ಹನೂರು ಶೂಟೌಟ್: ತಮಿಳುನಾಡಿನಿಂದ ಮೃತರ ಕುಟುಂಬಕ್ಕೆ ಪರಿಹಾರ- ರಾಜಕೀಯ ಹಸ್ತಕ್ಷೇಪ ಬೇಡ ಎಂದ ಡಿಕೆಶಿ
x

ಹನೂರು ಶೂಟೌಟ್: ತಮಿಳುನಾಡಿನಿಂದ ಮೃತರ ಕುಟುಂಬಕ್ಕೆ ಪರಿಹಾರ- ರಾಜಕೀಯ ಹಸ್ತಕ್ಷೇಪ ಬೇಡ ಎಂದ ಡಿಕೆಶಿ

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ತೋಮಿಯರ್ಪಾಳ್ಯಕ್ಕೆ ತಮಿಳುನಾಡಿನ ಮಾಜಿ ಶಾಸರ ತಂಡ ಭೇಟಿ ನೀಡಿದೆ. ತೋಮಿಯರ್ಪಾಳ್ಯದ ಚರ್ಚ್‌ನಲ್ಲಿ ಘಟನೆ ಸಂಬಂಧ ಸಭೆಯನ್ನೂ ನಡೆಸಲಾಗಿದೆ. ಅಲ್ಲದೇ, ಸಂತ್ರಸ್ತರ ಕುಟುಂಬದವರನ್ನು ಭೇಟಿ ಮಾಡಿ ಸಂತ್ವಾನ ಹೇಳಿದ್ದಾರೆ.


Click the Play button to hear this message in audio format

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಶಾಗ್ಯ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ಮೂವರು ಶಂಕಿತ ಬೇಟೆಗಾರರು ಮೃತಪಟ್ಟಿರುವ ಶೂಟೌಟ್‌ ಪ್ರಕರಣ ಇದೀಗ ಅಂತರ್‌ರಾಜ್ಯ ರಾಜಕೀಯ ಸಂಘರ್ಷಕ್ಕೂ ಕಾರಣವಾಗಿದೆ. ಪ್ರಕರಣದಲ್ಲಿ ತಮಿಳುನಾಡು ರಾಜಕಾರಣಿಗಳು ಹಸ್ತಕ್ಷೇಪ ಮಾಡಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳವಾರ ಎಚ್ಚರಿಕೆ ನೀಡಿದ್ದಾರೆ. ಈ ನಡುವೆ, ತಮಿಳುನಾಡಿನ ಮಾಜಿ ಶಾಸಕರ ತಂಡ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿಗೆ ತೆರಳಿ ಮೃತರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದೆ. ಜೊತೆಗೆ ಪರಿಹಾರವನ್ನೂ ಘೋಷಿಸಿದ್ದಾರೆ.

ಹನೂರುನಲ್ಲಿ ಶೂಟೌಟ್‌ಗೆ ಬಲಿಯಾದವರ ಕುಟುಂಬಸ್ಥರನ್ನು ಭೇಟಿಯಾದ ತಮಿಳುನಾಡಿನ ಮಾಜಿ ಶಾಸಕರು

‘ಕರ್ನಾಟಕದ ಆಡಳಿತದಲ್ಲಿ ಹಸಕ್ಷೇಪ ಬೇಡʼ

ಹನೂರು ಶೂಟೌಟ್‌ ಪ್ರಕರಣದ ಕುರಿತು ತಮಿಳುನಾಡು ರಾಜಕಾರಣಿಗಳು ಸಿಬಿಐ ತನಿಖೆಗೆ ಒತ್ತಾಯಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಪ್ರತಿಯೊಂದು ರಾಜ್ಯವೂ ತನ್ನದೇ ಆದ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ನಿರ್ವಹಿಸಬೇಕು ಎಂದು ಹೇಳಿದ್ದಾರೆ.

