ಬಿಜೆಪಿ ವಿರುದ್ಧವೇ ಹೋರಾಟ ಮಾಡುತ್ತಿದ್ದಾರೆ ಎಚ್‌ಡಿಕೆ: ಸಿಎಂ ಡಿಕೆಶಿ ವ್ಯಂಗ್ಯ
x

ಬಿಜೆಪಿ ವಿರುದ್ಧವೇ ಹೋರಾಟ ಮಾಡುತ್ತಿದ್ದಾರೆ ಎಚ್‌ಡಿಕೆ: ಸಿಎಂ ಡಿಕೆಶಿ ವ್ಯಂಗ್ಯ

ಕೆಪಿಎಸ್‌ಸಿ ಅಕ್ರಮ ಸಂಬಂಧ ಅಲ್ಲೋಲ ಕಲ್ಲೋಲವಾಗುವಂತಹ ದಾಖಲೆ ಬಿಡುಗಡೆ ಮಾಡುತ್ತೇನೆ ಎಂಬುದಾಗಿ ಕುಮಾರಸ್ವಾಮಿ ಬೆದರಿಕೆ ಹಾಕಿದ್ದಾರೆ. ಇದು ಬಹಳ ಸಂತೋಷ ಎಂದು ಸಿಎಂ ಡಿಕೆಶಿ ಲೇವಡಿ ಮಾಡಿದ್ದಾರೆ.


Click the Play button to hear this message in audio format

ಕೆಪಿಎಸ್‌ಸಿ ನೇಮಕಾತಿ ಅಕ್ರಮ ಸಂಬಂಧ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಸರ್ಕಾರ ವಿರುದ್ಧ ಹೋರಾಟ ಮಾಡುತ್ತಿಲ್ಲ. ಅವರು ವಾಸ್ತವದಲ್ಲಿ ಬಿಜೆಪಿ ವಿರುದ್ಧವೇ ಹೋರಾಟ ಮಾಡುತ್ತಿದ್ದಾರೆ. ಅವರು ತಮ್ಮ ಕರ್ತವ್ಯ ನಿರ್ವಹಿಸಲಿ, ಅವರು ಏನು ಆರೋಪ ಮಾಡಬೇಕೋ ಮಾಡಲಿ, ನಮಗೆ ಅಭ್ಯಂತರವಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವ್ಯಂಗ್ಯವಾಡಿದ್ದಾರೆ.

ನೆಹರು ತಾರಾಲಯದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಲೋಲ ಕಲ್ಲೋಲವಾಗುವಂತಹ ದಾಖಲೆ ಬಿಡುಗಡೆ ಮಾಡುತ್ತೇನೆ ಎಂಬ ಕುಮಾರಸ್ವಾಮಿ ಬೆದರಿಕೆ ಹಾಕಿದ್ದಾರೆ. ಇದು ಬಹಳ ಸಂತೋಷ ಎಂದು ಲೇವಡಿ ಮಾಡಿದರು. ನಾನು ತನಿಖೆಯಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ. ತನಿಖೆ ತನ್ನ ಗತಿಯಲ್ಲಿ ನಡೆಯುತ್ತಿದೆ. ಆದರೆ, ಬಿಜೆಪಿಯಲ್ಲಿ ಆಂತರಿಕ ಕಲಹ ನಡೆಯುತ್ತಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಕೆಪಿಎಸ್‌ಸಿಗೆ ಆ ಅಧಿಕಾರಿಗಳನ್ನು ನೇಮಿಸಿದವರು ಯಾರು? ಇವೆಲ್ಲವೂ ತನಿಖೆಯ ಬಳಿಕ ಹೊರಬರಲಿದೆ. ಪೂರ್ಣ ವರದಿ ಬರುವವರೆಗೆ ನಾನು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಅವರಿಗೆ ಕಾಲವೇ ಉತ್ತರಿಸುತ್ತದೆ ಎಂದು ಸ್ಪಷ್ಟಪಡಿಸಿದರು.

ಪಾದಯಾತ್ರೆಗೆ ಪ್ರತಿ ತಂತ್ರವೇ?

