಿಷಯದಲ್ಲಿ 'ಸ್ಪರ್ಧೆಗಿಂತ ಪಾಲುದಾರಿಕೆ' ಮುಖ್ಯ ಎಂದು ಹೇಳಿದ್ದಾರೆ.
ನ್ಯಾಯಾಧೀಕರಣದ ತೀರ್ಪಿನಡಿ ಕರ್ನಾಟಕದ ಕಾನೂನುಬದ್ಧ ಪಾಲು ಹಾಗೂ ರೈತರ ನೀರಾವರಿ ಯೋಜನೆಗಳು ಸಮಯೋಚಿತವಾಗಿ ಪೂರ್ಣಗೊಳ್ಳಲು ನೆರೆ ರಾಜ್ಯಗಳ ಗೌರವಯುತ ಬೆಂಬಲ ಅಗತ್ಯ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ತೆರಿಗೆ ಹಂಚಿಕೆಯಲ್ಲಿ ಕಡಿತ
15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕದ ತೆರಿಗೆ ಪಾಲು ಶೇ 4.7 ರಿಂದ ಶೇ. 3.6ಕ್ಕೆ ಕುಸಿದಿದ್ದರಿಂದ ರಾಜ್ಯಕ್ಕೆ ಆರು ವರ್ಷಗಳಲ್ಲಿ ಅಂದಾಜು 65 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. 16ನೇ ಹಣಕಾಸು ಆಯೋಗವು ಈ ಪಾಲನ್ನು ಶೇ 4.131ಕ್ಕೆ ಹೆಚ್ಚಿಸಿರುವುದನ್ನು ಸ್ವಾಗತಿಸಿದ ಡಿ.ಕೆ. ಶಿವಕುಮಾರ್ ಅವರು, ಇದನ್ನು ಮತ್ತೆ ಹಳೆಯ ಶೇ 4.7ಕ್ಕೆ ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ. ಕೇಂದ್ರದಿಂದ ಬರಬೇಕಾದ 5,495 ಕೋಟಿ ವಿಶೇಷ ಅನುದಾನ ಹಾಗೂ 6 ಸಾವಿರ ಕೋಟಿ ರೂ. ನಿರ್ದಿಷ್ಟ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ʼದೇಶದ ಆರ್ಥಿಕ ಎಂಜಿನ್ ದಕ್ಷಿಣ ಭಾರತʼ
ದಕ್ಷಿಣದ 5 ರಾಜ್ಯಗಳು ದೇಶದ ಶೇ. 20 ರಷ್ಟು ಜನಸಂಖ್ಯೆ ಹೊಂದಿದ್ದು, ದೇಶದ ಒಟ್ಟು ಜಿಡಿಪಿಗೆ ಶೇ. 33 ರಷ್ಟು ಕೊಡುಗೆ ನೀಡುತ್ತಿವೆ. ದೇಶದ ಸಾಫ್ಟ್ವೇರ್ ರಫ್ತಿನಲ್ಲಿ ಕರ್ನಾಟಕ ಒಂದೇ ಶೇ. 42 ರಷ್ಟು ಕೊಡುಗೆ ನೀಡುತ್ತಿದ್ದು, 1,100 ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಹೊಂದಿದೆ. "ಅಭಿವೃದ್ಧಿ ಮತ್ತು ತೆರಿಗೆ ಸಂಗ್ರಹದಲ್ಲಿ ಅತ್ಯುತ್ತಮ ಸಾಧನೆ ಮಾಡುವ ರಾಜ್ಯಗಳಿಗೆ ಪ್ರೋತ್ಸಾಹ ನೀಡಬೇಕೇ ಹೊರತು ದಂಡ ವಿಧಿಸಬಾರದು" ಎಂದು ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟದ್ದಾರೆ.
ಮಹಿಳಾ ಮೀಸಲಾತಿ ಜಾರಿಗೆ ಆಗ್ರಹ
ಜನಸಂಖ್ಯೆ ನಿಯಂತ್ರಣದಲ್ಲಿ ದಕ್ಷಿಣ ಭಾರತ ತೋರಿದ ಶಿಸ್ತೇ ಈಗ ನಮಗೆ ಶಾಪವಾಗಬಾರದು. ಕ್ಷೇತ್ರ ಪುನರ್ವಿಂಗಡಣೆ ಹೆಸರಿನಲ್ಲಿ ದಕ್ಷಿಣ ರಾಜ್ಯಗಳ ಸಂಸದೀಯ ಪ್ರಾತಿನಿಧ್ಯದ ಶಕ್ತಿ ಕ್ಷೀಣಿಸಬಾರದು ಎಂದು ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಮಹಿಳೆಯರು ತಮ್ಮ ನ್ಯಾಯಯುತ ಪ್ರಾತಿನಿಧ್ಯಕ್ಕಾಗಿ ಬಹಳ ಕಾಲದಿಂದ ಕಾಯುತ್ತಿದ್ದಾರೆ. ಮಹಿಳಾ ಮೀಸಲಾತಿಯು ಮತ್ತೊಂದು ಜನಗಣತಿಯವರೆಗೆ ಕಾಯಬೇಕಾದ ಅಗತ್ಯವಿಲ್ಲ. ಆದ್ದರಿಂದ, ಪ್ರಸ್ತುತ ಇರುವ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಂಡು, ಮಹಿಳಾ ಮೀಸಲಾತಿಯನ್ನು ಒದಗಿಸುವಂತೆ ಈ ಮಂಡಳಿಯು ಒಂದು ನಿರ್ಣಯ ಅಂಗೀಕರಿಸಬೇಕು ಎಂದಿದ್ದಾರೆ.
ಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು ಯೋಜನೆ, ಎಸ್‌ಟಿಆರ್‌ಆರ್ ದಕ್ಷಿಣ ಭಾಗ, ರಾಯಚೂರಿಗೆ ಏಮ್ಸ್ ಮತ್ತು ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕು. ಖನಿಜ ಸಂಪನ್ಮೂಲಗಳ ಮೇಲಿನ ರಾಜ್ಯಗಳ ಹಣಕಾಸು ಹಕ್ಕು ಮತ್ತು ಸ್ವಾಯತ್ತತೆಯನ್ನು ಕೇಂದ್ರ ಸರ್ಕಾರ ಮರುಪರಿಶೀಲಿಸಬೇಕು. ಮಾದಕ ದ್ರವ್ಯ ಕಳ್ಳಸಾಗಣೆ ನಿಯಂತ್ರಣಕ್ಕೆ ದಕ್ಷಿಣ ರಾಜ್ಯಗಳ ಗಡಿ ಭದ್ರತೆ ಬಲಪಡಿಸಬೇಕು. ಅದಕ್ಕಾಗಿ ಕಠಿಣ ಕಾನೂನು ಚೌಕಟ್ಟು ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ. ಕರ್ನಾಟಕ ಬಲವಾಗಿದ್ದರೆ ದಕ್ಷಿಣ ಭಾರತ ಬಲಗೊಳ್ಳುತ್ತದೆ. ದಕ್ಷಿಣ ಭಾರತ ಬಲಗೊಂಡಾಗ ಇಡೀ ಭಾರತವೇ ಆರ್ಥಿಕವಾಗಿ ಬಲಗೊಳ್ಳುತ್ತದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