‘ಇದು ಒಕ್ಕೂಟ ವ್ಯವಸ್ಥೆ. ಯಾವುದೇ ರಾಜ್ಯ ಮತ್ತೊಂದು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು. ತಮಿಳುನಾಡಿನ ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯಲ್ಲಿ ನಾನು ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ. ಅವರು ತಮ್ಮ ಕೆಲಸ ಮಾಡಲಿ, ನಾವು ನಮ್ಮ ಕೆಲಸ ಮಾಡುತ್ತೇವೆ’ ಎಂದು ಶಿವಕುಮಾರ್ ಹೇಳಿದ್ದಾರೆ. ಕರ್ನಾಟಕದ ರಾಜ್ಯದ ಘನತೆ, ಸಮಗ್ರತೆ ಹಾಗೂ ಸಾಂವಿಧಾನಿಕ ಅಧಿಕಾರವನ್ನು ರಕ್ಷಿಸುವುದು ಸರ್ಕಾರದ ಆದ್ಯತೆ ಎಂದೂ ಅವರು ತಿಳಿಸಿದ್ದಾರೆ.

ರಾಮಲಿಂಗಾ ರೆಡ್ಡಿ ಕೂಡ ಆಕ್ಷೇಪ

ಸಚಿವ ರಾಮಲಿಂಗಾ ರೆಡ್ಡಿ ಅವರು ಕೂಡ ಇದೇ ನಿಲುವನ್ನು ವ್ಯಕ್ತಪಡಿಸಿದ್ದು, ತಮಿಳುನಾಡಿನ ನಾಯಕರು ತಮ್ಮ ರಾಜ್ಯದ ಸಮಸ್ಯೆಗಳತ್ತ ಗಮನ ಹರಿಸುವುದು ಒಳಿತು. ಅರಣ್ಯ ಇಲಾಖೆ ಅಧಿಕಾರಿಗಳು ತಪ್ಪು ಮಾಡಿದ್ದರೆ, ನಮ್ಮ ಸರ್ಕಾರವೇ ಕಠಿಣ ಕ್ರಮ ಜರುಗಿಸುತ್ತದೆ. ತಮಿಳುನಾಡು ಸರ್ಕಾರ ಹಸ್ತಕ್ಷೇಪ ಮಾಡುವುದು ಅನಗತ್ಯ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರತಿಪಕ್ಷಗಳು ಕಿಡಿ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸಹ ತಮಿಳುನಾಡು ಮುಖ್ಯಮಂತ್ರಿಯ ಹೇಳಿಕೆಯನ್ನು ಖಂಡಿಸಿದ್ದಾರೆ. ಅವರು ಒಂದು ಸಮುದಾಯದ ಮುಖ್ಯಮಂತ್ರಿಯಲ್ಲ, ಬದಲಿಗೆ ಅವರ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಹೇಳಿಕೆ ನೀಡುವ ಮುನ್ನ ಎಚ್ಚರಿಕೆಯಿಂದ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ತಮಿಳುನಾಡು ವಿಧಾನಸಭೆಯಲ್ಲೂ ಹನೂರು ಶೂಟೌಟ್‌ ಸದ್ದು

ಚಾಮರಾಜನಗರದ ಹನೂರು ತಾಲೂಕಿನ ಕಾವೇರಿ ವನ್ಯಜೀವಿ ಅಭಯಾರಣ್ಯ ಪ್ರದೇಶದಲ್ಲಿ ಮೂವರು ಮೃತಪಟ್ಟಿರುವ ಘಟನೆ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲೂ ಪ್ರತಿಧ್ವನಿಸಿದೆ.

ಕರ್ನಾಟಕ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಪಕ್ಷಭೇದ ಮರೆತು ಹಲವು ಸದಸ್ಯರು ಒತ್ತಾಯಿಸಿದ್ದಾರೆ. ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬ ಆಗ್ರಹವೂ ಕೇಳಿಬಂದಿದೆ.

ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಕೂಡ ಘಟನೆ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸಂತ್ರಸ್ತರ ಕುಟುಂಬಕ್ಕೆ ತಮಿಳುನಾಡಿನಿಂದ ಪರಿಹಾರ

ಈ ನಡುವೆ, ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ತೋಮಿಯರ್ಪಾಳ್ಯಕ್ಕೆ ತಮಿಳುನಾಡಿನ ಮಾಜಿ ಶಾಸರ ತಂಡ ಭೇಟಿ ನೀಡಿದೆ. ತೋಮಿಯರ್ಪಾಳ್ಯದ ಚರ್ಚ್‌ನಲ್ಲಿ ಘಟನೆ ಸಂಬಂಧ ಸಭೆಯನ್ನೂ ನಡೆಸಲಾಗಿದೆ. ಅಲ್ಲದೇ, ಸಂತ್ರಸ್ತರ ಕುಟುಂಬದವರನ್ನು ಭೇಟಿ ಮಾಡಿ ಸಂತ್ವಾನ ಹೇಳಿದ್ದಾರೆ.

ಮತ್ತೊಂದೆಡೆ, ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿಯಾದ ಘಟನೆಯನ್ನು ತಮಿಳುನಾಡು ಸಿಎಂ ವಿಜಯ್ ಖಂಡಿಸಿದ ಬೆನ್ನಲ್ಲೇ, ಮೃತ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರವನ್ನೂ ನೆರೆ ರಾಜ್ಯದ ಸರ್ಕಾರ ಘೋಷಿಸಿದೆ. ಅಲ್ಲಿನ ವಿಧಾನಸಭೆಯಲ್ಲೂ ಹನೂರು ಶೂಟೌಟ್ ವಿಚಾರ ಪ್ರಸ್ತಾಪವಾಗಿದ್ದು, ಡಿಎಂಕೆ ಮತ್ತು ಎಐಡಿಎಂಕೆ ಮುಖಂಡರು ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ನೀಡುವುದಾಗಿ ಅರಣ್ಯ ಸಚಿವ ರಂಜಿತ್ ಕುಮಾರ್ ಘೋಷಿಸಿದ್ದು, ಕರ್ನಾಟಕ ಸರ್ಕಾರವು ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬ ಆಗ್ರಹವೂ ವ್ಯಕ್ತವಾಗಿದೆ.

ಶಸ್ತ್ರಾಸ್ತ್ರ, ಟಾರ್ಚ್‌ಲೈಟ್‌ ಮತ್ತು ಮಾಂಸ ವಶಕ್ಕೆ

ಅರಣ್ಯ ಇಲಾಖೆಯ ಪ್ರಕಾರ, ಕಾರ್ಯಾಚರಣೆ ವೇಳೆ ಶಂಕಿತ ಬೇಟೆಗಾರರಿಂದ ಎರಡು ನಾಡ ಬಂದೂಕುಗಳು, ಗುಂಡುಗಳು, ಟಾರ್ಚ್‌ಲೈಟ್‌ಗಳು ಹಾಗೂ ಬೇಟೆಗೆ ಬಳಸಲಾಗಿದೆ ಎನ್ನಲಾದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜೊತೆಗೆ ಸುಮಾರು 20ರಿಂದ 30 ಕೆ.ಜಿ. ತೂಕದ ಎರಡು ಚೀಲಗಳಲ್ಲಿ ವನ್ಯಜೀವಿ ಮಾಂಸ ಎಂದು ಶಂಕಿಸಲಾಗಿರುವ ವಸ್ತುಗಳು ಪತ್ತೆಯಾಗಿವೆ. ವಶಪಡಿಸಿಕೊಂಡ ಮಾಂಸವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಅದು ನಿಜವಾಗಿಯೂ ವನ್ಯಜೀವಿಯ ಮಾಂಸವೇ ಎಂಬುದು ಪರೀಕ್ಷೆಯ ಬಳಿಕ ಸ್ಪಷ್ಟವಾಗಲಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಘಟನಾ ಸ್ಥಳದಿಂದ ಒಂದು ಜೋಡಿ ಚಪ್ಪಲಿ ಹಾಗೂ ಎರಡು ಲೀಟರ್ ಸಾಮರ್ಥ್ಯದ ತಂಪು ಪಾನೀಯದ ಬಾಟಲಿಯಲ್ಲಿ ಸುಮಾರು 250 ಮಿ.ಲೀ. ನೀರು ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