ಬಿಜೆಪಿಯ ಪಾದಯಾತ್ರೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಅವರು ಪಾದಯಾತ್ರೆ ಮಾಡಲಿ, ಆನಂತರ ನಮ್ಮ ಮುಂದಿನ ನಡೆಯನ್ನು ನಾನು ಹೇಳುತ್ತೇನೆ. ನಾವು ರಾಜಕಾರಣಿಗಳಲ್ಲವೇ? ನಾವು ರಾಜಕೀಯ ತಂತ್ರಗಳನ್ನು ಬಲ್ಲೆವು. ನಾವು ಅವರಿಗೆ ಗೌರವ ನೀಡಿ ಅಧಿವೇಶನ ನಡೆಸಿದ್ದೆವು, ಆದರೆ ಅಲ್ಲಿ ಅವರು ಯಾವುದೇ ರಚನಾತ್ಮಕ ವಿಚಾರಗಳನ್ನು ಚರ್ಚಿಸಲಿಲ್ಲ. ಈಗ ಕಸ್ತೂರಿ ರಂಗನ್ ವರದಿ ಮತ್ತು ರೈತರ ಹಿತದೃಷ್ಟಿಯಿಂದ ಚರ್ಚಿಸಲು ಶಾಸಕರ ಸಭೆಯನ್ನು ಕರೆಯಲಾಗುವುದು ಎಂದು ತಿಳಿಸಿದರು.

ಭೂ ಗ್ಯಾರಂಟಿ - ಕಾನೂನುಬದ್ಧ ದಾಖಲೆಗೆ ಒತ್ತು

ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ಆರನೇ ಗ್ಯಾರಂಟಿ ಭೂ ಗ್ಯಾರಂಟಿ ಕುರಿತಂತೆ ಮಾತನಾಡಿ, ಇದು ಕೇವಲ ಬೆಂಗಳೂರಿಗೆ ಸೀಮಿತವಲ್ಲ, ಬದಲಾಗಿ ಇಡೀ ರಾಜ್ಯದ ಭೂ ಮಾಲೀಕರಿಗೆ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಸರ್ಕಾರದ ಯೋಜನೆಗಳಿಗಾಗಿ ತಮ್ಮ ಆಸ್ತಿಯನ್ನು ತ್ಯಾಗ ಮಾಡುವವರಿಗೆ ಮತ್ತು ಭೂ ಮಾಲೀಕರಿಗೆ ಸೂಕ್ತ ಪರಿಹಾರ ಹಾಗೂ ಶಾಶ್ವತ ದಾಖಲೆಗಳನ್ನು ಒದಗಿಸುವುದು ನಮ್ಮ ಗುರಿ. ಆಸ್ತಿ ವರ್ಗಾವಣೆ, ಸಾಲ ಪಡೆಯುವಿಕೆ ಅಥವಾ ಕುಟುಂಬದಲ್ಲಿ ಆಸ್ತಿ ಹಂಚಿಕೆ ಮಾಡುವಾಗ ಯಾರಿಗೂ ತೊಂದರೆಯಾಗಬಾರದು. ಅದಕ್ಕಾಗಿ ದಾಖಲೆಗಳು ಪೂರ್ಣವಾಗಿ ಕಾನೂನುಬದ್ಧವಾಗಿರಬೇಕು. ಬಿ ಖಾತಾದಿಂದ ಎ ಖಾತಾಗೆ ಪರಿವರ್ತಿಸುವ ಸಂದರ್ಭದಲ್ಲಿಯೂ ಸಂಪೂರ್ಣ ಪಾರದರ್ಶಕತೆ ಇರಬೇಕು.ಬೋಗಸ್ ನೋಂದಣಿಗಳನ್ನು ಸರ್ಕಾರ ಎಂದಿಗೂ ಸಹಿಸುವುದಿಲ್ಲ. ಕಾನೂನಿನ ಚೌಕಟ್ಟಿನಲ್ಲಿರುವ ಆಸ್ತಿಗಳಿಗೆ ಮಾತ್ರ ಈ ಗ್ಯಾರಂಟಿ ಸೌಲಭ್ಯ ಸಿಗಲಿದೆ ಎಂದು ಹೇಳಿದರು.

Read More
Next Story