‘ಹೊಸ ಚಪ್ಪಲಿ’: ಪ್ರಕರಣಕ್ಕೆ ಹೊಸ ಟ್ವಿಸ್ಟ್

ಈ ನಡುವೆ, ಹನೂರು ಶೂಟೌಟ್‌ ಪ್ರಕರಣದಲ್ಲಿ ಘಟನಾ ಸ್ಥಳದಲ್ಲಿ ಪತ್ತೆಯಾದ ಒಂದು ಜೋಡಿ ಚಪ್ಪಲಿ ಇದೀಗ ಪ್ರಮುಖ ಚರ್ಚೆಯ ವಿಷಯವಾಗಿದೆ. ಪ್ಯಾರಗಾನ್ ಕಂಪನಿಯ ಚಪ್ಪಲಿಗಳ ಮೇಲಿನ ಸ್ಟಿಕ್ಕರ್‌ಗಳನ್ನೂ ತೆಗೆಯದಿರುವುದು ಕಂಡುಬಂದಿದ್ದು, ಅವು ಹೊಸದಾಗಿರುವಂತೆ ಕಾಣುತ್ತಿವೆ. ಆಗಸ್ಟ್‌ 15ರಂದು ಮಧ್ಯಾಹ್ನ 12.29ಕ್ಕೆ ತೆಗೆದಿರುವುದಾಗಿ ಛಾಯಾಚಿತ್ರದ ಸಮಯದ ವಿವರ ಸೂಚಿಸುತ್ತದೆ.

ಬೇಟೆಗೆ ತೆರಳಿದ್ದವರು ಅರಣ್ಯದಲ್ಲಿ ಓಡಾಡಿದ್ದರೆ ಚಪ್ಪಲಿಗಳ ಮೇಲೆ ಧೂಳು, ಮಣ್ಣು ಅಥವಾ ರಕ್ತದ ಕಲೆಗಳಾದರೂ ಇರಬೇಕಿತ್ತು. ಆದರೆ ಚಪ್ಪಲಿಗಳು ಹೊಸದಾಗಿಯೇ ಕಾಣುತ್ತಿರುವುದು ಅನುಮಾನ ಮೂಡಿಸಿದೆ ಎಂದು ಮೃತರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

ಅರಣ್ಯ ಇಲಾಖೆ ಹೇಳುವುದೇನು?

ಆಗಸ್ಟ್‌ 14ರಂದು ರಾತ್ರಿ ಸುಮಾರು 8 ಗಂಟೆ ವೇಳೆಗೆ ಅಕ್ರಮವಾಗಿ ಅರಣ್ಯ ಪ್ರವೇಶಿಸಿ ವನ್ಯಜೀವಿಗಳನ್ನು ಬೇಟೆಯಾಡಲಾಗುತ್ತಿದೆ ಎಂಬ ಮಾಹಿತಿ ಅರಣ್ಯ ಅಧಿಕಾರಿಗಳಿಗೆ ಬಂದಿತ್ತು. ಬಳಿಕ ಎರಡು ತಂಡಗಳನ್ನು ಅರಣ್ಯಕ್ಕೆ ಕಳುಹಿಸಲಾಗಿತ್ತು. ಟಾರ್ಚ್‌ಲೈಟ್‌ ಬಳಸಿ ಕೆಲವರು ಅರಣ್ಯದೊಳಗೆ ಸಂಚರಿಸುತ್ತಿರುವುದು ಸಿಬ್ಬಂದಿಗೆ ಕಂಡುಬಂದಿತ್ತು ಎಂದು ಇಲಾಖೆ ಹೇಳಿದೆ. ಆಗಸ್ಟ್‌ 15ರಂದು ಬೆಳಗ್ಗೆ ಸುಮಾರು 5.30ರ ವೇಳೆಗೆ ತಂಡಗಳು ಕಾರಡಿಕಲ್ಲು ಒಡ್ಡು ಅರಣ್ಯ ಪ್ರದೇಶ ತಲುಪಿದಾಗ, ಎತ್ತರದ ಪ್ರದೇಶದಲ್ಲಿ ಅಡಗಿದ್ದ ಶಂಕಿತ ಬೇಟೆಗಾರರು ಅರಣ್ಯ ಸಿಬ್ಬಂದಿ ಮೇಲೆ ಗುಂಡು ಹಾರಿಸಿದರು ಎಂದು ಇಲಾಖೆ ಹೇಳಿದೆ.

ನಾಡ ಬಂದೂಕಿನಿಂದ ಹಾರಿಸಿದ ಗುಂಡುಗಳು ಚದುರಿದ ಪರಿಣಾಮ ಕೆಲ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆತ್ಮರಕ್ಷಣೆಗಾಗಿ ಅರಣ್ಯ ಸಿಬ್ಬಂದಿ ಪ್ರತಿಯಾಗಿ ಗುಂಡು ಹಾರಿಸಿದಾಗ ಮೂವರು ಮೃತಪಟ್ಟಿದ್ದಾರೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಗ್ರಾಮಸ್ಥರದ್ದು ಭಿನ್ನ ಹೇಳಿಕೆ

ಆದರೆ, ಮೃತರು ಅರಣ್ಯಕ್ಕೆ ತೆರಳಿದ್ದ ಉದ್ದೇಶದ ಬಗ್ಗೆ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ನಡುವೆ ಭಿನ್ನಾಭಿಪ್ರಾಯವಿದೆ. ಮೃತರು ಕಾಣೆಯಾಗಿದ್ದ ಜಾನುವಾರುಗಳನ್ನು ಹುಡುಕಿಕೊಂಡು ಅರಣ್ಯಕ್ಕೆ ತೆರಳಿದ್ದರು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಆದರೆ ಮೂವರು ಹಾಗೂ ಅವರೊಂದಿಗೆ ಇದ್ದ ಮತ್ತೊಬ್ಬ ವ್ಯಕ್ತಿ ವನ್ಯಜೀವಿಗಳನ್ನು ಬೇಟೆಯಾಡಲು ಅರಣ್ಯ ಪ್ರವೇಶಿಸಿದ್ದರು ಎಂದು ಅರಣ್ಯ ಇಲಾಖೆ ಹೇಳುತ್ತಿದೆ.

ಘಟನಾ ಸ್ಥಳದಿಂದ ಪರಾರಿಯಾಗಿರುವ ವ್ಯಕ್ತಿಯ ವಿರುದ್ಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಮೃತಪಟ್ಟ ಮೂವರ ವಿರುದ್ಧ ಈ ಹಿಂದೆ ಯಾವುದೇ ಅರಣ್ಯ ಸಂಬಂಧಿತ ಪ್ರಕರಣ ದಾಖಲಾಗಿರಲಿಲ್ಲ ಎಂದು ಇಲಾಖೆ ಹೇಳಿದೆ.

ತನಿಖಾಧಿಕಾರಿ ಸ್ಥಳ ಪರಿಶೀಲನೆ

ಶೂಟೌಟ್‌ ಪ್ರಕರಣದ ತನಿಖಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಅವರ ಮುಂದೆ ಅರಣ್ಯ ಇಲಾಖೆ ವಶಪಡಿಸಿಕೊಂಡಿರುವ ಶಸ್ತ್ರಾಸ್ತ್ರಗಳು, ಮಾಂಸ ಹಾಗೂ ಇತರ ವಸ್ತುಗಳನ್ನು ಹಾಜರುಪಡಿಸಿದೆ.

ಮೀನಾ ಅವರು ಶಾಗ್ಯ ಅರಣ್ಯ ಪ್ರದೇಶದ ಎನ್‌ಕೌಂಟರ್‌ ನಡೆದ ಸ್ಥಳ, ಹನೂರು ಅರಣ್ಯ ಕಚೇರಿ ಹಾಗೂ ಪ್ರತಿಭಟನೆ ವೇಳೆ ಹಾನಿಗೊಳಗಾದ ಬೇಟೆ ತಡೆ ಶಿಬಿರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರತಿಭಟನೆ ವೇಳೆ ಅರಣ್ಯ ಇಲಾಖೆ ಆಸ್ತಿಗೆ ಹಾನಿ

ಶೂಟೌಟ್‌ ಪ್ರಕರಣವನ್ನು ನಕಲಿ ಎನ್‌ಕೌಂಟರ್‌ ಎಂದು ಆರೋಪಿಸಿ ಗ್ರಾಮಸ್ಥರು ನಡೆಸಿದ ಪ್ರತಿಭಟನೆ ವೇಳೆ ಅರಣ್ಯ ಇಲಾಖೆಯ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ಏಳು ಬೇಟೆ ತಡೆ ಶಿಬಿರಗಳು ಹಾಗೂ ಒಂಬತ್ತು ವಸತಿ ಗೃಹಗಳಿಗೆ ಹಾನಿಯಾಗಿದ್ದು, ಪೀಠೋಪಕರಣ ಸೇರಿದಂತೆ ಹಲವು ವಸ್ತುಗಳನ್ನು ಧ್ವಂಸ ಮಾಡಲಾಗಿದೆ. ಅರಣ್ಯ ಇಲಾಖೆಯ ಒಂದು ನಾಲ್ಕು ಚಕ್ರ ವಾಹನ ಹಾಗೂ ನಾಲ್ಕು ದ್ವಿಚಕ್ರ ವಾಹನಗಳಿಗೂ ಹಾನಿಯಾಗಿದೆ. ಈ ಸಂಬಂಧ ಪೊಲೀಸರಿಗೆ ಪ್ರತ್ಯೇಕ ದೂರುಗಳನ್ನು ನೀಡಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.

ಮೃತರ ಕುಟುಂಬಗಳಿಗೆ ಪರಿಹಾರ

ಹನೂರು ತಹಶೀಲ್ದಾರ್ ಚೈತ್ರಾ ಅವರು ಸೋಮವಾರ ತೋಮಿಯಾರ್ ಪಾಳ್ಯ ಗ್ರಾಮಕ್ಕೆ ಭೇಟಿ ನೀಡಿ, ತಾಲ್ಲೂಕು ಆಡಳಿತದ ವತಿಯಿಂದ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಿದ್ದಾರೆ. ಇದೇ ವೇಳೆ ಶಾಸಕ ಮಂಜುನಾಥ್ ಅವರು ತಮ್ಮ ವೈಯಕ್ತಿಕ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

ಒಟ್ಟಿನಲ್ಲಿ ಹನೂರು ಶೂಟೌಟ್‌ ಪ್ರಕರಣ ಇದೀಗ ಕೇವಲ ಅರಣ್ಯ ಇಲಾಖೆ ಕಾರ್ಯಾಚರಣೆಯ ತನಿಖೆಯಾಗಿ ಉಳಿಯದೆ, ಕರ್ನಾಟಕ-ತಮಿಳುನಾಡು ನಡುವಿನ ರಾಜಕೀಯ ಚರ್ಚೆಗೂ ಕಾರಣವಾಗಿದೆ.

Read More
Next Story